How to Make Mango holige: ಬೇಸಿಗೆ ಬಂತು ಎಂದರೆ ನಮಗೆಲ್ಲರಿಗೂ ಮೊದಲು ನೆನಪಿಗೆ ಬರುವುದು ಮಾವಿನ ಹಣ್ಣುಗಳು. ಈ ಋತುಮಾನದ ಹಣ್ಣಿಗಾಗಿ ವರ್ಷಪೂರ್ತಿ ಕಾಯುವ ಅಭಿಮಾನಿಗಳಿಗೇನೂ ಕೊರತೆಯಿಲ್ಲ. ಬೇಸಿಗೆಯಲ್ಲಿ ಹೆಚ್ಚು ಲಭ್ಯವಿರುವ ಈ ಸಿಹಿ ಹಣ್ಣನ್ನು ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನವಾಗಿ ರುಚಿ ನೋಡುತ್ತಾನೆ. ಹೆಚ್ಚಿನ ಜನರು ಇದನ್ನು ನೇರವಾಗಿ ತಿನ್ನುತ್ತಾರೆ. ಮತ್ತೆ ಕೆಲವು ಜನರು ಮ್ಯಾಂಗೋ ಜ್ಯೂಸ್ ಮಾಡಿ ಕುಡಿಯುತ್ತಾರೆ.
ಇನ್ನು ಕೆಲವರು ಮಾವಿನ ಹಣ್ಣಿನಿಂದ ವಿವಿಧ ರೆಸಿಪಿಗಳನ್ನು ಮಾಡಿ ಸೇವನೆ ಮಾಡುತ್ತಾರೆ. ಅಂತಹವರಿಗಾಗಿಯೇ ನಾವು ಅದ್ಭುತವಾದ ಸ್ವೀಟ್ ರೆಸಿಪಿ ತಂದಿದ್ದೇವೆ. ಹೌದು, ತುಂಬಾ ರುಚಿಕರವಾದ ಮಾವಿನ ಹಣ್ಣಿನ ಹೋಳಿಗೆ. ಮಾವಿನ ಹಣ್ಣು ತಿನ್ನಲು ಇಷ್ಟಪಡದವರಿಗೆ ಈ ಹೋಳಿಗೆ ಮಾಡಿಕೊಟ್ಟರೆ ತುಂಬಾ ಇಷ್ಟಪಟ್ಟು ಸೇವಿಸುತ್ತಾರೆ.
ಯಾರಾದರೂ ಅತಿಥಿಗಳು ಮನೆಗೆ ಬಂದಾಗ ಈ ಹೋಳಿಗೆ ತಯಾರಿಸಿದಾಗ ಅವರು ತುಂಬಾ ಸಂತೋಷದಿಂದ ಸೇವನೆ ಮಾಡುತ್ತಾರೆ. ಈ ಸಿಹಿ ರೆಸಿಪಿಯನ್ನು ಬಹಳ ಸುಲಭವಾಗಿ ಮಾಡಬಹುದು. ಇವುಗಳನ್ನು ನೀವು ಫ್ರಿಡ್ಜ್ನಲ್ಲಿ ಇಟ್ಟರೆ, ಕನಿಷ್ಠ ಒಂದು ವಾರದಿಂದ ಹತ್ತು ದಿನಗಳವರೆಗೆ ತಾಜಾ ಆಗಿರುತ್ತವೆ. ಇದೀಗ ಸೂಪರ್ ಸಾಫ್ಟ್ ಆಗಿರುವ ಹಾಗೂ ತುಂಬಾ ರುಚಿಕರವಾದ ಮಾವಿನ ಹಣ್ಣಿನ ಹೋಳಿಗೆ ಸಿದ್ಧಪಡಿಸುವುದು ಹೇಗೆ ಎಂಬುದನ್ನು ತಿಳಿಯೋಣ.

