ಶಿವಮೊಗ್ಗ: ಮಠಗಳಲ್ಲಿ ಕೋಟ್ಯಂತರ ರೂ. ಹಣ ಇರುತ್ತದೆಂದು ತಿಳಿದು ಮಠಕ್ಕೆ ಕನ್ನ ಹಾಕಲು ಹೋದ ಖದೀಮರು 50 ಸಾವಿರ ರೂ. ಹಣ ದರೋಡೆ ಮಾಡಿ, ಕೊನೆಗೆ ಪೊಲೀಸರ ಅತಿಥಿಯಾಗಿರುವ ಅಪರೂಪದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ತೀರ್ಥಹಳ್ಳಿ ತಾಲೂಕು ಮಹಿಷಿ ಗ್ರಾಮದ ಪುರಾತನ ಉತ್ತರಾದಿ ಮಠದಲ್ಲಿ 300 ಕೋಟಿ ರೂ. ಇದೆ ಎಂಬ ವದಂತಿ ಮೇರೆಗೆ 15ಕ್ಕೂ ಹೆಚ್ಚಿರುವ ಖದೀಮರ ತಂಡ, ಏ.5ರ ರಾತ್ರಿ ಮಠಕ್ಕೆ ನುಗ್ಗಿ ಅಲ್ಲಿದ್ದವರನ್ನು ಬೆದರಿಸಿ ಮಠದಲ್ಲಿದ್ದ 50 ಸಾವಿರ ರೂ.ಗಳನ್ನು ದರೋಡೆ ಮಾಡಿದ್ದರು. ಈ ಕುರಿತು ಮಾಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದೂರಿನನ್ವಯ ಪೊಲೀಸರು ಮಠಕ್ಕೆ ಭೇಟಿ ನೀಡಿದಾಗ 50 ಸಾವಿರ ರೂ. ದರೋಡೆ ಆಗಿರುವುದು ತಿಳಿದುಬಂದಿತ್ತು. ಮಠದಲ್ಲಿನ ಬಂಗಾರ ಸೇರಿ ಬೇರೆ ಯಾವುದೇ ವಸ್ತು ಕಳುವಾಗಿರಲಿಲ್ಲ. ಪರಿಶೀಲಿಸಿದಾಗ ಖದೀಮರ ತಂಡವೊಂದು ಬಂದು ದರೋಡೆ ನಡೆಸಿರುವುದು ತನಿಖೆಯಿಂದ ತಿಳಿದುಬಂದಿತ್ತು.
ದರೋಡೆಗೂ ಮುನ್ನ ತಂಡ ಮಠವನ್ನೊಮ್ಮೆ ಬಂದು ಪರಿಶೀಲನೆ ನಡೆಸಿಕೊಂಡು ಹೋಗಿದ್ದು ಸಹ ತನಿಖೆಯಿಂದ ಗೊತ್ತಾಗಿತ್ತು. ಪೂರ್ವಸಂಚಿನಂತೆ ಏ.5ರ ರಾತ್ರಿ ಟಿಟಿ ವಾಹನ ಮಾಡಿಕೊಂಡು ಬಂದು ದರೋಡೆಗೆ ಯತ್ನಿಸಿದ್ದರು. ಆದರೆ, 300 ಕೋಟಿ ಸಿಗದೇ ಬ್ಯಾಂಕ್ನಿಂದ ತಂದಿಟ್ಟಿದ್ದ 50 ಸಾವಿರ ರೂ. ದೋಚಿ ತಂಡ ಪರಾರಿಯಾಗಿತ್ತು. ಪ್ರಕರಣ ಬೆನ್ನತ್ತಿದ ಪೊಲೀಸರು, ಕೃತ್ಯಕ್ಕೆ ಬಳಸಿದ್ದ ಟಿಟಿ ವಾಹನ, 1 ಮಹೀಂದ್ರಾ ಬೊಲೆರೋ, 2 ವಾಹನ ಹಾಗೂ ಆಯುಧಗಳು ಸೇರಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಆರೋಪಿ ಕಾಲಿಗೆ ಗುಂಡೇಟು: ದರೋಡೆ ಪ್ರಕರಣದ ಪ್ರಮುಖ ಆರೋಪಿ, ಶಿಕಾರಿಪುರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಗತಿನಗರದ ನಿವಾಸಿ ಶ್ರೀನಿವಾಸ್ ಅಲಿಯಾಸ್ ಸೀನನನ್ನು ಮಾಳೂರು ಪಿಎಸ್ಐ ಬಂಧಿಸಲು ತೆರಳಿದಾಗ ಪೊಲೀಸ್ ಸಿಬ್ಬಂದಿ ಸಂತೋಷ್ ಅವರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆಗೆ ಮುಂದಾಗಿದ್ದ. ಈ ವೇಳೆ ಸೀನನ ಮೇಲೆ ಪಿಎಸ್ಐ ಕುಮಾರ್ ಕಾಲಿಗೆ ಗುಂಡು ಹೊಡೆದಿದ್ದು, ಸದ್ಯ ಈತ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕೃತ್ಯದಲ್ಲಿ ಸುರೇಶ್ ಹಾಗೂ ಸತೀಶ್ ಎಂಬವರು ಪ್ರಮುಖ ಆರೋಪಿಗಳಾಗಿದ್ದು, ಇವರು ಪೃಥ್ವಿರಾಜ್ ಎಂಬಾತನನ್ನು ಸಂಪರ್ಕಿಸಿ ಮಠದಲ್ಲಿ ರೂ. 300 ಕೋಟಿ ಹಣ ಇದೆ, ಇದನ್ನು ದರೋಡೆ ಮಾಡಬೇಕು, ಇದಕ್ಕೆ ಜನ ಬೇಕಾಗುತ್ತದೆ ಅಂತ ಹೇಳಿದಾಗ ಪೃಥ್ವಿರಾಜ್ ಶಿಕಾರಿಪುರದ ಶ್ರೀನಿವಾಸ್ ಸೇರಿದಂತೆ ಇತರರನ್ನು ಸೇರಿಸಿ ದರೋಡೆಗೆ ಸ್ಕೆಚ್ ಹಾಕಿದ್ದರು.

ಸುರೇಶ್ ಅಲಿಯಾಸ್ ನೇರಲೆ ಸುರೇಶ್, ಸತೀಶ್, ಪೃಥ್ವಿರಾಜ್, ಸಿರಿ ಅಲಿಯಾಸ್ ಶ್ರೀಕಾಂತ್, ಅಭಿಲಾಷ್, ರಾಕೇಶ್, ಭರತ ಅಲಿಯಾಸ್ ಚಿಟ್ಟೆ, ಪವನ ಅಲಿಯಾಸ್ ಗಿಡ್ಡ ಪವನ್, ರಮೇಶ್ ಅಲಿಯಸ್ ನವೀನ್, ನವೀನ್ ಕುಮಾರ್ ಅಲಿಯಾಸ್ ಡೈಮಂಡ್ ನವೀನ್, ದರ್ಶನ್ ಹಾಗೂ ಕರಿಬಸಪ್ಪ ಎಂಬವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ಉಳಿದ ಐದು ಜನ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.
