ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಪಾಕಿಸ್ತಾನಕ್ಕೆ ವಿಶ್ವಮಟ್ಟದಲ್ಲಿ ಮುಖಭಂಗ ಉಂಟು ಮಾಡಿದೆ. ಭಾರತದ ಹೊಡೆತಕ್ಕೆ ನಲುಗಿರುವ ಪಾಕ್ ಸೇನೆಯು ಹಸಿ ಸುಳ್ಳುಗಳನ್ನೇ ಆಹಾರವನ್ನಾಗಿ ಮಾಡಿಕೊಂಡು, ಮಾನ ಉಳಿಸಿಕೊಳ್ಳಲು ಹೆಣಗಾಡುತ್ತಿದೆ.
ಸೋತವರು ಯಾವಾಗಲೂ ತಮಗಾದ ನಷ್ಟವನ್ನು ಮುಚ್ಚಿಕೊಳ್ಳಲು ಸಣ್ಣ ಲಾಭಗಳನ್ನೇ ದೊಡ್ಡ ವಿಜಯ ಎಂದು ಬೆನ್ನು ತಟ್ಟಿಕೊಳ್ಳುತ್ತಾರೆ. ಅದನ್ನು ಸಹಜವಾಗಿಯೇ ವಿಜೃಂಭಿಸುವ ಮೂಲಕ ಮಾನ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಪಾಕಿಸ್ತಾನದ ಈಗಿನ ಪರಿಸ್ಥಿತಿ ಹೀಗೆಯೇ ಇದೆ.
ಸಂಘರ್ಷದಲ್ಲಿ ಗೆದ್ದವರು ಸೋತವರಿಗೆ ಸಣ್ಣದೊಂದು ಅವಕಾಶ ಮಾಡಿಕೊಡಬೇಕು. ಸೋತ ಮಾತ್ರಕ್ಕೆ ಎದುರಾಳಿಯನ್ನು ಪಾತಾಳಕ್ಕೆ ತುಳಿಯುವುದು ವಿಜಯವಲ್ಲ. ವಿಜೇತರು ಗುರಿ ಸಾಧಿಸಿದ್ದಾಗಿದೆ. ಹೆಮ್ಮೆ ಪಡುವ ಅಗತ್ಯವೂ ಇಲ್ಲ. ಆದರೆ, ಸೋತವರ ಸ್ಥಿತಿ ಬೇರೆಯದ್ದೇ ಇರುತ್ತದೆ. ಪಾಕಿಸ್ತಾನ ಮತ್ತು ಭಾರತದ ಡಿಜಿಎಂಒಗಳ ಪತ್ರಿಕಾಗೋಷ್ಠಿಯನ್ನು ಒಮ್ಮೆ ನೋಡಿದರೆ, ಸೋತವರು- ಗೆದ್ದವರ ನಡುವಿನ ವ್ಯತ್ಯಾಸ ಸಹಜವಾಗಿ ತಿಳಿಯುತ್ತದೆ.
ಭಾರತದ ಎದುರು ಸೋಲುವುದು ಪಾಕಿಸ್ತಾನಕ್ಕೆ ದೊಡ್ಡ ಅವವಮಾನವೇ ಸರಿ. ಅದರ ಸೈದ್ಧಾಂತಿಕ ಹಿನ್ನೆಲೆಯಲ್ಲೂ ಅದು ಸ್ವೀಕಾರಾರ್ಹವಲ್ಲ. ಯುದ್ಧಭೂಮಿಯಲ್ಲಿ ಗೆಲ್ಲದಿದ್ದರೂ, ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಹರಡುವ ಮೂಲಕ ಭಾರತವನ್ನು ಸೋಲಿಸಲು ಪ್ರಯತ್ನಿಸಿತು. ಆಪರೇಷನ್ ಸಿಂಧೂರ ವಿಷಯವಾಗಿ ಪಾಕಿಸ್ತಾನ ಸುಳ್ಳು ಮತ್ತು ನಕಲಿ ಮಾಹಿತಿಯನ್ನು ಬಿತ್ತರಿಸಿತು. ಇನ್ನೊಂದೆಡೆ, ಭಾರತ ತನ್ನ ಪ್ರತಿಯೊಂದು ದಾಳಿಗೆ ಸಾಕ್ಷ್ಯ ನೀಡುವ ಮೂಲಕ ತಿರುಗೇಟು ನೀಡಿತು.