ಮ್ಯಾಂಗೋ ಹೋಳಿಗೆಗೆ ಬೇಕಾಗುವ ಪದಾರ್ಥಗಳೇನು?:
- ಗೋಧಿ ಹಿಟ್ಟು ಅಥವಾ ಮೈದಾ - ಒಂದು ಕಪ್
- ಉಪ್ಪು - ಸ್ವಲ್ಪ
- ಮಾವಿನ ಹಣ್ಣು - ಒಂದು
- ತುಪ್ಪ - ಒಂದು ಟೀಸ್ಪೂನ್
- ನುಣ್ಣಗೆ ತುರಿದ ತೆಂಗಿನಕಾಯಿ - ಕಾಲು ಕಪ್
- ಬೆಲ್ಲ - ಅಗತ್ಯಕ್ಕೆ ತಕ್ಕಷ್ಟು
- ಏಲಕ್ಕಿ ಪುಡಿ - 1 ಟೀಸ್ಪೂನ್

ಮ್ಯಾಂಗೋ ಹೋಳಿಗೆ ತಯಾರಿಸುವ ವಿಧಾನ:
- ಮೊದಲು ಈ ರೆಸಿಪಿಗಾಗಿ ಒಂದು ತಟ್ಟೆಯಲ್ಲಿ ಗೋಧಿ ಹಿಟ್ಟು ಅಥವಾ ಮೈದಾ ತೆಗೆದುಕೊಂಡು, ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ. ಸ್ವಲ್ಪ ಸ್ವಲ್ಪವೇ ಉಗುರು ಬೆಚ್ಚಗಿನ ನೀರನ್ನು ಸೇರಿಸಿ ಹಿಟ್ಟನ್ನು ನಯವಾದ ಚಪಾತಿ ಹಿಟ್ಟಿನಂತೆ ನಾದಿಕೊಳ್ಳಬೇಕಾಗುತ್ತದೆ. ಬಳಿಕ ಅದರ ಮೇಲೆ ಮುಚ್ಚಳವನ್ನು ಮುಚ್ಚಿ ಸ್ವಲ್ಪ ಹೊತ್ತು ಪಕ್ಕಕ್ಕೆ ಇಡಿ.
- ಈಗ ಒಂದು ತಾಜಾ ಮಾವಿನ ಹಣ್ಣನ್ನು ತೊಳೆದು ಅದರಿಂದ ಸಿಪ್ಪೆ ಮತ್ತು ಗೊರಟು ಅಥವಾ ಗೊಪ್ಪೆ ತೆಗೆದು, ಸಣ್ಣ ತುಂಡುಗಳಾಗಿ ಕತ್ತರಿಸಿ. ನಂತರ ಅವುಗಳನ್ನು ಮಿಕ್ಸರ್ ಜಾರಿನಲ್ಲಿ ಹಾಕಿ ನಯವಾದ ಜ್ಯೂಸ್ ಮಾಡಿಕೊಳ್ಳಿ. ನಂತರ ಅದನ್ನು ಒಂದು ಸಣ್ಣ ಬಟ್ಟಲಿನಲ್ಲಿ ತೆಗೆದುಕೊಂಡು ಪಕ್ಕಕ್ಕೆ ಇಡಿ.
- ಬಳಿಕ ಒಲೆಯ ಮೇಲೆ ಒಂದು ಪ್ಯಾನ್ ಇಟ್ಟು ತುಪ್ಪ ಸೇರಿಸಿ. ಅದು ಕರಗಿ ಬಿಸಿಯಾದ ನಂತರ, ನುಣ್ಣಗೆ ತುರಿದ ಕೊಬ್ಬರಿ ಸೇರಿಸಿ ಮತ್ತು ಉತ್ತಮ ಪರಿಮಳ ಬರುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ.
- ತುರಿದ ಕೊಬ್ಬರಿಯನ್ನು ಚೆನ್ನಾಗಿ ಹುರಿದು ಒಣಗಿದ ಬಳಿಕ, ಅದಕ್ಕೆ ಬೆಲ್ಲ ಮತ್ತು ಮೊದಲೇ ರುಬ್ಬಿದ ಮಾವಿನ ಜ್ಯೂಸ್ ಅನ್ನು ಸೇರಿಸಿ ಮತ್ತು ಎಲ್ಲವೂ ಸೇರಿಕೊಳ್ಳುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ. ಮಾವಿನ ಸಿಹಿಗೆ ಅನುಗುಣವಾಗಿ ಬೆಲ್ಲದ ಪ್ರಮಾಣವನ್ನು ತೆಗೆದುಕೊಳ್ಳಬೇಕು.
- ಬಳಿಕ, ಒಲೆಯನ್ನು ಮಧ್ಯಮ ಉರಿಯಲ್ಲಿ ಇಡಿ. ಮಾವಿನ ರಸವು ಸಂಪೂರ್ಣವಾಗಿ ಕರಗುವವರೆಗೆ, ಅಂದರೆ, ಹಲ್ವಾದಂತೆ ಆಗುವವರೆಗೆ ಬೆರೆಸುತ್ತಾ ಬೇಯಿಸಬೇಕಾಗುತ್ತದೆ.
