ತಾಲಿಬಾನ್ ಮತ್ತು ಭಾರತದ ಬಾಂಧವ್ಯ ವೃದ್ದಿ; ವಾಸ್ತವ ಮತ್ತು ದೇಶದ ಮುಂದಿರುವ ಸವಾಲುಗಳೇನು?
ಭಾರತ ಅಫ್ಘಾನ್ ನಡುವೆ ಸಂಬಂಧ ಸುಧಾರಣೆ ಕಾಣುತ್ತಿದ್ದು, ಇದು ರಾಷ್ಟ್ರೀಯ ಹಿತಾಸಕ್ತಿಗಳಿಗೆ ವಿರುದ್ಧವಾದ ಶಕ್ತಿಗಳು ಅಫ್ಘಾನ್ ಪ್ರದೇಶವನ್ನು ದುರುಪಯೋಗಪಡಿಸಿಕೊಳ್ಳದಂತೆ ಭಾರತ ಖಚಿತಪಡಿಸಿಕೊಳ್ಳಬೇಕಿದೆ.


Published : October 14, 2025 at 1:06 PM IST
ಇತ್ತೀಚಿಗೆ ಅಫ್ಘಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಭಾರತಕ್ಕೆ ಭೇಟಿ ನೀಡಿದ್ದರು. ಭಾರತ ಮತ್ತು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ನಡುವೆ ಬಾಂಧವ್ಯ ವೃದ್ಧಿಯ ಸೂಚನೆಯನ್ನು ಇದು ತೋರಿಸಿದೆ. ಉಭಯ ದೇಶಗಳ ನಡುವಣ ಸಂಬಂಧ ವೃದ್ಧಿ ಪ್ರಕ್ರಿಯೆಯು 2022ರ ಜೂನ್ನಿಂದ ವಿವಿಧ ಮಾರ್ಗಗಳ ಮೂಲಕ ಮುಂದುವರೆದುಕೊಂಡು ಸಾಗುತ್ತಿವೆ.
ಸಂಕ್ಷಿಪ್ತ ಹಿನ್ನೆಲೆ: ತಾಲಿಬಾನ್ ಸರ್ಕಾರವನ್ನು ಅತಿ ಮೂಲಭೂತ ಇಸ್ಲಾಮಿಕ್ ಸಂಘಟನೆ ಎಂದು ಪರಿಗಣಿಸಲಾಗಿದ್ದು, ಇದನ್ನು ವಿಶ್ವಸಂಸ್ಥೆ ನಿಷೇಧಿಸಿದೆ. 1989ರಲ್ಲಿ ಸೋವಿಯತ್ ಒಕ್ಕೂಟವು ಅಫ್ಘಾನಿಸ್ತಾನದಿಂದ ಹಿಂದೆ ಸರಿದ ನಂತರ 1996 ರಲ್ಲಿ ಅಫ್ಘಾನಿಸ್ತಾನದಲ್ಲಿ ನಡೆದ ಅಂತರ್ಯುದ್ಧದ ನಂತರ ಮೊದಲಿಗೆ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬಂದಿತು. 2001ರಲ್ಲಿ ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ಮಿಲಿಟರಿ ಹಸ್ತಕ್ಷೇಪದ ನಂತರ ತಾಲಿಬಾನ್ ಆಡಳಿತವನ್ನು ಅಧಿಕಾರದಿಂದ ಕಿತ್ತು ಹಾಕಲಾಗಿತ್ತು. 9/11ರ ಅಮೆರಿಕದ ವಿಶ್ವ ವಾಣಿಜ್ಯ ಗೋಪುರಗಳು ಮತ್ತು ಪೆಂಟಗನ್ ಮೇಲಿನ ಭಯೋತ್ಪಾದಕ ದಾಳಿಯ ಮಾಸ್ಟರ್‌ಮೈಂಡ್‌ಗಳಿಗೆ ತಾಲಿಬಾನ್ ಆಶ್ರಯ ನೀಡುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಮೆರಿಕ ಈ ಕ್ರಮ ಕೈಗೊಂಡಿತ್ತು.

