ಬಾಗಲಕೋಟೆ: ನಗರದ ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ತಮ್ಮ ನಾಲ್ಕು ದಿನದ ಹೆಣ್ಣು ಮಗು ಮೃತಪಟ್ಟಿದೆ ಎಂದು ಆರೋಪಿಸಿ ಮೃತ ಮಗುವಿನ ಪೋಷಕರು ಹಾಗೂ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆ ಜಿಲ್ಲೆ, ಬಾದಾಮಿ ತಾಲೂಕಿನ, ಗೋವನಕೊಪ್ಪ ಗ್ರಾಮದ ನಿವಾಸಿಯಾಗಿರುವ ಹೆಬ್ಬಳ್ಳೆವ್ವ ಮತ್ತು ಬಸಪ್ಪ ಎಂಬ ದಂಪತಿಯ ಮಗು ಮೃತಪಟ್ಟಿದೆ. ಇವರು ಹೆರಿಗೆಗಾಗಿ ಏಪ್ರಿಲ್ 7 ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಇನ್ನು ಮಹಿಳೆಗೆ ಏಪ್ರಿಲ್ 8 ರಂದು ನಾರ್ಮಲ್ ಹೆರಿಗೆಯಾಗಿತ್ತು. ಮಗು ಆರೋಗ್ಯವಾಗಿಯೇ ಇತ್ತು. ಆದರೆ, ತಾಯಿಗೆ ರಕ್ತ ಕಡಿಮೆಯಾದ ಕಾರಣ ರಕ್ತ ಹಾಕುವ ಪ್ರಕ್ರಿಯೆಯಲ್ಲಿ ವೈದ್ಯರು ತೊಡಗಿದ್ದರು. ಆರೋಗ್ಯವಾಗಿಯೇ ಇದ್ದ ಮಗು ಸಂಜೆ ವೇಳೆ ಏಕಾಏಕಿ ಮೃತಪಟ್ಟಿರುವುದು ಕುಟುಂಬದವರ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.
ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ ಎಂದು ಆರೋಪ: ಸಂಜೆ 7.15ಕ್ಕೆ ತಾಯಿಯು ಮಗುವಿಗೆ ಹಾಲು ಕುಡಿಸಿ ಮಲಗಿಸಿದ್ದಳು. 7.40ರ ವೇಳೆ ಗಮನಿಸಿದಾಗ ಮಗುವಿನ ಉಸಿರಾಟ ನಿಂತಿತ್ತು. ಅನುಮಾನ ಬಂದು ಮಗುವನ್ನು ಎತ್ತಿಕೊಂಡು ವೈದ್ಯರ ಬಳಿ ತೆರಳಿದೆವು. ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಗು ಸಾವಿನ ಬಗ್ಗೆ ವೈದ್ಯರ ಸ್ಪಷ್ಟನೆ ಹೀಗಿದೆ: ಮಗು ಸಾವಿನ ಬಗ್ಗೆ ವೈದ್ಯರು ಸ್ಪಷ್ಟನೆ ನೀಡಿದ್ದು, ಮಗು ನಾರ್ಮಲ್ ಆಗಿ ಆರೋಗ್ಯವಾಗಿಯೇ ಇತ್ತು. ಎದೆ ಹಾಲು ಕುಡಿಸಿದ ಬಳಿಕ ಮಗುವಿಗೆ ತೇಗು ಹೊಡೆಸಬೇಕಿತ್ತು. ಅದನ್ನು ಮಾಡಿರಲಿಕ್ಕಿಲ್ಲ. ಇದರ ಜೊತೆಗೆ ಮಗು ಮಲಗಿಸಿದ ವಾರ್ಡ್ನಲ್ಲಿ ಫ್ಯಾನ್ ಜೋರಾಗಿ ಇಟ್ಟಿದ್ದರು. ಹಾಲು ನೆತ್ತಿಗೆ ಹತ್ತಿ ಹೈಪೋಥರ್ಮಿಯಾ ಸಮಸ್ಯೆಯಿಂದ ಮೃತಪಟ್ಟಿರುವ ಶಂಕೆ ಇದೆ. ಯಾರೂ ನಿರ್ಲಕ್ಷ್ಯ ಮಾಡಿಲ್ಲ ಎಂದು ಎಂದು ಜಿಲ್ಲಾಸ್ಪತ್ರೆ ಮಕ್ಕಳ ತಜ್ಞೆ ಡಾ. ರಜನಿ ಪಾಟಿಲ್ ಸ್ಪಷ್ಟನೆ ನೀಡಿದ್ದಾರೆ.
ಮಗು ಆರೋಗ್ಯವಾಗಿಯೇ ಇದ್ದ ಕಾರಣ ಯಾವುದೇ ಚಿಕಿತ್ಸೆ ನೀಡುತ್ತಿರಲಿಲ್ಲ. ತಾಯಿಗೆ ರಕ್ತ ಕಡಿಮೆಯಾದ ಹಿನ್ನೆಲೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಹೆರಿಗೆ ವೈದ್ಯೆ ಶಿಲ್ಪಾ ಸಹ ಚಿಕಿತ್ಸೆ ಬಗ್ಗೆ ವಿವರಣೆ ನೀಡಿದ್ದಾರೆ.
ಗೋವನಕೊಪ್ಪ ಗ್ರಾಮದ ನಿವಾಸಿಯಾಗಿರುವ ಹೆಬ್ಬಳ್ಳೆವ್ವಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಹೆರಿಗೆ ಬಳಿಕ ಮಗು ಏಕಾಏಕಿ ಮೃತಪಟ್ಟಿರುವುದು ಕುಟುಂಬದವರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಹೆರಿಗೆ ನಂತರ ಬಾಣಂತಿ ಹೊಟ್ಟೆಯಲ್ಲೇ ಬಟ್ಟೆ ತುಂಡು ಬಿಟ್ಟು ಹೊಲಿಗೆ ಹಾಕಿದ ಆರೋಪ - DOCTORS NEGLIGENCE