ಇಂಗ್ಲೀಷ್ ಕಾದಂಬರಿ ಬರೆದ 15 ವರ್ಷದ ಬಾಲಕ: ದೇಶ, ವಿದೇಶಿ ಓದುಗರಿಂದ ಮೆಚ್ಚುಗೆ, ಸಿಕ್ಕಿದೆ 5ಸ್ಟಾರ್ ರೇಟಿಂಗ್!!
15 ವರ್ಷದ ಬಾಲಕನೊಬ್ಬ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥೆ ಒಳಗೊಂಡ ಇಂಗ್ಲೀಷ್ ಕಾದಂಬರಿ ಬರೆದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದಾನೆ.

Published : April 23, 2025 at 6:07 PM IST
ವರದಿ: ಸಿದ್ದನಗೌಡ ಪಾಟೀಲ್
ಬೆಳಗಾವಿ: ಇದು ಡಿಜಿಟಲ್ ಯುಗ. ಇಂದಿನ ಮಕ್ಕಳು ಕಥೆ, ಕಾದಂಬರಿ ಬರೆಯುವುದು ಇರಲಿ, ಓದುವುದೂ ದೂರದ ಮಾತು. ಇನ್ಸ್ಟಾ , ಫೇಸ್ಬುಕ್, ಸ್ನ್ಯಾಪ್ಚಾಟ್ನಲ್ಲಿ ಸ್ಟೈಲಿಶ್ ಫೋಟೋ, ರೀಲ್ಸ್ ಅಪ್ಲೋಡ್ ಮಾಡಿ ಲೈಕ್ಸ್, ಕಮೆಂಟ್ಸ್ಗೆ ಕಾಯೋದೇ ದೊಡ್ಡ ಸಾಧನೆ ಆಗಿ ಬಿಟ್ಟಿದೆ. ಇನ್ನು ಪಬ್ಜಿ, ಲೋಡೋ ಗೇಮ್ ಆಡೋಕೆ ಅವರಿಗೆ ಟೈಮ್ ಸಾಕಾಗೋದಿಲ್ಲ. ಆದರೆ, ಇಲ್ಲೊಬ್ಬ 15 ವರ್ಷದ ಬಾಲಕ ಸಸ್ಪೆನ್ಸ್, ಥ್ರಿಲ್ಲರ್ ಕಥೆ ಒಳಗೊಂಡ ಇಂಗ್ಲೀಷ್ ಕಾದಂಬರಿ ಬರೆದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದಾನೆ.
ಬೆಳಗಾವಿಯ ಪೀರನವಾಡಿಯ ಕೆಎಲ್‌ಎಸ್ ಪಬ್ಲಿಕ್ ಸ್ಕೂಲ್‌ನ 10ನೇ ತರಗತಿ ವಿದ್ಯಾರ್ಥಿ ಪ್ರಣವ್ ಶಶಿಭೂಷಣ ಬಾಯರಿ 'ದಿ ರಸ್ಟೆಡ್ ರಿಡಲ್' ಎಂಬ ಇಂಗ್ಲಿಷ್ ಕಾದಂಬರಿ ಬರೆದು ಚಿಕ್ಕ ವಯಸ್ಸಿನಲ್ಲೆ ಸಾಹಿತ್ಯ ಲೋಕಕ್ಕೆ ಸೈಲೆಂಟ್ ಆಗಿಯೇ ಎಂಟ್ರಿ ಕೊಟ್ಟಿದ್ದಾನೆ.
460 ಪುಟಗಳ ಆಂಗ್ಲ ಭಾಷೆಯ ಈ ಕಾದಂಬರಿ ಬರೆಯಲು ಬಾಲ ಕಾದಂಬರಿಕಾರ ಪ್ರಣವ್ ಒಂದು ವರ್ಷ ಸಮಯ ತೆಗೆದುಕೊಂಡಿದ್ದಾನೆ. ಪುಸ್ತಕ ಬರೆಯುವ ಬಗ್ಗೆ ಯಾರಿಗೂ ಹೇಳಿರಲಿಲ್ಲ. ಆನ್‌ಲೈನ್‌ನಲ್ಲಿ ಯಾವಾಗ ಪುಸ್ತಕ ಮಾರಾಟ ಶುರುವಾಯಿತೋ ಆವಾಗ ಶಾಲೆಯಲ್ಲಿ ಶಿಕ್ಷಕರು ಮತ್ತು ಆತನ ಸ್ನೇಹಿತರಿಗೆ ಗೊತ್ತಾಯಿತು.