ತಾಲಿಬಾನ್ ಸರ್ಕಾರ ಕಿತ್ತೊಗೆದಿದ್ದ ಅಮೆರಿಕ: ತಾಲಿಬಾನ್ ಸರ್ಕಾರ ಕಿತ್ತು ಹಾಕಿದ ಬಳಿಕ ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಸರ್ಕಾರವನ್ನು ಸ್ಥಾಪನೆ ಮಾಡಲಾಗಿತ್ತು. ಇದು ಅಂತಾರಾಷ್ಟ್ರೀಯ ಸಮುದಾಯದಿಂದ ಮನ್ನಣೆ ಸಹ ಪಡೆದುಕೊಂಡಿತ್ತು. ಮುಂದಿನ ಎರಡು ದಶಕಗಳ ಕಾಲ ಅಮೆರಿಕವು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರುದ್ಧ ಅನಿರ್ದಿಷ್ಟ ಯುದ್ಧ ಸಾರಿತ್ತು. ಅಂತಿಮವಾಗಿ ಅಮೆರಿಕ ತನ್ನ ಉದ್ದೇಶಕ್ಕಾಗಿ ಅಫ್ಘಾನಿಸ್ತಾನದಿಂದ ಹಿಂದೆ ಸರಿಯಲು ನಿರ್ಧರಿಸಿ, 2020ರಲ್ಲಿ ತಾಲಿಬಾನ್ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಇದರಲ್ಲಿ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳನ್ನು ತಾಲಿಬಾನ್ ಗುರಿಯಾಗಿಸುವುದಿಲ್ಲ ಎಂಬ ಷರತ್ತನ್ನು ಸಹ ಹಾಕಲಾಗಿತ್ತು.

ಇದಾದ ಬಳಿಕ ಅಫ್ಘಾನ್ ರಾಜಕೀಯದಲ್ಲಿ ವಿವಿಧ ಭಾಗಗಳ ಪ್ರತಿನಿಧಿಗಳನ್ನು ಒಳಗೊಂಡ ಗುಂಪಿನ ಸಮಾಲೋಚನೆ ಬಳಿಕ ಒಂದು ಸಮಗ್ರ ಸರ್ಕಾರವು ಅಫ್ಘಾನಿಸ್ತಾನದಲ್ಲಿ ರಚನೆಯಾಗುವ ನಿರೀಕ್ಷೆಯಿತ್ತು. ಆದರೆ, ಅದು ವಿಫಲವಾಯಿತು. 2021ರ ಆಗಸ್ಟ್ 15 ಸಶಸ್ತ್ರ ತಾಲಿಬಾನ್ ಯಾವುದೇ ಗಮನಾರ್ಹ ಪ್ರತಿರೋಧವನ್ನು ಎದುರಿಸದೇ ಕಾಬೂಲ್‌ಗೆ ಕಾಲಿಟ್ಟಿತು.

ಅಫ್ಘಾನ್ ಸರ್ಕಾತ ಪತನದ ಬಳಿಕ ತಾಲಿಬಾನ್ ಎರಡನೇ ಬಾರಿಗೆ ದೇಶದಲ್ಲಿ ತನ್ನ ಹಿಡಿತ ಸಾಧಿಸಿತು. ಅಂದಿನಿಂದ ತಾಲಿಬಾನ್ ದೇಶದ ಸಂಪೂರ್ಣ ನಿಯಂತ್ರಣ ಸಾಧಿಸಿದ್ದು, ಭಯೋತ್ಪಾದಕ ಸಂಘಟನೆ ಐಸಿಸ್ (ಕೆ) ಆಡಳಿತಕ್ಕೆ ಕೆಲವು ಸವಾಲುಗಳನ್ನು ಒಡ್ಡುತ್ತಿದೆ. ಕಳೆದ ನಾಲ್ಕು ವರ್ಷದಲ್ಲಿ ಆರಂಭಿಕ ಹಂತದಲ್ಲಿ ತಾಲಿಬಾನ್ ಸರ್ಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಮಾನ್ಯತೆಯನ್ನು ಪಡೆದುಕೊಂಡಿಲ್ಲ. ರಷ್ಯಾ ಸಹ ರಾಜತಾಂತ್ರಿಕ ಮಾನ್ಯತೆ ನೀಡಿಲಿಲ್ಲ. ಆದರೆ, ಚೀನಾ ಸೇರಿದಂತೆ ಇನ್ನೂ ಅನೇಕ ದೇಶಗಳು ತಾಲಿಬಾನ್‌ನೊಂದಿಗೆ ವಿವಿಧ ಹಂತಗಳಲ್ಲಿ ಸಂಬಂಧಗಳನ್ನು ಇಟ್ಟುಕೊಂಡಿದೆ.

