ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ 9ನೇ ತರಗತಿ ಓದುತ್ತಿದ್ದ ಬಾಲಕನೊರ್ವನಿಗೆ 6ನೇ ತರಗತಿ ಓದುತ್ತಿದ್ದ ಮತ್ತೋರ್ವ ಬಾಲಕ ಚಾಕುವಿನಿಂದ ಇರಿದ ಪರಿಣಾಮ ಬಾಲಕ ಸಾವನ್ನಪ್ಪಿದ ಘಟನೆ ಕಮರಿಪೇಟೆಯಲ್ಲಿ ನಡೆದಿದೆ. 14 ವರ್ಷದ ಬಾಲಕ ಮೃತಪಟ್ಟಿದ್ದಾನೆ.
ಎಂದಿನಂತೆ 14 ವರ್ಷದ ಬಾಲಕ ತಮ್ಮ ಮನೆಯಲ್ಲಿ ಚಹಾ ಕುಡಿದು, ತನಗೆ ಹೊಸ ಬಟ್ಟೆ ತರುವಂತೆ ತನ್ನ ತಾಯಿಗೆ ತಿಳಿಸಿ ಹೊರಗಡೆ ಹೋಗಿದ್ದ. ಈ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ 6ನೇ ತರಗತಿ ಬಾಲಕನ ಜೊತೆಗೆ ಜಗಳ ಏರ್ಪಟ್ಟಿದೆ. ಈ ವೇಳೆ ಈತ ರೇಡಿಯಂ ಕಟರ್ನಿಂದ ಇರಿದಿದ್ದಾನೆ. ಪರಿಣಾಮ 14 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ಕಿಮ್ಸ್ ಆಸ್ಪತ್ರೆಗೆ ರವಾನಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ.
ಪ್ರಕರಣದ ಬಗ್ಗೆ ಕಮಿಷನರ್ ಪ್ರತಿಕ್ರಿಯೆ: ಈ ಕುರಿತಂತೆ ಹುಬ್ಬಳ್ಳಿಯ ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್, ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಆ ಬಳಿಕ ಮಾತನಾಡಿದ ಅವರು, ನನ್ನ ಜೀವನದಲ್ಲೇ ಇಂತಹ ಘಟನೆಯನ್ನು ನಾನು ನೋಡಿಲ್ಲ. ಆರನೇ ತರಗತಿಯ ಬಾಲಕನಿಗೆ ಕೊಲೆ ಮಾಡುವಂತಹ ಮನಸ್ಥಿತಿ ಬಂದಿದೆ. ಪೋಷಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಪೋಷಕರಲ್ಲಿ ಮನವಿ ಮಾಡಿದರು.
ಏನಿದು ಘಟನೆ?: ಕಮರಿಪೇಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಗುರುಸಿದ್ದೇಶ್ವರ ನಗರದಲ್ಲಿ ಬಾಲಕರಿಬ್ಬರ ನಡುವೆ ಜಗಳ ಆರಂಭ ಆಗಿದೆ. ಆಗ ಓರ್ವ ಬಾಲಕ ಮನೆಗೆ ಹೋಗಿ ಚಾಕು ತಂದು ಇರಿದಿದ್ದಾನೆ. ಕೂಡಲೇ ಚಾಕುವಿನಿಂದ ಇರಿದ ಬಾಲಕನ ತಾಯಿಯು ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಕಿಮ್ಸ್ನಲ್ಲಿ ಬಾಲಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಇದು ಹೃದಯ ವಿದ್ರಾವಕ ಘಟನೆ: ಆರನೇ ತರಗತಿ ಮಗು, ನಮ್ಮ ಸೊಂಟಕ್ಕೂ ಬರೋದಿಲ್ಲ. ಅಂತಹ ಮಗು ಇಂತಹ ಕೃತ್ಯ ಎಸಗಿದೆ. ಮೃತ ಬಾಲಕ ಸಹ 8ನೇ ತರಗತಿ ಪಾಸ್ ಆಗಿದ್ದು, 9ನೇ ತರಗತಿಗೆ ಅಡ್ಮಿಶನ್ ತೆಗೆದುಕೊಳ್ಳಬೇಕಿತ್ತು. ಮೃತಪಟ್ಟ ಬಾಲಕ ಒಬ್ಬನೇ ಮಗನಾಗಿದ್ದಾನೆ. ತಂದೆ ರೊಟ್ಟಿ ವ್ಯಾಪಾರ ಮಾಡ್ತಿದ್ದಾರೆ. ಆರೋಪಿ ಬಾಲಕನ ಕುಟುಂಬವು ಬಡ ಕುಟುಂಬವಾಗಿದೆ.
ಕಾನೂನು ಪ್ರಕಾರ ಏನೂ ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ತಿಳಿಸಿದ್ದಾರೆ.