ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಫ್ರಾಂಚೈಸಿ ಸನ್‌ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) ತಂಡದ ಆಟಗಾರರು ಉಳಿದುಕೊಂಡಿದ್ದ ತಾರಾ ಹೋಟೆಲ್‌ನಲ್ಲಿ ಸಣ್ಣ ಬೆಂಕಿ ಅವಘಡ ಸಂಭವಿಸಿದ ಘಟನೆ ಸೋಮವಾರ ನಡೆಸಿದೆ. ಘಟನೆಯಲ್ಲಿ ಯಾರಿಗೂ ಅಪಾಯ ಉಂಟಾಗಿಲ್ಲ ಎಂದು ಅಗ್ನಿಶಾಮಕ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ.
ಇಲ್ಲಿನ ಬಂಜಾರ ಹಿಲ್ಸ್ ಪ್ರದೇಶದಲ್ಲಿನ ಐಷಾರಾಮಿ ಹೋಟೆಲ್‌ನಲ್ಲಿ ಕ್ರಿಕೆಟಿಗರು ಉಳಿದುಕೊಂಡಿದ್ದರು. ಅದೇ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಮಾಹಿತಿ ತಿಳಿದ ತಕ್ಷಣ ಬೆಂಕಿಯನ್ನು ತ್ವರಿತವಾಗಿ ನಂದಿಸಲಾಗಿದೆ. ಘಟನೆಯಲ್ಲಿ ಕ್ರಿಕೆಟಿಗರು ಸೇರಿದಂತೆ ಯಾರಿಗೂ ಸಮಸ್ಯೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಹೋಟೆಲ್‌ನ ಮೊದಲ ಮಹಡಿಯಲ್ಲಿರುವ ಸ್ಟೀಮ್ ರೂಮ್ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿರುವ ಶಂಕೆ ಇದೆ. ಅಲ್ಲಿಂದಲೇ ಹೊಗೆ ಬಂದಿದೆ. ಅವಘಡದ ವೇಳೆ ಅ ಜಾಗದಲ್ಲಿ ಯಾರೂ ಇರಲಿಲ್ಲ. ಹೀಗಾಗಿ, ಯಾವುದೇ ದುರಂತ ನಡೆದಿಲ್ಲ" ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ.
"ಸಣ್ಣ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಅಗ್ನಿಶಾಮಕ ವಾಹನ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ತ್ವರಿತವಾಗಿ ನಿಯಂತ್ರಣಕ್ಕೆ ತಂದಿದೆ. ಹೋಟೆಲ್‌ನ ಇನ್ನೊಂದು ಭಾಗದಲ್ಲಿ ಹೈದರಾಬಾದ್ ಕ್ರಿಕೆಟ್ ತಂಡದ ಆಟಗಾರರು ತಂಗಿದ್ದರು. ಬೆಂಕಿ ಅವಘಡದ ವೇಳೆ ಹೋಟೆಲ್‌ನಲ್ಲಿ ಅವರ್ಯಾರೂ ಇರಲಿಲ್ಲ" ಎಂದು ಬಂಜಾರ ಹಿಲ್ಸ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸನ್ ರೈಸರ್ಸ್ ಹೈದರಾಬಾದ್ ಅಬ್ಬರಕ್ಕೆ ದಾಖಲೆಗಳು ಪೀಸ್ ಪೀಸ್!