Virat-Dravid Emotional Video: ನಮ್ಮ ದೇಶದಲ್ಲಿ ಅನಾದಿ ಕಾಲದಿಂದಲೂ ಗುರುವಿಗೆ ದೇವರ ಸ್ಥಾನಮಾನ ನೀಡಲಾಗಿದೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೂಡ ತಮ್ಮ ಗುರುವನ್ನು ಕಂಡ ತಕ್ಷಣ, ಅವರ ಮುಂದೆ ಮಂಡಿಯೂರಿ ನಮಸ್ಕರಿಸಿದ್ದಾರೆ. ಐಪಿಎಲ್-2025ರಲ್ಲಿಂದು ಆರ್‌ಸಿಬಿ ಹಾಗೂ ರಾಜಸ್ಥಾನ ರಾಯಲ್ಸ್ ನಡುವೆ ಹಣಾಹಣಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ, ಆರ್‌ಸಿಬಿ ಸ್ಟಾರ್ ವಿರಾಟ್ ಕೊಹ್ಲಿ ಮತ್ತು ರಾಜಸ್ಥಾನ್ ರಾಯಲ್ಸ್ ಮುಖ್ಯ ಕೋಚ್ ಹಾಗೂ ಟೀಂ ಇಂಡಿಯಾ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಭೇಟಿಯ ಭಾವನಾತ್ಮಕ ವಿಡಿಯೋವೊಂದು ವೈರಲ್ ಆಗಿದೆ.
ಈ ವಿಡಿಯೋ ನಿಮ್ಮನ್ನು ಖುಷಿಯ ಜೊತೆಗೆ ಭಾವುಕರನ್ನಾಗಿಸುತ್ತದೆ. 2025ರ ಐಪಿಎಲ್ ಆರಂಭವಾಗುವ ಮೊದಲೇ ರಾಜಸ್ಥಾನ ತಂಡದ ಕೋಚ್ ರಾಹುಲ್ ದ್ರಾವಿಡ್ ಕಾಲಿನ ಮೂಳೆ ಮುರಿತಕ್ಕೆ ಒಳಗಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆ ನಂತರ ಈ ಸೀಸನ್ನಲ್ಲಿ ಅವರು ವೀಲ್‌ಚೇರ್‌ನಲ್ಲಿಯೇ ಓಡಾಡುತ್ತಿದ್ದಾರೆ. ಏಪ್ರಿಲ್ 12ರಂದು ದ್ರಾವಿಡ್ ವೀಲ್‌ಚೇರ್‌ನಲ್ಲಿ ಕುಳಿತು ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದರು. ಇದನ್ನು ಕಂಡ ವಿರಾಟ್ ಕೊಹ್ಲಿ, ಅವರ ಬಳಿ ಹೋಗಿ ಮಂಡಿಯೂರಿ ಕುಳಿತುಕೊಂಡು ಗೌರವಿಸಿದರು.
ರಾಹುಲ್ ದ್ರಾವಿಡ್ ಕಣ್ಣಲ್ಲಿ ನೀರು: ರಾಹುಲ್ ದ್ರಾವಿಡ್ ವೀಲ್‌ಚೇರ್‌ನಲ್ಲಿ ಇರುವುದನ್ನು ನೋಡಿದ ವಿರಾಟ್ ಕೊಹ್ಲಿ ಮೊದಲು ಅವರಿಗೆ ಕೈಕುಲುಕಿದರು. ಬಳಿಕ ಕೆಳಗೆ ಕುಳಿತು ಅಪ್ಪಿಕೊಂಡರು. ತದನಂತರ ದ್ರಾವಿಡ್, ಕೊಹ್ಲಿ ಮತ್ತು ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಸೇರಿದಂತೆ ಅನೇಕ ಆಟಗಾರರು ಮೈದಾನದಲ್ಲಿ ಸ್ವಲ್ಪ ಮೋಜು ಮಾಡುತ್ತಿರುವುದು ಕಂಡುಬಂತು. ಬಹುಶಃ ಈ ಸಮಯದಲ್ಲಿ ಕೊಹ್ಲಿ ಅವರೊಂದಿಗೆ ದ್ರಾವಿಡ್ ಕೆಲವು ಹಳೆಯ ನೆನಪುಗಳು ಮೆಲುಕು ಹಾಕಿರುವಂತಿದೆ. ಆಗ ದ್ರಾವಿಡ್ ಅವರ ಕಣ್ಣಲ್ಲಿ ಆನಂದಬಾಷ್ಪ ಕಂಡುಬಂತು.
