ಜೈಪುರ(ರಾಜಸ್ಥಾನ): ನಿನ್ನೆ ಜೈಪುರದಲ್ಲಿ ನಡೆದ IPL ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಜಯಭೇರಿ ಬಾರಿಸಿತು. ಈ ಪಂದ್ಯದಲ್ಲಿ ರಾಜಸ್ಥಾನ ತಂಡದ ಯುವ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ (Vaibhav Suryavanshi) ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಏಕೆಂದರೆ, ಈ ಹುಡುಗನ ವಯಸ್ಸು ಕೇವಲ 14. IPLಗೆ ಕಾಲಿಟ್ಟು ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗಟ್ಟಿ ಮೈದಾನದಲ್ಲಿ ಸಂಚಲನ ಸೃಷ್ಟಿಸಿದ.
ಚೊಚ್ಚಲ ಪಂದ್ಯದಲ್ಲಿ 20 ಎಸೆತಗಳಲ್ಲಿ 34 ರನ್ ಗಳಿಸಿ ತನ್ನ ಪ್ರತಿಭೆ ಪ್ರದರ್ಶಿಸಿದ ಯುವ ಪ್ರತಿಭೆಯನ್ನು ಜಾಗತಿಕ ಟೆಕ್ ದೈತ್ಯ ಕಂಪನಿ ಗೂಗಲ್ ಸಿಇಒ ಸುಂದರ್ ಪಿಚೈ ಸೇರಿದಂತೆ ಹಲವಾರು ಕ್ರಿಕೆಟಿಗರು, ಅಭಿಮಾನಿಗಳು ಮನತುಂಬಿ ಮೆಚ್ಚಿದ್ದಾರೆ.
ಗೂಗಲ್ ಸಿಇಒ ಸುಂದರ್ ಪಿಚೈ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿ, "IPLನಲ್ಲಿ 8ನೇ ತರಗತಿಯ ಹುಡುಗನ ಆಟ ನೋಡಲು ಎದ್ದೆ. ಎಂಥಾ ಪದಾರ್ಪಣೆ ಇದು" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
Woke up to watch an 8th grader play in the IPL!!!! What a debut! https://t.co/KMR7TfnVmL
— Sundar Pichai (@sundarpichai) April 19, 2025
ಇಂಗ್ಲೆಂಡ್ ಕ್ರಿಕೆಟಿಗ ಸ್ಯಾಮ್ ಬಿಲ್ಲಿಂಗ್ಸ್," 14 ವರ್ಷದ ಹುಡುಗನ ಆಟ ಅದ್ಭುತವಾಗಿತ್ತು. ಇಂಥ ಆಟವನ್ನು ನಾನು ನಿರೀಕ್ಷಿಸಿರಲಿಲ್ಲ. ಮೊದಲ ಎಸೆತದಲ್ಲಿ ಆತನ ಆಕ್ರಮಣಶೀಲತೆಯ ಬ್ಯಾಟಿಂಗ್ ನೋಡಿ ಅಚ್ಚರಿಗೊಂಡೆ. ಇದು ನಾನು ಚಿಕ್ಕವನಿದ್ದಾಗ ಯುವರಾಜ್ ಸಿಂಗ್ ಆಟ ನೋಡಿದಂತೆ ಭಾಸವಾಯಿತು" ಎಂದು ನೆನಪಿಸಿಕೊಂಡಿದ್ದಾರೆ.
"ವೈಭವ್ ಅವರ ಚೊಚ್ಚಲ ಪಂದ್ಯ ಚೆನ್ನಾಗಿತ್ತು. ಅವರು ತಾನೆದುರಿಸಿದ ಮೊದಲ ಎಸೆತವನ್ನು ಕವರ್‌ಗಳ ಮೇಲೆ ಸಿಕ್ಸರ್‌ಗಟ್ಟಿದರು. ವಾಹ್! 14 ವರ್ಷದ ಹುಡುಗ" ಎಂದು ಮಾಜಿ ಕ್ರಿಕೆಟಿಗ ಡೇಮಿಯನ್ ಫ್ಲೆಮಿಂಗ್ ಸಂಭ್ರಮಿಸಿದ್ದಾರೆ.
