ಬೆಂಗಳೂರು: ಸದಾ ತನ್ನ ಹೊಸತನದ ಮೂಲಕ ಅಭಿಮಾನಿಗಳಿಗೆ ಹೆಚ್ಚು ಆತ್ಮೀಯವಾಗಿರಲು ಬಯಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಈ ಬಾರಿ ವಿನೂತನ ಶೈಲಿಯ ಸಾಂಸ್ಕೃತಿಕ ಅಭಿಯಾನಕ್ಕೆ ಮುನ್ನುಡಿ ಬರೆದಿದೆ.
ಕನ್ನಡಿಗರ ಹೆಮ್ಮೆಯ ಸಂಕೇತವಾಗಿರುವ ಆರ್‌ಸಿಬಿ ತಂಡ, ಕನ್ನಡ ಗೊತ್ತಿರದ ತನ್ನ ಅಭಿಮಾನಿಗಳಿಗೆ ಸಾಧ್ಯವಾದಷ್ಟು ಆನಂದದಾಯಕ ರೀತಿಯಲ್ಲಿ ಕನ್ನಡವನ್ನ ಕಲಿಸುವ ಗುರಿಯನ್ನು ಹೊಂದಿದೆ. ಈ ಅಭಿಯಾನದ ಮೂಲಕ ಬಹುಭಾಷಾ ಅಭಿಮಾನಿಗಳೊಂದಿಗೆ ಕನ್ನಡ ಭಾಷೆ, ಕ್ರಿಕೆಟ್ ಮತ್ತು ಸಿಹಿತಿಂಡಿಗಳ ಮೇಲಿನ ಪ್ರೀತಿಯನ್ನು ಸಂಯೋಜಿಸಿ ತಂಡ ಮತ್ತು ಬೆಂಗಳೂರಿನೊಂದಿಗಿನ ಸಂಪರ್ಕ ಬೆಸೆಯಲು ಆರ್‌ಸಿಬಿ ಮುಂದಾಗಿದೆ.

ಅನೇಕ ವರ್ಷಗಳಿಂದಲೂ ದಕ್ಷಿಣ ಭಾರತೀಯ ಭಾಷೆಗಳನ್ನು ಸಂಕೀರ್ಣ ಮತ್ತು ಕಲಿಯಲು ಹೆಚ್ಚು ಕಷ್ಟಕರವೆಂದು ಗ್ರಹಿಸಲಾಗಿದೆ. ಈ ದೀರ್ಘಕಾಲದ ಅಭಿಪ್ರಾಯಗಳನ್ನ ಬದಲಿಸುವ ಉದ್ದೇಶದಿಂದ ಕನ್ನಡ ಕಲಿಕೆಯ ಸಂಕೇತವಾಗಿ ಜಿಲೇಬಿಯನ್ನು ಬಳಸುವ ಮೂಲಕ ಆರ್‌ಸಿಬಿ ಫ್ರಾಂಚೈಸಿ ಹೊಸತನಕ್ಕೆ ಮುನ್ನುಡಿಯಾಗುತ್ತಿದೆ. ಅಂದರೆ ಕನ್ನಡದ ಕೆಲ ಪದಗಳ ಆಕಾರದಲ್ಲಿರುವ ವಿಶೇಷವಾಗಿ ವಿನ್ಯಾಸಗೊಳಿಸಲಾದ ಜಿಲೇಬಿಗಳನ್ನ ಸವಿಯಲು ಆರ್‌ಸಿಬಿ ತನ್ನ ಅಭಿಮಾನಿಗಳಗಳನ್ನ ಆಹ್ವಾನಿಸುತ್ತಿದೆ.