ಅಮೆಜಾನ್ ಕಿಂಡಲ್ ಡೈರೆಕ್ಟ್ ಪಬ್ಲಿಕೇಷನ್ ವಿಭಾಗದಲ್ಲಿ ತಾನು ಬರೆದ ಪುಸ್ತಕವನ್ನು ಪ್ರಣವ್ ಅಪ್ಲೋಡ್ ಮಾಡಿದ್ದಾನೆ. ಅಮೆಜಾನ್‌ನಲ್ಲಿ ಪರಿಶೀಲನೆಗೊಂಡು ಈ ಪುಸ್ತಕ ಪುರಸ್ಕೃತವಾಗಿದೆ. ಸದ್ಯ ನಾಲ್ಕು ಪ್ರತಿಗಳು ಮಾರಾಟವಾಗಿವೆ. ಪ್ರತಿಗಳು ಮಾರಾಟವಾದಂತೆ ವಿದ್ಯಾರ್ಥಿಗೆ ಅಮೆಜಾನ್, ಪ್ಲೇಸ್ಟೋರ್ ಇ-ಬುಕ್, ಪೋತಿ ಡಾಟ್ ಕಾಂ ನಿಂದ ಹಣವೂ ಬರುತ್ತಿದೆ. ಜೊತೆಗೆ ದೇಶ, ವಿದೇಶಗಳ ಓದುಗರು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ. ಅಂದಹಾಗೆ, ಇ-ಪುಸ್ತಕಕ್ಕೆ ರೂ. 385 ಇದ್ದರೆ, ಮುದ್ರಣ ಪುಸ್ತಕಕ್ಕೆ 725ರೂ. ದರ ಇದೆ.

ಈಟಿವಿ ಭಾರತ ಜೊತೆಗೆ ಮಾತನಾಡಿದ ಬಾಲ ಕಾದಂಬರಿಕಾರ ಪ್ರಣವ್, ಕಾದಂಬರಿ ಬರೆಯೋಕೆ ತುಂಬಾ ಕಷ್ಟವಾಯಿತು. ಆದರೆ, ದಿನದಿಂದ ದಿನಕ್ಕೆ ಹೊಸ ವಿಚಾರಗಳು ಹೊಳೆಯುತ್ತಿದ್ದವು. ಅದರಲ್ಲಿ ಯಾವುದು ಉತ್ತಮವಾಗಿರುತ್ತವೋ, ಅವುಗಳನ್ನು ಸೇರಿಸಿ ಬರೆಯುತ್ತಿದ್ದೆ. ಪೂರ್ಣಾವಧಿಯನ್ನ 9ನೇ ತರಗತಿ ಓದಿಗೆ ಕೊಡುತ್ತಿದ್ದೆ. ಪ್ರತಿನಿತ್ಯ ರಾತ್ರಿ ಹೊತ್ತು 30-40 ನಿಮಿಷ ಮಾತ್ರ ಸಮಯ ನಿಗದಿಪಡಿಸಿ, 5-6 ಪುಟ ಕಾದಂಬರಿ ಬರೆಯುತ್ತಿದ್ದೆ ಎಂದರು.
15 ವರ್ಷದ ಬಾಲಕನ ತಂದೆ - ತಾಯಿಯನ್ನು ಯಾರೋ ಕೊಲೆ ಮಾಡಿರುತ್ತಾರೆ. ಆದರೆ, ಅದು ಆಕಸ್ಮಿಕ ಸಾವು ಅಂತಾ ಪ್ರಕರಣ ಮುಚ್ಚಿ ಹಾಕಿರುತ್ತಾರೆ. ಪ್ರಕರಣದ ಬೆನ್ನು ಹತ್ತಿ ಹೋಗುವ ಮಗ ತನಿಖೆ ನಡೆಸಿ, ಕೊಲೆಗಾರರನ್ನು ಹೇಗೆ ಪತ್ತೆ ಹಚ್ಚುತ್ತಾನೆ ಎನ್ನುವ ಕಥಾವಸ್ತುವನ್ನು ಈ ಕಾದಂಬರಿ ಹೊಂದಿದೆ. ಓದುಗನನ್ನು ಕಥೆಯೇ ಓದಿಸಿಕೊಂಡು ಹೋಗುತ್ತದೆ. ಅಷ್ಟೊಂದು ಕುತೂಹಲಭರಿತವಾಗಿದೆ. ಈಗ ಮೊದಲ ಭಾಗ ಬರೆದಿದ್ದು, ಎರಡನೇ ಭಾಗವನ್ನೂ ಶೀಘ್ರದಲ್ಲೇ ಶುರು ಮಾಡುತ್ತೇನೆ ಎನ್ನುತ್ತಾರೆ ಪ್ರಣವ್ ಬಾಯರಿ.

