ಬೆಂಗಳೂರು: ಹಣದಾಸೆಗಾಗಿ ಅಮಾಯಕರ ಬ್ಯಾಂಕ್ ಖಾತೆಗಳ ದಾಖಲಾತಿಗಳನ್ನ ಸೈಬರ್ ವಂಚಕರಿಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದ ಜಾಲವನ್ನ ಬೇಧಿಸಿರುವ ಆಡುಗೋಡಿ ಠಾಣೆ ಪೊಲೀಸರು ಈ ಸಂಬಂಧ 12 ಮಂದಿ ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.
ಬಂಧಿತರಿಂದ ಈ ಎಲ್ಲ ವಸ್ತುಗಳು ವಶ: ವಂಚನೆಗೊಳಗಾದ ಸುಮಿಯಾ ಬಾನು ಎಂಬುವರು ನೀಡಿದ ದೂರಿನ ಮೇರೆಗೆ ಹರ್ಷವರ್ಧನ್, ಸೋನು, ರಾಜ ಮಿಶ್ರಾ ಹಾಗೂ ಶೈಲೇಶ್ ಗೌತಮ್ ಸೇರಿದಂತೆ 12 ಆರೋಪಿಗಳನ್ನ ಬಂಧಿಸಲಾಗಿದೆ.
ಆರೋಪಿಗಳಿಂದ 400 ಸಿಮ್ ಕಾರ್ಡ್ ಗಳು, 140 ಎಟಿಎಂ ಕಾರ್ಡ್ ಗಳು, 17 ಚೆಕ್ ಪುಸ್ತಕ, 27 ಮೊಬೈಲ್ ಪೋನ್, 22 ವಿವಿಧ ಬ್ಯಾಂಕ್ ಪಾಸ್ ಬುಕ್ ಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣದ ಬಗ್ಗೆ ಪೊಲೀಸರು ಹೇಳಿದ್ದಿಷ್ಟು: ದೂರುದಾರ ಮಹಿಳೆಗೆ ವರ್ಕ್ ಫ್ರಮ್ ಹೋಮ್ ಕೆಲಸ ಮಾಡಿದರೆ ಕಮೀಷನ್ ರೂಪದಲ್ಲಿ ಹಣ ಸಂಪಾದಿಸಬಹುದು ಎಂದು ಸೈಬರ್ ಚೋರರು ಸಂದೇಶ ಕಳುಹಿಸಿದ್ದರು. ಇದರಂತೆ ಮಹಿಳೆಯು ಆನ್ ಲೈನ್ ಮೂಲಕ ವರ್ಕ್ ಫ್ರಮ್ ಹೋಮ್ ಕೆಲಸ ಮಾಡಿದ್ದರು. ಹಣ ವರ್ಗಾವಣೆ ವೇಳೆ ನಿಮ್ಮ ಬ್ಯಾಲೆನ್ಸ್ ನಗೆಟಿವ್ ತೋರಿಸುತ್ತಿದೆ. ಇದನ್ನ ರದ್ದು ಮಾಡಲು ಆನ್ ಲೈನ್ ನಲ್ಲಿ ಕಳುಹಿಸಲಾಗಿರುವ ಲಿಂಕ್ ಕಳುಹಿಸಿ ನೋಂದಾಯಿಸುವಂತೆ ಸೂಚಿಸಿದ್ದರು. ಆರಂಭದಲ್ಲಿ ಮಹಿಳೆಗೆ 800 ರೂ. ಲಾಭದ ಹಣ ನೀಡಿದ್ದರು. ಬಳಿಕ ಮಹಿಳೆ ಕಳುಹಿಸಿದ 5 ಸಾವಿರಕ್ಕೆ 10 ಸಾವಿರ ರೂ. ವರ್ಗಾವಣೆ ಮಾಡಿದ್ದರು. ಹೀಗೆ ಹಂತ - ಹಂತವಾಗಿ 5 ಲಕ್ಷ ಹಣ ಪಡೆದು 10 ಲಕ್ಷ ಹಣ ರೂ. ನೀಡುವುದಾಗಿ ಆಮಿಷವೊಡಿದ್ದರು. ವಿತ್ ಡ್ರಾ ವೇಳೆ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಿದ್ದು, ಹಣ ವರ್ಗಾವಣೆಗೆ ಹೆಚ್ಚುವರಿ 3.24 ಲಕ್ಷ ರೂ. ಹಣ ಪಾವತಿಸಬೇಕೆಂದು ವಂಚಕರು ಸೂಚಿಸಿದ್ದಾರೆ. ಹಣವಿಲ್ಲ ಎಂದಾಗ ವರ್ಗಾವಣೆ ಮಾಡಿದರಷ್ಟೇ 