Mangalorean Special Chicken Sukka Recipe: ಮಾಂಸ ಪ್ರಿಯರಿಗೆ ಚಿಕನ್ ಖಾದ್ಯಗಳೆಂದರೆ ಅಚ್ಚುಮೆಚ್ಚು. ಚಿಕನ್‌ನಿಂದ ಸಿದ್ಧಪಡಿಸಿದ ಎಲ್ಲ ಅಡುಗೆಗಳು ಅವರು ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ. ಚಿಕನ್‌ನಿಂದ ವಿವಿಧ ಪ್ರಕಾರದ ರೆಸಿಪಿಗಳನ್ನು ತಯಾರಿಸಬಹುದು. ಚಿಕನ್ ಗ್ರೇವಿ, ಚಿಕನ್ ಡ್ರೈ, ಚಿಕನ್ ಮಸಾಲಾ, ಚಿಲ್ಲಿ ಚಿಕನ್ ಹೀಗೆ ಹಲವು ಬಗೆಯ ಅಡುಗೆಗಳು ಬಹುತೇಕ ಮಾಂಸ ಪ್ರಿಯರಿಗೆ ಹಿಡಿಸುತ್ತವೆ. ಚಿಕನ್ ಅಡುಗೆ ಅಂದ್ರೆ ಸಾಕು ಬಾಯಿಯಲ್ಲಿ ನೀರು ತರಿಸುತ್ತದೆ.
ಹೋಟೆಲ್‌ನ ಮೆನ್ಯೂವಿನಲ್ಲಿ ನೀವು ಯಾವತ್ತು ಕೇಳಿರದ ಚಿಕನ್ ರೆಸಿಪಿಯನ್ನು ನಾವು ಇಂದು ತಂದಿದ್ದೇವೆ. ಅದುವೇ ಭರ್ಜರಿ ರುಚಿಯ ಮಂಗಳೂರು ಶೈಲಿಯ ಚಿಕನ್ ಸುಕ್ಕ. ಘಮಘಮಿಸುವ ಮಸಾಲೆಯಿಂದ ಈ ಅಡುಗೆಯ ರುಚಿ ಮತ್ತಷ್ಟು ದುಪ್ಪಟ್ಟು ಆಗುತ್ತದೆ. ನೀರ್ದೋಸೆ ಜೊತೆಗೆ ಈ ಮಂಗಳೂರು ಶೈಲಿಯ ಚಿಕನ್ ಸುಕ್ಕ ಅತ್ಯುತ್ತಮ ಕಾಂಬಿನೇಷನ್ ಆಗಿರುತ್ತದೆ. ಮಂಗಳೂರು ಸ್ಟೈಲ್ನ ಚಿಕನ್ ಸುಕ್ಕ ತಯಾರಿಸುವುದು ಹೇಗೆ? ಇದಕ್ಕೆ ಬೇಕಾಗುವ ಪದಾರ್ಥಗಳೇನು ಎಂಬುದನ್ನು ತಿಳಿಯೋಣ.

