Super Tasty And Spicy Radish Kachori Recipe: ಅನೇಕ ಜನರಿಗೆ ಮೂಲಂಗಿ ಇಷ್ಟವಾಗುವುದಿಲ್ಲ. ಅವರು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಲು ಇಷ್ಟಪಡುವುದಿಲ್ಲ. ಕಾರಣ ಎಂದರೆ ಅವು ಕಡುವಾಸನೆಯನ್ನು ಹೊಂದಿರುತ್ತವೆ. ಅನೇಕ ಜನರು ಮೂಲಂಗಿಯನ್ನು ತಿನ್ನಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಅವುಗಳನ್ನು ಕರಿ, ಚಟ್ನಿ ಮತ್ತು ಸೂಪ್ ರೂಪದಲ್ಲಿ ಸೇವಿಸುತ್ತಾರೆ.
ಇವುಗಳು ಮಾತ್ರವಲ್ಲದೇ, ಮೂಲಂಗಿಯಿಂದ ಇನ್ನೂ ಅನೇಕ ಭಕ್ಷ್ಯಗಳನ್ನು ತಯಾರಿಸಬಹುದು. ಇದರಲ್ಲೊಂದು ಕಚೋರಿ ರೆಸಿಪಿ ಒಂದಾಗಿದೆ. ಮೂಲಂಗಿಯ ಕಚೋರಿಯು ಕೂಡ ರುಚಿ ಸೂಪರ್ ಆಗಿರುತ್ತದೆ. ಕಚೋರಿಯನ್ನು ಬಹಳ ಕಡಿಮೆ ಸಮಯದಲ್ಲಿ ತಯಾರಿಸಬಹುದು. ನಿಮಗೆ ಮೂಲಂಗಿ ಇಷ್ಟವಾಗದಿದ್ದರೆ ನೀವು ಅವುಗಳನ್ನು ಕಚೋರಿ ರೂಪದಲ್ಲಿ ಮಾಡಿದರೆ ತುಂಬಾ ಇಷ್ಟವಾಗುತ್ತವೆ. ಇದೀಗ ಮೂಲಂಗಿ ಕಚೋರಿಯನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ.

ಮೂಲಂಗಿ ಕಚೋರಿ ಬೇಕಾಗುವ ಪದಾರ್ಥಗಳೇನು?:
- ಅಕ್ಕಿ ಹಿಟ್ಟು - ಒಂದೂವರೆ ಕಪ್
- ಮೂಲಂಗಿ - ಕಾಲು ಕೆಜಿ
- ಅರಿಶಿನ - ಚಿಟಿಕೆ
- ರುಚಿಗೆ ತಕ್ಕಷ್ಟು ಉಪ್ಪು
- ಕೊತ್ತಂಬರಿ ಸೊಪ್ಪು- 1 ಟೀಸ್ಪೂನ್
- ಕಪ್ಪು ಜೀರಿಗೆ - 1 ಟೀಸ್ಪೂನ್
- ಅಜವಾನ - 1 ಟೀಸ್ಪೂನ್
- ಶುಂಠಿ ಪುಡಿ - 1 ಟೀಸ್ಪೂನ್
- ಬೆಳ್ಳುಳ್ಳಿ ಪುಡಿ - 1 ಟೀಸ್ಪೂನ್
- ಖಾರದ ಪುಡಿ - 1 ಟೀಸ್ಪೂನ್
- ತುಪ್ಪ - 1 ಟೀಸ್ಪೂನ್
ಮೂಲಂಗಿ ಕಚೋರಿ ಸಿದ್ಧಪಡಿಸುವ ವಿಧಾನ:

ಮೊದಲಿಗೆ ಮೂಲಂಗಿ ತೊಳೆದು ಸಿಪ್ಪೆ ತೆಗೆದು ನುಣ್ಣಗೆ ತುರಿದುಕೊಳ್ಳಿ. ಒಲೆ ಆನ್ ಮಾಡಿ ಪಾತ್ರೆ ಇಟ್ಟು, ಒಂದು ಕಪ್ ನೀರು ಹಾಕಿ. ನೀರು ಕುದಿಯುತ್ತಿರುವಾಗ, ತುರಿದ ಮೂಲಂಗಿ ಸೇರಿಸಿ ಒಂದೆರಡು ನಿಮಿಷ ಬೇಯಿಸಿ. ನಂತರ ಅಕ್ಕಿ ಹಿಟ್ಟು ಸೇರಿಸಿ ಮತ್ತು ಉಂಡೆಗಳಿಲ್ಲದೇ ಮಿಶ್ರಣ ಮಾಡಿ, ಮುಚ್ಚಿ 2 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಬೇಕಾಗುತ್ತದೆ.
ಹಿಟ್ಟು ನೀರನ್ನು ಹೀರಿಕೊಂಡು ದಪ್ಪ ಪೇಸ್ಟ್ ಆದ ಬಳಿಕ ಒಲೆ ಆಫ್ ಮಾಡಿ. ಅಕ್ಕಿ ಹಿಟ್ಟು ಮಿಶ್ರಣ ಸ್ವಲ್ಪ ಬೆಚ್ಚಗಿದ್ದರೆ ಒಂದು ಟೀಸ್ಪೂನ್ ತುಪ್ಪ, ಕೊತ್ತಂಬರಿ ಪುಡಿ, ಕಪ್ಪು ಜೀರಿಗೆ, ಅಜವಾನ, ಉಪ್ಪು, ಖಾರದ ಪುಡಿ, ಅರಿಶಿನ, ಶುಂಠಿ ಮತ್ತು ಬೆಳ್ಳುಳ್ಳಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಈ ಮಿಶ್ರಣವನ್ನು ಸ್ವಲ್ಪ ಸ್ವಲ್ಪವಾಗಿ ತೆಗೆದುಕೊಂಡು ಸಣ್ಣ ಪೂರಿಯಂತೆ ಕಚೋರಿಯನ್ನು ಮಾಡಿ ಒಂದು ತಟ್ಟೆಗೆ ತೆಗೆದುಕೊಳ್ಳಿ. ಈ ರೀತಿ ಎಲ್ಲಾ ಹಿಟ್ಟನ್ನು ತಯಾರಿಸಿ.
ಒಲೆಯನ್ನು ಆನ್ ಮಾಡಿ, ಕಡಾಯಿ ಹಾಕಿ ಡೀಪ್ ಫ್ರೈ ಮಾಡಲು ಬೇಕಾದಷ್ಟು ಎಣ್ಣೆಯನ್ನು ಸುರಿಯಿರಿ. ಎಣ್ಣೆ ಬಿಸಿಯಾದ ಬಳಿಕ, ಕಚೋರಿಗಳನ್ನು ಹಾಕಿ ಮಧ್ಯಮ ಉರಿಯಲ್ಲಿ ಎರಡೂ ಬದಿಗಳಲ್ಲಿ ಗೋಲ್ಡನ್ ಬ್ರೌನ್ ರವರೆಗೆ ಹುರಿಯಿರಿ.

ಹುರಿದ ನಂತರ, ತಟ್ಟೆಯಲ್ಲಿ ಟಿಶ್ಯೂ ಪೇಪರ್ ಹಾಕಿ, ಅದರ ಮೇಲೆ ಬಿಸಿ ಕಚೋರಿಗಳನ್ನು ತೆಗೆದುಕೊಂಡು ಹಾಕಬೇಕಾಗುತ್ತದೆ. ಕಚೋರಿಯನ್ನು ಟೊಮೆಟೊ- ಬಟಾಣಿ ಕರಿ ಅಥವಾ ಆಲೂಗಡ್ಡೆ ಕರಿಯೊಂದಿಗೆ ತಿನ್ನಲು ಉತ್ತಮವಾಗಿವೆ. ನೀವು ಕಚೋರಿಗಳನ್ನು ರೈತಾ ಮತ್ತು ಸಾಸ್‌ಗಳೊಂದಿಗೆ ಸಹ ಸೇವಿಸಬಹುದು.

ಮೂಲಂಗಿ ಕಚೋರಿಗಾಗಿ ಟಿಪ್ಸ್ :
- ಈ ಕಚೋರಿಗಳನ್ನು ತಯಾರಿಸಲು ಬಿಳಿಯಾಗಿರುವ ಮೂಲಂಗಿ ಒಳ್ಳೆಯದು.
- ಅಕ್ಕಿ ಹಿಟ್ಟನ್ನು ನೀರಿನಲ್ಲಿ ಪೇಸ್ಟ್ ಆಗುವವರೆಗೆ ಬೇಯಿಸಿ ಹಾಗೂ ಒಲೆ ಆಫ್ ಮಾಡಿ.
- ಇವುಗಳನ್ನು ಸಣ್ಣ ಕಚೋರಿಗಳಾಗಿ ಮಾಡಲು ನಿಮಗೆ ಕಷ್ಟವಾಗಿದ್ದರೆ, ಸ್ವಲ್ಪ ದೊಡ್ಡ ಗಾತ್ರದ ಹಿಟ್ಟಿನ ಉಂಡೆ ತೆಗೆದುಕೊಂಡು ಅದನ್ನು ದಪ್ಪ ಚಪಾತಿಯ ರೀತಿ ತೀಡಿಕೊಳ್ಳಿ ಮತ್ತು ಸಣ್ಣ ಬೌಲ್ನಿಂದ ರೌಂಡ್ ಆಗಿ ಕತ್ತರಿಸಿ.
- ಎಣ್ಣೆ ಬಿಸಿಯಾದ ನಂತರ ಅದರೊಳಗೆ ಕಚೋರಿಗಳನ್ನು ಹಾಕಿ ಮತ್ತು ಮಧ್ಯಮ ಉರಿಯಲ್ಲಿ ಎರಡೂ ಬದಿಗಳಲ್ಲಿ ಹೊಂಬಣ್ಣ ಬರುವವರೆಗೆ ಕರಿಯಬೇಕಾಗುತ್ತದೆ.
ಇದನ್ನೂ ಓದಿ: ಹೋಟೆಲ್ ಸ್ಟೈಲ್ನಲ್ಲಿ ತುಂಬಾ ರುಚಿಯಾದ ಕೊಬ್ಬರಿ ಚಟ್ನಿ ಮಾಡೋದು ಹೇಗೆ?: ಉಪಹಾರಕ್ಕೆ ಒಳ್ಳೆಯ ಕಾಂಬಿನೇಷನ್ ಇದು!