ಅಫ್ಘಾನಿಸ್ತಾನದ ಮರು ನಿರ್ಮಾಣ: ಪ್ರಸ್ತುತ ತಾಲಿಬಾನ್ ಮತ್ತು ಭಾರತ ತಮ್ಮದೇ ಆದ ಕಾರಣದಿಂದ ಸಂಬಂಧಗಳನ್ನು ಇಟ್ಟುಕೊಂಡಿವೆ. ಆರಂಭದಲ್ಲಿ ತಾಲಿಬಾನ್ ಭಾರತವನ್ನು ಸಂಪರ್ಕಿಸುವ ಯತ್ನ ಮಾಡಿತ್ತು. 2001 - 2021ರ ನಡುವೆ ಮಾಡಲಾದ 3 ಬಿಲಿಯನ್ಗಿಂತ ಹೆಚ್ಚಿನ ಹೂಡಿಕೆಗಳಿಗೆ ನಮ್ಮ ದೇಶ ಸುರಕ್ಷಿತ ಎಂದು ಮತ್ತು ಅಪೂರ್ಣ ಯೋಜನೆಗಳನ್ನು ಪೂರ್ಣಗೊಳಿಸಲು ಭಾರತಕ್ಕೆ ಅವಕಾಶ ನೀಡುವ ಮೂಲಕ ಭರವಸೆಯನ್ನು ನೀಡಿ ಭರ್ಜರಿ ಸ್ವಾಗತ ನೀಡಿದೆ.

ಅಫ್ಘಾನಿಸ್ತಾನದ ದೃಷ್ಟಿಕೋನದಿಂದ, ಭಾರತದೊಂದಿಗಿನ ಸಂಬಂಧ ಅಫ್ಘಾನಿಸ್ತಾನದ ಪುನರ್ ನಿರ್ಮಾಣಕ್ಕೆ ಸಹಾಯ ಮಾಡುತ್ತಿದೆ. ಇದಲ್ಲದೇ ಭಾರತದೊಂದಿಗಿನ ಸಂಬಂಧ ಅಂತಾರಾಷ್ಟ್ರೀಯ ಮನ್ನಣೆ ಪಡೆಯುವ ಮೂಲಕ ತಾಲಿಬಾನ್‌ನ ವಿಶಾಲ ಕಾರ್ಯತಂತ್ರದ ಒಂದು ಭಾಗವಾಗಿದೆ.

ಎರಡನೇ ಅವಧಿಯ ತಾಲಿಬಾನ್ ಸರ್ಕಾರದ ಜೊತೆಗೆ ಭಾರತದ ಸಂಬಂಧಗಳು ಬಲಗೊಳ್ಳುತ್ತಿವೆ. ಪ್ರಾಥಮಿಕವಾಗಿ ಇದು ಕಾರ್ಯತಂತ್ರದ ವಾಸ್ತವಿಕತೆ ಮತ್ತು ನೆಲದ ವಾಸ್ತವಗಳ ಆಧಾರದ ಮೇಲೆ ಭದ್ರತಾ ಪರಿಗಣನೆಗಳಿಂದ ಮಾರ್ಗದರ್ಶಿಸಲ್ಪಡುತ್ತದೆ.
ಭಾರತದ ವಿರುದ್ಧ ಅಫ್ಘಾನ್ ನೆಲ ಬಳಕೆ ಆಗದಂತೆ ತಡೆಯುವ ಸವಾಲು: ಭಾರತದ ರಾಷ್ಟ್ರೀಯ ಹಿತಾಸಕ್ತಿಗಳಿಗೆ ವಿರುದ್ಧವಾದ ಶಕ್ತಿಗಳು ಅಫ್ಘಾನ್ ಪ್ರದೇಶವನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂಬುದು ಭಾರತದ ಬಹುಮುಖ್ಯ ಕಾಳಜಿಯಾಗಿದೆ. 2021ರಲ್ಲಿ ಐಎಸ್ಐ, ಪಾಕ್ ಸೇನೆ ಮತ್ತು ತಾಲಿಬಾನ್ ನಡುವಿನ ಸಂಬಂಧದಿಂದಾಗಿ ಪಾಕಿಸ್ತಾನವು ಅಫ್ಘಾನ್ ನೆಲದಲ್ಲಿ ಭಾರತ ವಿರೋಧಿ ಭಯೋತ್ಪಾದಕ ಸಂಘಟನೆಗಳನ್ನು ಸ್ಥಾಪಿಸುವ ಸಾಧ್ಯತೆಗಳಿವೆ. ಜೊತೆಗೆ ಅಫ್ಘಾನಿಸ್ತಾನದಲ್ಲಿ ಚೀನಾ ಪ್ರಭಾವ ಬೀರುವುದನ್ನು ಭಾರತ ಕುಳಿತು ನೋಡಲು ಸಾಧ್ಯವಿಲ್ಲ. ತಾಲಿಬಾನ್ ಜೊತೆ ರಾಯಭಾರಿಗಳನ್ನು ವಿನಿಮಯ ಮಾಡಿಕೊಂಡ ಮೊದಲ ಪ್ರಮುಖ ದೇಶ ಚೀನಾ ಆಗಿದೆ.