ಜೆ.ಕೆ. ರಾಲಿಂಗ್ ಪ್ರೇರಣೆ: ಲಂಡನ್‌ನ ಪ್ರಸಿದ್ಧ ಇಂಗ್ಲಿಷ್ ಲೇಖಕ ಜೆ.ಕೆ. ರೌಲಿಂಗ್ ನನಗೆ ಪ್ರೇರಣೆ. ರೌಲಿಂಗ್ ರಚಿಸಿರುವ 'ಹ್ಯಾರಿ ಪೋಟರ್' ನನ್ನ ನೆಚ್ಚಿನ ಪುಸ್ತಕ. 'ಹ್ಯಾರಿ ಪೋಟರ್' ಏಳು ಪುಸ್ತಕವನ್ನು ಓದಿದ್ದೇನೆ. 'ದ್ ಶಾಡೋ ಆಫ್ ನನ್' ಸೇರಿ ಅನೇಕ ಇಂಗ್ಲೀಷ್ ಪುಸ್ತಕ ಓದಿದ್ದೇನೆ. ಅವೆಲ್ಲಾ ಓದಿದ ಮೇಲೆ ನಾನು ಯಾಕೆ ಬರೆಯಬಾರದು ಅಂತಾ ಯೋಚಿಸಿ 'ದಿ ರಸ್ಟೆಡ್ ರಿಡಲ್' ಕಾದಂಬರಿ ಬರೆಯಲು ಶುರು ಮಾಡಿದೆ. ತಂದೆ-ತಾಯಿಗೆ ಮೊದಲು ಹೇಳಿರಲಿಲ್ಲ. ಆಮೇಲೆ ಗೊತ್ತಾದ ಮೇಲೆ ಬಹಳಷ್ಟು ಸಹಕಾರ ನೀಡಿದರು ಎಂದು ವಿವರಿಸಿದರು.
5 ಸ್ಟಾರ್ ರೇಟಿಂಗ್: ನನ್ನ ಬಹಳಷ್ಟು ಸ್ನೇಹಿತರು ಮೊಬೈಲ್ನಲ್ಲೆ ಕಾಲಹರಣ ಮಾಡುತ್ತಾರೆ. ಹೊಸದು ಏನೂ ಮಾಡುವುದಿಲ್ಲ. ಹಾಗಾಗಿ, ನಾನ್ಯಾಕೆ ಏನಾದರೂ ಮಾಡಬಾರದು ಅಂತಾ ಯೋಚಿಸಿ ಕಾದಂಬರಿ ಬರೆದಿದ್ದೇನೆ. ಜಾಸ್ತಿ ಇಂಗ್ಲೀಷ್ ಪುಸ್ತಕ ಬರೆಯಬೇಕು ಅಂದುಕೊಂಡಿದ್ದೇನೆ. ಕನ್ನಡ ಭಾಷೆಯಲ್ಲೂ ಬರೆಯವ ಅಲೋಚನೆ ಇದೆ ಎಂದು ಕನಸನ್ನು ಪ್ರಣವ್ ಬಿಚ್ಚಿಟ್ಟರು.