ಕೊಹ್ಲಿ-ದ್ರಾವಿಡ್ ವಿಡಿಯೋ ವೈರಲ್: ಇದಾದ ನಂತರ, ವಿರಾಟ್ ಕೊಹ್ಲಿ ಮತ್ತು ಸಂಜು ಸ್ಯಾಮ್ಸನ್ ಅವರು ರಾಹುಲ್ ದ್ರಾವಿಡ್ ಮುಂದೆ ತಮಾಷೆ ಮಾಡಲು ಪ್ರಾರಂಭಿಸಿದರು. ಭಾರತ ತಂಡದ ಮಾಜಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಕೂಡ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಹಿಂದೆ ಭಾರತ ತಂಡಕ್ಕಾಗಿ ಮೂವರೂ ಒಟ್ಟಿಗೆ ಕಾರ್ಯ ನಿರ್ವಹಿಸಿ, ಹಲವು ಯಶಸ್ಸಿಗೆ ಕಾರಣರಾಗಿದ್ದಾರೆ. ಇದೀಗ ಐಪಿಎಲ್ ಟೂರ್ನಿಯಲ್ಲಿ ಮೂವರೂ ಬೇರೆ ಬೇರೆ ತಂಡಗಳಿಗೆ ಆಡುತ್ತಿದ್ದಾರೆ. ಆದರೆ ಅವರ ನಡುವಿನ ಪ್ರೀತಿ, ಸಹೋದರತ್ವ ಈಗಲೂ ಹಾಗೆಯೇ ಇದೆ. ಕೊಹ್ಲಿ, ದ್ರಾವಿಡ್ ಮತ್ತು ರಾಥೋಡ್ ಅವರ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.
ಆರ್‌ಸಿಬಿ vs ರಾಜಸ್ಥಾನ್ ರಾಯಲ್ಸ್: ಏಪ್ರಿಲ್ 13ರ ಭಾನುವಾರ ಅಂದ್ರೆ ಇಂದು ಎರಡು ಪಂದ್ಯಗಳಿವೆ. ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಮಧ್ಯಾಹ್ನ 3.30ಕ್ಕೆ ಆರ್‌ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಬಳಿಕ ಸಂಜೆ 7.30ಕ್ಕೆ ದೆಹಲಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಕಣಕ್ಕಿಳಿಯಲಿವೆ.
ಪಾಯಿಂಟ್ಸ್ ಪಟ್ಟಿಯಲ್ಲಿ ಆರ್‌ಸಿಬಿ, ಆರ್ಆರ್ ಸ್ಥಾನವೇನು?: ರಾಜಸ್ಥಾನ್ ರಾಯಲ್ಸ್ ಮತ್ತು ಆರ್‌ಸಿಬಿ ನಡುವಿನ ಈ ಪಂದ್ಯದಲ್ಲಿ ಕಠಿಣ ಪೈಪೋಟಿ ನಿರೀಕ್ಷಿಸಲಾಗಿದೆ. ಈಗಾಗಲೇ ಆರ್‌ಸಿಬಿ 6 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದರೆ, ರಾಜಸ್ಥಾನ ತಂಡ 4 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ. ಈ ಪಂದ್ಯದ ಗೆಲುವಿಗಾಗಿ ಎರಡೂ ತಂಡಗಳು ಕಾದಾಡಲಿವೆ.
ಓದಿ: ರಾಜಸ್ಥಾನ್ ರಾಯಲ್ಸ್ ವಿರುದ್ಧ ವಿಶೇಷ ಜರ್ಸಿ ಧರಿಸಿ ಕಣಕ್ಕಿಳಿಯುತ್ತಿರುವ ಆರ್‌ಸಿಬಿ!