- ಅಂತಿಮವಾಗಿ ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಮತ್ತೆ ಒಂದೆರಡು ನಿಮಿಷಗಳ ಬಳಿಕ ಒಲೆ ಆಫ್ ಮಾಡಿ ಹಾಗೂ ಮಿಶ್ರಣವು ಸಂಪೂರ್ಣವಾಗಿ ತಣ್ಣಗಾಗಲು ಬಿಡಬೇಕಾಗುತ್ತದೆ.

- ಮಾವಿನ ಮಿಶ್ರಣ ತಣ್ಣಗಾದ ನಂತರ ಸ್ವಲ್ಪ ಸ್ವಲ್ಪ ತೆಗೆದುಕೊಂಡು ಸಣ್ಣ ಉಂಡೆಗಳಾಗಿ ಮಾಡಿ ಪಕ್ಕಕ್ಕೆ ಇರಿಸಿ. ಈ ಹಿಂದೆ ಬೆರೆಸಿದ ಹಿಟ್ಟಿನ ಮಿಶ್ರಣವನ್ನು ಮತ್ತೊಮ್ಮೆ ಚೆನ್ನಾಗಿ ಮಿಶ್ರಣ ಮಾಡಿ.
- ಬಳಿಕ ಸಣ್ಣ ಉಂಡೆಗಳನ್ನು ಮಾಡಿ. ನಂತರ ಚಪಾತಿ ಮಣೆಯ ಮೇಲೆ ಸ್ವಲ್ಪ ಒಣ ಹಿಟ್ಟು ಸಿಂಪಡಿಸಿ, ಅದರ ಮೇಲೆ ಸ್ವಲ್ಪ ಹಿಟ್ಟು ಉಂಡೆಯನ್ನು ಇಟ್ಟು ಸಣ್ಣ ಚಪಾತಿಯಂತೆ ಮಾಡಿಕೊಳ್ಳಿ.
- ಚಪಾತಿಯ ಮಧ್ಯದಲ್ಲಿ ಈ ಹಿಂದೆ ತಯಾರಿಸಿದ ಮಾವಿನ ಮಿಶ್ರಣದ ಉಂಡೆಯನ್ನು ಇಟ್ಟು, ತುದಿಗಳನ್ನು ಮಡಿಸಿ ಮತ್ತು ಹೆಚ್ಚುವರಿ ಹಿಟ್ಟನ್ನು ತೆಗೆದುಹಾಕಿ.

- ನಂತರ ಚಪಾತಿ ಮಣೆ ಮೇಲೆ ಸ್ವಲ್ಪ ಒಣ ಹಿಟ್ಟನ್ನು ಸಿಂಪಡಿಸಿ ಹಾಗೂ ನಿಧಾನವಾಗಿ ಲತ್ತುಗುಣಿಯಿಂದ ಸಾಧ್ಯವಾದಷ್ಟು ತೆಳುವಾದ ಚಪಾತಿಯಂತೆ ಮಾಡಿ.
- ಚಪಾತಿಯ ಒಳಗಿರುವ ಮಾವಿನ ಮಿಶ್ರಣ ಲಟ್ಟಿಸಿಕೊಳ್ಳುವಾಗ ಎಚ್ಚರಿಕೆವಹಿಸಬೇಕಾಗುತ್ತದೆ. ಹೂರಣವು ಹೊರಗೆ ಬರದಂತೆ ನೋಡಿಕೊಳ್ಳಬೇಕಾಗುತ್ತದೆ. ಎಲ್ಲಾ ಹೋಳಿಗೆಯನ್ನು ಇದೇ ರೀತಿ ಮಾಡಬೇಕಾಗುತ್ತದೆ.
- ನಂತರ ಪ್ಯಾನ್ ಅನ್ನು ಒಲೆಯ ಮೇಲೆ ಇಟ್ಟು ಬಿಸಿ ಮಾಡಿ. ಪ್ಯಾನ್ ಬಿಸಿಯಾದ ನಂತರ ಸ್ವಲ್ಪ ತುಪ್ಪ ಸೇರಿಸಿ, ಮೊದಲೇ ತಯಾರಿಸಿದ ಹೋಳಿಗೆಗಳನ್ನು ಒಂದೊಂದಾಗಿ ಬೇಯಿಸಬೇಕಾಗುತ್ತದೆ. ಎರಡೂ ಬದಿಗಳಲ್ಲಿ ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಿಸಿ. ಇದೀಗ ಸೂಪರ್ ಸಾಫ್ಟ್ ಆದ ರುಚಿಕರವಾದ ಮಾವಿನ ಹಣ್ಣಿನ ಹೋಳಿಗೆ ಸವಿಯಲು ಸಿದ್ಧವಾಗಿದೆ.
