Ice Cream Powder Recipe: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೇಸಿಗೆಯ ಬಿಸಿಲಿನ ಅಬ್ಬರ ಜೋರಾಗಿದೆ. ಈ ಬಿಸಿಲಿ ಝಳದಿಂದ ಮುಕ್ತರಾಗಲು ಬಹುತೇಕ ಜನರು ತಂಪು ಪಾನೀಯಗಳತ್ತ ಮುಖ ಮಾಡುತ್ತಿದ್ದಾರೆ. ಜೊತೆಗೆ ಕೆಲವರು ವಿವಿಧ ಬಗೆಯ ಐಸ್ ಕ್ರೀಮ್‌ಗಳನ್ನು ಸೇವಿಸುತ್ತಾರೆ. ಮಕ್ಕಳಂತೂ ತುಂಬಾ ಇಷ್ಟಪಟ್ಟು ಐಸ್ ಕ್ರೀಮ್‌ಗಳನ್ನು ಸೇವಿಸುತ್ತಾರೆ. ಆದರೆ, ಕೆಲವರು ಹೊರಗೆ ಮಾರಾಟವಾಗುವ ಐಸ್ ಕ್ರೀಮ್‌ಗಳನ್ನು ಕಡಿಮೆ ತಿನ್ನುತ್ತಾರೆ. ಹೀಗಾಗಿ ಅವರು ಮನೆಯಲ್ಲಿಯೇ ಐಸ್ ಕ್ರೀಮ್‌ಗಳನ್ನು ತಯಾರಿಸುತ್ತಾರೆ. ಇದಕ್ಕಾಗಿ ಅವರು ಮಾರುಕಟ್ಟೆಯಲ್ಲಿ ಲಭ್ಯವಿರುವ ಐಸ್ ಕ್ರೀಮ್ ಮಿಕ್ಸ್ ಪೌಡರ್ ಖರೀದಿಸುತ್ತಾರೆ.
ಮಾರುಕಟ್ಟೆಯಲ್ಲಿ ಲಭ್ಯವಿರುವ ಪೌಡರ್ ರೀತಿ ನಿಮ್ಮ ಆಯ್ಕೆಯ ಸುವಾಸನೆಯೊಂದಿಗೆ ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಅದಕ್ಕೆ ಹೆಚ್ಚಿನ ಪದಾರ್ಥಗಳು ಅಗತ್ಯವಿಲ್ಲ. ಇದನ್ನು ಕೇವಲ ಐದು ಪದಾರ್ಥಗಳಿಂದ ಸರಳ ಮತ್ತು ಸುಲಭವಾಗಿ ತಯಾರಿಸಬಹುದು. ಬಳಿಕ ನೀವು ಅದನ್ನು ಫ್ರಿಡ್ಜ್‌ನಲ್ಲಿ ಇಟ್ಟರೆ ಸಾಕು, ನಿಮಗೆ ಬೇಕಾದಾಗ ರುಚಿಕರವಾದ ಐಸ್ ಕ್ರೀಮ್ ಕೆಲವೇ ನಿಮಿಷಗಳಲ್ಲಿ ಸಿದ್ಧಪಡಿಸಬಹುದು. ಇದೀಗ ಐಸ್ ಕ್ರೀಮ್ ಪೌಡರ್ ತಯಾರಿಸಲು ಬೇಕಾದ ಪದಾರ್ಥಗಳೇನು ಹಾಗೂ ತಯಾರಿಸುವ ವಿಧಾನ ಹೇಗೆ ಎಂಬುದನ್ನು ತಿಳಿಯೊಣ.

ಐಸ್ ಕ್ರೀಮ್ ಪೌಡರ್ಗೆ ಬೇಕಾಗುವ ಪದಾರ್ಥಗಳೇನು?:
- ಹಾಲಿನ ಪುಡಿ - 200 ಗ್ರಾಂ
- ಸಕ್ಕರೆ - 200 ಗ್ರಾಂ
- ವೆನಿಲ್ಲಾ ಅಥವಾ ಸ್ಟ್ರಾಬೆರಿ ಫುಡ್ ಎಸೆನ್ಸ್ - 10 ಮಿಲಿ
- ಅಡುಗೆ ಸೋಡಾ - 10 ಗ್ರಾಂ
- ಪೊಟ್ಯಾಸಿಯಮ್ ಮೆಟಾಬೈಸಲ್ಫೇಟ್ - 4 ಗ್ರಾಂ (ಸಂಗ್ರಹಿಸಲು ಬಳಸುವ ಸಂರಕ್ಷಕ)
ಐಸ್ ಕ್ರೀಮ್ ಪೌಡರ್ ಸಿದ್ಧಪಡಿಸುವ ವಿಧಾನ:

- ಮೊದಲು ಮಿಕ್ಸಿಂಗ್ ಜಾರ್ ತೆಗೆದುಕೊಂಡು ಅದರೊಳಗೆ ಸಕ್ಕರೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಖಾಗುತ್ತದೆ. ಬಳಿಕ ಅದನ್ನು ಮಿಕ್ಸಿಂಗ್ ಬೌಲ್‌ಗೆ ತೆಗೆದುಕೊಳ್ಳಿ.
