India Test Team Captain: ಮುಂದಿನ ತಿಂಗಳು ಪ್ರಾರಂಭವಾಗಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಗಾಗಿ ಬಿಸಿಸಿಐ ಇಂದು ಭಾರತ ತಂಡವನ್ನು ಪ್ರಕಟಿಸಿದೆ. ಅಜಿತ್ ಅಗರ್ಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗೆ ಭಾರತೀಯ ತಂಡವನ್ನು ಪ್ರಕಟಿಸಲಾಗಿದೆ. ಜೊತೆಗೆ ಟೆಸ್ಟ್ ತಂಡಕ್ಕೆ ಹೊಸ ನಾಯಕ ಮತ್ತು ಉಪನಾಯಕನ ಘೋಷಣೆ ಆಗಿದೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತರಾದ ಬೆನ್ನಲ್ಲೇ ಅವರ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡುಬೇಕು ಎಂಬ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿದೆ. ಈ ಇಬ್ಬರ ಸ್ಥಾನಗಳನ್ನು ಬಿಸಿಸಿಐ ಭರ್ತಿ ಮಾಡಿದೆ. ಮುಂದಿನ ತಿಂಗಳು ಜೂ. 20 ರಿಂದ ಆಗಸ್ಟ್ 4 ರವರೆಗೆ ಭಾರತ ಮತ್ತು ಇಂಗ್ಲೆಂಡ್ (IND vs ENG Test ) ಸರಣಿ ನಡೆಯಲಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿವೃತ್ತಿಯ ನಂತರ ಭಾರತ ಆಡುತ್ತಿರುವ ಮೊದಲ ದ್ವಿಪಕ್ಷೀಯ ಸರಣಿ ಇದಾಗಿದೆ. ಈ ಸರಣಿಯೊಂದಿಗೆ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) 2025-2027ರ ಚಕ್ರವೂ ಪ್ರಾರಂಭವಾಗಲಿದೆ.
ಏತನ್ಮಧ್ಯೆ, ಇಂಗ್ಲೆಂಡ್ ಪ್ರವಾಸಕ್ಕಾಗಿ ಅಜಿತ್ ಅಗರ್ಕರ್ ಆಯ್ಕೆ ಸಮಿತಿ 18 ಸದಸ್ಯರ ಭಾರತೀಯ ತಂಡವನ್ನು ಪ್ರಕಟಿಸಿದರು. ಶುಭಮನ್ ಗಿಲ್ ಅವರನ್ನು ನಾಯಕರನ್ನಾಗಿ ಮಾಡಲಾಗಿದ್ದು ಉಪನಾಯಕನಾಗಿ ರಿಷಭ್ ಪಂತ್ ಅವರನ್ನು ಹೆಸರಿಸಲಾಗಿದೆ.
ಕೊಹ್ಲಿ ಸ್ಥಾನಕ್ಕೆ ಈ ಇಬ್ಬರಲ್ಲಿ ಒಬ್ಬರು: ಈ ಸರಣಿಯೊಂದಿಗೆ ಸಾಯಿ ಸುದರ್ಶನ್ ಮತ್ತು ಅರ್ಶ್ದೀಪ್ ಸಿಂಗ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಜೊತೆಗೆ ಕರುಣ್ ನಾಯರ್ 8 ವರ್ಷಗಳ ನಂತರ ದೀರ್ಘ ಸ್ವರೂಪದಲ್ಲಿ ಪದಾರ್ಪಣೆ ಮಾಡುತ್ತಿದ್ದಾರೆ. ಅವರು ಕೊನೆಯ ಬಾರಿಗೆ ಮಾರ್ಚ್ 2017 ರಲ್ಲಿ ಟೆಸ್ಟ್ ಪಂದ್ಯವನ್ನು ಆಡಿದ್ದರು. ಇದೀಗ ಕೊಹ್ಲಿ ಟೆಸ್ಟ್ ಸ್ವರೂಪದಿಂದ ನಿವೃತ್ತರಾಗಿರುವುದರಿಂದ, 3ನೇ ಸ್ಥಾನದಲ್ಲಿ ಯಾರು ಬರುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.
ಆ ಸ್ಥಾನದಲ್ಲಿ ಸಾಯಿ ಸುದರ್ಶನ್ ಅಥವಾ ಕರುಣ್ ನಾಯರ್ ಅವರನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಗಾಯಗೊಂಡ ಶಮಿ ಜೊತೆಗೆ ಶ್ರೇಯಸ್ ಅಯ್ಯರ್ ಮತ್ತು ಸರ್ಫರಾಜ್ ಖಾನ್ ಅವರನ್ನು ತಂಡದಲ್ಲಿ ಸೇರಿಸಲಾಗಿಲ್ಲ.
ಹೀಗಿದೆ ಭಾರತ ತಂಡ: ಶುಭಮನ್ ಗಿಲ್ (ನಾಯಕ), ರಿಷಬ್ ಪಂತ್ ( ಉಪನಾಯಕ ಮತ್ತು ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೆಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಕುಲ್ದೀಪ್ ಯಾದವ್.
ಇದನ್ನೂ ಓದಿ: ವಿಶ್ವದಾಖಲೆ ಬರೆದ ವಿರಾಟ್ ಕೊಹ್ಲಿ; ಈವರೆಗೂ ಐಪಿಎಲ್ನಲ್ಲಿ ಬಾರಿಸಿದ ಬೌಂಡರಿಗಳು ಎಷ್ಟು ಗೊತ್ತಾ?