ಹಣ ದೋಚಿ ಪರಾರಿ: ಮಹಷಿಯ ಉತ್ತರಾಧಿ ಮಠದಲ್ಲಿ ಹಣ ಇದೆ ಎಂದು ಜನರು ಮಾತನಾಡುವುದನ್ನು ನಂಬಿದ ರಿಪ್ಪನ್ ಪೇಟೆಯ ಸುರೇಶ್ ಹಾಗೂ ಸತೀಶ್ ಈ ದರೋಡೆಗೆ ಸಂಚು ರೂಪಿಸಿದ್ದರು. ಅದರಂತೆ ಆನಂದಪುರದ ಪೃಥ್ವಿರಾಜ್ ಎಂಬಾತನನ್ನು ಸಂಪರ್ಕಿಸಿದ್ದರು. ಈ ಪೃಥ್ವಿರಾಜ್ ಶಿಕಾರಿಪುರದ ಶ್ರೀನಿವಾಸ್ ಸೇರಿದಂತೆ ಇತರರನ್ನು ಸಂಪರ್ಕಿಸಿ ಅಂದುಕೊಂಡಂತೆ ದರೋಡೆಗೆ ಮುಂದಾಗಿದ್ದರು. ಏ.5ರಂದು ರಾತ್ರಿ 9:30ರ ಸುಮಾರು ಮಠಕ್ಕೆ ನುಗ್ಗಿದ ತಂಡ, ಮಠದಲ್ಲಿದ್ದವರನ್ನು ಆಯುಧದಿಂದ ಬೆದರಿಸಿದ್ದಾರೆ. ನಿಮ್ಮ ಮಠದಲ್ಲಿ 300 ಕೋಟಿ ಹಣ ಇದೆ ಅಂತ ಜನರು ಮಾತನಾಡುತ್ತಿದ್ದಾರೆ, ಆ ಹಣವನ್ನು ನಮಗೆ ಕೊಟ್ಟುಬಿಡಿ ಅಂತ ಮಠದಲ್ಲಿರುವರನ್ನು ಹೆದರಿಸಿದ್ದಾರೆ. ಭಯಕ್ಕೆ ಮಠದಲ್ಲಿರುವ ವ್ಯಕ್ತಿಯೊಬ್ಬರು ನಮ್ಮಲ್ಲಿ 50 ಸಾವಿರ ರೂ. ನಗದು ಹಣ ಇದ್ದು, ಸ್ವಾಮೀಜಿಗಳು ಬರುತ್ತಾರೆಂದು ತಿಳಿದು ಬ್ಯಾಂಕ್ನಿಂದ ಈ ಹಣ ಡ್ರಾ ಮಾಡಿಕೊಂಡು ಬಂದಿರುವೆ ಅಂತ ಹೇಳಿದಾಗ, ಖದೀಮರು ಆ ಹಣವನ್ನು ದೋಚಿ ಪರಾರಿಯಾಗಿದ್ದರು ಎಂದು ಎಸ್ಪಿ ತಿಳಿಸಿದ್ದಾರೆ.

12 ಆರೋಪಿಗಳ ಬಂಧನ: ಈ ಬಗ್ಗೆ ಮಠದ ಮುಖ್ಯಸ್ಥರು ಮಾಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 12ರಿಂದ 15 ಜನರ ತಂಡ ಏಕಾಏಕಿ ಮಠಕ್ಕೆ ನುಗ್ಗಿ ನಮಗೆ ಆಯುಧ ತೋರಿಸಿ ಹೆದರಿಸಿ, ಮಠದಲ್ಲಿದ್ದ 50 ಸಾವಿರ ರೂ. ಸೇರಿದಂತೆ ಚಿಲ್ಲರೆ ಹಣವನ್ನು ದೋಚಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದರು. ಪ್ರಕರಣದ ಪತ್ತೆಗಾಗಿ ತೀರ್ಥಹಳ್ಳಿಯ ಡಿವೈಎಸ್ಪಿ ನೇತೃತ್ವದಲ್ಲಿ ಮೂರು ಪೊಲೀಸರ ತಂಡ ರಚಿಸಲಾಗಿತ್ತು. ಎಲ್ಲ ಆಯಾಮಗಳಿಂದ ತನಿಖೆ ನಡೆಸಿದಾಗ ಪ್ರಕರಣ ಬೆಳೆಕಿಗೆ ಬಂದಿದ್ದು, ತನಿಖೆ ಒಂದು ಹಂತಕ್ಕೆ ತಲುಪಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ 12 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳ ವಿಚಾರಣೆ ಮಾಡಿದಾಗ ಈ ಕೃತ್ಯ ನಡೆಸಿರುವುದಾಗಿ ತಾವೇ ಒಪ್ಪಿಕೊಂಡಿರುವುದಾಗಿ ಪ್ರಕರಣದ ಬಗ್ಗೆ ಎಸ್ಪಿ ಮಿಥುನ್ ಕುಮಾರ್ ವಿವರಿಸಿದ್ದಾರೆ.
ಇದನ್ನೂ ಓದಿ: ಕಲಬುರಗಿ: ಅತ್ತೆ ಮನೆಯಲ್ಲಿ 11 ಲಕ್ಷ ರೂ. ಕಳ್ಳತನ ಮಾಡಿದ ಅಳಿಯನ ಬಂಧನ - SON IN LAW ARRESTED FOR STEALING