ಸುಳ್ಳು ಹರಡಲು ಯುವಕರಿಗೆ ತರಬೇತಿ: ಆಪರೇಷನ್ ಸಿಂಧೂರ್‌ನ ಮೊದಲ ದಿನದಿಂದಲೂ ಪಾಕಿಸ್ತಾನ ತಪ್ಪು ಮಾಹಿತಿಯ ಅಭಿಯಾನ ಸಂಘಟಿಸುತ್ತಾ ಬಂದಿತು. ಪಾಕ್ ಸಶಸ್ತ್ರ ಪಡೆಗಳು ಭಾರತದ ಮೇಲೆ ದಾಳಿ ನಡೆಸಿ ಭಾರಿ ನಷ್ಟವುಂಟು ಮಾಡಲಾಗಿದೆ ಎಂದು ಬಿಂಬಿಸಿತು. ಅದರ ಈ ತಂತ್ರ ಹೊಸದೇನಲ್ಲ. ಪಾಕಿಸ್ತಾನ ದಶಕಗಳಿಂದ ಈ ಆಟವನ್ನು ಆಡುತ್ತಾ ಬಂದಿದೆ. ಇದಕ್ಕಾಗಿಯೇ ಆ ದೇಶವು ತರಬೇತಿ ಪಡೆದ ಸಿಬ್ಬಂದಿಯನ್ನು ರೂಪಿಸುತ್ತದೆ.
ಪಾಕಿಸ್ತಾನವು, ತನ್ನ ಯುವಕರಿಗೆ ಸಾಮಾಜಿಕ ಮಾಧ್ಯಮ ಜ್ಞಾನದ ಕುರಿತು ಇಂಟರ್ನ್‌ಶಿಪ್ ಕಾರ್ಯಕ್ರಮಗಳನ್ನು ನಿಯಮಿತವಾಗಿ ನಡೆಸುತ್ತದೆ. ಈ ವರ್ಷದ ಜನವರಿ-ಫೆಬ್ರವರಿಯಲ್ಲಿ 2500 ಕ್ಕೂ ಹೆಚ್ಚು ಯುವಕರಿಗೆ ಇಂಥದ್ದೊಂದು ತರಬೇತಿ ನೀಡಲಾಗಿದೆ. 'ಬಿಕ್ಕಟ್ಟಿನ ಸಂದರ್ಭದಲ್ಲಿ ಸೇನೆಯ ಇಮೇಜ್ ಅನ್ನು ಹೇಗೆ ನಿರ್ವಹಿಸುವುದು' ಎಂದು ಯುವಕರಿಗೆ ಕಲಿಸಲಾಗುತ್ತದೆ. ಆಪರೇಷನ್ ಸಿಂಧೂರ್ ಕೂಡ ದೇಶಕ್ಕೆ ಸೃಷ್ಟಿಸಿದ ಬಿಕ್ಕಟ್ಟಾಗಿತ್ತು. ಇದನ್ನು ಮರೆಮಾಚಿ ಪಾಕ್ ಬಗ್ಗೆ ಸಕಾರಾತ್ಮಕ ಇಮೇಜ್ ಸೃಷ್ಟಿಸುವುದು ಈ ತಂಡದ ಕೆಲಸವಾಗಿದೆ.
