How To Make Pudina Juice At Home: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಬೇಸಿಗೆ ಬಿಸಿಲು ಹೆಚ್ಚಾಗಿದೆ. ಬಿಸಿಲ ಝಳದಿಂದ ತಪ್ಪಿಸಿಕೊಳ್ಳಲು ಜನ ತಂಪು ಪಾನೀಯಗಳತ್ತ ಮುಖ ಮಾಡುತ್ತಿದ್ದಾರೆ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಇಷ್ಟಪಟ್ಟು ಕುಡಿಯಬಹುದಾದ ತಂಪು ಪಾನೀಯ ರೆಸಿಪಿಯನ್ನು ಇಂದು ನಾವು ನಿಮಗಾಗಿ ತಂದಿದ್ದೇವೆ.
ದೇಹವನ್ನು ತಂಪಾಗಿಸಲು ಪುದೀನಾ ಜ್ಯೂಸ್ ತುಂಬಾ ಉಪಯುಕ್ತ. ದೇಹಕ್ಕೂ ತಂಪು, ಮನಸ್ಸಿಗೂ ಸಮಾಧಾನ ದೊರೆಯುುತ್ತದೆ. ಈ ಜ್ಯೂಸ್ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆರೋಗ್ಯಕರ ಪಾನೀಯ ಪುದೀನಾ ಜ್ಯೂಸ್ ಅನ್ನು ಯಾವುದೇ ಸಮಯದಲ್ಲಿ ತ್ವರಿತವಾಗಿ ತಯಾರಿಸಬಹುದು. ನಿಂಬೆ ರಸ ಮತ್ತು ಕಾಳುಮೆಣಸು, ಜೀರಿಗೆ ಇಲ್ಲವೇ ಜೀರಾ ಪುಡಿ ಮತ್ತು ಒಣಮಾವಿನ ಪುಡಿಯಂತಹ ಮಸಾಲೆಗಳನ್ನು ಒಳಗೊಂಡಿರುತ್ತದೆ. ಮನೆಯಲ್ಲಿ ಪುದೀನಾ ಜ್ಯೂಸ್ ಮಾಡುವುದು ಹೇಗೆ ಎಂಬುದನ್ನು ನೋಡೋಣ.

ಎರಡು ಗ್ಲಾಸ್ ಪುದೀನಾ ಜ್ಯೂಸ್ಗೆ ಪದಾರ್ಥಗಳೇನು?:
- ಪುದೀನಾ ಎಲೆಗಳು - ಒಂದು ಹಿಡಿಯಷ್ಟು
- ನಿಂಬೆ ಹಣ್ಣು - 1
- ಸಕ್ಕರೆ - 3 ಟೀಸ್ಪೂನ್
- ಜೀರಿಗೆ ಇಲ್ಲವೆ ಪುಡಿ - ಕಾಲು ಟೀಸ್ಪೂನ್
- ಕಾಳುಮೆಣಸಿನ ಪುಡಿ - 1/4 ಟೀಸ್ಪೂನ್
- ಐಸ್ಕ್ಯೂಬ್ - 3 ರಿಂದ 4
- ಒಣ ಮಾವಿನ ಪುಡಿ ಅಥವಾ ಆಮ್ಚೂರ್ ಪುಡಿ - 2 ಚಿಟಿಕೆ
- ಉಪ್ಪು- ಅಗತ್ಯಕ್ಕೆ ತಕ್ಕಷ್ಟು
- ಎರಡು ಗ್ಲಾಸ್- ನೀರು
ಪುದೀನಾ ಜ್ಯೂಸ್ ಮಾಡುವ ವಿಧಾನ ಹೇಗೆ?:

- ಮೊದಲು ಒಂದು ಹಿಡಿ ಪುದೀನಾ ಎಲೆಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕಾಗುತ್ತದೆ. ನಂತರ ಮಿಕ್ಸರ್ನಲ್ಲಿ ಹಾಕಿ, ಅದಕ್ಕೆ ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ ರುಬ್ಬಿಕೊಳ್ಳಿ.