ಚಿಕನ್ ಸುಕ್ಕ ತಯಾರಿಸಲು ಬೇಕಾಗುವ ಪದಾರ್ಥಗಳೇನು?:
- ಕೋಳಿ ಮಾಂಸ - 1 ಕೆಜಿ (ಪೀಸ್ಗಳು ಮಧ್ಯಮ ಗಾತ್ರದಲ್ಲಿ ಇರಲಿ)
- ಒಣ ಮೆಣಸಿನಕಾಯಿ - 6 ರಿಂದ 8
- ಧನಿಯಾ ಬೀಜ - 4 ಟೀಸ್ಪೂನ್
- ಜೀರಿಗೆ - 1 ಟೀಸ್ಪೂನ್
- ಸಣ್ಣಗೆ ಕತ್ತರಿಸಿದ ಈರುಳ್ಳಿ - 2
- ಬೆಳ್ಳುಳ್ಳಿ ಎಸಳು - 6
- ಹೆಚ್ಚಿದ ಟೊಮೆಟೊ (ಮಧ್ಯಮ ಗಾತ್ರ) - 2
- ಹುಣಸೆ ರಸ - ಸ್ವಲ್ಪ
- ಶುಂಠಿ, ಬೆಳ್ಳುಳ್ಳಿ ಪೇಸ್ಟ್ - 4 ಟೀಸ್ಪೂನ್
- ಅರಿಶಿಣ - 2 ಟೀಸ್ಪೂನ್
- ತೆಂಗಿನ ತುರಿ - 3 ಬೌಲ್
- ಸಾಸಿವೆ - ಅರ್ಧ ಟೀಸ್ಪೂನ್
- ಕರಿಬೇವು ಸೊಪ್ಪು
- ಉಪ್ಪು- ರುಚಿಗೆ ತಕ್ಕಂತೆ
- ಎಣ್ಣೆ- ಅಗತ್ಯಕ್ಕೆ ಬೇಕಾದಷ್ಟು

ಚಿಕನ್ ಸುಕ್ಕ ಸಿದ್ಧಪಡಿಸುವ ವಿಧಾನ:
- ಮೊದಲು ಒಂದು ಬಾಣಲೆ ತೆಗೆದುಕೊಂಡು ಸ್ವಲ್ಪ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಒಣ ಮೆಣಸಿನಕಾಯಿ ಸ್ವಲ್ಪ ಹುರಿದು ತೆಗೆದುಕೊಂಡು ಪಕ್ಕದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಅದೇ ಬಾಣಲೆಯಲ್ಲಿ ಧನಿಯಾ ಬೀಜ, ಜೀರಿಗೆ ಹಾಕಿ ಹುರಿದು ಪಕ್ಕಕ್ಕೆ ಇಡಿ.
- ಸ್ವಲ್ಪ ಎಣ್ಣೆ ಹಾಕಿ, ಬಿಸಿಯಾದ ನಂತರ, ಸಣ್ಣಗೆ ಕತ್ತರಿಸಿದ ಈರುಳ್ಳಿ, ಬೆಳ್ಳುಳ್ಳಿ, ಟೊಮೆಟೊ ಹಾಕಿ ಹುರಿದುಕೊಳ್ಳಿ. ಎಲ್ಲ ಪದಾರ್ಥಗಳು ತಣ್ಣಗಾದ ಮೇಲೆ ಮಿಕ್ಸರ್ ಜಾರ್ನಲ್ಲಿ ಹಾಕಿ. ಮತ್ತು ಅದರೊಳಗೆ ಹುಣಸೆ ರಸ, ಅರಿಶಿಣ ಹಾಕಿ ಸ್ವಲ್ಪ ಸ್ವಲ್ಪವೇ ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
- ಬಳಿಕ 1 ಟಿಸ್ಪೂನ್ ಎಣ್ಣೆ ಹಾಕಿ ಬಿಸಿಯಾದ ನಂತರ, ತೆಂಗಿನ ತುರಿ ಹಾಗೂ ಚಿಟಿಕೆಯಷ್ಟು ಅರಿಶಿಣ ಪುಡಿ ಹಾಕಿ ಎರಡು ನಿಮಿಷ ಲೋ ಪ್ಲೇಮ್ ಅಲ್ಲಿ ಹುರಿದು ತೆಗೆದಿಟ್ಟುಕೊಳ್ಳಬೇಕಾಗುತ್ತದೆ.
- ಮತ್ತೊಂದೆಡೆ, ಕೋಳಿ ಮಾಂಸವನ್ನು ಎರಡರಿಂದ ಮೂರು ಬಾರಿ ಸ್ವಚ್ಛವಾಗಿ ತೊಳೆದುಕೊಳ್ಳಬೇಕಾಗುತ್ತದೆ. ಚಿಕನ್ ಜೊತೆಗೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿಣ ಪುಡಿ ಟೀಸ್ಪೂನ್ ಹಾಕಿ ಮಿಕ್ಸ್ ಮಾಡಿ ಮ್ಯಾರಿನೇಟ್ಗಾಗಿ 10 ನಿಮಿಷ ಬಿಡಬೇಕಾಗುತ್ತದೆ.