- ನಂತರ ಹಾಲಿನ ಪುಡಿ, ಅಡುಗೆ ಸೋಡಾ, ಪೊಟ್ಯಾಸಿಯಮ್ ಮೆಟಾಬೈಸಲ್ಫೈಟ್, ವೆನಿಲ್ಲಾ ಅಥವಾ ಯಾವುದೇ ಇತರ ಆಹಾರ ಸಾರವನ್ನು ಸೇರಿಸಿ ಮತ್ತು ಎಲ್ಲಾ ಪದಾರ್ಥಗಳನ್ನು ಕೂಡಿಸಲು ಚೆನ್ನಾಗಿ ಮಿಶ್ರಣ ಮಾಡಬೇಕಾಗುತ್ತದೆ.
- ಬಳಿಕ ಅದನ್ನು ತೇವಾಂಶ ನಿರೋಧಕ, ಗಾಳಿಯಾಡದ ಬಾಟಲಿಯಲ್ಲಿ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿ ಇಡಬೇಕಾಗುತ್ತದೆ. ಇಷ್ಟು ಮಾಡಿದರೆ ಸಾಕು ನೀವು ಆಯ್ಕೆ ಮಾಡಿದ 'ಐಸ್ ಕ್ರೀಮ್ ಮಿಕ್ಸ್ ಪೌಡರ್' ಸಿದ್ಧವಾಗಿದೆ.
- ನಾವು ತಿಳಿಸಿರುವ ಅಳತೆಯ ಪ್ರಕಾರ ನೀವು ಹೆಚ್ಚು ಅಥವಾ ಕಡಿಮೆ ಐಸ್ ಕ್ರೀಮ್ ಪುಡಿ ತಯಾರಿಸಬಹುದು.
- ಈ ರೀತಿ ಐಸ್ ಕ್ರೀಮ್ ಪುಡಿಯನ್ನು ತಯಾರಿಸಿ ಫ್ರಿಡ್ಜ್‌ನಲ್ಲಿ ಇಟ್ಟರೆ, ನಿಮಗೆ ತಿನ್ನಬೇಕೆಂದು ಅನಿಸಿದಾಗಲೆಲ್ಲಾ ರುಚಿಕರವಾದ ಐಸ್ ಕ್ರೀಮ್ ತಯಾರಿಸಬಹುದು.
- ಈ ಐಸ್ ಕ್ರೀಮ್ ತಯಾರಿಸಲು, ಒಲೆಯ ಮೇಲೆ ಒಂದು ಪಾತ್ರೆ ಇರಿಸಿ, ನಿಮಗೆ ಬೇಕಾದಷ್ಟು ಹಾಲು ಹಾಕಿ ಕುದಿಸಿ.
- ಹಾಲು ಸ್ವಲ್ಪ ಕುದಿಯಲು ಪ್ರಾರಂಭಿಸಿದ ಬಳಿಕ ಅದಕ್ಕೆ ಮೊದಲೇ ತಯಾರಿಸಿದ ಐಸ್ ಕ್ರೀಮ್ ಮಿಕ್ಸ್ ಪೌಡರ್ ಸೂಕ್ತ ಪ್ರಮಾಣದಲ್ಲಿ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವು ಸ್ವಲ್ಪ ದಪ್ಪವಾಗುವವರೆಗೆ ಕುದಿಸಿ.
- ಬಳಿಕ ಒಲೆಯನ್ನು ಆಫ್ ಮಾಡಿ, ಮಿಶ್ರಣವನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಬೇಕಾಗುತ್ತದೆ. ಇದಾದ ನಂತರ ಈ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ಸುರಿದುಕೊಂಡು ಸರಿಯಾಗಿ ಮುಚ್ಚಿ. ಅದು ಸಂಪೂರ್ಣವಾಗಿ ಗಟ್ಟಿಯಾಗುವವರೆಗೆ ಈ ಪಾತ್ರೆಯನ್ನು ಫ್ರೀಜರ್‌ನಲ್ಲಿ ಇಡಬೇಕಾಗುತ್ತದೆ. ಈಗ ಸೂಪರ್ ರುಚಿಯ ಐಸ್ ಕ್ರೀಮ್ ಸವಿಯಲು ಸಿದ್ಧವಾಗಿದೆ. ಬೇಸಿಗೆಯ ರೆಸಿಪಿ ನಿಮಗೆ ಇಷ್ಟವಾದರೆ, ಮನೆಯಲ್ಲಿ ಟ್ರೈ ಮಾಡಿ ನೋಡಿ.