Bihar Election Results 2025

ETV Bharat / state

ಹುಬ್ಬಳ್ಳಿ; ಸಿಹಿ ಜೋಳದ ದಂಟಿನಿಂದ ಬೆಲ್ಲ ತಯಾರಿಸಿದ ರೈತ: ಇದು ದೇಶದಲ್ಲೇ ಮೊದಲು!! - ಉತ್ತರ ಕರ್ನಾಟಕ ರೈತರಿಗೆ ವರದಾನ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಸಂಗಾನಟ್ಟಿ ಗ್ರಾಮದ ರೈತರೊಬ್ಬರು ಜೋಳದ ದಂಟಿನಿಂದ ಬೆಲ್ಲ ತಯಾರಿಸಿದ್ದಾರೆ.

a-farmer-making-jaggery-from-sweet-corn-stalks-in-hubballi
ಜೋಳದ ದಂಟಿನೊಂದಿಗೆ ರೈತ ಮಹಾಲಿಂಗಪ್ಪ (ETV Bharat)
author img

By ETV Bharat Karnataka Team

Published : October 4, 2025 at 6:03 PM IST

|

Updated : October 4, 2025 at 8:28 PM IST

4 Min Read
Choose ETV Bharat

ವರದಿ - ಹೆಚ್. ಬಿ. ಗಡ್ಡದ

ಹುಬ್ಬಳ್ಳಿ : ಸಾಮಾನ್ಯವಾಗಿ ಕಬ್ಬಿನಿಂದ ‌ಬೆಲ್ಲ ಹಾಗೂ ಸಕ್ಕರೆ ತಯಾರಿಸುತ್ತಾರೆ. ಆದರೆ ಇದೀಗ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಸಂಗಾನಟ್ಟಿ ಗ್ರಾಮದ ಪ್ರಗತಿಪರ ರೈತ ಮಹಾಲಿಂಗಪ್ಪ ಇಟ್ನಾಳ ಅವರು ಜೋಳದ ದಂಟಿನಿಂದ ( ಕಾಂಡ) ಬೆಲ್ಲ ತಯಾರಿಸಿ ವಿಶಿಷ್ಟ ಸಾಧನೆ ಮಾಡಿದ್ದಾರೆ.

ಇದುವರೆಗೆ ಸರ್ಕಾರದ ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರಗಳು ನಡೆಸದಿದ್ದ ಸಂಶೋಧನೆಗೆ ನೈಜ ಪ್ರಯೋಗಾತ್ಮಕ ಸ್ಪರ್ಶ ನೀಡಿರುವ ಮಹಾಲಿಂಗಪ್ಪ ಕೃಷಿ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದಾರೆ. ಸಾಧಾರಣ ರೈತನ ಕೈಯಲ್ಲಿ ಹೊಸ ಸಂಶೋಧನೆ ಸಾಧ್ಯವೆಂಬುದನ್ನು ಅವರು ತಮ್ಮ ಆವಿಷ್ಕಾರದಿಂದ ತೋರಿಸಿಕೊಟ್ಟಿದ್ದಾರೆ.

ಸಾಧಾರಣವಾಗಿ ಜೋಳದ ದಂಟನ್ನು ದನಕರುಗಳಿಗೆ ಮೇವಾಗಿ ಅಥವಾ ಮಾರುಕಟ್ಟೆಗೆ ಹಸಿಯಾಗಿಯೇ ಮಾರಾಟ ಮಾಡಲಾಗುತ್ತದೆ. ಆದರೆ, ಇದರಿಂದ ರೈತರಿಗೆ ಹೆಚ್ಚಿನ ಲಾಭವೇನೂ ಸಿಗುತ್ತಿರಲಿಲ್ಲ. ಹಸಿ ಜೋಳದ ದಂಟಿನಿಂದ ಲಾಭವಿಲ್ಲ ಎಂಬ ಅಭಿಪ್ರಾಯ ರೈತರಲ್ಲಿ ಬೇರೂರಿತ್ತು. ಹೀಗಾಗಿ, ಮಹಾಲಿಂಗಪ್ಪ ಅವರು ಜೋಳದ ದಂಟಿನಲ್ಲಿ ಅಡಗಿರುವ ಸಕ್ಕರೆ ಅಂಶವನ್ನು ಬಳಸಿಕೊಂಡು ಬೆಲ್ಲ ತಯಾರಿಸಬಹುದು ಎಂಬ ಆಲೋಚನೆಯನ್ನು ಪ್ರಯೋಗಾತ್ಮಕವಾಗಿ ಕೈಗೊಂಡು ಅದರಲ್ಲಿ ಯಶಸ್ಸು ಕಂಡಿದ್ದಾರೆ.

