ಚೆನ್ನೈ(ತಮಿಳುನಾಡು): ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮಂಗಳವಾರ ಇಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 49ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಅನುಭವಿ ಬೌಲರ್ ಯಜುವೇಂದ್ರ ಚಾಹಲ್ ಹ್ಯಾಟ್ರಿಕ್ ವಿಕೆಟ್ ಉರುಳಿಸಿ ಇತಿಹಾಸ ಸೃಷ್ಟಿಸಿದರು. ಇದರೊಂದಿಗೆ ವಿಶ್ವದ ಶ್ರೀಮಂತ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ 2ನೇ ಬಾರಿಗೆ ಈ ಸಾಧನೆ ಮಾಡಿದ್ದಾರೆ. ಇವರಿಗೂ ಮುನ್ನ ಅಮಿತ್ ಮಿಶ್ರಾ ಮತ್ತು ಯುವರಾಜ್ ಸಿಂಗ್ ಹ್ಯಾಟ್ರಿಕ್ ವಿಕೆಟ್ ಗೊಂಚಲು ಪಡೆದಿದ್ದರು.
ಚೆನ್ನೈನ ದೀಪಕ್ ಹೂಡಾ, ಅನ್ಶುಲ್ ಕಾಂಬೋಜ್ ಮತ್ತು ನೂರ್ ಅಹಮದ್ ಅವರ ವಿಕೆಟ್ ಗಳನ್ನು ಚಾಹಲ್ ಪಡೆದರು. ಇದೇ ಓವರ್ ನಲ್ಲಿ ಎಂ.ಎಸ್.ಧೋನಿ ಅವರನ್ನೂ ತಮ್ಮ ಲೆಗ್ ಸ್ಪಿನ್ ಬಲೆಗೆ ಸಿಲುಕಿಸಿ, ಪೆವಿಲಿಯನ್ ಸೇರಿಸಿದ್ದರು. ಈ ನಾಲ್ಕು ವಿಕೆಟ್ ಗಳು ಉರುಳುವುದಕ್ಕೂ ಮುನ್ನ ಸಿಎಸ್ ಕೆ 200 ರನ್ ಗಳತ್ತ ಸಲೀಸಾಗಿ ದಾಪುಗಾಲು ಹಾಕುತ್ತಿತ್ತು. ಆದರೆ ಚಾಹಲ್ ಓವರ್ ಶುರುವಾಗುತ್ತಿದ್ದಂತೆ ಸಿಎಸ್ ಕೆ ತೀವ್ರ ಹೊಡೆತ ಅನುಭವಿಸಿತು.
ಧೋನಿ ಔಟ್ ಆಗುವುದಕ್ಕೂ ಮುನ್ನ ಚಾಹಲ್ ಓವರ್ ನ ಮೊದಲ ಎಸೆತವನ್ನು ಸಿಕ್ಸರ್ ಗಟ್ಟಿದ್ದರು. ಆದ್ರೆ, ತಾಳ್ಮೆ ಕಳೆದುಕೊಳ್ಳದ ಚಾಹಲ್ ಮುಂದೆ ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಈ ಪಂದ್ಯದಲ್ಲಿ 3 ಓವರ್ ಮಾಡಿ 4 ಪಡೆದು 32 ರನ್ ಬಿಟ್ಟುಕೊಟ್ಟು ಚೆನ್ನೈಗೆ ಅಚ್ಚರಿಯ ಏಟು ಕೊಟ್ಟರು.
𝙒.𝙒.𝙒 🤯
— IndianPremierLeague (@IPL) April 30, 2025
First hat-trick of the season 😍
Second hat-trick of his IPL career 🫡
Yuzvendra Chahal is his name 😎
Updates ▶ https://t.co/eXWTTv8v6L #TATAIPL | #CSKvPBKS | @yuzi_chahal pic.twitter.com/4xyaX3pJLX
ಈ ಮೂಲಕ 5 ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ವಿರುದ್ಧ ಮೊದಲ ಹ್ಯಾಟ್ರಿಕ್ ವಿಕೆಟ್ ಸಾಧಕ ಎಂಬ ಹಿರಿಮೆಯೂ ಚಾಹಲ್ ಪಾಲಾಯಿತು.