"ವೈಭವ್ ತನ್ನ ಮೊದಲ ಎಸೆತದಿಂದಲೇ ತಮ್ಮ ಉದ್ದೇಶಗಳನ್ನು ಸ್ಪಷ್ಟಪಡಿಸಿದರು. ರಾಜಸ್ಥಾನ ರಾಯಲ್ಸ್ ಈ ಪಂದ್ಯದಲ್ಲಿ ಸೋತಿರಬಹುದು. ಆದರೆ ಸೂರ್ಯವಂಶಿ ಪ್ರಭಾವಶಾಲಿ ಪ್ರದರ್ಶನ ನೀಡಿದರು. ಈ ಹುಡುಗನಿಗೆ ಉಜ್ವಲ ಭವಿಷ್ಯವಿದೆ" ಎಂದು ಓರ್ವ ನೆಟಿಜನ್ ತಿಳಿಸಿದ್ದಾರೆ.
ಐಪಿಎಲ್‌ಗೆ ಕಾಲಿಟ್ಟ ಅತ್ಯಂತ ಕಿರಿಯ ಕ್ರಿಕೆಟಿಗ: ಇದಷ್ಟೇ ಅಲ್ಲ, ಕೇವಲ 14 ವರ್ಷ ವಯಸ್ಸಿನಲ್ಲಿ ಪ್ರತಿಷ್ಟಿತ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ(IPL) ಕಾಲಿಟ್ಟ ಅತಿ ಕಿರಿಯ ಕ್ರಿಕೆಟಿಗ ಎಂಬ ದಾಖಲೆಯನ್ನೂ ವೈಭವ್ ಸೂರ್ಯವಂಶಿ ಬರೆದರು. ನಿನ್ನೆಯ ಪಂದ್ಯದಲ್ಲಿ ಅನುಭವಿ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಅವರ ಅನುಪಸ್ಥಿತಿಯಲ್ಲಿ ಯಶಸ್ವಿ ಜೈಸ್ವಾಲ್ ಜೊತೆ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಕಿಕ್ಕಿರಿದು ತುಂಬಿದ್ದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಲಕ್ನೋ ಬೌಲರ್ ಶಾರ್ದೂಲ್ ಠಾಕೂರ್ ಅವರ ನಾಲ್ಕನೇ ಎಸೆತ ಮತ್ತು ತಾನು ಎದುರಿಸಿದ ಮೊದಲ ಎಸೆತವನ್ನೇ ವೈಭವ್ ಅತ್ಯಂತ ನಿಖರವಾಗಿ ಗುರುತಿಸಿ ಸಿಕ್ಸರ್‌ಗಟ್ಟಿ ಸಂಚಲನ ಸೃಷ್ಟಿಸಿದರು. ಚೆಂಡು ಎಕ್ಸ್‌ಟ್ರಾ ಕವರ್ ಬೌಂಡರಿ ಮೇಲೆ ಹಾರುತ್ತಿದ್ದಂತೆ ಸ್ಟೇಡಿಯಂನಲ್ಲಿ ಅಭಿಮಾನಿಗಳು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಕ್ಯಾಮೆರಾಗಳು ನೇರವಾಗಿ ಆರ್‌ಆರ್ ಡಗ್‌ಔಟ್ ಅನ್ನು ತೋರಿಸುತ್ತಿದ್ದವು. ಅಲ್ಲಿ ಗಾಯಾಳುವಾಗಿ ಕುಳಿತಿದ್ದ ಸಂಜು ಸ್ಯಾಮ್ಸನ್ ಅವರ ಮೊಗದಲ್ಲೂ ವೈಭವ್ ಆಟ ಮುಗುಳುನಗು ಅರಳಿಸಿತ್ತು.
ಸೂರ್ಯವಂಶಿ 2011ರ ಮಾರ್ಚ್ 27 ರಂದು ಜನಿಸಿದ್ದರು. ಇದೇ ವರ್ಷ ಟೀಂ ಇಂಡಿಯಾ ಎಂ.ಎಸ್.ಧೋನಿ ನೇತೃತ್ವದಲ್ಲಿ ವಿಶ್ವಕಪ್ ಗೆದ್ದಿತ್ತು. 2024-25ರ ಅವಧಿಯಲ್ಲಿ ಸೂರ್ಯವಂಶಿ ಬಿಹಾರ ಪರ ಐದು ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದರು.
