Ladies Finger Or Okra Chutney Recipe: ಕೆಲವು ಜನರಿಗೆ ಬೆಂಡೆಕಾಯಿ ಪಲ್ಯ ಅಂದ್ರೆ ಸಾಕು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಮತ್ತೆ ಕೆಲವರು ಅದನ್ನು ಮುಟ್ಟಲು ಬಯಸುವುದಿಲ್ಲ. ಒಮ್ಮೆ ನಿಮ್ಮ ಮನೆಯಲ್ಲಿ ಬೆಂಡೆಕಾಯಿ ಚಟ್ನಿ ಮಾಡಿ ಸೇವಿಸಿದರೆ ಸಾಕು ನೀವು ಅದಕ್ಕೆ ಫ್ಯಾನ್ ಆಗಿ ಬಿಡುತ್ತೀರಿ. ಒಂದು ಬಾರಿ ಈ ಚಟ್ನಿಯ ರುಚಿ ನೋಡಿದರೆ ಪದೇ ಪದೇ ತಿನ್ನುತ್ತೀರಿ.
ಬೆಂಡೆಕಾಯಿ ಚಟ್ನಿಯನ್ನು ಕೆಲವೇ ಕೆಲವು ಪದಾರ್ಥಗಳೊಂದಿಗೆ ಹಾಗೂ ಬಹಳ ಕಡಿಮೆ ಸಮಯದಲ್ಲಿ ಸಿದ್ಧಪಡಿಸಸಬಹುದು. ನೀವು ಬೆಂಡೆಕಾಯಿ ಚಟ್ನಿಯನ್ನು ಈ ರೀತಿ ಮಾಡಿದರೆ ಮಕ್ಕಳು ಕೂಡ ತುಂಬಾ ಇಷ್ಟಪಟ್ಟು ಸೇವಿಸುತ್ತಾರೆ. ಸೂಪರ್ ಟೇಸ್ಟಿಯಾದ ಬೆಂಡೆಕಾಯಿ ಚಟ್ನಿಯನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ.
ಬೆಂಡೆಕಾಯಿ ಚಟ್ನಿಗೆ ಬೇಕಾಗಿರುವ ಪದಾರ್ಥಗಳೇನು?:
- ಬೆಂಡೆಕಾಯಿ - ಅರ್ಧ ಕೆಜಿ
- ಅರಿಶಿನ - ಕಾಲು ಟೀಸ್ಪೂನ್
- ದೊಡ್ಡ ಗಾತ್ರದ ಈರುಳ್ಳಿ - ಎರಡು
- ದೊಡ್ಡ ಗಾತ್ರದ ಟೊಮೆಟೊ - 1
- ಹಸಿಮೆಣಸಿನಕಾಯಿ - 6
- ಹುಣಸೆಹಣ್ಣು - ನಿಂಬೆಹಣ್ಣಿನ ಗಾತ್ರದಷ್ಟು
- ಬೆಳ್ಳುಳ್ಳಿ ಎಸಳು - 5
- ಕೊತ್ತಂಬರಿ ಸೊಪ್ಪು - ಸ್ವಲ್ಪ
- ಎಣ್ಣೆ - 2 ಟೀಸ್ಪೂನ್
- ಉಪ್ಪು - ಬೇಕಾದಷ್ಟು
ಬೆಂಡೆಕಾಯಿ ಚಟ್ನಿ ಸಿದ್ಧಪಡಿಸುವ ವಿಧಾನ:
- ಎಳೆಯ ಬೆಂಡೆಕಾಯಿಗಳನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಅವುಗಳನ್ನು ಸ್ವಚ್ಛವಾಗಿ ತೊಳೆದು ಒಣಗಿಸಿ.
- ಬೆಂಡೆಕಾಯಿಯ ಕಾಂಡಗಳು ಮತ್ತು ತುದಿಗಳನ್ನು ಕತ್ತರಿಸಿ.
- ಬಳಿಕ ಬೆಂಡೆಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. (ಅವು ತುಂಬಾ ಚಿಕ್ಕದಾಗಿದ್ದರೆ, ಅವು ಬೇಗನೆ ಮೃದುವಾಗುತ್ತವೆ.)
- ಈಗ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ.
- ಬಳಿಕ ಬೆಂಡೆಕಾಯಿ ಪೀಸ್ಗಳು ಮತ್ತು ಅರಿಶಿನವನ್ನು ಸೇರಿಸಿ ಮಿಶ್ರಣ ಮಾಡಿ.
- ಬೆಂಡೆಕಾಯಿ ಪೀಸ್ಗಳನ್ನು ಸ್ವಲ್ಪ ಬಣ್ಣ ಬದಲಾದಂತೆ ಮತ್ತು ಮೃದುವಾಗುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ.
