ಬೆಂಗಳೂರು: ರಾಜಸ್ಥಾನ್ ರಾಯಲ್ಸ್ ವಿರುದ್ಧದ ತನ್ನ ಮುಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಸಿರು ಜರ್ಸಿ ಧರಿಸಿ ಕಣಕ್ಕಿಳಿಯಲಿದೆ. ಮರುಬಳಕೆ ಮಾಡಿದ ಬಟ್ಟೆಯಿಂದ ತಯಾರಿಸಿದ ಹಸಿರು ಜರ್ಸಿಗಳನ್ನ ಧರಿಸಿ ಆರ್‌ಸಿಬಿ ಆಟಗಾರರು ಪಂದ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಪರಿಸರವನ್ನು ರಕ್ಷಿಸುವ ಅಗತ್ಯದ ಬಗ್ಗೆ ಜಾಗೃತಿ ಮೂಡಿಸುವ ಗುರಿ ಹೊಂದಿರುವ ಆರ್‌ಸಿಬಿಯು ಪ್ರತೀ ಐಪಿಎಲ್ ಆವೃತ್ತಿಯಲ್ಲಿ ತನ್ನ ಒಂದು ಪಂದ್ಯದಲ್ಲಿ ಹಸಿರು ಜರ್ಸಿ ಧರಿಸಿ ಕಣಕ್ಕಿಳಿಯುತ್ತಿದೆ.
ಪರಿಸರದ ಕುರಿತು ಕಾಳಜಿ, ಇಂಗಾಲದ ಪ್ರಮಾಣ ತಗ್ಗಿಸುವುದರ ಕುರಿತು ಅರಿವು ಮೂಡಿಸುವ ಸಲುವಾಗಿ 2011ರಿಂದಲೂ ಪ್ರತೀ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಆಟಗಾರರು ತಮ್ಮ ಒಂದು ಪಂದ್ಯದಲ್ಲಿ ಹಸಿರು ಜರ್ಸಿ ಧರಿಸಿ ಕಣಕ್ಕಿಳಿಯುತ್ತಿದ್ದಾರೆ. ಮತ್ತು ಆರ್‌ಸಿಬಿ ಈಗ ವಿಶ್ವದ ಮೊದಲ ಇಂಗಾಲ - ತಟಸ್ಥ ಕ್ರಿಕೆಟ್ ತಂಡ ಫ್ರಾಂಚೈಸಿ ಎನಿಸಿದೆ.
"ನಮಗಿದು ಮೈದಾನದ ಒಳಗೆ ಮತ್ತು ಮತ್ತು ಹೊರಗೆ ಬೋಲ್ಡ್ ಆಗಿರುವುದಾಗಿದೆ. ನಮ್ಮ ಹಸಿರು ಜರ್ಸಿಗಳು ಕೇವಲ ಸಂಕೇತಗಳಲ್ಲ, ಅವು ನಾವು ನೀಡುತ್ತಿರುವ ಕರೆಯಾಗಿವೆ. ಗಾರ್ಡನ್ ಸಿಟಿಯ ಹೆಮ್ಮೆಯ ಪ್ರತಿನಿಧಿಗಳಾಗಿ ಸುಸ್ಥಿರತೆಯು ನಮಗೆ ನೈಸರ್ಗಿಕ ಆದ್ಯತೆಯಾಗಿದೆ. ಇದರ ಮೂಲಕ ಆರ್‌ಸಿಬಿಯು ಸಾಂಸ್ಕೃತಿಕ ಮತ್ತು ಸಾಮಾಜಿಕ ಜಾಗೃತಿ ಮೂಡಿಸಲು ಸಣ್ಣ ಹೆಜ್ಜೆಗಳನ್ನ ಇಡುತ್ತಿದೆ'' ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಿಇಓ ರಾಜೇಶ್ ಮೆನನ್ ತಿಳಿಸಿದರು.
ಐಪಿಎಲ್ -2025ರಲ್ಲಿ ಏಪ್ರಿಲ್ 13ರಂದು ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಇದನ್ನೂ ಓದಿ: ಸತತ ಫ್ಲಾಪ್ ಆಗುತ್ತಿರುವ ಆರ್ಸಿಬಿಯ ಈ ಪ್ಲೇಯರ್ ಸ್ಥಾನಕ್ಕೆ ಮತ್ತೊಬ್ಬ ಸ್ಫೋಟಕ ಹಿಟ್ಟರ್ ಎಂಟ್ರಿ!