ವಾಷಿಂಗ್ಟನ್, ಅಮೆರಿಕ: ಅಕ್ರಮ ವಲಸಿಗರಿಗೆ ಜನ್ಮದತ್ತ ಪೌರತ್ವ ನೀಡುವುದನ್ನು ತೆಗೆದು ಹಾಕಿರುವ ಟ್ರಂಪ್ ಅವರ ಮಹತ್ವದ ಆದೇಶ ವಿರೋಧಿಸಿ ಹಲವರು ಆಯಾಯ ರಾಜ್ಯಗಳ ಕೋರ್ಟ್ ಗಳ ಮೆಟ್ಟಿಲೇರಿದ್ದಾರೆ. ಕೆಲವು ನ್ಯಾಯಾಲಯಗಳು ಈಗಾಗಲೇ ಈ ಆದೇಶಕ್ಕೆ ತಡೆಯನ್ನೂ ನೀಡಿವೆ. ಈ ಮಧ್ಯೆ ಈ ಎಲ್ಲ ಅರ್ಜಿಗಳ ವಿಚಾರಣೆ ಹಾಗೂ ಆದೇಶದ ಸಿಂಧುತ್ವದ ಬಗ್ಗೆ ಅಮೆರಿಕದ ಸುಪ್ರೀಂಕೋರ್ಟ್ ಮುಂದಿನ ತಿಂಗಳು ವಿಚಾರಣೆ ನಡೆಸಲಿದೆ ಎಂದು ಪೊಲಿಟಿಕೊ ವರದಿ ಮಾಡಿದೆ.
ಇದೀಗ ನ್ಯಾಯಾಲಯ ಟ್ರಂಪ್ರ ಈ ಜನ್ಮದತ್ತ ಪೌರತ್ವದ ಹಕ್ಕುಗಳ ಬಗ್ಗೆ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಸಾಂವಿಧಾನಿಕ ಔಪಚಾರಿಕತೆಯನ್ನು ವಿಶ್ಲೇಷಿಸುತ್ತಿಲ್ಲ. ಇದರ ಬದಲಾಗಿ ಅದರ ತಾಂತ್ರಿಕ ಅಂಶಗಳು ಹಾಗೂ ಪರಿಣಾಮಗಳ ಕುರಿತು ನಿರ್ಣಯಿಸಲಿದೆ. ಪ್ರಮುಖವಾಗಿ ಮೂರು ಫೆಡರಲ್ ನ್ಯಾಯಾಧೀಶರು ಪ್ರತ್ಯೇಕವಾಗಿ ಟ್ರಂಪ್ ಅವರ ಪೌರತ್ವ ನಿರ್ಬಂಧ ಆದೇಶದ ವಿರುದ್ಧ ರಾಷ್ಟ್ರವ್ಯಾಪಿ ತಡೆಯಾಜ್ಞೆಗಳನ್ನು ನೀಡಿದ್ದಾರೆ. ಈ ನ್ಯಾಯಾಧೀಶರು ಟ್ರಂಪ್ ಅವರ ಈ ಆದೇಶವು ಅಮೆರಿಕ ಸಂವಿಧಾನದ 14 ನೇ ತಿದ್ದುಪಡಿಯನ್ನು ಉಲ್ಲಂಘಿಸುತ್ತದೆ ಎಂಬುದನ್ನು ಪ್ರಮುಖವಾಗಿ ಉಲ್ಲೇಖಿಸಿದ್ದಾರೆ. ಸಂವಿಧಾನದ 14 ನೇ ತಿದ್ದುಪಡಿಯು ಅಮೆರಿಕದ ನೆಲದಲ್ಲಿ ಜನಿಸಿದ ಯಾರಿಗಾದರೂ ಪೌರತ್ವವನ್ನು ನೀಡುತ್ತದೆ ಎಂದು ಬಹಳ ಹಿಂದಿನಿಂದಲೂ ಅರ್ಥೈಸಿಕೊಂಡು ಬರಲಾಗಿದೆ ಎಂಬುದನ್ನು ಕೋರ್ಟ್ ನೀಡಿರುವ ತಡೆಯಾಜ್ಞೆಗಳಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ.
ಜಿಲ್ಲಾ ಜಡ್ಜ್ಗಳು ನೀಡಿರುವ ತಡೆಯಾಜ್ಞೆಗಳನ್ನು ತೆರವುಗೊಳಿಸುವಂತೆ ಕಳೆದ ಮಾರ್ಚ್ ನಲ್ಲಿ ಟ್ರಂಪ್ ಸರ್ಕಾರ ಅಲ್ಲಿನ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಕೆ ಮಾಡಿದೆ. ಅಮೆರಿಕದ ಅಧ್ಯಕ್ಷರು ಹೊರಡಿಸಿರುವ ಆದೇಶಗಳಿಗೆ ತಡೆ ನೀಡುವ ಅಧಿಕಾರ ಜಿಲ್ಲಾ ನ್ಯಾಯಾಲಯಗಳ ನ್ಯಾಯಾಧೀಶರಿಗೆ ಇಲ್ಲ ಎಂದು ಸರ್ಕಾರದ ಪರ ವಕೀಲರು ತಾವು ಸಲ್ಲಿಸಿರುವ ಮೇಲ್ಮನವಿಯಲ್ಲಿ ವಾದಿಸಿದ್ದಾರೆ ಎಂದು ಪೊಲಿಟಿಕೊ ವರದಿ ಮಾಡಿದೆ.