- ಈಗ ಒಲೆ ಆನ್ ಮಾಡಿ ಅದರ ಮೇಲೆ ಕಡಾಯಿ ಇಡಿ, ಅದರೊಳಗೆ 6 ಟೀಸ್ಪೂನ್ ಎಣ್ಣೆ ಹಾಕಿ ಬಿಸಿಯಾದ ನಂತರ ಮೊದಲೇ ತಿಳಿಸಿದ ಅಳತೆಯಲ್ಲಿ ಸಾಸಿವೆ ಹಾಕಿ ಹರಿಯಿರಿ, ಬಳಿಕ ಬೆಳ್ಳುಳ್ಳಿ ಹಾಕಿ. ಅದು ಕೆಂಪಾದ ಮೇಲೆ ಕರಿಬೇವಿನ ಸೊಪ್ಪು, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಹುರಿಯಿರಿ.

- ಈರುಳ್ಳಿ ಗೋಲ್ಡನ್ ಬಣ್ಣಕ್ಕೆ ತಿರುಗಿದ ಮೇಲೆ ಮ್ಯಾರಿನೇಟ್ ಆದ ಚಿಕನ್ ಅನ್ನು ಹಾಕಿ. ಇದಕ್ಕೆ ಈಗ ರುಚಿಗೆ ತಕ್ಕಂತೆ ಉಪ್ಪು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ ಮಧ್ಯಮ ಉರಿಯಲ್ಲಿ ಇಟ್ಟು ಕಡಾಯಿಯ ಮುಚ್ಚಳವನ್ನು ಮುಚ್ಚಿ 10 ನಿಮಿಷ ಬೇಯಲು ಬಿಡಿ.
- ಬೆಂದ ಮೇಲೆ ಕತ್ತರಿಸಿ ಇಟ್ಟ ಟೊಮೆಟೊ ಹಾಕಿ ಮತ್ತೊಮ್ಮೆ ಮಿಶ್ರಣ ಮಾಡಿ 5 ನಿಮಿಷ ಬೇಯಲು ಬಿಡಿ. ಅದಾದ ಬಳಿಕ ರುಬ್ಬಿಕೊಂಡ ಮಸಾಲ ಮಿಶ್ರಣವನ್ನು ಇದರೊಳಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಉಪ್ಪು ಚೆಕ್ ಮಾಡಿ, ಉಪ್ಪು ಕಡಿಮೆಯಾಗಿದ್ದರೆ ಸೇರಿಸಿಕೊಳ್ಳಿ. ಮಸಾಲ ತುಂಬಾ ಗಟ್ಟಿಯಾಗಿದ್ದಲ್ಲಿ ಮಾತ್ರ ಅರ್ಧ ಗ್ಲಾಸ್ ನೀರು ಹಾಕಿ, ಇಲ್ಲದಿದ್ದರೆ ನೀರು ಹಾಕಬಾರದು.
- ಮಸಾಲದೊಂದಿಗೆ ಚಿಕನ್ ಚೆನ್ನಾಗಿ ಬೆರತು, ಬೆಂದ ನಂತರ, ಇದಕ್ಕೆ ಮೊದಲು ಹುರಿದು ಇಟ್ಟ ತೆಂಗಿನ ತುರಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇಷ್ಟು ಮಾಡಿದರೆ ಸಾಕು ಸೂಪರ್ ರುಚಿಯ ಮಂಗಳೂರು ಚಿಕನ್ ಸುಕ್ಕ ಸವಿಯಲು ಸಿದ್ಧವಾಗಿದೆ.
- ಹೆಲ್ದಿ ಅಂಡ್ ಟೇಸ್ಟಿ ಚಿಕನ್ ಸುಕ್ಕ ನೀರ್ ದೋಸೆ ಜೊತೆಗೆ ಸೇವಿಸಿದರೆ ಉತ್ತಮ ಕಾಂಬಿನೇಷನ್ ಆಗಿರುತ್ತದೆ. ಚಪಾತಿ, ಜೋಳದ ರೊಟ್ಟಿ, ಅನ್ನದ ಜೊತೆಗೆ ತಿನ್ನಬಹುದು. ಈ ಚಿಕನ್ ರೆಸಿಪಿ ನಿಮಗೆ ಇಷ್ಟವಾದರೆ ಮನೆಯಲ್ಲಿ ಟ್ರೈ ಮಾಡಿ ನೋಡಿ.