Corbin Bosch Banned: ಇಂಡಿಯನ್ ಪ್ರೀಮಿಯರ್ ಲೀಗ್ (IPL)ನಲ್ಲಿ ಆಡಲೆಂದು ಪಾಕಿಸ್ತಾನ ಸೂಪರ್ ಲೀಗ್ (PSL) ತೊರೆದಿದ್ದ ದಕ್ಷಿಣ ಆಫ್ರಿಕಾದ ಸ್ಟಾರ್ ಆಲ್‌ರೌಂಡರ್ ಕಾರ್ಬಿನ್ ಬಾಷ್ ಅವರನ್ನು ನಿಷೇಧಿಸಲಾಗಿದೆ.
ಪೆಶಾವರ್ ಝಲ್ಮಿ ತಂಡವು ಪಿಎಸ್‌ಎಲ್ ಡ್ರಾಫ್ಟ್‌ನಲ್ಲಿ ಕಾರ್ಬಿನ್ ಬಾಷ್ ಅವರನ್ನು ಡೈಮಂಡ್ ಪ್ಲೇಯರ್ ಆಗಿ ತಂಡಕ್ಕೆ ಆಯ್ಕೆ ಮಾಡಿತು. ಆದರೆ ಐಪಿಎಲ್‌ನ ಭಾಗವಾಗಿರುವ ಮುಂಬೈ ಇಂಡಿಯನ್ಸ್ನ ಪ್ಲೇಯರ್ ಕಾರ್ಬಿನ್ ಲಿಜರ್ಡ್ ವಿಲಿಯಮ್ಸ್ ಗಾಯಕ್ಕೆ ತುತ್ತಾದ ಕಾರಣ ಬದಲಿ ಆಟಗಾರನಾಗಿ ಕಾರ್ಬಿನ್ ಬಾಷ್ ಅವರನ್ನು ಆಯ್ಕೆ ಮಾಡಿತು. ಇದರ ಬೆನ್ನಲ್ಲೇ ಕಾರ್ಬಿನ್ ಬಾಷ್ ಪಿಎಸ್ಎಲ್ ಬದಲಿಗೆ ಐಪಿಎಲ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರು. ಅದಕ್ಕಾಗಿ ಪಿಎಸ್‌ಎಲ್‌ನಿಂದ ಹಿಂದೆ ಸರಿದರು. ಇದರ ಬೆನ್ನಲ್ಲೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಕಾರ್ಬಿನ್‌ಗೆ ನೋಟಿಸ್ ಕಳುಹಿಸಿತು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾರ್ಬಿನ್, "ಪಿಎಸ್ಎಲ್ ಅನ್ನು ಅವಹೇಳನ ಮಾಡುವುದು ನನ್ನ ಉದ್ದೇಶವಲ್ಲ. ಮುಂಬೈ ಇಂಡಿಯನ್ಸ್ ಬಲಿಷ್ಠ ಐಪಿಎಲ್ ತಂಡ ಮಾತ್ರವಲ್ಲ, ಇತರ ಲೀಗ್‌ಗಳಲ್ಲಿಯೂ ಫ್ರಾಂಚೈಸಿಗಳನ್ನು ಹೊಂದಿದೆ. ಅದಕ್ಕಾಗಿಯೇ ನಾನು ನನ್ನ ಭವಿಷ್ಯಕ್ಕಾಗಿ ಇದಕ್ಕೆ ಆದ್ಯತೆ ನೀಡಿದ್ದೇನೆ. "ಇದು ನನ್ನ ವೃತ್ತಿಜೀವನಕ್ಕೆ ಉಪಯುಕ್ತವಾಗಿರುತ್ತದೆ" ಎಂದು ತಿಳಿಸಿದ್ದಾರೆ.
ಒಂದು ವರ್ಷ ಬ್ಯಾನ್: ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕಳುಹಿಸಿದ ಕಾನೂನು ನೋಟೀಸ್‌ಗೆ ಕಾರ್ಬಿನ್ ನೀಡಿದ ಉತ್ತರ ಸರಿಯಾಗಿದೆ. ಆದರೆ ಪಿಎಸ್‌ಎಲ್ ನಿಯಮಗಳನ್ನು ಪಾಲಿಸದ ಕಾರಣ ಪಿಸಿಬಿ ಅವರನ್ನು ಅಮಾನತುಗೊಳಿಸಿತು. ಒಂದು ಪಾಕಿಸ್ತಾನ ಆಯೋಜಿತ್ ಲೀಗ್ಗಳನ್ನು ಆಡದಂತೆ ನಿಷೇಧ ಹೇರಿದೆ. ಅಲ್ಲದೆ ಪಿಎಸ್‌ಎಲ್‌ನಿಂದ ಹಿಂದೆ ಸರಿದಿದ್ದಕ್ಕೆ ಬಾಷ್ ತೀವ್ರ ವಿಷಾದ ವ್ಯಕ್ತಪಡಿಸಿದ್ದು ಪಾಕಿಸ್ತಾನ ಮತ್ತು ಪೇಶಾವರ್ ಝಲ್ಮಿ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದರು.
"ಪಿಎಸ್‌ಎಲ್‌ನಿಂದ ಹಿಂದೆ ಸರಿಯುವ ನನ್ನ ನಿರ್ಧಾರಕ್ಕೆ ನಾನು ತೀವ್ರವಾಗಿ ವಿಷಾದಿಸುತ್ತೇನೆ. "ಪಾಕಿಸ್ತಾನದ ಜನರು ಮತ್ತು ಪೇಶಾವರ್ ಝಲ್ಮಿಯ ಅಭಿಮಾನಿಗಳಲ್ಲಿ ನಾನು ಕ್ಷಮೆಯಾಚಿಸುತ್ತೇನೆ" ಎಂದು ಕಾರ್ಬಿನ್ ಹೇಳಿರುವುದಾಗಿ ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿ ಮಾಡಿದೆ.
ಏತನ್ಮಧ್ಯೆ, ಈ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಕಳಪೆ ಪ್ರದರ್ಶನ ನೀಡುತ್ತಿದೆ. ಈವರೆಗೂ ಆಡಿರುವ 5 ಪಂದ್ಯಗಳಲ್ಲಿ 1ರಲ್ಲಿ ಮಾತ್ರ ಗೆದ್ದು 4 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. ಅಂಕಪಟ್ಟಿಯಲ್ಲೂ 9ನೇ ಸ್ಥಾನದಲ್ಲಿದೆ. ಏಪ್ರಿಲ್ 13ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಡಲಿದೆ. ಈ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿದೆ.
ಇದನ್ನೂ ಓದಿ: 'ನಾನು ಪಕ್ಕಾ ಲೋಕಲ್': RCB ವಿರುದ್ಧ ರಾಹುಲ್ ಫೈರ್ ಆಗಲು ಕಾರಣ ಏನು?