ಬೆಳಗಾವಿ: ಕಾರ್ಗಿಲ್ ವಿಜಯೋತ್ಸವ ಇನ್ನೇನು ಬಂದೇ ಬಿಟ್ಟಿತು. ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ ವೀರಯೋಧರ ತ್ಯಾಗ ಮತ್ತು ಬಲಿದಾನ ಮರೆಯುವಂತಿಲ್ಲ. ಆದರೆ, ಆ ದಿನ ಮಾತ್ರ ಅವರನ್ನು ಸ್ಮರಿಸಿದರೆ ಸಾಲದು. ಆ ಹುತಾತ್ಮ ಯೋಧರ ಕುಟುಂಬಗಳಿಗೆ ಸರ್ಕಾರ ನೀಡಿದ್ದ ಭರವಸೆ ಈಡೇರಿಸುವ ಕೆಲಸವೂ ಆಗಬೇಕಿದೆ.
ಸುಖಾಸುಮ್ಮನೆ ಕಾಲು ಕೆರೆದು ಯುದ್ಧಕ್ಕೆ ನಿಂತ ಶತ್ರು ರಾಷ್ಟ್ರ ಪಾಕಿಸ್ತಾನದ ಸೈನಿಕರನ್ನು 1999 ಜುಲೈ 26ರಂದು ರಣರಂಗದಲ್ಲಿ ಮಕಾಡೆ ಮಲಗಿಸಿದ್ದು ನಮ್ಮ ಭಾರತಾಂಬೆಯ ಮಕ್ಕಳು. ಅಂದಿನಿಂದ ಪ್ರತಿವರ್ಷ ಜುಲೈ 26ರಂದು ಕಾರ್ಗಿಲ್ ವಿಜಯೋತ್ಸವ ಆಚರಿಸಲಾಗುತ್ತಿದೆ. ಆ ವಿಜಯೋತ್ಸವಕ್ಕೆ ಕಾರಣರಾದ ವೀರಯೋಧರ ಪರಾಕ್ರಮ ಕೊಂಡಾಡುತ್ತೇವೆ. ಅಲ್ಲದೇ ವೀರಮರಣ ಅಪ್ಪಿದವರನ್ನೂ ಸ್ಮರಿಸಿ, ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ಆದರೆ, ಬಲಿದಾನಕ್ಕೆ ತಕ್ಕ ಪ್ರತಿಫಲ ಸರ್ಕಾರಗಳಿಂದ ಹುತಾತ್ಮ ಯೋಧರ ಮನೆಯವರಿಗೆ ಇದುವರೆಗೂ ದೊರೆಯದೇ ಇರೋದು ದೊಡ್ಡ ದುರಂತವೇ ಸರಿ.
ಹೌದು ಕಾರ್ಗಿಲ್ ಯುದ್ಧದಲ್ಲಿ ಬೆಳಗಾವಿ ಜಿಲ್ಲೆಯ 7 ಸೈನಿಕರು ಪಾಕಿಸ್ತಾನದ ಸೈನಿಕರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ಹುತಾತ್ಮರಾಗಿದ್ದಾರೆ. ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮೇಕಲಮರಡಿ ಗ್ರಾಮದ ಯಶವಂತ ಕೋಲಕಾರ, ಮುರಕಿಭಾವಿಯ ಬಾಬು ಸಾಣಿಕೊಪ್ಪ, ಬೆಳಗಾವಿ ನಗರದ ಭರತ ಮಸ್ಕೆ, ವಡಗಾವಿಯ ದೋಂಡಿಬಾ ದೇಸಾಯಿ, ಸವದತ್ತಿ ತಾಲೂಕಿನ ಅಸುಂಡಿಯ ಮಡಿವಾಳಪ್ಪ ಹಡಪದ, ಅಥಣಿ ತಾಲೂಕಿನ ದರೂರಿನ ಬಸವರಾಜ ಚೌಗುಲಾ, ಟಿಳಕವಾಡಿಯ ಎಸ್. ಮುಹಿಲನ್ ಹುತಾತ್ಮ ವೀರ ಯೋಧರು.
ಸರ್ಕಾರ ಕೊಟ್ಟ ಮಾತು ಈಡೇರಿಸಲಿ ಎಂಬುದು ಕುಟುಂಬಸ್ಥರ ಆಗ್ರಹ: ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೈನ್ಯ ಗೆದ್ದ ಬಳಿಕ ಈ ಏಳು ಮೃತ ಯೋಧರ ಕುಟುಂಬಸ್ಥರಿಗೆ ಸರ್ಕಾರಗಳು ಒಂದಿಷ್ಟು ನಗದು ಪರಿಹಾರ ನೀಡಿದೆ. ಅಲ್ಲದೇ ಸೈನಿಕರ ಮಕ್ಕಳಿಗೆ ಸರ್ಕಾರಿ ನೌಕರಿ, ಜಮೀನು, ಸೈಟ್ ವಿತರಿಸುತ್ತೇವೆ ಅಂತಾನೂ ಆ ಸಂದರ್ಭದಲ್ಲಿ ಸರ್ಕಾರಗಳು ಭರವಸೆ ನೀಡಿತ್ತು. ಆದರೆ, ಕಾರ್ಗಿಲ್ ಯುದ್ಧವಾಗಿ 25 ವರ್ಷ ಆಗುತ್ತಾ ಬಂದರೂ ಅದು ಈಡೇರಿಲ್ಲ. ಹಾಗಾಗಿ, ಈಗಲಾದರೂ ಕೊಟ್ಟ ಮಾತು ಈಡೇರಿಸಲಿ ಎಂದು ಆ ವೀರ ಯೋಧರ ಪತ್ನಿ ಮತ್ತು ಮಕ್ಕಳು ಸರ್ಕಾರಕ್ಕೆ ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ.
