Rinku Singh: ಟೀಂ ಇಂಡಿಯಾದ ಯುವ ಕ್ರಿಕೆಟರ್ ರಿಂಕು ಸಿಂಗ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ರಿಟೆನ್ಶನ್ನಲ್ಲಿ ಭಾರಿ ಮೊತ್ತ ಪಡೆದಿದ್ದಾರೆ. ಮುಂದಿನ ಆವೃತ್ತಿಗಾಗಿ ಕೆಕೆಆರ್ ಫ್ರಾಂಚೈಸಿ ಇವರಿಗೆ 13 ಕೋಟಿ ರೂ. ನೀಡಿ ತಂಡದಲ್ಲಿ ಉಳಿಸಿಕೊಂಡಿದೆ.
ಈ ಹಿಂದೆ 55 ಲಕ್ಷ ರೂ.ಗೆ ಹರಾಜಾಗಿದ್ದ ರಿಂಕು, ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಇದರಿಂದಾಗಿ ಈ ಬಾರಿ ಇವರ ಸಂಭಾವನೆಯಲ್ಲಿ ಭಾರಿ ಏರಿಕೆಯಾಗಿದೆ. ರಿಟೆನ್ಶನ್ನಲ್ಲಿ ಹೆಚ್ಚಿನ ಮೊತ್ತ ಪಡೆಯುತ್ತಿದ್ದಂತೆ ತಮ್ಮ ತಂದೆಗೆ ಹೊಸ ಮನೆ ಮತ್ತು ಕಾರು ಉಡುಗೊರೆ ನೀಡಿದ್ದಾರೆ. ಈ ಬಗ್ಗೆ ರಿಂಕು ತಂದೆ ಖಾನ್ಚಂದ್ರ ಸಿಂಗ್ 'ಈಟಿವಿ ಭಾರತ' ಪ್ರತಿಕ್ರಿಯಿಸಿದರು.
ಬದುಕು ಬದಲಾಗಿದೆ, ಆತನ ಸ್ವಭಾವದಲ್ಲಿ ಯಾವುದೂ ಬದಲಾಗಿಲ್ಲ: "ರಿಂಕು ಶ್ರಮಜೀವಿ. ಈ ಹಂತಕ್ಕೇರಲು ತುಂಬ ಕಷ್ಟಪಟ್ಟಿದ್ದಾನೆ. ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವ ಮೊದಲು ಹೇಗಿದ್ದನೋ ಇಂದೂ ಹಾಗೆಯೇ ಇದ್ದಾನೆ. ಊರಿಗೆ ಬಂದಾಗ ನೆರೆಹೊರೆಯವರನ್ನು ಭೇಟಿ ಮಾಡುತ್ತಾನೆ. ಸ್ನೇಹಿತರೊಂದಿಗೆ ಕಾಲ ಕಳೆಯುತ್ತಾನೆ. ಜೀವನ ಬದಲಾಗಿದೆ, ಆದರೆ ಆತನ ಸ್ವಭಾವದಲ್ಲಿ ಯಾವುದೂ ಬದಲಾಗಿಲ್ಲ. ಐಪಿಎಲ್ ರಿಟೆನ್ಶನ್ನಲ್ಲಿ 13 ಕೋಟಿ ರೂ ಪಡೆಯುತ್ತಿದ್ದಂತೆ ಮೊದಲು ನಮಗೆ ಹೊಸ ಮನೆ, ಕಾರು ಗಿಫ್ಟ್ ಕೊಟ್ಟ" ಎಂದು ತಂದೆ ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ: ಆರ್ಸಿಬಿ ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ
ಹಾಸ್ಟೆಲ್ ನಿರ್ಮಿಸಲು 50 ಲಕ್ಷ ರೂ ದೇಣಿಗೆ ನೀಡಿದ್ದ ರಿಂಕು: ರಿಂಕು ಯಶಸ್ಸಿಗೆ ತರಬೇತುದಾರ ಅರ್ಜುನ್ ಸಿಂಗ್ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಆತ ಇನ್ನೂ ಹೆಚ್ಚು ಯಶಸ್ಸು ಗಳಿಸಲೆಂದು ಪ್ರಾರ್ಥಿಸಿದ್ದಾರೆ.
"ರಿಂಕುಗೆ ಅಲಿಗಢ್ ಮತ್ತು ಇಲ್ಲಿನ ಕ್ರಿಕೆಟ್ ಮೈದಾನವೆಂದರೆ ತುಂಬಾ ಇಷ್ಟ. 2018ರ ಐಪಿಎಲ್‌ನಲ್ಲಿ ಕೆಕೆಆರ್ ಆತನನ್ನು 80 ಲಕ್ಷ ರೂ.ಗೆ ಪಡೆದುಕೊಂಡಿತ್ತು. ಬಂದ ಹಣದಲ್ಲಿ ಅಲಿಗಢ ಕ್ರಿಕೆಟ್ ಸ್ಟೇಡಿಯಂನಲ್ಲಿ ಹಾಸ್ಟೆಲ್ ನಿರ್ಮಿಸಲು 50 ಲಕ್ಷ ರೂ ದೇಣಿಗೆಯಾಗಿ ನೀಡಿದ್ದರು ಎಂದು ತಿಳಿಸಿದರು. ಆತ ಒಳ್ಳೆಯ ಸ್ವಭಾವದವನು. ಎಲ್ಲರೊಂದಿಗೂ ಹೊಂದಿಕೊಳ್ಳುತ್ತಾನೆ" ಎಂದು ಕೋಚ್ ಅರ್ಜುನ್ ಹೇಳಿದರು.
ರಿಂಕು ಐಪಿಎಲ್ ದಾಖಲೆ: ಐಪಿಎಲ್‌ನಲ್ಲಿ ಇದುವರೆಗೆ 40 ಪಂದ್ಯಗಳಲ್ಲಿ ಆಡಿರುವ ರಿಂಕು ಸಿಂಗ್ 893 ರನ್ ಗಳಿಸಿದ್ದಾರೆ. ಇದರಲ್ಲಿ 4 ಅರ್ಧಶತಕಗಳಿವೆ. 67 ಇವರ ಹೈಸ್ಕೋರ್. ಏತನ್ಮಧ್ಯೆ, 26 ಟಿ20 ಪಂದ್ಯಗಳನ್ನು ಆಡಿದ್ದು 479 ರನ್ ಗಳಿಸಿದ್ದಾರೆ. ಈ ಪೈಕಿ 3 ಅರ್ಧಶತಕ ಸೇರಿವೆ. 69 ಹೈಸ್ಕೋರ್ ಆಗಿದೆ.
ಇದನ್ನೂ ಓದಿ: ಐಪಿಎಲ್ಗೆ ಗುಡ್ಬೈ ಹೇಳಲಿರುವ ಸ್ಟಾರ್ ಆಲ್ರೌಂಡರ್: ಮೆಗಾ ಹರಾಜಿನಿಂದಲೂ ಹಿಂದೆ ಸರಿದ ಆಟಗಾರ