ಆಪರೇಷನ್ ಸಿಂಧೂರ ಸತ್ಯ ಬಿಚ್ಚಿಟ್ಟ ಭಾರತ: ಭಾರತಕ್ಕೆ ಇಂಥದ್ದೊಂದು ತಂಡದ ಅಗತ್ಯವಿಲ್ಲ. ಸತ್ಯವನ್ನು ಮರೆಮಾಡುವ ಅಗತ್ಯವೂ ನಮಗಿಲ್ಲ. ಆಪರೇಷನ್ ಸಿಂಧೂರದ ಪ್ರತಿಯೊಂದು ಹಂತದಲ್ಲೂ ಸೇನೆಯು ಭಾರತೀಯ ಮಾಧ್ಯಮಗಳಿಗೆ ಸಾಕ್ಷ್ಯ ಸಮೇತ ಮಾಹಿತಿ ನೀಡಿತು. ನಿಖರ ಅಂಕಿ - ಅಂಶಗಳನ್ನು ಹಂಚಿಕೊಂಡಿತು. ಎಲ್ಲೂ ನಮ್ಮ ಸೇನೆ ಪಾಕ್ ವಿಮಾನವನ್ನು ಹೊಡೆದುರುಳಿಸಿದಂತೆ ವಿವರ ನೀಡಿಲ್ಲ. ಆದರೆ, ಪಾಕಿಸ್ತಾನ ಮಾಧ್ಯಮ ಬ್ರೀಫಿಂಗ್‌ಗಳು ಆರಂಭದಿಂದಲೂ ತಮಾಷೆಯಾಗಿದ್ದವು. ಅವರ ಹೇಳಿಕೆಗಳು ಅತಿರೇಕ, ಪುರಾವೆಗಳೇ ಇರಲಿಲ್ಲ. ಎಲ್ಲವೂ ಬರೀ ಹೇಳಿಕೆಗಳಾಗಿದ್ದವು.
ವಾಸ್ತವವೆಂದರೆ ಪಾಕ್ನ ಎಲ್ಲಾ ಮಾಧ್ಯಮ ಸಂಸ್ಥೆಗಳು ಅದರ ಗುಪ್ತಚರ ದಳವಾದ ಐಎಸ್‌ಐನ ನಿಯಂತ್ರಣದಲ್ಲಿವೆ. ಅಲ್ಲಿನ ಸೇನೆ ಬಿಡುಗಡೆ ಮಾಡುವ ಪ್ರಕಟಣೆಗಳನ್ನು ಯಥಾವತ್ತಾಗಿ ಭಿತ್ತರಿಸುವುದು ಮಾತ್ರ ಅವುಗಳ ಕೆಲಸ. ಭಾರತದ ಮೇಲಿನ ದ್ವೇಷದಿಂದಾಗಿ ಪಾಕಿಸ್ತಾನಕ್ಕೆ ಅಪಾಯ ಉಂಟಾದರೂ, ಅದನ್ನು ಮಾತ್ರ ಜಗತ್ತಿನ ಎದುರು ಬಿಚ್ಚಿಡುವುದಿಲ್ಲ.
ಸುಳ್ಳಿನ ಕಂತೆ ಹೆಣೆದ ಪಾಕಿಸ್ತಾನ ಸೇನೆ: ಪಾಕ್ನ ತಪ್ಪು ಮಾಹಿತಿ ಅಭಿಯಾನವು ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಿಕೊಂಡಿತು. ಇದರ ಮೂಲಕ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಓಲೈಕೆಗೆ ಪ್ರಯತ್ನಿಸಿತು. ಭಾರತದ ಅದಮ್‌ಪುರದ ವಾಯುನೆಲೆಯ ಮೇಲೆ ದಾಳಿ ಮಾಡಿ ಎಸ್ 400 ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದ್ದೇವೆ. ವಾಯುನೆಲೆಯನ್ನೂ ನಾಶ ಮಾಡಲಾಗಿದೆ ಎಂದು ಕೊಚ್ಚಿಕೊಂಡಿತು. ಆದರೆ, ಕದನ ವಿರಾಮ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು, ಇದೇ ವಾಯುನೆಲೆಗೆ ಭೇಟಿ ನೀಡಿ, ಎಸ್ 400, ಯುದ್ಧ ವಿಮಾನಗಳ ಮುಂದೆ ನಿಂತು ಫೋಟೋ ತೆಗೆಸಿಕೊಂಡು, ಪಾಕ್ ಹೇಳಿದ್ದು ಸುಳ್ಳು ಎಂಬುದನ್ನು ಸಾಬೀತು ಮಾಡಿದರು.
