ಕಾರವಾರ(ಉತ್ತರ ಕನ್ನಡ): "ಜಿಲ್ಲೆಯಲ್ಲಿ ಪಾಕಿಸ್ತಾನ ಮೂಲದ ಒಟ್ಟು 15 ಮಹಿಳೆಯರಿದ್ದಾರೆ. ಆದರೆ ಲಾಂಗ್ ಟರ್ಮ್ ವೀಸಾದಲ್ಲಿರುವ ಯಾರೊಬ್ಬರನ್ನು ಗಡಿಪಾರು ಮಾಡುವುದಿಲ್ಲ" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಪಾಕಿಸ್ತಾನಿ ಪ್ರಜೆಗಳಿಗೆ ಕೊಟ್ಟ ಎಲ್ಲಾ ರೀತಿಯ ವೀಸಾ ರದ್ದು ಮಾಡಲಾಗಿದೆ. ಅದರಂತೆ ಏ.27 ರೊಳಗೆ ಎಲ್ಲಾ ರೀತಿಯ ವೀಸಾ ಹಾಗೂ ಏ. 29 ರೊಳಗೆ ವೈದ್ಯಕೀಯ ವೀಸಾ ಪಡೆದವರು ವಾಪಸ್ ತೆರಳಬೇಕಿದೆ. ರಾಜ್ಯದಲ್ಲಿ ಒಟ್ಟು 88 ಜನ ಪಾಕಿಸ್ತಾನಿಯರಿದ್ದು, ನಾಲ್ವರು ಮೆಡಿಕಲ್ ವೀಸಾ ಪಡೆದವರಿದ್ದಾರೆ" ಎಂದರು.
"ಉತ್ತರ ಕನ್ನಡದಲ್ಲಿ ಮೂವರು ಮಕ್ಕಳು ಸೇರಿದಂತೆ 15 ಮಂದಿ ಪಾಕಿಸ್ತಾನಿ ಮಹಿಳೆಯರಿದ್ದಾರೆ. ಅವರ ಪೈಕಿ ಕಾರವಾರದ ಓರ್ವ ಮಹಿಳೆ ಜೈಲಿನಲ್ಲಿದ್ದಾರೆ. ಹೊನ್ನಾವರದ ವಲ್ಕಿಯ ಮಹಿಳೆಯು ಮದುವೆಯಾಗಿ ಪಾಕಿಸ್ತಾನಕ್ಕೆ ಹೋಗಿದ್ದಾರೆ. ಜಿಲ್ಲೆಯಲ್ಲಿರುವ ಪಾಕಿಸ್ತಾನ ಮೂಲದ ಮಹಿಳೆಯರು ಇಲ್ಲಿಯವರನ್ನು ಮದುವೆಯಾದ ಕಾರಣ ಗಡಿಪಾರು ಮಾಡುವ ಅಗತ್ಯವಿಲ್ಲ. ಆದರೂ ಸರ್ಕಾರದ ಆದೇಶದಂತೆ ಕ್ರಮ ಕೈಗೊಳ್ಳುತ್ತೇವೆ" ಎಂದು ಹೇಳಿದರು.
"ಜಿಲ್ಲೆಯಲ್ಲಿರುವ ಪಾಕಿಸ್ತಾನಿ ಮಹಿಳೆಯರು ಎಲ್ಲರೂ ನವಾಯತ್ ಮುಸ್ಲಿಂ ಆಗಿದ್ದು, ಯಾರೂ ಕೂಡ ಭಾರತೀಯ ಪೌರತ್ವ ಪಡೆದಿಲ್ಲ. ಅಲ್ಲದೇ ಬಾಂಗ್ಲಾ ನುಸುಳುಕೋರರ ಬಗ್ಗೆಯೂ ನಿರಂತರವಾಗಿ ತಪಾಸಣೆ ಮಾಡುತ್ತಿದ್ದೇವೆ" ಎಂದು ತಿಳಿಸಿದರು.
ದಾವಣಗೆರೆಯಲ್ಲಿ ನೆಲೆಸಿರುವ ಪಾಕ್ ಮಹಿಳೆ ವಿರುದ್ಧ ಕ್ರಮದ ಅವಶ್ಯಕತೆ ಇಲ್ಲ: ಮತ್ತೊಂದೆಡೆ, ಪಾಕಿಸ್ತಾನದ ಮಹಿಳೆಯೊಬ್ಬರು ಕೇಂದ್ರ ಸರ್ಕಾರದಿಂದ ಎಲ್ಟಿವಿ ಶೈಕ್ಷಣಿಕ ವೀಸಾ (ಲಾಂಗ್ ಟರ್ಮ್ ವೀಸಾ) ಪಡೆದು ಜಿಲ್ಲೆಯಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡ್ತಿದ್ದಾರೆ. ಈ ಮಹಿಳೆ ವಿರುದ್ಧ ಕ್ರಮದ ಅವಶ್ಯಕತೆ ಇರುವುದಿಲ್ಲ ಎಂದು ದಾವಣಗೆರೆ ಎಸ್ಪಿ ಉಮಾಪ್ರಶಾಂತ್ ತಿಳಿಸಿದ್ದಾರೆ.
ಈ ಕುರಿತು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಕೇಂದ್ರ ಗೃಹ ಇಲಾಖೆಯಿಂದ ಹಾಗೂ ಸರ್ಕಾರದಿಂದ ನಮಗೆ ಸುತ್ತೋಲೆ ಬಂದಿದೆ. ಕೇಂದ್ರ ಸರ್ಕಾರ ಪಾಕ್ ಪ್ರಜೆಗಳಿಗೆ ವೀಸಾ ನೀಡಿದೆ. ನಮ್ಮಲ್ಲಿ ಓರ್ವ ಮಹಿಳೆ ಇದ್ದಾರೆ. ಅವರು ಲಾಂಗ್ ಟರ್ಮ್ ವೀಸಾ ಪಡೆದಿದ್ದಾರೆ. ಅವರ ಅವಧಿ 2025ರ ಆಗಸ್ಟ್ ತನಕ ಇದೆ, ಏನೂ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ರಾಜ್ಯದಲ್ಲಿ 92 ಪಾಕ್ ಪ್ರಜೆಗಳಿದ್ದರೂ, ತಕ್ಷಣ ವಾಪಸಾಗಬೇಕಿರುವವರು 4 ಜನ ಮಾತ್ರ: ಗೃಹ ಸಚಿವಾಲಯದ ಆದೇಶದಲ್ಲಿರುವುದೇನು?
ಇದನ್ನೂ ಓದಿ: ಅಧಿಕೃತವಾಗಿ ರಾಜ್ಯದಲ್ಲಿರುವ ಪಾಕ್ ಪ್ರಜೆಗಳೆಷ್ಟು?