ಮೈಸೂರು: ವಿದ್ಯುತ್ ಪ್ರಸರಣಾ ವ್ಯವಸ್ಥೆ ಸುಗಮಗೊಳಿಸುವ ಉದ್ದೇಶದಿಂದ ರಾಜ್ಯದಲ್ಲಿ 100 ವಿದ್ಯುತ್ ಉಪ ಸ್ಥಾವರ (ಸಬ್ ಸ್ಟೇಷನ್) ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು, ಕಾಲಮಿತಿಯಲ್ಲಿ ಇದನ್ನು ಪೂರ್ಣಗೊಳಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಸಭೆ ಮತ್ತು ಪ್ರಗತಿ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಣಮಟ್ಟದ ವಿದ್ಯುತ್ ಪೂರೈಕೆ ಸಂಬಂಧ ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದೆ ಎಂದರು.
ಮೈಸೂರು ಜಿಲ್ಲೆಯಲ್ಲೂ ರೈತರು ಹಾಗೂ ಸಾರ್ವಜನಿಕರಿಗೆ ಗುಣಮಟ್ಟದ ವಿದ್ಯುತ್ ಪೂರೈಸಲು 44 ವಿದ್ಯುತ್ ಪ್ರಸರಣ ಉಪ ಸ್ಥಾವರಗಳನ್ನು ಎರಡು ವರ್ಷದೊಳಗೆ ಪೂರ್ಣಗೊಳಿಸಲಾಗುವುದು. ಪ್ರಸ್ತುತ ವಿದ್ಯುತ್ ಸಮಸ್ಯೆ ಇಲ್ಲದಿದ್ದರೂ ಮೂಲ ಸೌಕರ್ಯ ಕೊರತೆಯಿಂದಾಗಿ ಪೂರೈಕೆ ಸಮಸ್ಯೆಯಾಗುತ್ತಿದೆ. ಈ ಸಮಸ್ಯೆ ನಿವಾರಣೆಗೆ ವಿದ್ಯುತ್ ಪ್ರಸರಣ ಉಪಸ್ಥಾವರಳ ಸಂಖ್ಯೆ ಹೆಚ್ಚಿಸಲಾಗುತ್ತಿದೆ ಎಂದು ತಿಳಿಸಿದರು.
ರೈತರ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಇದ್ದ 4 ಲಕ್ಷ ಅಕ್ರಮ ಪಂಪ್ ಸೆಟ್ ಗಳ ಪೈಕಿ 2.5 ಲಕ್ಷ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲಾಗಿದೆ. ಫೀಡರ್ ಗಳಿದ 500 ಮೀಟರ್ ಒಳಗಿನ ಪಂಪ್‌ಸೆಟ್‌ಗಳಿಗೆ ಇಲಾಖೆಯೇ ಟ್ರಾನ್ಸ್‌ಫಾರ್ಮರ್ ಒದಗಿಸಲಿದೆ.
500 ಮೀಟರ್ ನಿಂದ ಹೊರಗಿನ ಪಂಪ್ ಸೆಟ್‌ಗಳಿಗೆ ಕುಸುಮ್- ಬಿ ಯೋಜನೆಯಡಿ ಸೋಲಾರ್ ಪಂಪ್ ಸೆಟ್ ಗಳನ್ನು ಒದಗಿಸಲಾಗುತ್ತದೆ. ಅದೇ ರೀತಿ ರೈತರಿಗೆ ಹಗಲು ವೇಳೆ ಸಮರ್ಪಕ ವಿದ್ಯುತ್ ಪೂರೈಕೆಗೆ ಕುಸುಮ್- ಸಿ ಯೋಜನೆಯಡಿ ಫೀಡರ್ ಸೌರೀಕರಣ ಮಾಡಲಾಗುತ್ತಿದೆ ಎಂದು ಕೆ ಜೆ ಜಾರ್ಜ್ ಹೇಳಿದರು.
ನಮ್ಮ ಸರ್ಕಾರ ಕುಸುಮ್- ಸಿ ಯೋಜನೆಯಡಿ ಕೃಷಿ ಪಂಪ್ ಸೆಟ್ ಗಳ ಫೀಡರ್ ಸೋಲರೈಸೇಷನ್ ಮೂಲಕ 2,400 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆ ಗುರಿ ಹಾಕಿಕೊಂಡಿದೆ. ಜೂನ್ 11 ರಂದು ಗೌರಿಬಿದನೂರಿನ ತೊಂಡೆಭಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಸುಮ್- ಯೋನೆಯಡಿ ಸ್ಥಾಪಿಸಿರುವ ಸೋಲಾರ್ ವಿದ್ಯುತ್ ಘಟಕವನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ಅವರು ಹೇಳಿದರು.