ಕನ್ನಡ ಜಿಲೇಬಿಗಳು ಇಲ್ಲಿ ಲಭ್ಯ: ಆ ಮೂಲಕ ಕನ್ನಡಕ್ಕೆ ಗೌರವ ಸೂಚಕವಾಗಿ ಮಾತ್ರವಲ್ಲದೇ ಸ್ಥಳೀಯ ಮತ್ತು ಸ್ಥಳೀಯರಲ್ಲದ ಅಭಿಮಾನಿಗಳ ನಡುವಿನ ಅಂತರವನ್ನ ಕಡಿಮೆ ಮಾಡುವ ಗುರಿಯನ್ನು ಆರ್‌ಸಿಬಿ ಹೊಂದಿದೆ. ಬೆಂಗಳೂರಿನಲ್ಲಿರುವ ಆರ್‌ಸಿಬಿ ಬಾರ್ & ಕೆಫೆಯಲ್ಲಿ ಈ ಅಭಿಯಾನದ ಕನ್ನಡ ಜಿಲೇಬಿಗಳು ಏಪ್ರಿಲ್ 8ರಿಂದ 11 ರವರೆಗೆ ಲಭ್ಯವಿರಲಿವೆ. ಅಭಿಮಾನಿಗಳು ಜಿಲೇಬಿ ಪ್ಯಾಕ್‌ನ್ನ ಸ್ಕ್ಯಾನ್ ಮಾಡುವ ಮೂಲಕ ಆರ್‌ಸಿಬಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಕನ್ನಡ ಪಾಠಗಳ ಸರಣಿಯನ್ನ ವೀಕ್ಷಿಸಬಹುದು.

ಇಮೇಲ್ ಮಾಡಿ: ಆರ್‌ಸಿಬಿಯ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ಟಿಮ್ ಡೇವಿಡ್, ಯಶ್ ದಯಾಳ್ ಮುಂತಾದವರ ಬಾಯಿಂದಲೇ ಕನ್ನಡ ಪದಗಳನ್ನ ಕೇಳಿ ಕಲಿಯಬಹುದು. ಇದಲ್ಲದೆ 1 ಸಾವಿರ ಅಭಿಮಾನಿಗಳಿಗೆ ಉಚಿತ ಕನ್ನಡ ಕಲಿಕಾ ಅವಧಿಗಳನ್ನು ಸಹ ಆರ್‌ಸಿಬಿ ಫ್ರಾಂಚೈಸಿ ಪ್ರಾಯೋಜಿಸುತ್ತಿದೆ. ಆರ್‌ಸಿಬಿ ಪ್ರಾಯೋಜಕತ್ವದ ಈ ಕನ್ನಡ ಪಾಠಗಳನ್ನ ಪಡೆಯಲು ಅಭಿಮಾನಿಗಳು "ಜಿಲೇಬಿ ಕೊಡಿ" ಎಂದು ಟೈಪ್ ಮಾಡಿ jilebikodi@gmail.comಗೆ ಇಮೇಲ್ ಮಾಡಬೇಕು ಎಂದು ಫ್ರಾಂಚೈಸಿ ತಿಳಿಸಿದೆ.

ಪಡಿಕ್ಕಲ್ ಮೆಚ್ಚುಗೆ: "ಬೆಂಗಳೂರಿನಲ್ಲಿ ಬೆಳೆದವನಾಗಿ, ಕನ್ನಡವನ್ನ ಈ ರೀತಿ ಆಚರಿಸುವುದನ್ನ ನೋಡವುದು ನಿಜಕ್ಕೂ ವಿಶೇಷ ಅನುಭವವಾಗಿದೆ" ಎಂದು ಆರ್‌ಸಿಬಿ ತಂಡದ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ತಿಳಿಸಿದರು. "ಇದು ಕನ್ನಡದ ಬಗ್ಗೆ ಮಾತ್ರವಲ್ಲ, ನಗರದಲ್ಲಿರುವ ಎಲ್ಲರೂ ತಮ್ಮದೇ ಮನೆಯಲ್ಲಿರುವಂತೆ ಮಾಡಲಿದೆ. ನಮ್ಮ ಅಭಿಮಾನಿಗಳು, ನಮ್ಮ ಬೆಂಗಳೂರು ಮತ್ತು ನಮ್ಮ ತಂಡದೊಂದಿಗೆ ಹೆಚ್ಚು ಆಳವಾದ ಸಂಪರ್ಕ ಸಾಧಿಸಲು ನಾನು ಈ ಸಣ್ಣ ಪಾತ್ರವನ್ನ ನಿರ್ವಹಿಸುತ್ತಿರುವುದಕ್ಕೆ ಸಂತೋಷಪಡುತ್ತೇನೆ'' ಎಂದು ಪಡಿಕ್ಕಲ್ ತಿಳಿಸಿದರು.

