ಚಿಕ್ಕೋಡಿ(ಬೆಳಗಾವಿ): ನಿಪ್ಪಾಣಿ ತಾಲೂಕಿನ ಸ್ಥವನಿಧಿ ಘಾಟ್ನಲ್ಲಿ ಸರಣಿ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ. ಅಪಘಾತದಲ್ಲಿ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದ ಗಣಪತಿ ಮಾನೆ (45), ನಿಪ್ಪಾಣಿ ನಗರದ ನಿವಾಸಿ ಜಲೀನ್ ಮಕಾಂದಾರ (50) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೆಂಗಳೂರು- ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಟೇನರ್ ವಾಹನದ ಚಾಲಕನ ನಿರ್ಲಕ್ಷ್ಯದಿಂದಾಗಿ ಎಂಟಕ್ಕೂ ಹೆಚ್ಚು ವಾಹನಗಳಿಗೆ ಸರಣಿ ಅಪಘಾತ ಸಂಭವಿಸಿದೆ. ಬೃಹತ್ ಲಾರಿಯೊಂದು ಕಾರು ಹಾಗೂ ಬೈಕ್ ಮೇಲೆ ಬಿದ್ದ ಪರಿಣಾಮವಾಗಿ ಕಾರು ಚಾಲಕ ಮತ್ತು ಬೈಕ್ ಸವಾರ ಮೃತಪಟ್ಟಿದ್ದಾರೆ. 4 ಟ್ರಕ್, ಮೂರು ಕಾರು, ಒಂದು ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿದೆ.
ಗಾಯಾಳುಗಳಿಗೆ ನಿಪ್ಪಾಣಿ ಸಮುದಾಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಸಾಂಗ್ಲಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತ ಹಿನ್ನೆಲೆ ಕಿ.ಮೀ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಕೆಲಕಾಲ ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಸ್ಥಳಕ್ಕೆ ನಿಪ್ಪಾಣಿ ನಗರ ಪೊಲೀಸ್ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ನಿಪ್ಪಾಣಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ನಿಂತಿದ್ದ ಆಟೋಗೆ ಬಸ್ ಡಿಕ್ಕಿ, ಇಬ್ಬರು ಯುವಕರು ಸಾವು - Bus Hits Auto