ಅಧ್ಯಕ್ಷರ ಆದೇಶಗಳಿಗೆ ತಡೆ ನೀಡುವ ಅಧಿಕಾರಿ ಜಿಲ್ಲಾ ನ್ಯಾಯಾಲಯಗಳಿಗೆ ಇದೆಯೋ ಇಲ್ಲವೋ ಎಂಬ ಬಗ್ಗೆ ಮೌಖಿಕ ವಾದ ಮಂಡನೆಗೆ ಅವಕಾಶ ನೀಡಲು ಅಮೆರಿಕದ ಸುಪ್ರೀಂಕೋರ್ಟ್ ಸಮ್ಮತಿ ನೀಡಿದೆ. ಮೇ 15 ರಂದು ವಾದ ಮಂಡಿಸಲು ಅವಕಾಶ ನೀಡಿದೆ. ತುರ್ತು ಮೇಲ್ಮನವಿಗಳ ಮೇಲೆ ನ್ಯಾಯಾಲಯವು ವಾದಗಳನ್ನು ಆಲಿಸಲು ಸಮಯ ನೀಡಿರುವುದು ಅಪರೂಪ ಎಂದು ಹೇಳಲಾಗುತ್ತಿದೆ.
ಜಿಲ್ಲಾ ನ್ಯಾಯಾಲಯಗಳು ತಮ್ಮ ಅಧಿಕಾರವನ್ನು ಮೀರಿದ್ದಾರೆ ಎಂಬ ಟ್ರಂಪ್ ಆಡಳಿತದ ವಾದವನ್ನು ಅಲ್ಲಿನ ಸರ್ವೋಚ್ಚ ನ್ಯಾಯಾಲಯ ಒಂದೊಮ್ಮೆ ಒಪ್ಪಿಕೊಂಡರೆ, ದೇಶಾದ್ಯಂತ ಸುಗಮವಾಗಿ ಬಹುನಿರೀಕ್ಷಿತ ಪೌರತ್ವ ಯೋಜನೆಯನ್ನು ಜಾರಿಗೆ ತರಲು ಅವಕಾಶ ಮಾಡಿ ಕೊಡಲಿದೆ. ಈ ಬಗ್ಗೆ ಸುಪ್ರೀಂಕೊರ್ಟ್ ವಾದ - ಪ್ರತಿವಾದ ಆಲಿಸಿ ಯಾವ ನಿರ್ಣಯ ಕೈಗೊಳ್ಳಲಿದೆ ಎಂಬುದರ ಮೇಲೆ ಟ್ರಂಪ್ ಅವರ ಯೋಜನೆಯ ಭವಿಷ್ಯ ನಿರ್ಧಾರವಾಗಲಿದೆ.
ಕಾನೂನುಬಾಹಿರ ವಲಸೆ ಹಾಗೂ ವಲಸಿಗರ ಮಕ್ಕಳಿಗೆ ಸಹಜವಾಗಿ ಬರುತ್ತಿದ್ದ ಜನ್ಮತಃ ಪೌರತ್ವವನ್ನು ತಡೆಯುವ ನಿಟ್ಟಿನಲ್ಲಿ ಟ್ರಂಪ್ ಅವರು ಮಹತ್ವದ ಹೆಜ್ಜೆ ಇರಿಸಿದ್ದರು. ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಮರುಗಳಿಗೆಯಲ್ಲೇ ವಲಸಿಗರ ಮಕ್ಕಳಿಗೆ ಅಮೆರಿಕದ ಪೌರತ್ವ ನಿಷೇಧ ಹೇರಿ ಕಾರ್ಯಕಾರಿ ಆದೇಶ ಹೊರಡಿಸಿದ್ದರು. ಇದು ಭಾರಿ ಸಂಚಲನ ಸೃಷ್ಟಿಸಿತ್ತು. ಹಲವರು ಈ ಆದೇಶ ಪ್ರಶ್ನಿಸಿ ಆಯಾಯ ರಾಜ್ಯಗಳ ಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಅಮೆರಿಕದ ಪ್ರಜೆಯನ್ನು ಮದುವೆಯಾಗಿ ಯುಎಸ್ಗೆ ಹೋಗೋದು ಇನ್ಮುಂದೆ ಅಷ್ಟು ಸುಲಭವಲ್ಲ: ಯಾಕೆ ಗೊತ್ತಾ?
ಇದನ್ನೂ ಓದಿ: ಜನ್ಮದತ್ತ ಪೌರತ್ವ ರದ್ದು ಮಾಡಿದ ಡೊನಾಲ್ಡ್ ಟ್ರಂಪ್ ಆದೇಶಕ್ಕೆ ನ್ಯಾಯಾಧೀಶರಿಂದ ತಾತ್ಕಾಲಿಕ ತಡೆ