ಅಮೇಜಾನ್ನಲ್ಲಿ 5 ಸ್ಟಾರ್ ರೇಟಿಂಗ್ ಸಿಕ್ಕಿದೆ. ಕಾದಂಬರಿ ಚನ್ನಾಗಿದೆ. ಎಲ್ಲರೂ ಓದಬೇಕು ಅಂತಾ ಬಹಳಷ್ಟು ಜನರು ಒಳ್ಳೆಯ ರಿವೀವ್ ಕೊಟ್ಟಿದ್ದಾರೆ. ಜರ್ಮನಿಯವರು ವಾಟ್ಸ್ ಆ್ಯಪ್ನಲ್ಲಿ ಸಂದೇಶ ಕಳಿಸಿ ಮೆಚ್ಚಿದ್ದಾರೆ ಎಂದು ಪ್ರಣವ್ ಬಾಯರಿ ಹೇಳಿದರು.
ಮಗನ ಸಾಧನೆಗೆ ತಂದೆ-ತಾಯಿ ಖುಷ್: ಚಿಕ್ಕಮಗಳೂರು ಮೂಲದ ಪ್ರಣವ್ ತಂದೆ ಕೆ.ಎಸ್.ಶಶಿಭೂಷಣ, ತಾಯಿ ಸಾವಿತ್ರಿ ಬೆಳಗಾವಿಯಲ್ಲಿ ಸ್ವಂತ ಫಾರ್ಮಾಸೂಟಿಕಲ್ ಬ್ಯುಸಿನೆಸ್ ನಡೆಸುತ್ತಾರೆ. ಟಿಳಕವಾಡಿಯ 2ನೇ ರೈಲ್ವೆ ಗೇಟ್ ಬಳಿಯ ಅಗರಕರ್ ರಸ್ತೆಯ ಅಪಾರ್ಟಮೆಂಟ್ ಮನೆಯೊಂದರಲ್ಲಿ ವಾಸವಿದ್ದಾರೆ. ಮಗನ ಸಾಧನೆ ಬಗ್ಗೆ ಮಾತನಾಡಿದ ಶಶಿಭೂಷಣ, ಮೊದಲಿನಿಂದಲೂ ಪುಸ್ತಕ ಓದುವ ಹವ್ಯಾಸ ಅವನಿಗಿತ್ತು. ಬರೆಯವ ಆಸೆಯೂ ಇತ್ತು. ಆದರೆ, ಇಷ್ಟು ಚಿಕ್ಕ ವಯಸ್ಸಲ್ಲಿ ಪುಸ್ತಕ ಬರೆಯುವುದು ಅಷ್ಟೊಂದು ಸುಲಭ ಏನಲ್ಲ. ಅದರಲ್ಲೂ ಇಂಗ್ಲೀಷ್ ಕಾದಂಬರಿ ಬರೆದು ಮುಗಿಸಿರೋದು ಅಚ್ಚರಿ ತಂದಿದೆ. ಸಂತೋಷದ ಜೊತೆಗೆ ಹೆಮ್ಮೆಯೂ ಎನಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಅಭ್ಯಾಸದ ಜೊತೆಗೆ ಪುಸ್ತಕ ಬರೆಯುವಂತೆ ಪ್ರೋತ್ಸಾಹಿಸುತ್ತಿದ್ದೆವು. ಮಗನ ಕಾದಂಬರಿ ಪ್ರಕಟವಾಗಿದ್ದು, ಈಗ ಎಲ್ಲರೂ ಫೋನ್ ಮಾಡಿ ಶುಭಾಶಯ ಕೋರುತ್ತಿದ್ದಾರೆ. ಶಾಲೆಯವರು ಸನ್ಮಾನಿಸಿದ್ದಾರೆ. ಮುಂದೆ ಮಗ ಏನು ಮಾಡುತ್ತಾನೆ ಅದಕ್ಕೆಲ್ಲಾ ನಾವು ಬೆನ್ನುಲುಬಾಗಿ ನಿಲ್ಲುತ್ತೇವೆ. ಭವಿಷ್ಯದಲ್ಲಿ ದೊಡ್ಡ ಸಾಹಿತಿಯಾಗಿ ನಾಡಿಗೆ ಕೀರ್ತಿ ತರಲಿ ಎಂದು ಪ್ರಣವ್ ತಾಯಿ ಸಾವಿತ್ರಿ ಹಾರೈಸಿದರು.
ಇದನ್ನೂ ಓದಿ: ಇಂದು ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ: ಪುಸ್ತಕ ಅಧ್ಯಯನದಿಂದ ಪ್ರಪಂಚ ಜ್ಞಾನ - WORLD BOOK AND COPYRIGHT DAY