10 ಲಕ್ಷ ಹಣ ವಾಪಸ್ ಬರುತ್ತದೆ ಎಂದು ಆರೋಪಿಗಳು ಹೇಳಿದ್ದರು. ಈ ಸಂಬಂಧ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಇನ್ಸ್ಪೆಕ್ಟರ್ ರವಿಕುಮಾರ್ ನೇತೃತ್ವದ ತಂಡವು ತನಿಖೆ ನಡೆಸಿದಾಗ ಬ್ಯಾಂಕ್ ಖಾತೆ ಮಾರಾಟ ದಂಧೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ಬ್ಯಾಂಕ್ ಖಾತೆಗೆ 20 ಸಾವಿರ ಕಮೀಷನ್: ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆ ಉತ್ತರಪ್ರದೇಶದ ಫೆಡರಲ್ ಬ್ಯಾಂಕ್ ನಲ್ಲಿ ಕಾರ್ಮಿಕನೊಬ್ಬ ಖಾತೆ ತೆರೆದಿರುವುದು ಪರಿಶೀಲನೆ ವೇಳೆ ಕಂಡು ಬಂದಿತ್ತು. ಆತನಿಗೆ ಟಿಸ್ ಜಾರಿ ಮಾಡಿ ವಿಚಾರಣೆ ನಡೆಸಿದಾಗ ಮುಂಬೈ ಮೂಲದ ಲೆಬರ್ ಕಾಂಟ್ರಾಕ್ಟರ್ ಸೋನು ಎಂಬಾತನ ಬಳಿ ಕೆಲಸ ಮಾಡುವಾಗ ಅಕೌಂಟ್ ಮಾಡಿಸಿದ್ದ. ಪಾಸ್ ಬುಕ್ ಸೇರಿದಂತೆ ಬ್ಯಾಂಕ್ ದಾಖಲಾತಿಗಳು ಆತನ ವಶದಲ್ಲಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದ. ಈ ಮಾಹಿತಿ ಆಧರಿಸಿ ವಿಶೇಷ ತಂಡವು ಮುಂಬೈಗೆ ಹೋಗಿ ಸೋನು ಎಂಬಾತನನ್ನ ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮ್ಮ ಬಳಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಬ್ಯಾಂಕ್ ಖಾತೆಗಳನ್ನ ಉತ್ತರ ಪ್ರದೇಶದ ಪ್ರಯಾಜ್ ರಾಜ್ ಮೂಲದ ರಾಜ್ ಮಿಶ್ರಾ ಸೇರಿ ಮೂವರು ಅರೋಪಿಗಳಿಗೆ ಬ್ಯಾಂಕ್ ದಾಖಲಾತಿಗಳನ್ನ ಮಾರಾಟ ಮಾಡಿ ಕಮೀಷನ್ ರೂಪದಲ್ಲಿ ಒಂದು ಬ್ಯಾಂಕ್ ಖಾತೆಗೆ 1,500 ರೂಪಾಯಿ ಪಡೆಯುತ್ತಿದ್ದೆ ಎಂದು ಸೋನು ಬಾಯ್ಟಿಟ್ಟಿದ್ದ.
ಈತನ ಮಾಹಿತಿಯಂತೆ ಪ್ರಯಾಗ್ ರಾಜ್ ಗೆ ತೆರಳಿ ದಂಧೆಯಲ್ಲಿ ಸಕ್ರಿಯವಾಗಿದ್ದ 10 ಮಂದಿಯನ್ನ ಬಂಧಿಸಲಾಯಿತು. ಅಪರಿಚಿತ ಸೈಬರ್ ವಂಚಕರಿಗೆ ರಾಷ್ಟ್ರೀಕೃತ ಬ್ಯಾಂಕ್ ಖಾತೆವೊಂದಕ್ಕೆ 18-ರಿಂದ 20 ಸಾವಿರ ಹಾಗೂ ಸ್ಥಳೀಯ ಬ್ಯಾಂಕ್ ಖಾತೆ ನೀಡಿದರೆ 3 ಸಾವಿರ ರೂಪಾಯಿ ಪಡೆಯುತ್ತಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.