𝐌𝐀𝐊𝐈𝐍𝐆. 𝐀. 𝐒𝐓𝐀𝐓𝐄𝐌𝐄𝐍𝐓 🫡
— IndianPremierLeague (@IPL) April 19, 2025
Welcome to #TATAIPL, Vaibhav Suryavanshi 🤝
Updates ▶️ https://t.co/02MS6ICvQl#RRvLSG | @rajasthanroyals pic.twitter.com/MizhfSax4q
1.1 ಕೋಟಿ ರೂ.ಗೆ ಹರಾಜು: 2025ರ IPL ಹರಾಜಿನಲ್ಲಿ 13 ವರ್ಷವಾಗಿದ್ದ ಸೂರ್ಯವಂಶಿ ಅವರನ್ನು ರಾಜಸ್ಥಾನ್ ರಾಯಲ್ಸ್ 1.1 ಕೋಟಿ ರೂ.ಗೆ ಖರೀದಿಸಿತ್ತು. ಈ ಸಂದರ್ಭದಲ್ಲೇ ಐಪಿಎಲ್‌ನಲ್ಲಿ ಹರಾಜಾದ ಅತಿ ಕಿರಿಯ ಆಟಗಾರನೆಂಬ ದಾಖಲೆಯನ್ನು ಇವರು ಮಾಡಿದ್ದರು.
ಭಾರತ 19 ವರ್ಷದೊಳಗಿನ ಕ್ರಿಕೆಟ್ ತಂಡವನ್ನು ವೈಭವ್ ಪ್ರತಿನಿಧಿಸಿದ್ದರು. ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ನಾಲ್ಕು ದಿನಗಳ ಪಂದ್ಯದಲ್ಲಿ 58 ಎಸೆತದಲ್ಲೇ ಶತಕ ಬಾರಿಸಿ ಗಮನ ಸೆಳೆದಿದ್ದರು.
ಸೂರ್ಯವಂಶಿಗೂ ಮುನ್ನ ಪ್ರಯಾಸ್ ರೇ ಬರ್ಮನ್ ಅವರು ಐಪಿಎಲ್ ಸೇರಿದ್ದ ಅತ್ಯಂತ ಕಿರಿಯ ಆಟಗಾರನಾಗಿದ್ದರು. ಇವರಿಗೆ ಆ ಸಂದರ್ಭದಲ್ಲಿ 16 ವರ್ಷ 157 ದಿನಗಳಾಗಿತ್ತು. ಬರ್ಮನ್ 2019ರಲ್ಲಿ ಆರ್‌ಸಿಬಿ ಪರ ಪಂದ್ಯವಾಡಿದ್ದರು.
ಇದನ್ನೂ ಓದಿ: ಪಂತ್ ಸ್ಟಂಪಿಂಗ್ ಮಾಡಿದಕ್ಕೆ ಕಣ್ಣೀರು ಹಾಕಿದ 14 ವರ್ಷದ ವೈಭವ್ ಸೂರ್ಯವಂಶಿ! - VAIBHAV SURYAVANSHI
ಇದನ್ನೂ ಓದಿ: ಐಪಿಎಲ್ ಹರಾಜು: 13ರ ಬಾಲಕ ವೈಭವ್ ಸೂರ್ಯವಂಶಿಗೆ ₹1.10 ಕೋಟಿ ಕೊಟ್ಟು ಖರೀದಿಸಿದ ರಾಜಸ್ಥಾನ್ ರಾಯಲ್ಸ್! - IPL MEGA AUCTION
ಇದನ್ನೂ ಓದಿ: 13 ವರ್ಷದ ವೈಭವ್ ಸೂರ್ಯವಂಶಿ IPLನಲ್ಲಿ ಆಡಲು ಅರ್ಹರೇ? ನಿಯಮ ಹೇಳುವುದೇನು? - VAIBHAV SURYAVANSHI AGE ISSUE