6 ಭಾರತೀಯ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಪಾಕ್ ಪ್ರಧಾನಿ ಶೆಹಬ್ಬಾಜ್ ಷರೀಫ್ ಹೇಳಿದರು. ಆದರೆ, ಅದಕ್ಕೆ ಯಾವುದೇ ಪುರಾವೆ ನೀಡಲಿಲ್ಲ. ಭಾರತೀಯ ವಿಮಾನಗಳನ್ನು ನಾಶಪಡಿಸಿದ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು, 'ಸಾಮಾಜಿಕ ಮಾಧ್ಯಮದಲ್ಲಿ ಅದರ ವಿಡಿಯೋಗಳಿವೆ' ಎಂದಷ್ಟೇ ಹೇಳಿ ನುಣುಚಿಕೊಂಡರು.
ಇನ್ನೊಂದೆಡೆ, ಅಮೆರಿಕವು ಕದನ ವಿರಾಮವನ್ನು ಮಾತುಕತೆ ಮೂಲಕ ತೀರ್ಮಾನಿಸಿದೆ ಎಂದು ಬಿತ್ತರಿಸಿತು. ವಿಶ್ವದ ಮುಂದೆ ಮುಖ ಉಳಿಸಿಕೊಳ್ಳುವ ಉದ್ದೇಶಕ್ಕಾಗಿ, ಕದನ ವಿರಾಮ ಮಾಡಿಸಿದ್ದಕ್ಕೆ ಟ್ರಂಪ್‌ಗೆ ಆ ದೇಶದ ನಾಯಕರು ಧನ್ಯವಾದ ಅರ್ಪಿಸಿದರು. ಪಾಕ್ನ ವಿದೇಶಾಂಗ ಕಚೇರಿಯು ಭಾರತದ ಕದನ ವಿರಾಮ ಪ್ರಸ್ತಾಪವನ್ನು ತಾನೇ ನಿರಾಕರಿಸಿತು ಎಂದು ಬೊಗಳೆ ಬಿಟ್ಟಿತು.
ಆದರೆ, ನಿಜವಾದ ಸಂಗತಿಯೆಂದರೆ, ಸಂಘರ್ಷದಲ್ಲಿ ಅಮೆರಿಕ ಪ್ರವೇಶಿಸುವ ಮೊದಲು ಉಭಯ ರಾಷ್ಟ್ರಗಳ ಡಿಜಿಎಂಒಗಳ ನಡುವೆ ಈ ಬಗ್ಗೆ ಮಾತುಕತೆ ನಡೆದಿತ್ತು. ಪಾಕಿಸ್ತಾನವೇ ಕದನ ನಿಲ್ಲಿಸಲು ಅಂಗಲಾಚಿತ್ತು. ಭಾರತದ ಡಿಜಿಎಂಒಗಳು ಇದನ್ನು ತಮ್ಮ ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನವನ್ನು ಅವಮಾನಿಸದೆ ಮಾಹಿತಿ ನೀಡಿದರು.
ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲೂ ಪಾಕ್ ಸುಳ್ಳು: ಸಿಎನ್‌ಎನ್, ರಾಯಿಟರ್ಸ್, ಬ್ಲೂಮ್‌ಬರ್ಗ್, ನ್ಯೂಯಾರ್ಕ್ ಟೈಮ್ಸ್‌ನ ಪಾಕಿಸ್ತಾನಿ ಪತ್ರಕರ್ತರು ಆಧಾರರಹಿತ ಮತ್ತು ಪುರಾವೆಗಳಿಲ್ಲದ ಭಾರತ ವಿರೋಧಿ ನಿರೂಪಣೆಗಳನ್ನು ಪ್ರಕಟಿಸಿದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಳ್ಳು ಹರಡುವ ತಂತ್ರವಾಗಿತ್ತು. ಪಾಕಿಸ್ತಾನದ ಪ್ರತಿಯೊಂದು ಸುಳ್ಳಿಗೆ ಅದರ ನೂರಾರು ಮಾಧ್ಯಮಗಳು ದೃಢೀಕರಣ ನೀಡಲು ಪ್ರಯತ್ನಿಸಿದವು.