ಅಫ್ಘಾನ್ ವಿದೇಶಾಂಗ ಸಚಿವರ ನವದೆಹಲಿಯ ಅಧಿಕೃತ ಭೇಟಿಗೂ ಮುನ್ನ ಹಲವಾರು ಹಂತದ ಮಾತುಕತೆಗಳು ನಡೆದಿವೆ. 2021ರ ಆಗಸ್ಟ್ 31ರಂದು ದೋಹಾದಲ್ಲಿರುವ ಭಾರತೀಯ ರಾಯಭಾರಿ ಮತ್ತು ಅಫ್ಘಾನಿಸ್ತಾನದ ರಾಜಕೀಯ ಕಚೇರಿಯ ಮುಖ್ಯಸ್ಥ ಮೊಹಮ್ಮದ್ ಅಬ್ಬಾಸ್ ಸ್ಟಾನಿಕ್‌ಜೈ ನಡುವಿನ ಸಭೆಯು ಭಾರತ ಮತ್ತು ತಾಲಿಬಾನ್ ನಡುವಿನ ರಾಜತಾಂತ್ರಿಕ ಮಾರ್ಗಗಳನ್ನು ಪುನಾರಂಭಿಸಿತು.
2022ರ ಜೂನ್ನಲ್ಲಿ ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ನೇತೃತ್ವದ ನಿಯೋಗವು ಕಾಬೂಲ್‌ಗೆ ಭೇಟಿ ನೀಡಿದ ನಂತರ ಭಾರತದ ಅಭಿವೃದ್ಧಿ ನೆರವು ಮತ್ತು ಮಾನವೀಯ ನೆರವು ಯೋಜನೆಗಳನ್ನು ಮೇಲ್ವಿಚಾರಣೆ ಮಾಡಲು ಭಾರತೀಯ ರಾಯಭಾರ ಕಚೇರಿಯಲ್ಲಿ ತಾಂತ್ರಿಕ ತಂಡವನ್ನು ನಿಯೋಜಿಸಲಾಯಿತು. ಅಫ್ಘಾನಿಸ್ತಾನದಲ್ಲಿ ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಭಾರತವು ಪ್ರತಿಸ್ಪಂದಿಸಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿತು.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು 2025ರ ಜನವರಿಯ ಆರಂಭದಲ್ಲಿ ದುಬೈನಲ್ಲಿ ಅಫ್ಘಾನಿಸ್ತಾನದ ಹಂಗಾಮಿ ವಿದೇಶಾಂಗ ಸಚಿವ ಮೌಲವಿ ಅಮೀರ್ ಖಾನ್ ಮುತ್ತಕಿ ಅವರನ್ನು ಭೇಟಿ ಮಾಡಿದರು. 2021ರ ಆಗಸ್ಟ್ನಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡ ನಂತರ ಕಾಬೂಲ್ ಆಡಳಿತದೊಂದಿಗೆ ಭಾರತದ ಅತ್ಯುನ್ನತ ಮಟ್ಟದ ಅಧಿಕೃತ ಸಂಪರ್ಕ ಇದಾಗಿದೆ.
ಒತ್ತಡಕ್ಕೆ ಸಿಲುಕಿರುವ ಅಫ್ಘಾನ್ ನೊಂದಿಗಿನ ಪಾಕ್ ಸಂಬಂಧಗಳು: ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಸೌಹಾರ್ದ ಸಂಬಂಧಗಳು 2021ರ ಬಳಿಕ ಹೆಚ್ಚು ಒತ್ತಡಕ್ಕೆ ಸಿಲುಕಿವೆ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಎರಡೂ ದೇಶಗಳ ನಡುವಿನ ಅಂತಾರಾಷ್ಟ್ರೀಯ ಗಡಿಯಾಗಿರುವ ಡ್ಯುರಾಂಡ್ ರೇಖೆಯ ಬಗ್ಗೆ ಭಿನ್ನಾಭಿಪ್ರಾಯವನ್ನು ಮುಂದುವರೆದಿವೆ. ಅಫ್ಘಾನ್ ನಿರಾಶ್ರಿತರನ್ನು ಪಾಕಿಸ್ತಾನ ಬಲವಂತವಾಗಿ ಗಡೀಪಾರು ಮಾಡುವುದು ಮತ್ತೊಂದು ವಿವಾದಾತ್ಮಕ ವಿಷಯವಾಗಿದೆ.