10 ಎಚ್ ಪಿ ವರೆಗೆ ಉಚಿತ ವಿದ್ಯುತ್ ಮುಂದುವರಿಕೆ: ಕೃಷಿ ಪಂಪ್ ಸೆಟ್ ಗಳ ಆರ್ ಆರ್ ಸಂಖ್ಯೆಗೆ ಆಧಾರ್ ಜೋಡಣೆ ಮಾಡುತ್ತಿರುವುದರಿಂದ ಅವುಗಳಿಗೆ ಉಚಿತ ವಿದ್ಯುತ್ ಸ್ಥಗಿತಗೊಳ್ಳಲಿದೆ ಎಂಬ ಊಹಾಪೋಹಗಳು ಹಬ್ಬುತ್ತಿವೆ. ರೈತರಿಗೆ ಎಷ್ಟು ವಿದ್ಯುತ್ ಪೂರೈಸಲಾಗುತ್ತಿದೆ ಮತ್ತು ಎಷ್ಟು ಸಂಪರ್ಕಗಳಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಕಾರ್ಯ ಹಮ್ಮಿಕೊಳ್ಳಲಾಗಿದೆ. ಕೃಷಿ ಪಂಪ್ ಸೆಟ್ ಗಳಿಗೆ 10 ಎಚ್ ಪಿ ವರೆಗೆ ಉಚಿತ ವಿದ್ಯುತ್ ಮುಂದುವರಿಯುವುದರ ಜತೆಗೆ ಏಳು ಗಂಟೆ ಸಮರ್ಪಕ ವಿದ್ಯುತ್ ಕೂಡ ಪೂರೈಕೆಯಾಗಲಿದೆ. ಇದರಲ್ಲಿ ಅನುಮಾನ ಬೇಡ ಎಂದು ತಿಳಿಸಿದರು.
ಮೈಸೂರು ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆ ಶೇಕಡ 99ರಷ್ಟು ಯಶಸ್ವಿಯಾಗಿದೆ. ಗೃಹ ಜ್ಯೋತಿ ಯೋಜನೆಯಿಂದ ವಾರ್ಷಿಕ 9,000 ಕೋಟಿ ರೂ. ಎಲ್ಲಾ ಎಸ್ಕಾಂಗಳಿಗೆ ರಾಜ್ಯ ಸರ್ಕಾರದಿಂದ ಬರುತ್ತಿದೆ. ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕೆಟ್ಟು ಹೋದರೆ ನಗರ ಪ್ರದೇಶದಲ್ಲಿ 24 ಗಂಟೆಯೊಳಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ 48 ಗಂಟೆಯೊಳಗೆ ಸರಿ ಪಡಿಸಲಾಗುವುದು ಎಂದು ಹೇಳಿದರು.
ಮುಖ್ಯಮಂತ್ರಿಗಳು ಇತ್ತೀಚೆಗೆ ಹಾಡಿಗಳಿಗೆ ಭೇಟಿ ನೀಡಿದ ಬಳಿಕ ಅವುಗಳಿಗೆ ವಿದ್ಯುತ್ ಪೂರೈಸಲು ಅಗತ್ಯ ಕ್ರಮ ಕೈಗೊಂಡಿದ್ದು, ಅಗತ್ಯ ಮೂಲ ಸೌಕರ್ಯ ನಿರ್ಮಿಸಲಾಗಿದೆ. 600 ಕ್ಕೂ ಹೆಚ್ಚು ಹಾಡಿ ಮನೆಗಳಿಗೆ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಹೇಳಿದ್ದಿಷ್ಟು: ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಮಾತನಾಡಿ, "ಅರಣ್ಯದಂಚಿನ ಪ್ರದೇಶಗಳಲ್ಲಿ ಹಗಲಿನ ವೇಳೆ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ವನ್ಯಜೀವಿ ಸಂಘರ್ಷ ಇರುವೆಡೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಕೆ. ಹರೀಶ್ ಗೌಡ, ಡಿ. ರವಿಶಂಕರ್, ವಿಧಾನ ಪರಿಷತ್ ಸದಸ್ಯರಾದ ಕೆ. ವಿವೇಕಾನಂದ, ಡಾ.ಡಿ. ತಿಮ್ಮಯ್ಯ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರ್ ನಾಥ್, ಅರುಣ್ ಕುಮಾರ್ ಇತರರಿದ್ದರು.
ಇದನ್ನು ಓದಿ: ಆರ್‌ಸಿಬಿ ವಿಜಯೋತ್ಸವ ಸಂದರ್ಭ ರಾಜ್ಯ ಸರ್ಕಾರದ ವಿವೇಚನೆಯಿಂದ ನಡೆದುಕೊಳ್ಳಬೇಕಿತ್ತು: ವಿಜಯೇಂದ್ರ