ಇತ್ತೀಚೆಗೆ ಅಭಿವೃದ್ಧಿಗೊಂಡಿರುವ ಹೊಸ ತಳಿಯ ಸಿಹಿ ಜೋಳಗಳಲ್ಲಿ ಕಡ್ಡಿಯ ಗಾತ್ರ ದೊಡ್ಡದಾಗಿದ್ದು, ಸಿಹಿಯ ಅಂಶವೂ ಹೆಚ್ಚಾಗಿದೆ. ಈ ವೈಶಿಷ್ಟ್ಯವನ್ನು ಗಮನಿಸಿದ ಮಹಾಲಿಂಗಪ್ಪ ಇಟ್ನಾಳ ಅವರು ಕಬ್ಬಿನಿಂದ ಬೆಲ್ಲ ತಯಾರಿಸುವ ಪರಂಪರೆಯ ವಿಧಾನವನ್ನು ಅಳವಡಿಸಿಕೊಂಡು, ಜೋಳದ ದಂಟಿನಿಂದ ಯಶಸ್ವಿ ಪ್ರಯೋಗ ನಡೆಸಿ ಬೆಲ್ಲ ತಯಾರಿಸಿದ್ದಾರೆ.

a-farmer-making-jaggery-from-sweet-corn-stalks-in-hubballi
ರೈತ ಮಹಾಲಿಂಗಪ್ಪ (ETV Bharat)

ಇಲ್ಲಿಯವರೆಗೆ ಅಲ್ಪ ಉಪಯೋಗಕ್ಕಾಗಿ ಪರಿಗಣಿಸಲ್ಪಟ್ಟಿದ್ದ ಜೋಳದ ದಂಟನ್ನು ಬಳಸಿ ಕಸದಿಂದಲೂ ರಸ ತೆಗೆಯಬಹುದು ಎಂಬುದನ್ನು ಮಹಾಲಿಂಗಪ್ಪ ತೋರಿಸಿ ಕೊಟ್ಟಿದ್ದಾರೆ. ಇದರಿಂದ ರೈತರು ಜೋಳದ ದಂಟನ್ನು ನಷ್ಟದ ಉತ್ಪನ್ನ ಎಂದು ಪರಿಗಣಿಸುವ ಬದಲಾಗಿ, ಹೆಚ್ಚುವರಿ ಆದಾಯದ ಮೂಲವಾಗಿ ಬಳಸಿಕೊಳ್ಳುವ ಅವಕಾಶ ಸೃಷ್ಟಿಯಾಗಿದೆ.

ಇಷ್ಟು ದಿನ ರೈತರು ತಮ್ಮ ಜಾನುವಾರುಗಳಿಗೆ ಅಗತ್ಯವಾದ ಜೋಳದ ದಂಟನ್ನು ಇಟ್ಟುಕೊಂಡು ಉಳಿದಿದನ್ನು ಮಾರಾಟ ಮಾಡುತ್ತಿದ್ದರು ಅಥವಾ ಸುಟ್ಟು ಹಾಕುತ್ತಿದ್ದರು. ಆದರೆ, ಇದೀಗ ಜೋಳ ಬೆಳೆದ 120 ದಿನಗಳ ಒಳಗಾಗಿ ಕಟಾವು ಮಾಡಿ ಪ್ರತಿ ಟನ್​ಗೆ 3000 ಲಾಭ ಗಳಿಸಬಹುದಾಗಿದೆ. ಈಗಾಗಲೇ ಜೋಳದ ದಂಟಿನಿಂದ ತಯಾರಿಸಿದ ಬೆಲ್ಲವನ್ನು ಲ್ಯಾಬ್​ನಲ್ಲಿ ಪರೀಕ್ಷೆ ಮಾಡಿಸಲಾಗಿದೆ. ಕಬ್ಬಿನ ಬೆಲ್ಲಕ್ಕಿಂತ ಜೋಳದಿಂದ ತಯಾರಿಸಿದ ಬೆಲ್ಲ ಉತ್ತಮ ಎಂಬುದು ಸಾಬೀತಾಗಿದ್ದು, ಇದೇ ಅಕ್ಟೋಬರ್ 8 ರಂದು ಕೃಷಿ ವಿಜ್ಞಾನಿಗಳ ಸಮ್ಮುಖದಲ್ಲಿ ಮತ್ತೊಮ್ಮೆ ಜೋಳದ ದಂಟಿನಿಂದ ರಸ ತೆಗೆದು ಬೆಲ್ಲ ತಯಾರಿಸುವ ಮೂಲಕ ಪ್ರಾತ್ಯಕ್ಷಿಕೆ ಮಾಡಿ ತೋರಿಸಲಿದ್ದಾರೆ.

