How to Make Masala Tomato Bajji: ಬಹುತೇಕ ಜನರು ಇಷ್ಟಪಡುವ ಸ್ಟ್ರೀಟ್ ಫುಡ್ಗಳಲ್ಲಿ ಬಜ್ಜಿ ಮೊದಲ ಸ್ಥಾನದಲ್ಲಿದೆ. ಬಜ್ಜಿ ಎಂದರೆ ನಮಗೆಲ್ಲರಿಗೂ ಮಿರ್ಚಿ ಬಜ್ಜಿ, ಕಾಂದಾ ಬಜ್ಜಿ, ಮೈಸೂರು ಬಜ್ಜಿ ಹೀಗೆ ವಿವಿಧ ಪ್ರಕಾರಗಳ ಬಜ್ಜಿಗಳು ನೆನಪಾಗುತ್ತವೆ. ನೀವು ಎಂದಾದರೂ 'ಮಸಾಲ ಟೊಮೆಟೊ ಸ್ಲೈಸ್ ಬಜ್ಜಿ' ಕೇಳಿದ್ದೀರಾ? ಈ ಬಜ್ಜಿಯು ಸೂರತ್‌ನ ಸ್ಪೆಷಲ್ ಸ್ಟ್ರೀಟ್ ಫುಡ್ ಆಗಿದೆ.
ಟೊಮೆಟೊ ಬಜ್ಜಿ ಹೊರಭಾಗದಲ್ಲಿ ಗರಿಗರಿಯಾದ ಮತ್ತು ಒಳಭಾಗದಲ್ಲಿ ಮೃದುವಾಗಿ ಹಾಗೂ ಕೊತ್ತಂಬರಿ ಸೊಪ್ಪಿನ ಪರಿಮಳದೊಂದಿಗೆ ತುಂಬಾ ರುಚಿಕರವಾಗಿರುತ್ತವೆ. ನಾವು ತಿಳಿಸುವ ಪ್ರಕಾರ, ಟೊಮೆಟೊ ಬಜ್ಜಿ ಮಾಡಿದರೆ ತುಂಬಾ ಸಖತ್ ಟೇಸ್ಟಿಯಾಗಿರುತ್ತವೆ. ಈ ಬಜ್ಜಿಯನ್ನು ತುಂಬಾ ಸುಲಭ ರೆಡಿ ಮಾಡಬಹುದು. ಗರಿಗರಿಯಾದ ಮತ್ತು ಟೇಸ್ಟಿ ಸ್ನ್ಯಾಕ್ ಟೊಮೆಟೊ ಬಜ್ಜಿ ಸಿದ್ಧಪಡಿಸಲು ಬೇಕಾಗುವ ಪದಾರ್ಥಗಳೇನು ಹಾಗೂ ತಯಾರಿಕೆಯ ವಿಧಾನ ಹೇಗೆ ಎಂಬುದನ್ನು ನೋಡೋಣ.
ಮಸಾಲ ಟೊಮೆಟೊ ಬಜ್ಜಿಗೆ ಬೇಕಾಗುವ ಪದಾರ್ಥಗಳು:
- ಕಡಲೆ ಹಿಟ್ಟು - 1 ಕಪ್
- ಟೊಮೆಟೊ - 4
- ಶುಂಠಿ - ಇಂಚಿನ ತುಂಡು
- ಬೆಳ್ಳುಳ್ಳಿ ಎಸಳು - 8
- ಉಪ್ಪು - ರುಚಿಗೆ ಬೇಕಾದಷ್ಟು
- ಹಸಿಮೆಣಸಿನಕಾಯಿ - 3
- ಕೊತ್ತಂಬರಿ - ಒಂದು ಹಿಡಿ
- ನಿಂಬೆ - 1
- ಅರಿಶಿನ - ಚಿಟಿಕೆ
- ಅಡಿಗೆ ಸೋಡಾ - ಪಿಂಚ್
- ಎಣ್ಣೆ - ಸಾಕಷ್ಟು
ಮಸಾಲ ಟೊಮೆಟೊ ಬಜ್ಜಿ ತಯಾರಿಸುವ ವಿಧಾನ:
- ಮೊದಲು ಕೊತ್ತಂಬರಿ ಪೇಸ್ಟ್ ತಯಾರಿಸಿ ಇಟ್ಟುಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಮಿಕ್ಸಿಂಗ್ ಜಾರ್ ತೆಗೆದುಕೊಂಡು ಅದಕ್ಕೆ ಶುಂಠಿ, ಬೆಳ್ಳುಳ್ಳಿ ಎಸಳು, ಉಪ್ಪು, ಹಸಿಮೆಣಸಿನಕಾಯಿ ಹಾಕಿ, ಅದರೊಳಗೆ ನಿಂಬೆ ರಸ ಹಿಂಡಿ. ನಂತರ ಸಾಧ್ಯವಾದಷ್ಟು ಕಡಿಮೆ ನೀರನ್ನು ಸೇರಿಸಿ. ಮೃದುವಾದ ಪೇಸ್ಟ್ನ ಮಿಶ್ರಣ ಮಾಡಿಕೊಂಡು ಪಕ್ಕಕ್ಕೆ ಇಡಿ.
