ಭಾನುವಾರ ರಾಜಸ್ಥಾನ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಗೆಲುವಿನ ನಗೆ ಬೀರಿತ್ತು. ಈ ಪಂದ್ಯದಲ್ಲಿ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಅದರಲ್ಲೂ ಕೊಹ್ಲಿ 45 ಎಸೆತಗಳನ್ನೆದುರಿಸಿ 4 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 62 ರನ್ ಚಚ್ಚಿದ್ದರು. ಇದರೊಂದಿಗೆ ಟಿ20ಯಲ್ಲಿ 100 ಅರ್ಧಶತಕ ಸಿಡಿಸಿದ ಬ್ಯಾಟರ್ ಎಂಬ ದಾಖಲೆಯನ್ನೂ ನಿರ್ಮಿಸಿದರು. ಆದರೆ ಇದೇ ಪಂದ್ಯದಲ್ಲಿ ಕೊಹ್ಲಿ ವರ್ತನೆ ಕಂಡು ಅಭಿಮಾನಿಗಳು ಚಿಂತೆಗೆ ಸಿಲುಕಿದ್ದಾರೆ.
ಹೌದು, ತಂಡ ಗೆಲುವಿನ ಹೊಸ್ತಿಲಲ್ಲಿರುವಾಗ 15ನೇ ಓವರ್‌ನಲ್ಲಿ ಹಸರಂಗ ಬೌಲಿಂಗ್‌ನಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಕೊಹ್ಲಿ ಅರ್ಧಶತಕ ಪೂರೈಸಿದರು. ಮುಂದಿನ ಎಸೆತದಲ್ಲಿ ಪಡಿಕ್ಕಲ್ ಜೊತೆ ಸೇರಿ ಎರಡು ರನ್ ಗಳಿಸಿದರು. ಈ ವೇಳೆ ಕೊಹ್ಲಿ ದಿಢೀರ್ ಬಳಲಿದಂತೆ ಕಂಡರು. ಕೂಡಲೇ ಸಂಜು ಸ್ಯಾಮ್ಸನ್ (ರಾಜಸ್ಥಾನ) ಅವರ ಬಳಿ ತೆರಳಿ ಹೃದಯ ಪರೀಕ್ಷಿಸುವಂತೆ ಕೇಳಿದಾಗ ಅವರು, ಏನೂ ಆಗಿಲ್ಲ ಎಂದು ಹೇಳಿದರು. ನಂತರ ಕೊಹ್ಲಿ ಬ್ಯಾಟಿಂಗ್ ಮುಂದುವರಿಸಿದರು.
Kohli asking Sanju to check his heartbeat? What was this 😳 pic.twitter.com/2vodlZ4Tvf
— Aman (@AmanHasNoName_2) April 13, 2025
ಈ ಘಟನೆ ಅಭಿಮಾನಿಗಳನ್ನು ಚಿಂತೆಗೀಡು ಮಾಡಿದೆ. ಕೊಹ್ಲಿ ಆರೋಗ್ಯವಾಗಿರುವಂತೆ ಅವರು ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದಾರೆ. ಆದರೆ ಅಂದು ಕೊಹ್ಲಿಗೆ ಏನಾಗಿತ್ತು ಎಂದು ತಿಳಿದುಕೊಳ್ಳಲು ಅಭಿಮಾನಿಗಳು ಜಾಲತಾಣಗಳಲ್ಲಿ ಸಾಕಷ್ಟು ಹುಡುಕಾಟ ನಡೆಸಿದ್ದಾರೆ. ಆದರೆ ಕೊಹ್ಲಿ ಅವರಾಗಲೀ ಅಥವಾ ತಂಡದಿಂದಾಗಲೀ ಈ ಬಗ್ಗೆ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ.
ಪಂದ್ಯದ ಹೈಲೈಟ್ಸ್: ರಾಜಸ್ಥಾನ ರಾಯಲ್ಸ್ ನೀಡಿದ್ದ 173 ರನ್ಗಳ ಗುರಿ ಬೆನ್ನತ್ತಿದ ಆರ್‌ಸಿಬಿ, ಕೊಹ್ಲಿ ಮತ್ತು ಸಾಲ್ಟ್ ಅವರ ಬೀಸಾಟದಿಂದ 17.3 ಓವರ್ಗಳಲ್ಲೇ ಗೆಲುವಿನ ನಗಾರಿ ಬಾರಿಸಿತ್ತು. ಆರ್‌ಸಿಬಿ ತನ್ನ ಮುಂದಿನ ಪಂದ್ಯವನ್ನು ಪಂಜಾಬ್ ಕಿಂಗ್ಸ್ ಎದುರು ಆಡಲಿದೆ. ಈ ಪಂದ್ಯ ಏಪ್ರಿಲ್ 15ರಂದು ನಡೆಯಲಿದೆ. ಇದಾದ ಬಳಿಕ ಪಂಜಾಬ್ ತಂಡವನ್ನು ಎದುರಿಸಲಿದೆ.
ಇದನ್ನೂ ಓದಿ: RCB ಪಂದ್ಯಕ್ಕೂ ಮೊದಲೇ ಬಿಗ್ಶಾಕ್! ಐಪಿಎಲ್ ನಿಂದ ಹೊರಬಿದ್ದ ಸ್ಟಾರ್ ಪ್ಲೇಯರ್!