- ನೀವು ಬಯಸಿದ ಹಾಗೆ ಪುದೀನಾ ರಸ ಪಡೆಯಲು ಜರಡಿಯಿಂದ ಸೋಸಿಕೊಳ್ಳಿ. ಉಳಿದ ಪುದೀನಾ ಎಲೆಗಳನ್ನು ಮತ್ತೊಮ್ಮೆ ರುಬ್ಬಿಕೊಳ್ಳಿ. ಪುದೀನಾ ಎಲೆಗಳ ರಸವನ್ನು ಸೋಸಿದ ನಂತರ ಪಾತ್ರೆಯಲ್ಲಿ ತೆಗೆದುಕೊಂಡು ಪಕ್ಕದಲ್ಲಿಡಬೇಕಾಗುತ್ತದೆ.
- ಪುದೀನಾ ರಸವನ್ನು ತೆಗೆದಿಟ್ಟಿರುವ ಪಾತ್ರೆಯೊಳಗೆ ಎರಡು ಗ್ಲಾಸ್ ನೀರು ಸೇರಿಸಬೇಕಾಗುತ್ತದೆ. ಬಳಿಕ ಅದರೊಳಗೆ ಒಂದು ನಿಂಬೆ ಹಣ್ಣನ್ನು ಹಿಂಡಿಕೊಳ್ಳಬೇಕಾಗುತ್ತದೆ.
- ತದನಂತರ ಅದರೊಳಗೆ ಅರ್ಧ ಕಪ್ ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕಾಗುತ್ತದೆ.
- ಇದೇ ಪುದೀನಾ ರಸಕ್ಕೆ ಜೀರಿಗೆ ಇಲ್ಲವೇ ಪುಡಿ, ಕಾಳುಮೆಣಸಿನ ಪುಡಿ ಹಾಗೂ ಒಣ ಮಾವಿನ ಪುಡಿ ಅಥವಾ ಆಮ್ಚೂರ್ ಪುಡಿ ಹಾಗೂ ಉಪ್ಪು ಸೇರಿಸಿ.
- ಪುದೀನಾ ರಸಕ್ಕೆ ಎಲ್ಲಾ ಪದಾರ್ಥಗಳನ್ನು ಸೇರಿಸಿದ ಬಳಿಕ ಒಂದು ಚಮಚದಿಂದ ಚೆನ್ನಾಗಿ ಮಿಶ್ರಣ ಮಾಡಿ.
- ಈ ಜ್ಯೂಸ್ ಮಿಶ್ರಣವನ್ನು ರೆಫ್ರಿಜರೇಟರ್‌ನಲ್ಲಿ ಒಂದು ಗಂಟೆ ಇಡಬಹುದು ಇಲ್ಲವೇ ಬೇಗನೆ ಸೇವಿಸಬೇಕು ಅನಿಸಿದರೆ, ಅದರೊಳಗೆ 3ರಿಂದ 4 ಐಸ್ಕ್ಯೂಬ್ ಸೇವಿಸಿ ಚೆನ್ನಾಗಿ ಮಿಶ್ರ ಮಾಡಬೇಕು.
- ಜ್ಯೂಸ್ನ ಒಮ್ಮೆ ರುಚಿ ಚೆಕ್ ಮಾಡಿ, ಸಕ್ಕರೆ ಕಡಿಮೆಯಾಗಿದ್ದರೆ ಮತ್ತಷ್ಟು ಸೇರಿಸಿಕೊಳ್ಳಿ. 5 ನಿಮಿಷಗಳ ನಂತರದ ತಂಪಾದ ಜ್ಯೂಸ್ ಸೇವಿಸಿದರೆ ಸೂಪರ್ ಟೇಸ್ಟಿಯಾಗಿರುತ್ತದೆ. ಇದೀಗ ಪುದೀನಾ ಜ್ಯೂಸ್ ಕುಡಿಯಲು ಸಿದ್ಧ.