- ಮಧ್ಯಮ ಉರಿಯಲ್ಲಿ ಮಿಶ್ರಣ ಮಾಡಿ. ಇಲ್ಲದಿದ್ದರೆ, ಅವು ಕಪ್ಪಗೆ ಆಗುತ್ತವೆ, ಹುರಿದ ಪೀಸ್ಗಳನ್ನು ಒಂದು ತಟ್ಟೆಗೆ ತೆಗೆದು ಪಕ್ಕಕ್ಕೆ ಇರಿಸಿ.
- ಈಗ ಅದೇ ಪ್ಯಾನ್‌ಗೆ ಸ್ವಲ್ಪ ಎಣ್ಣೆ ಸೇರಿಸಿ ಬಿಸಿ ಮಾಡಿ.
- ಕತ್ತರಿಸಿದ ಹಸಿಮೆಣಸಿನಕಾಯಿಗಳನ್ನು ಸೇರಿಸಿ ಒಂದು ನಿಮಿಷ ಹುರಿಯಿರಿ.
- ಬಳಿಕ ತೆಳುವಾಗಿ ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ ಬಣ್ಣ ಬದಲಾಗುವವರೆಗೆ ಹುರಿಯಿರಿ.
- ನಂತರ ಟೊಮೆಟೊ ಹೋಳುಗಳನ್ನು ಸೇರಿಸಿ ಅವು ಮೃದುವಾಗುವವರೆಗೆ ಬೇಯಿಸಿ.
- ಬಳಿಕ ಹಸಿ ಬೆಳ್ಳುಳ್ಳಿ ಎಸಳುಗಳನ್ನು ಜಜ್ಜಿ ಸೇರಿಸಿ. ಇದಾದ ಬಳಿಕ ಹುಣಸೆಹಣ್ಣು ಹಾಕಿ ಹುರಿಯಿರಿ.
- ಈ ಎಲ್ಲಾ ಪದಾರ್ಥಗಳನ್ನು ಒಂದು ತಟ್ಟೆಯಲ್ಲಿ ತೆಗೆದುಕೊಂಡು ತಣ್ಣಗಾಗಲು ಬಿಡಿ.
- ಈ ತಣ್ಣಗಾದ ಮಿಶ್ರಣವನ್ನು ಒರಟಾಗಿ ರುಬ್ಬಿಕೊಳ್ಳಿ.
- ಮಿಕ್ಸರ್ ಬಳಸಿದರೆ ಈ ಚಟ್ನಿಯನ್ನು ನುಣ್ಣಗೆ ರುಬ್ಬಿಕೊಳ್ಳದೇ ಒರಟಾಗಿ ರುಬ್ಬಿಕೊಳ್ಳಬೇಕಾಗುತ್ತದೆ.
- ಈಗ ಹುರಿದ ಬೆಂಡೆಕಾಯಿ ಪೀಸ್ಗಳನ್ನು ಸೇರಿಸಿ ರುಬ್ಬಿಕೊಳ್ಳಿ
- ಅಂತಿಮವಾಗಿ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮತ್ತು ಎಲ್ಲವೂ ಚೆನ್ನಾಗಿ ಬೆರೆಸಿ. ಮಿಕ್ಸರ್‌ನಲ್ಲಿದ್ದರೆ ಒಮ್ಮೆ ತಿರುಗಿಸಿ ನಿಲ್ಲಿಸಿ.
- ಇದೀಗ ಬಾಯಲ್ಲಿ ನೀರೂರಿಸುವ ಭರ್ಜರಿ ರುಚಿಯ ಬೆಂಡೆಕಾಯಿ ಚಟ್ನಿ ಸಿದ್ಧವಾಗಿದೆ. ಈ ಚಟ್ನಿಯನ್ನು ಒಂದು ಬಟ್ಟಲಿಗೆ ತೆಗೆದುಕೊಂಡು ರುಚಿ ನೋಡಿ ಅಗತ್ಯವಿದ್ದರೆ ಉಪ್ಪು ಸೇರಿಸಿ.
ಚಟ್ನಿ ಮಾಡಲು ಇಲ್ಲಿವೆ ಟಿಪ್ಸ್ :
- ಬೆಂಡೆಕಾಯಿಗಳನ್ನು ತುಂಬಾ ಸಣ್ಣ ಪೀಸ್ಗಳಾಗಿ ಕತ್ತರಿಸಬೇಡಿ. ರುಬ್ಬಿದಾಗ ಅವು ಬೇಗನೆ ಪೇಸ್ಟ್ ರೀತಿಯಾಗುತ್ತದೆ.
- ಚಟ್ನಿ ಮೃದುವಾಗಿರದೆ ಸ್ವಲ್ಪ ಅಗಿಯಲು ಬೇಕಾದಷ್ಟು ಒರಟಾಗಿದ್ದರೆ ಸಾಕು.