- ಮಿಕ್ಸಿಂಗ್ ಬೌಲ್‌ನಲ್ಲಿ ಕಡಲೆಬೇಳೆ ಹಿಟ್ಟನ್ನು ತೆಗೆದುಕೊಳ್ಳಿ. ನಂತರ ಸ್ವಲ್ಪ ಉಪ್ಪು, ಅರಿಶಿನ, 1 ಚಮಚ ಎಣ್ಣೆ ಸೇರಿಸಿ ಮತ್ತು ಕೈಯಿಂದ ಸಹಾಯದಿಂದ ಚೆನ್ನಾಗಿ ಮಿಶ್ರಣ ಮಾಡಬೇಕಾಗುತ್ತದೆ.
- ನಂತರ ಸಾಕಷ್ಟು ನೀರು ಸೇರಿಸಿ, ನಾಲ್ಕೈದು ನಿಮಿಷಗಳ ಕಾಲ ಚೆನ್ನಾಗಿ ಮಿಶ್ರಣ ಮಾಡಿ. ಹೀಗೆ ಮಾಡಿದರೆ, ಬೇಳೆ ಹಿಟ್ಟು ಚೆನ್ನಾಗಿ ನೆನೆಯುತ್ತದೆ. ಜೊತೆಗೆ ಬಜ್ಜಿಗಳು ಕ್ರಿಸ್ಪಿಯಾಗಿ ಬರುತ್ತವೆ.
- ಈ ರೀತಿ ಹಿಟ್ಟನ್ನು ಮಿಶ್ರಣ ಮಾಡಿದ ನಂತರ ಅಡಿಗೆ ಸೋಡಾ ಸೇರಿಸಿ. ಇನ್ನೊಂದು ನಿಮಿಷ ಚೆನ್ನಾಗಿ ಬೀಟ್ ಮಾಡಿ ಪಕ್ಕದಲ್ಲಿ ಇಡಿ.
- ಇದೀಗ ದಪ್ಪ ಪದರಿನ ಕೆಲವು ದೊಡ್ಡ ಗಾತ್ರದ ಟೊಮೆಟೊಗಳನ್ನು ತೆಗೆದುಕೊಂಡು ಅವುಗಳನ್ನು ಸ್ವಚ್ಛವಾಗಿ ತೊಳೆದು ಒಣಗಿಸಿ. ಬಳಿಕ ಅದನ್ನು ಸ್ವಲ್ವ ದಪ್ಪದ ರೌಂಡ್ ಆಗಿ ಪೀಸ್ಗಳಾಗಿ ಕಟ್ ಮಾಡಿಕೊಳ್ಳಬೇಕಾಗುತ್ತದೆ.
- ನಂತರ ಕತ್ತರಿಸಿದ ಎಲ್ಲಾ ಟೊಮೆಟೊ ಚೂರುಗಳಿಗೆ ಒಂದೊಂದಾಗಿ ಅವುಗಳ ಮೇಲೆ ಈ ಹಿಂದೆ ತಯಾರಿಸಿದ ಕೊತ್ತಂಬರಿ ಪೇಸ್ಟ್ನ್ನು ಸ್ವಲ್ಪ ಹಚ್ಚಬೇಕಾಗುತ್ತದೆ.
- ಬಳಿಕ ಒಲೆಯ ಮೇಲೆ ಕಡಾಯಿ ಇಟ್ಟು ಅದರೊಳಗೆ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ಬಳಿಕ ಕೋತಂಬರಿ ಪೇಸ್ಟ್ ಹಚ್ಚಿದ ಟೊಮೆಟೊ ಪೀಸ್ಗಳನ್ನು ಮೊದಲು ಕಲಸಿದ ಕಡಲೆ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಬಿಡಬೇಕಾಗುತ್ತದೆ.
- ನಂತರ ಬಜ್ಜಿಗಳನ್ನು ಗರಿಗರಿಯಾದ ಹಾಗೂ ಹೊಂಬಣ್ಣ ಬರುವವರೆಗೆ ಎರಡು ಬದಿಗಳಲ್ಲಿ ತಿರುಗಿಸಿ ಹೆಚ್ಚಿನ ಉರಿಯಲ್ಲಿ ಹುರಿಯಿರಿ.
- ಬಳಿಕ ಬಜ್ಜಿಗಳನ್ನು ತಟ್ಟೆಯಲ್ಲಿ ತೆಗೆದುಹಾಕಿ. ಇದೀಗ ತುಂಬಾ ಟೇಸ್ಟಿ ಮತ್ತು ಗರಿಗರಿಯಾದ ಸೂರತ್ ಸ್ಪೆಷಲ್ 'ಮಸಾಲ ಟೊಮೆಟೊ ಸ್ಲೈಸ್ ಬಜ್ಜಿ' ಸವಿಯಲು ಸಿದ್ಧವಾಗಿದೆ. ಇವುಗಳನ್ನು ಬಿಸಿಯಾಗಿದ್ದಾಗ ಸೇವಿಸಿದರೆ ಒಳ್ಳೆಯದು. ನಂತರ ಇವು ಮೃದುವಾಗುತ್ತದೆ ಮತ್ತು ಅಷ್ಟು ರುಚಿಯಾಗಿರುವುದಿಲ್ಲ. ಇಷ್ಟವಾದರೆ ನೀವು ಕೂಡ ಒಮ್ಮೆ ಟ್ರೈ ಮಾಡಬಹುದು.
ಇದನ್ನೂ ಓದಿ: ಗರಿಗರಿಯಾದ 'ಚುರುಮುರಿ ವಡೆ' ನಿಮಗೆ ಗೊತ್ತೇ? ಕೆಲವೇ ನಿಮಿಷಗಳಲ್ಲಿ ಸಿದ್ಧಪಡಿಸಿ; ರುಚಿಯು ಸೂಪರ್!