- ಹಸಿರುಮಯ ಪುದೀನಾ ಜ್ಯೂಸ್ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಇಷ್ಟವಾಗುತ್ತದೆ. ನಿಮಗೆ ಈ ಬೇಸಿಗೆಯ ಪಾನೀಯ ಇಷ್ಟವಾದರೆ ಪ್ರಯತ್ನಿಸಿ ನೋಡಿ.
ಪುದೀನಾ ಜ್ಯೂಸ್ನ ಲಾಭಗಳೇನು?:

- ಪುದೀನಾ ಜ್ಯೂಸ್ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳು ಲಭಿಸುತ್ತವೆ. ನಿಂಬೆ ರಸದೊಂದಿಗೆ ಪುದೀನಾ ರಸವನ್ನು ಮಿಶ್ರಣ ಮಾಡಿ ಸೇವಿಸುವುದು ಹಸಿವು ಹೆಚ್ಚಾಗುತ್ತದೆ.
- ಪುದೀನಾ ಆಮ್ಲೀಯತೆ, ಅಜೀರ್ಣ, ವಾಂತಿ ನಿಯಂತ್ರಿಸಲು ಸಹಾಯ ಮಾಡುತ್ತದೆ.
- ಸಾಂದ್ರೀಕೃತ ಪುದೀನಾ ರಸವು ಚರ್ಮದ ಮೇಲೆ ಅನ್ವಯಿಸಿದಾಗ, ಕಪ್ಪು ಚುಕ್ಕೆಗಳು ಹಾಗೂ ಮೊಡವೆಗಳನ್ನು ನಿಯಂತ್ರಿಸುತ್ತದೆ. ಮೊಡವೆ, ತುರಿಕೆ ಕಡಿಮೆ ಮಾಡುತ್ತದೆ ಎಂದು ಆಯುರ್ವೇದ ತಜ್ಞರು ತಿಳಿಸುತ್ತಾರೆ.
- ಪುದೀನಾ ಎಲೆಗಳನ್ನು ಅರೆದು ಚರ್ಮದ ಮೇಲೆ ಅನ್ವಯಿಸುವುದರಿಂದ ಚರ್ಮದ ಶುಷ್ಕತೆ ಕಡಿಮೆ ಮಾಡುತ್ತದೆ. ತ್ವಚೆಯನ್ನು ಯೌವನಗೊಳಿಸುತ್ತದೆ.
- ಬೇಸಿಗೆಯಲ್ಲಿ ಪುದೀನಾ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕರ ತ್ವಚೆಯ ಜೊತೆಗೆ ಬೇಸಿಗೆಯ ಶಾಖ ಕಡಿಮೆ ಮಾಡುತ್ತದೆ.
- ಪುದೀನಾ ಜ್ಯೂಸ್ ಮೌತ್ ಫ್ರೆಶ್ನರ್ ಆಗಿ ಕೆಲಸ ಮಾಡುತ್ತದೆ. ಹಲ್ಲಿನ ಆರೋಗ್ಯ ಕಾಪಾಡುತ್ತದೆ, ನಾಲಿಗೆಯ ರುಚಿ ಪ್ರಜ್ಞೆಯನ್ನು ಸುಧಾರಿಸುತ್ತದೆ.
- ಅರೋಮಾಥೆರಪಿಯಲ್ಲಿ ತಲೆನೋವು, ವಾಕರಿಕೆ ನಿವಾರಿಸುವಲ್ಲಿ ಪುದೀನಾದ ಹೆಚ್ಚಿನ ಪರಿಮಳ ಬಳಸಲಾಗುತ್ತದೆ.
- ಪುದೀನಾ ಜ್ಯೂಸ್ನಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ರಂಜಕ, ಕಬ್ಬಿಣ ಮತ್ತು ವಿಟಮಿನ್‌ಗಳು ಸಮೃದ್ಧವಾಗಿದೆ. ಪ್ರಮುಖವಾಗಿ ವಿಟಮಿನ್ ಎ, ವಿಟಮಿನ್ ಸಿ ಇದರಲ್ಲಿ ಇದೆ.