ಈಟಿವಿ ಭಾರತ ಜೊತೆಗೆ ಮಾತನಾಡಿದ ಹುತಾತ್ಮ ಯೋಧ ಯಶವಂತ ಕೋಲಕಾರ ಪತ್ನಿ ಸಾವಿತ್ರಿ ಮಾತನಾಡಿ, 1999 ಜುಲೈ 7ರಂದು ನಮ್ಮ ಯಜಮಾನರು ಯುದ್ಧದಲ್ಲಿ ಮಡಿದರು. ಆಗ ಸರ್ಕಾರ ಸೇನಾ ಮೆಡಲ್ ನೀಡಿ ನಮಗೆ ಕೊಡಬೇಕಿದ್ದ ಪರಿಹಾರ ಕೊಟ್ಟಿದೆ. ಅದಾದ ಬಳಿಕ ನಮ್ಮನ್ನು ಮರೆತು ಬಿಟ್ಟಿದ್ದಾರೆ. ಕಾರ್ಗಿಲ್ ವಿಜಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ದಿನ ಮಾತ್ರ ನೆನಪಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಕ್ಕಳಿಗೆ ಸರ್ಕಾರಿ ನೌಕರಿ ಕೊಡುತ್ತೇವೆ ಎಂದಿದ್ದರು. ಈಗ ನಮ್ಮ ಮಕ್ಕಳು ಕಲಿತು ದೊಡ್ಡವರಾಗಿದ್ದು, ವಿದ್ಯಾರ್ಹತೆಗೆ ತಕ್ಕಂತ ನೌಕರಿ ಕೊಡಬೇಕು. ಸರ್ಕಾರವೇ ಹೇಳಿದಂತೆ ಐದು ಎಕರೆ ಜಮೀನು ಮತ್ತು ಸೈಟ್ ಕೂಡ ವಿತರಿಸಬೇಕು ಎಂದು ಒತ್ತಾಯಿಸಿದರು.
ವೀರಯೋಧ ಮಡಿವಾಳಪ್ಪ ಹಡಪದ ಪತ್ನಿ ಮಹಾದೇವಿ ಮಾತನಾಡಿ, 1999ರಲ್ಲಿ ನಮ್ಮ ಮಕ್ಕಳು ಚಿಕ್ಕವರಿದ್ದರು. ಈಗ ಬೆಳೆದು ದೊಡ್ಡವರಾಗಿದ್ದು, ಪದವಿ ಪಡೆದಿದ್ದಾರೆ. ಆದರೆ, ನೌಕರಿ ಸಿಗುತ್ತಿಲ್ಲ. ಪೆನ್ಷನ್ ಮೇಲೆ ಜೀವನ ಸಾಗಿಸೋದು ತುಂಬಾ ಕಷ್ಟವಾಗುತ್ತಿದೆ. ಜಮೀನು ಸೇರಿ ಯಾವುದೇ ಆಸ್ತಿ ಇಲ್ಲ. ನಮ್ಮ ಮಗನಿಗೆ ದಯವಿಟ್ಟು ಸರ್ಕಾರಿ ನೌಕರಿ ಕೊಡಲೇಬೇಕು ಎಂದು ಆಗ್ರಹಿಸಿದ್ದಾರೆ.
ಮಾಜಿ ಸೈನಿಕರ ಸಂಘಟನೆಗಳ ಮಹಾ ಒಕ್ಕೂಟದ ಅಧ್ಯಕ್ಷ ಜಗದೀಶ ಪೂಜೇರಿ ಮಾತನಾಡಿ, 25ನೇ ಕಾರ್ಗಿಲ್ ವಿಜಯೋತ್ಸವದ ಸಂದರ್ಭದಲ್ಲಿ ನಾವೆಲ್ಲಾ ಇದ್ದೇವೆ. ಆ ವಿಜಯೋತ್ಸವಕ್ಕೆ ಕಾರಣಿಕರ್ತರಾದ ಹುತಾತ್ಮ ಯೋಧರ ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಕೊಡಬೇಕು. ಜುಲೈ 26ರೊಳಗೆ ಆ ವೀರಯೋಧರ ಮನೆಗಳಿಗೆ ಸರ್ಕಾರ ಸಿಹಿ ಸುದ್ದಿ ನೀಡುವಂತೆ ಒತ್ತಾಯಿಸಿದರು.
ದೇಶಕ್ಕಾಗಿ ಕಾರ್ಗಿಲ್ ಯುದ್ಧದಲ್ಲಿ ತಮ್ಮ ಪತಿ, ಮಗನನ್ನು ಕಳೆದುಕೊಂಡ ಬೆಳಗಾವಿ ಜಿಲ್ಲೆಯ ವೀರಯೋಧರ ಕುಟುಂಬಸ್ಥರು ಈಗ ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಒಟ್ಟಿನಲ್ಲಿ 25ನೇ ವರ್ಷದ ಸವಿನೆನಪಿಗೋಸ್ಕರ ಆದರೂ ಈ ವೀರ ಯೋಧರ ಕುಟುಂಬಗಳಿಗೆ ಸರ್ಕಾರ ನ್ಯಾಯ ಒದಗಿಸುತ್ತಾ ಎಂದು ಕಾದು ನೋಡಬೇಕಿದೆ.