ಪಾಕಿಸ್ತಾನವು ಅಫ್ಘಾನ್ ವಿರೋಧಿ ಭಯೋತ್ಪಾದಕ ಸಂಘಟನೆ ಐಸಿಸ್(ಕೆ) ಗೆ ಆಶ್ರಯ ನೀಡುತ್ತಿದೆ ಎಂದು ಅಫ್ಘಾನಿಸ್ತಾನ ಆರೋಪಿಸಿದೆ. ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದ ಮೇಲೆ ಭಯೋತ್ಪಾದಕ ದಾಳಿಗಳು ಹಲವು ಪಟ್ಟು ಹೆಚ್ಚಾಗಿದ್ದ ಟಿಟಿಪಿ (ಪಾಕಿಸ್ತಾನ) ಗೆ ಆಶ್ರಯ ನೀಡುತ್ತಿದೆ ಎಂದು ಪಾಕಿಸ್ತಾನ ದೂಷಿಸಿದೆ. ಹೆಚ್ಚುತ್ತಿರುವ ಉದ್ವಿಗ್ನತೆಗಳು ಎರಡೂ ದೇಶಗಳ ನಡುವಿನ ಗಂಭೀರ ಗಡಿ ಘರ್ಷಣೆಗಳಲ್ಲಿ ಅಂತ್ಯಗೊಂಡಿವೆ. ಅಫ್ಘಾನ್ - ಪಾಕಿಸ್ತಾನ ಸಂಬಂಧಗಳಲ್ಲಿನ ಕುಸಿತವು ಭಾರತವು ತನ್ನ ಅನುಕೂಲಕರ ತಂತ್ರಗಳನ್ನು ರೂಪಿಸಿಕೊಳ್ಳಲು ಒಂದು ಕಾರ್ಯತಂತ್ರದ ಜಾಗವನ್ನು ಸೃಷ್ಟಿಸಲಿದೆ.
ಭೇಟಿಯ ಪ್ರಮುಖಾಂಶಗಳು: ಅಫ್ಘಾನಿಸ್ತಾನದ ಉನ್ನತ ಮಟ್ಟದ ಭೇಟಿಯು ಭಾರತದ ಎಚ್ಚರಿಕೆಯ ಸಂಬಂಧಗಳ ಆರಂಭಿಕ ನೀತಿಯು ಈಗ ಕಾರ್ಯತಂತ್ರದ ವಾಸ್ತವಿಕ ಹಂತಕ್ಕೆ ಪ್ರವೇಶಿಸಿದೆ. ಈ ಭೇಟಿಯು ಭಾರತ ಮತ್ತು ಅಫ್ಘಾನಿಸ್ತಾನದ ದ್ವಿಪಕ್ಷೀಯ ರಾಜಕೀಯ ವಿನಿಮಯ ಮತ್ತು ಅಫ್ಘಾನಿಸ್ತಾನದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಹಾಯದ ಮೂಲಕ ದ್ವಿಪಕ್ಷೀಯ ಸಂಬಂಧಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಬಯಕೆಯನ್ನು ಸೂಚಿಸುತ್ತದೆ.