ಚೆನ್ನೈ ಬ್ಯಾಟಿಂಗ್ ಹೀಗಿತ್ತು..:184 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಸಿಎಸ್ ಕೆ ಮುಂದೆ 190 ರನ್ ಗಳಾಗಷ್ಟುವರಲ್ಲಿ ಕೇವಲ 7 ಎಸೆತಗಳಲ್ಲೇ ತನ್ನೆಲ್ಲ ವಿಕೆಟ್ ಗಳನ್ನೂ ಕಳೆದುಕೊಂಡಿತು. ಒಂದು ಹಂತದಲ್ಲಿ ತಂಡ 200 ರನ್ ಗಡಿ ಮೀರುವ ಭರವಸೆ ಮೂಡಿಸಿತ್ತು. ಏಕೆಂದರೆ, ಸ್ಯಾಮ್ ಕರನ್ ಅತ್ಯುತ್ತಮ ರೀತಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಎಡಗೈ ಬ್ಯಾಟರ್ ಕರನ್, 47 ಎಸೆತಗಳಲ್ಲಿ 88 ರನ್ ಬಾರಿಸಿದರು. ನಂತರ ತಂಡ ಇವರ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ರನ್ ವೇಗಕ್ಕೆ ಕಡಿವಾಣ ಬಿತ್ತು. ಚಾಹಲ್ ಬಿಗು ಬೌಲಿಂಗ್ ದಾಳಿ ಚೆನ್ನೈ ತಂಡವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿತು.
ದಾಖಲೆಗಳು:
- ಸಿಎಸ್ ಕೆ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ಮೊದಲ ಬೌಲರ್ ಚಾಹಲ್
- ಐಪಿಎಲ್ ನಲ್ಲಿ ಎರಡು ವಿಭಿನ್ನ ತಂಡಗಳ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಗಳಿಸಿದ ಮೊದಲ ಬೌಲರ್ ಚಹಾಲ್
- ಒಂದೇ ಓವರ್ ನಲ್ಲಿ ನಾಲ್ಕು ವಿಕೆಟ್. ಐಪಿಎಲ್ ನಲ್ಲಿ ಈ ರೀತಿ ಎರಡು ಬಾರಿ ವಿಕೆಟ್ ಸಾಧನೆ ಮಾಡಿದ ಏಕೈಕ ಬೌಲರ್. ಇಂಥದ್ದೇ ಸಾಧನೆಯನ್ನು ಹಿಂದೆ ಚಾಹಲ್ ರಾಜಸ್ಥಾನ್ ರಾಯಲ್ಸ್ ಮತ್ತು ಕೆಕೆಆರ್ ವಿರುದ್ಧ ಮಾಡಿದ್ದರು.
- ಐಪಿಎಲ್ ನಲ್ಲಿ ಎರಡು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ 3ನೇ ಬೌಲರ್. ಈ ಹಿಂದೆ ಅಮಿತ್ ಮಿಶ್ರಾ 3 ಬಾರಿ ಮತ್ತು ಯುವರಾಜ್ ಸಿಂಗ್ 2 ಬಾರಿ ಇಂಥ ಸಾಧನೆ ಮಾಡಿದ್ದರು.
- ಪಂಜಾಬ್ ತಂಡಕ್ಕೆ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ನಾಲ್ಕನೇ ಬೌಲರ್ ಚಾಹಲ್. ಹಿಂದೆ ಇದೇ ತಂಡಕ್ಕೆ ಯುವಿ, ಮಿಶ್ರಾ ಮತ್ತು ಕರನ್ ಹ್ಯಾಟ್ರಿಕ್ ವಿಕೆಟ್ ಗಳಿಸಿಕೊಟ್ಟಿದ್ದರು.
ಇದನ್ನೂ ಓದಿ: ಮನೆಯಂಗಳದಲ್ಲಿ ಮತ್ತೆ ಸೋಲುಂಡ ಡೆಲ್ಲಿ ಕ್ಯಾಪಿಟಲ್ಸ್: ಕೆಕೆಆರ್ ಪ್ಲೇಆಫ್ ಕನಸು ಜೀವಂತ! - DC VS KKR HIGHLIGHTS