ತಿರುಚಿದ ವಿಡಿಯೋಗಳು, ನಕಲಿ ಮಾಹಿತಿ ಮತ್ತು ತಪ್ಪಾದ ವಿಡಿಯೋ ತುಣುಕುಗಳನ್ನು ಹರಿಬಿಟ್ಟಿತು. ಇದನ್ನು ಸಾಬೀತುಪಡಿಸಲು ಭಾರತೀಯ ಗುಪ್ತಚರ ಸಂಸ್ಥೆಗಳಿಂದ ಬಂದ ಮಾಹಿತಿ ಎಂದು ನಕಲಿ ದಾಖಲೆಗಳನ್ನು ಸಹ ಪ್ರಸಾರ ಮಾಡಿತು. ತನ್ನ ಈ ಪ್ರಯತ್ನವನ್ನು ಸತ್ಯ ಎಂದು ತೋರಿಸಲು ಹಳೆಯ ತುಣುಕುಗಳನ್ನು, ಕೆಲವೊಮ್ಮೆ ಇತರ ದೇಶಗಳಲ್ಲಿ ನಡೆದ ಘಟನೆಯನ್ನು ಸಹ ತೋರಿಸಲಾಯಿತು.
ತಪ್ಪು ಮಾಹಿತಿ ನೀಡುವ ಆಟವನ್ನು ಪಾಕ್ ಇನ್ನೂ ನಿಲ್ಲಿಸಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ನಕಲಿ ನಿರೂಪಣೆಯ ಅನೇಕ ಎಡಿಟೆಡ್ ವಿಡಿಯೋಗಳು, ನಕಲಿ ಕ್ಲಿಪ್‌ಗಳು ಮತ್ತು ಲೇಖನಗಳು ಕಾಣಿಸಿಕೊಳ್ಳುತ್ತಿವೆ. ಭಾರತೀಯ ಸೇನೆಯ ಸಾಮರ್ಥ್ಯಗಳು ಮತ್ತು ಅದು ಕೇವಲ ಮೂರು ದಿನಗಳಲ್ಲಿ ಸಾಧಿಸಿದ ಯಶಸ್ಸಿನ ಬಗ್ಗೆ ವಿಶ್ವಕ್ಕೆ ತನ್ನದೇ ರೀತಿಯಲ್ಲಿ ತಿಳಿಸಿದೆ. ಗಡಿಯಾಚೆಯಿಂದ ಹರಿದು ಬರುವ ಸುಳ್ಳುಗಳಿಂದ ಪ್ರಭಾವಿತರಾಗದೇ ಭಾರತೀಯರು ತಮ್ಮನ್ನು ತಾವು ಕಾಪಾಡಿಕೊಳ್ಳಬೇಕು.
ಲೇಖಕರು: ಮೇಜರ್ ಜನರಲ್ ಹರ್ಷ ಕಕರ್
ಇದನ್ನೂ ಓದಿ: ಆಪರೇಷನ್ ಸಿಂಧೂರ ಕುರಿತು ಪೋಸ್ಟ್; ಅಶೋಕ ಯುನಿವರ್ಸಿಟಿ ಪ್ರೊಫೆಸರ್ ಬಂಧನ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ
ಪಾಕಿಸ್ತಾನ ಪರ ಬೇಹುಗಾರಿಕೆ: ಉತ್ತರ ಪ್ರದೇಶದಲ್ಲಿ ಐಎಸ್‌ಐ ಏಜೆಂಟ್ ಬಂಧನ