a-farmer-making-jaggery-from-sweet-corn-stalks-in-hubballi
ಜೋಳದ ದಂಟನ್ನು ಕತ್ತರಿಸುತ್ತಿರುವುದು (ETV Bharat)

ಈ ಕುರಿತಂತೆ ಮಹಾಲಿಂಗಪ್ಪ ಅವರು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ್ದು, 'ಕಬ್ಬಿನಿಂದ ಬೆಲ್ಲ ತಯಾರಿಸುತ್ತಾರೆ. ಆದರೆ ದೇಶದಲ್ಲಿ ಪ್ರಥಮವಾಗಿ ಜೋಳದ ಕಡ್ಡಿಯಿಂದ ಬೆಲ್ಲ ತಯಾರಿಸುತ್ತೇವೆ. ಕಬ್ಬಿನಿಂದ ಬೆಲ್ಲ ತಯಾರಿಸಲು 12 ತಿಂಗಳು ಬೇಕಾಗುತ್ತದೆ. ಆದರೆ ಜೋಳ ಕೇವಲ 4 ತಿಂಗಳ ಬೆಳೆಯಾಗಿದೆ. ವರ್ಷದಲ್ಲಿ ಎರಡು ಬೆಳೆ ತೆಗೆಯಬಹುದು. ಇದರಿಂದ ರೈತರಿಗೆ ಬಹಳ ಅನುಕೂಲವಾಗಲಿದೆ. ಜೋಳದ ಕಡ್ಡಿ ಒಂದು ಎಕರೆಗೆ 10 ಟನ್ ಬೆಳೆಯುತ್ತದೆ. ಈ ಕಡ್ಡಿಯನ್ನು ಬಳಸಿಕೊಂಡು ಅಲೆಮನೆಗೆ ಹಾಕಿದರೆ ಉತ್ತಮವಾದ ಬೆಲ್ಲ ತೆಗೆಯಬಹುದು. ಇದರಲ್ಲಿ ಮಾನವನ ಆರೋಗ್ಯಕ್ಕೆ ಬೇಕಾದ ಉತ್ತಮ ಪೋಷಕಾಂಶಗಳಿವೆ' ಎಂದರು.

ಕಬ್ಬಿನ ಬೆಲ್ಲ ಹಾಗೂ ಜೋಳದ ಬೆಲ್ಲದ ಇಳುವರಿ ಹೇಗೆ? : ಸರಿಸಮಾರು ಒಂದು ಟನ್ ಕಬ್ಬಿನಿಂದ 100 -110 ಕೆಜಿ ಬೆಲ್ಲ ತಯಾರಿಸಬಹುದು. ಜೋಳದ ಕಡ್ಡಿಯಿಂದ 60-70 ಕೆಜಿ ಬೆಲ್ಲ ತಯಾರಿಸಬಹುದು. ಜೋಳದ ಕಡ್ಡಿಯಲ್ಲಿ ನೀರಿನ ಅಂಶ ಕಡಿಮೆ ಇರುವುದರಿಂದ ಬೆಲ್ಲದ ಉತ್ಪಾದನೆ ಕಡಿಮೆಯಾಗುತ್ತದೆ ಎಂದು ಹೇಳಿದರು.

Farmer Mahalingappa in the corn field
ಜೋಳದ ತೋಟದಲ್ಲಿ ರೈತ ಮಹಾಲಿಂಗಪ್ಪ (ETV Bharat)