ಅಭಿಯಾನದ ಭಾಗವಾದ ಶಿವಣ್ಣ: ಆರ್‌ಸಿಬಿಯ ಈ ಅಭಿಯಾನವನ್ನು ಶ್ಲಾಘಿಸಿರುವ ನಟ ಡಾ.ಶಿವರಾಜ್‌ಕುಮಾರ್, "ಆರ್‌ಸಿಬಿಯ ಈ ಹೊಸ ಪ್ರಯತ್ನ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಇದು ಕನ್ನಡವನ್ನು ಕಲಿಯಲು ಮಾತ್ರವಲ್ಲದೆ, ಎಲ್ಲರನ್ನೂ ಬೆಚ್ಚಗೆ ಸ್ವಾಗತಿಸುವ ನಮ್ಮ ನಗರದ ಅನುಭವ ಪಡೆಯಲು ಈ ಅಭಿಯಾನವು ಒಂದು ಸುಂದರ ಮಾರ್ಗವಾಗಿದೆ ಮತ್ತು ಈ ಅಭಿಯಾನದ ಭಾಗವಾಗಲು ನಾನು ಉತ್ಸುಕನಾಗಿದ್ದೇನೆ." ಎಂದರು.

"ಎಲ್ಲಿಂದ ಬಂದರೂ ಅಥವಾ ಯಾವುದೇ ಭಾಷೆಯನ್ನು ಮಾತನಾಡಿದರೂ ಸರಿ ಅಭಿಮಾನಿಗಳ ಅಚಲವಾದ ಬೆಂಬಲವೇ ಆರ್‌ಸಿಬಿಯನ್ನು ಅತ್ಯಂತ ವಿಶೇಷವಾಗಿರಿಸಿದೆ. ದೇಶದ ವಿವಿಧ ಭಾಗಗಳ ಜನರನ್ನ ತನ್ನ ಮುಕ್ತ ತೋಳುಗಳಿಂದ ಅಪ್ಪಿಕೊಂಡಿರುವ ಬೆಂಗಳೂರಿಗೆ ಇದು ನಮ್ಮ ಗೌರವವಾಗಿದೆ. ಕನ್ನಡ ಲಿಪಿಯ ಜಿಲೇಬಿಗಳನ್ನು ರಚಿಸುವ ಮೂಲಕ, ನಮ್ಮ ತವರು ನಗರದ ಶ್ರೀಮಂತ ಸಂಸ್ಕೃತಿಯನ್ನು ಸವಿಯಲು ನಾವು ಎಲ್ಲರನ್ನು ಆಹ್ವಾನಿಸುತ್ತಿದ್ದೇವೆ" ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಸಿಒಒ ರಾಜೇಶ್ ಮೆನನ್ ತಿಳಿಸಿದರು.
ನಮ್ಮ ಪ್ರೀತಿಯ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ, ಡಾ. ಶಿವರಾಜ್ ಕುಮಾರ್ ಅವರ ಮಾತು ಕೇಳಿ! 🙌
— Royal Challengers Bengaluru (@RCBTweets) April 10, 2025
Renowned Actor, Sandalwood King, Dr. Shivarajkumar shares his love towards RCB and wishes us all the best for Season 18. ❤️@NimmaShivanna | #PlayBold #ನಮ್ಮRCB pic.twitter.com/nb7tw69j1I
ಇದನ್ನೂ ಓದಿ: ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು RCB ಮಾಸ್ಟರ್ ಪ್ಲಾನ್!