TNPL R Ashwin Argue: ತಮಿಳುನಾಡು ಪ್ರೀಮಿಯರ್ ಲೀಗ್ (TNPL) ನಲ್ಲಿ ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಮಹಿಳಾ ಅಂಪೈರ್ ಜೊತೆ ತೋರಿದ ವರ್ತನೆಗೆ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಅಂಪೈರ್ ವೆಂಕಟೇಶನ್ ಕೃತಿಕಾ ಅವರ ನಿರ್ಧಾರದಿಂದ ಅಸಮಾಧಾನಗೊಂಡ ಅಶ್ವಿನ್ ಮೈದಾನದಲ್ಲಿ ಅಂಪೈರ್ ವಿರುದ್ಧ ಸಿಟ್ಟು ಹೊರಹಾಕಿದ್ದರು.
ಭಾನುವಾರ ದಿಂಡಿಗಲ್ ಡ್ರಾಗನ್ಸ್ ಮತ್ತು ತಿರುಪ್ಪೂರು ತಮಿಳಿಯನ್ಸ್ ನಡುವಿನ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಡ್ರಾಗನ್ಸ್ ತಂಡದ ಪರ ನಾಯಕ ಅಶ್ವಿನ್ (18) ಮತ್ತು ಶಿವಂ ಸಿಂಗ್ (30) ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ, ಸಾಯಿಕಿಶೋರ್ (2/10) ಎಸೆದ ಇನ್ನಿಂಗ್ಸ್‌ನ ಐದನೇ ಓವರ್‌ನಲ್ಲಿ, ಅಶ್ವಿನ್ ಐದನೇ ಎಸೆತದಲ್ಲಿ ಪ್ಯಾಡಲ್ ಸ್ವೀಪ್ ಮಾಡಲು ಮುಂದಾದರೂ ಈ ವೇಳೆ ಚೆಂಡು ಪ್ಯಾಡ್‌ಗಳಿಗೆ ತಗುಲಿತು. ಅಶ್ವಿನ್ ಸಿಂಗಲ್ ಪಡೆಯಲು ಕ್ರೀಸ್ ತೊರೆಯುತ್ತಿದ್ದಂತೆ ಕೂಡಲೇ ಬೌಲರ್ LBW ಗಾಗಿ ಮನವಿ ಸಲ್ಲಿಸಿದರು ಮತ್ತು ಅಂಪೈರ್ ಕೃತಿಕಾ ಔಟ್ ಎಂದು ತೀರ್ಪು ನೀಡಿದರು.
Ravichandran Ashwin got angry on Umpire, throws his gloves towards the spectators in Domestic League called TNPL 🧐
— Richard Kettleborough (@RichKettle07) June 9, 2025
~ What's your take on this 🤔 pic.twitter.com/5Dbk9AiSle
ಬಳಿಕ ಬೌಲ್ ಟ್ರ್ಯಾಕಿಂಗ್ ವೇಳೆ ಚೆಂಡು ಲೆಗ್ ಸ್ಟಂಪ್‌ನ ಆಚೆಗೆ ಬಿದ್ದಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಆದಾಗ್ಯೂ, ಮೊದಲ ಓವರ್‌ನಲ್ಲಿ ಅಶ್ವಿನ್ ಮತ್ತು ಶಿವಂ ಸಿಂಗ್ ಲೆಗ್-ಸೈಡ್ ವೈಡ್‌ಗಳಿಗಾಗಿ ಎರಡು ಡಿಆರ್ಎಸ್ಗಳನ್ನು ಬಳಿಸಿಕೊಂಡಿದ್ದರು. ಇದರಿಂದಾಗಿ ಅಂಪೈರ್ ತೀರ್ಪು ಅಂತಿಮಗೊಳಿಸಿ ಔಟ್ ನೀಡಲಾಯಿತು. ಇದರಿಂದಾಗಿ ಅಶ್ವಿನ್ ಡಗೌಟ್‌ಗೆ ಮರಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲದಂತಾಯಿತು. ಅಂಪೈರ್ ಅವರ ಈ ನಿರ್ಧಾರಕ್ಕೆ ಅಶ್ವಿನ್ ಕೋಪಗೊಂಡಿದ್ದರು. ಅಂಪೈರ್ ಜೊತೆ ವಾದ ಮಾಡಿಯೂ ಫಲ ಸಿಗಲಿಲ್ಲ.
ಅಶ್ವಿನ್ ಮೈದಾನ ಬಿಟ್ಟು ಹೊರಡುತ್ತಿದ್ದಂತೆ ತಾಳ್ಮೆ ಕಳೆದುಕೊಂಡರು. ಅವರು ಬ್ಯಾಟ್ ಅನ್ನು ತಮ್ಮ ಪ್ಯಾಡ್‌ಗಳಿಗೆ ಬಲವಾಗಿ ಹೊಡೆದರು. ಬಳಿಕ ಬೌಂಡರಿ ಗೆರೆಯನ್ನು ಸಮೀಪಿಸುತ್ತಿದ್ದಂತೆ, ಕೈಗವಸನ್ನು ಗ್ಯಾಲರಿಯೊಳಗೆ ಎಸೆದರು. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಅಶ್ವಿನ್ ವರ್ತನೆಗೆ ನೆಟ್ಟಿಗರು ಟೀಕಿಸಿದ್ದಾರೆ. ಅಶ್ವಿನ್ ಅವರ ವರ್ತನೆಯ ವಿರುದ್ಧ ಟಿಎನ್‌ಪಿಎಲ್ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಪಂದ್ಯ ರೆಫರಿಯ ವರದಿ ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಪಂದ್ಯದಲ್ಲಿ ತಿರುಪ್ಪೂರು ತಂಡವು ಡ್ರಾಗನ್ಸ್ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿತು.
ಇದನ್ನೂ ಓದಿ: ಭಾರತ - ಇಂಗ್ಲೆಂಡ್ ಟೆಸ್ಟ್!; ನಾಯಕ ಗಿಲ್ಗೆ ಶಾಕ್ ಕೊಟ್ಟ ಗಂಭೀರ್: ಕನ್ನಡಿಗನಿಗೆ ಲಕ್ಕಿ ಚಾನ್ಸ್!