ಸಕ್ಕರೆ ಖಾಯಿಲೆ ಇದ್ದವರಿಗೆ ಉಪಯುಕ್ತ : ವೈಜ್ಞಾನಿಕವಾಗಿ ಸಕ್ಕರೆ ಖಾಯಿಲೆ ಇದ್ದವರಿಗೆ ಇದು ಉಪಯುಕ್ತವಾಗಿದೆ. ಇದರಲ್ಲಿ ಸಕ್ಕರೆ ಪ್ರಮಾಣ ಕೊಂಚ ಕಡಿಮೆ ಇದೆ. ಪೊಟ್ಯಾಷಿಯಂ, ಮಾಲೆಬಿಡೆನಿಯಂ, ಕಾರ್ಬೋಹೈಡ್ರೇಟ್, ಸುಕ್ರೋಸ್‌‌, ಶುಗರ್ ಕಂಟೆಂಟ್​​ಗಳು ನಾವು ಸಾಮಾನ್ಯವಾಗಿ ಬಳಸುವ ಬೆಲ್ಲಕ್ಕಿಂತ ಉತ್ತಮವಾಗಿವೆ. ಈ ಕುರಿತಂತೆ ಈಗಾಗಲೇ ಲ್ಯಾಬ್ ಪರೀಕ್ಷೆ ಕೂಡ ಮಾಡಲಾಗಿದೆ. ಇದೇ ತಿಂಗಳ 8ನೇ ತಾರೀಖಿನಂದು ಬೆಲ್ಲ ತಯಾರಿಸಿ ಹಂಚುತ್ತೇವೆ ಎಂದು ತಿಳಿಸಿದರು.

ಸಿಹಿ ಜೋಳದ ಕಡ್ಡಿ ಜೋಳದಿಂದ ಮಾತ್ರ ಬೆಲ್ಲ ತಯಾರಿಕೆ : 'ಎಲ್ಲ ಜೋಳದ ಕಡ್ಡಿಯಿಂದ ಬೆಲ್ಲ ತಯಾರಿಸಬಹುದು. ಆದರೆ ಇತ್ತೀಚಿಗೆ ಕೃಷಿ ವಿಶ್ವವಿದ್ಯಾಲಯಗಳು ಬಿಡುಗಡೆ ಮಾಡಿದ ಸಿಹಿ‌ಜೋಳದ ಬೀಜಗಳಿಂದ ಬೆಳೆದ ಕಡ್ಡಿಗಳಿಂದ ಬೆಲ್ಲ ತಯಾರಿಸಬಹುದು. ನಾಟಿ ಮಾಡಿ 120 ದಿನಕ್ಕೆ ಜೋಳದ ಕಡ್ಡಿ ಬೆಲ್ಲ ತಯಾರಿಸುವ ಪ್ರೌಢತೆಗೆ ಬರಲಿದೆ. ಜೋಳದ ತೆನೆ ಕಟಾವು ಮಾಡಿದ 2-3 ಗಂಟೆಯಲ್ಲಿಯೇ ಇದನ್ನು ಆಲೆಮನೆಗೆ ಸಾಗಿಸಿ ಕ್ರಸಿಂಗ್ ಮಾಡಬೇಕಾಗುತ್ತದೆ. ಇಲ್ಲವಾದರೆ ಅದರಲ್ಲಿನ ಜ್ಯೂಸ್ ಕಂಟೆಂಟ್ ‌ಕಡಿಮೆಯಾಗಿ, ಬೆಲ್ಲ ಉತ್ಪಾದನೆ ಕಡಿಮೆಯಾಗಲಿದೆ. ಒಣಗಿದ ಮೇಲೆ ಬೆಲ್ಲ ತಯಾರಿಕೆ ಸಾಧ್ಯವಿಲ್ಲ. ಹೀಗಾಗಿ ಹಸಿ ಇದ್ದಾಗಲೇ ತೆನೆಯಿಂದ ಬೇಪರ್ಡಿಸಿ ಬೆಲ್ಲ ತಯಾರಿಸಬೇಕು' ಎಂದರು.

a-farmer-making-jaggery-from-sweet-corn-stalks-in-hubballi
ರೈತ ಮಹಾಲಿಂಗಪ್ಪ ಅವರು ಜೋಳದ ದಂಟನ್ನು ತಿನ್ನುತ್ತಿರುವುದು (ETV Bharat)

ಜೋಳ ಬೆಳೆಯುವ ಪ್ರದೇಶದಲ್ಲಿ ಆಲೆಮನೆ : 'ಜೋಳ ಬೆಳೆಯುವ ಪ್ರದೇಶದ ಹತ್ತಿರದಲ್ಲಿ ಆಲೆಮನೆ ಇದ್ರೆ ಮಾತ್ರ ಬೆಲ್ಲ ತಯಾರಿಕೆಗೆ ಅನುಕೂಲವಾಗಲಿದೆ. ಉತ್ತರ ಕರ್ನಾಟಕ ಭಾಗದ ಧಾರವಾಡ, ಕೊಪ್ಪಳ, ಗದಗ, ಹಾವೇರಿ ಜಿಲ್ಲೆಯಲ್ಲಿ ‌ಜೋಳವನ್ನು ಎಥೇಚ್ಚವಾಗಿ ಬೆಳೆಯುತ್ತಾರೆ. ಆದರೆ ಜೋಳದ ಕಡ್ಡಿಯಲ್ಲಿನ ತೇವಾಂಶ ಉಳಿಸಿಕೊಂಡು ಬೆಲ್ಲ ತಯಾರಿಸಲು ಸಮೀದಲ್ಲಿ ಅಲೆಮನೆ ಮಾಡಿಕೊಳ್ಳುವುದು ರೈತರಿಗೆ ಅವಶ್ಯಕವಾಗಿದೆ. ಸರ್ಕಾರ ಅರ್ಧದಷ್ಟು ಸಬ್ಸಿಡಿ ಮೇಲೆ ಸಾಲವನ್ನು ಕೊಡುತ್ತಿದ್ದು, 10-15 ಲಕ್ಷದಲ್ಲಿ ಆಲೆಮನೆ ಹಾಕಿಕೊಂಡು ಬೆಲ್ಲ ಉತ್ಪಾದನೆ ಮಾಡಿಕೊಳ್ಳಬಹುದು. ಇದೇ ತಿಂಗಳ 8ನೇ ತಾರೀಖು ನಾವು ಸ್ವಂತ ಜಮೀನಿನಲ್ಲಿ 10 ಎಕರೆ ಪ್ರದೇಶದಲ್ಲಿ ಬೆಳೆದ ಜೋಳದ ಕಾಂಡದಿಂದ ಬೆಲ್ಲ ತೆಗೆಯುವ ಪ್ರಾತ್ಯಕ್ಷಿಕೆ ಮಾಡುತ್ತೇವೆ' ಎಂದು ತಿಳಿಸಿದರು.

ಈ ವೇಳೆ ಬೆಲ್ಲವನ್ನು ಹೆಚ್ಚಿನ ದಿನ ಸಂಗ್ರಹಿಸುವ ನಿಟ್ಟಿನಲ್ಲಿ ಕೃಷಿ ವಿವಿಯ ತಜ್ಞರಿಂದ ಸಲಹೆ ಪಡೆದು, ಆ ನಿಟ್ಟಿನಲ್ಲಿ ಪ್ಯಾಕಿಂಗ್ ಮತ್ತು ಮಾರಾಟ, ಬೆಲೆ ನಿಗಧಿ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ವಿವರಿಸಿದರು.

ಈ ಪ್ರಯೋಗ ರೈತನ ಆರ್ಥಿಕ‌ ಬದಲಾವಣೆಗೆ ಮುನ್ನುಡಿ : ಈ ಪ್ರಯೋಗವು ಮುಂದಿನ ದಿನಗಳಲ್ಲಿ ಗ್ರಾಮೀಣ ಆರ್ಥಿಕತೆಯಲ್ಲಿ ಮಹತ್ವದ ಬದಲಾವಣೆಯನ್ನು ತರಬಲ್ಲದು. ಸಿಹಿ ಜೋಳದ ದಂಟಿನಿಂದ ತಯಾರಾಗುವ ಬೆಲ್ಲ ರೈತರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಲಿದೆ.

a-farmer-making-jaggery-from-sweet-corn-stalks-in-hubballi
ಆಲೆಮನೆ (ETV Bharat)

ಮಹಾಲಿಂಗಪ್ಪ ಇಟ್ನಾಳ ಅವರ ಈ ಸಾಧನೆಗೆ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ರೈತ ಸಮುದಾಯದಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಸಾಮಾನ್ಯ ರೈತನ ಶ್ರಮ, ಬುದ್ದಿವಂತಿಕೆ ಮತ್ತು ದೃಢ ನಿಶ್ಚಯ ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ತರಬಲ್ಲದು ಎಂಬುದಕ್ಕೆ ಈ ಪ್ರಯೋಗ ನಿದರ್ಶನವಾಗಿದ್ದು, ರೈತರು ಇದನ್ನು ಯಾವ ರೀತಿ ಸ್ವೀಕರಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ.

ಇದನ್ನೂ ಓದಿ : ಬಾರ್ ಬಂದ್ ಮಾಡಿ ಸಾವಯವ ಕೃಷಿ ಕಡೆ ಮುಖ; ಗೊಬ್ಬರ ಮಾರಿ ವರ್ಷಕ್ಕೆ 6 ಲಕ್ಷ ಆದಾಯ; 80ರ ವೃದ್ಧನ ಸಾಹಸಗಾಥೆ!

Last Updated : October 4, 2025 at 8:28 PM IST