ಗಡಿಯಾಚಿಗಿನ ಭಯೋತ್ಪಾದನೆಗೆ ನಮ್ಮ ನೆಲದಲ್ಲಿ ಜಾಗ ಇಲ್ಲ; ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಎರಡೂ ದೇಶಗಳು ತಮ್ಮ ಅಭಿಪ್ರಾಯಗಳ ಪುನರುಚ್ಚರಿಸಿವೆ. ಪಾಕಿಸ್ತಾನವನ್ನು ಹೆಸರಿಸದೇ ಗಡಿ ಭಾಗದ ದೇಶಗಳಿಂದ ಹೊರಹೊಮ್ಮುವ ಎಲ್ಲಾ ಭಯೋತ್ಪಾದನಾ ಕೃತ್ಯಗಳನ್ನು ಎರಡೂ ದೇಶಗಳು ಖಂಡಿಸುವುದಾಗಿ ತಿಳಿಸಿವೆ. ಅಫ್ಘಾನ್ ವಿದೇಶಾಂಗ ಸಚಿವರು ಯಾವುದೇ ಗುಂಪು ಅಥವಾ ವ್ಯಕ್ತಿ ಭಾರತದ ವಿರುದ್ಧ ಅಫ್ಘಾನಿಸ್ತಾನದ ಪ್ರದೇಶವನ್ನು ಬಳಸಲು ಅಫ್ಘಾನಿಸ್ತಾನ ಸರ್ಕಾರ ಅನುಮತಿಸುವುದಿಲ್ಲ ಎಂದು ತಿಳಿಸಿದೆ.
ಪ್ರಸ್ತುತ ಭಾರತ ಅಫ್ಘಾನ್ ಜೊತೆಗೆ ಎರಡು ಸಮಸ್ಯೆಗಳನ್ನು ಹೊಂದಿದೆ. ಮೊದಲನೆಯದು ಅಫ್ಘಾನಿಸ್ತಾನದಲ್ಲಿನ ತಾಲಿಬಾನ್ ಆಡಳಿತಕ್ಕೆ ಸಂಪೂರ್ಣ ರಾಜತಾಂತ್ರಿಕ ಮಾನ್ಯತೆ. ಈ ವಿಷಯದ ಬಗ್ಗೆ ಅಂತಾರಾಷ್ಟ್ರೀಯ ಅಭಿಪ್ರಾಯದೊಂದಿಗೆ ತನ್ನ ನಿರ್ಧಾರವನ್ನು ಸಮನ್ವಯಗೊಳಿಸಲು ಭಾರತವು ಸದ್ಯಕ್ಕೆ ಕಾಯುವ ಸಾಧ್ಯತೆಯಿದೆ.
ಎರಡನೇ ಸವಾಲು ತಾಲಿಬಾನ್ ಪ್ರತಿಗಾಮಿ ನೀತಿ. ವಿಶೇಷವಾಗಿ ಮಹಿಳಾ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳಿಗೆ ಸಂಬಂಧಿಸಿದಂತೆ ಭಾರತವು ತತ್ವಗಳೊಂದಿಗೆ ರಾಜತಾಂತ್ರಿಕತೆಯನ್ನು ಸಮತೋಲನಗೊಳಿಸುವ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ. ಈ ಕಾರಣಕ್ಕಾಗಿ ಇತ್ತೀಚೆಗೆ ಭಾರತವು ಅಫ್ಘಾನಿಸ್ತಾನದಲ್ಲಿ ಎಲ್ಲಾ ಜನಾಂಗೀಯ ಸಮುದಾಯಗಳು ಮತ್ತು ಮಹಿಳೆಯರನ್ನು ಪ್ರತಿನಿಧಿಸುವ ಅಂತರ್ಗತ ಸರ್ಕಾರವನ್ನು ರಚಿಸುವ ಬೇಡಿಕೆಯಲ್ಲಿ ಧ್ವನಿ ಎತ್ತಿಲ್ಲ.
ಸೂಚನೆ: ಈ ಲೇಖನದಲ್ಲಿ ವ್ಯಕ್ತವಾದ ಎಲ್ಲಾ ಅನಿಸಿಕೆ ಅಭಿಪ್ರಾಯಗಳು ಲೇಖಕರಿಗೆ ಸಂಬಂಧಿಸಿದ್ದಾಗಿದ್ದು, ಇದು ಈಟಿವಿ ಭಾರತ್ ಅಭಿಪ್ರಾಯವಾಗಿರುವುದಿಲ್ಲ .
ಇದನ್ನೂ ಓದಿ: ಕಾಬೂಲ್ನಲ್ಲಿ ರಾಯಭಾರ ಕಚೇರಿ ಪುನರ್ಸ್ಥಾಪನೆ: ವಿದೇಶಾಂಗ ಸಚಿವ ಎಸ್.ಜೈಶಂಕರ್
ಇದನ್ನೂ ಓದಿ: ತಾಲಿಬಾನ್ ಸಚಿವರ ಮಾಧ್ಯಮಗೋಷ್ಟಿಗೆ ಮಹಿಳಾ ಪತ್ರಕರ್ತರಿಗೆ ಸಿಗದ ಆಹ್ವಾನ: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಟೀಕೆ

