ನ್ಯೂಯಾರ್ಕ್: ವಿದೇಶಿಯರನ್ನು ಅಮೆರಿಕದಿಂದ ಹೊರಹಾಕುವ ಡೊನಾಲ್ಡ್ ಟ್ರಂಪ್ ಸರ್ಕಾರದ ನೀತಿಗೆ ಭಾರತೀಯ ವಿದ್ಯಾರ್ಥಿಯು ಸಂಕಷ್ಟಕ್ಕೆ ಗುರಿಯಾಗಿದ್ದಾನೆ. ಪದವಿಪೂರ್ವ ಶಿಕ್ಷಣ ಓದುತ್ತಿರುವ ವಿದ್ಯಾರ್ಥಿಯ ವೀಸಾವನ್ನು ರದ್ದು ಮಾಡಿ ಗಡೀಪಾರು ಮಾಡಲು ಅಲ್ಲಿನ ಆಡಳಿತವು ಸಜ್ಜಾಗಿತ್ತು. ಆದರೆ, ಇದಕ್ಕೆ ಫೆಡರಲ್ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.
ಅಲ್ಲಿನ ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಪದವಿ ಓದುತ್ತಿರುವ 21 ವರ್ಷದ ಕ್ರಿಶ್ ಲಾಲ್ ಇಸ್ಸೆರ್ದಸನಿ ಎಂಬ ಭಾರತೀಯ ವಿದ್ಯಾರ್ಥಿಯನ್ನು ಗಲಾಟೆ ಪ್ರಕರಣದಲ್ಲಿ ಈ ಹಿಂದೆ ಬಂಧಿಸಲಾಗಿತ್ತು. ಬಳಿಕ ಆತನ ವೀಸಾವನ್ನು ಅಧಿಕಾರಿಗಳು ರದ್ದು ಮಾಡಿದ್ದರು.
ಪದವಿಯ ಅಂತಿಮ ಸೆಮಿಸ್ಟರ್ನಲ್ಲಿರುವ ಕ್ರಿಶ್ ಅವರ ಶೈಕ್ಷಣಿಕ ಅವಧಿಯು ಇನ್ನು 30 ದಿನಗಳು ಉಳಿದಿವೆ. ಆದರೆ, ಕಳೆದ ವರ್ಷ ನಡೆದ ಗಲಾಟೆಯಲ್ಲಿ ಬಾರ್ನಿಂದ ಹೊರಬಂದು ಇನ್ನೊಂದು ಗುಂಪಿನ ಜೊತೆ ತಡರಾತ್ರಿ ಕಿತ್ತಾಡಿಕೊಂಡ ಆರೋಪದ ಮೇರೆಗೆ ಆತನನ್ನು ಪೊಲೀಸರು ಈಗ ಬಂಧಿಸಿದ್ದರು. ಈ ಕುರಿತ ಪ್ರಕರಣದಲ್ಲಿ ಅಧಿಕಾರಿಗಳು ಕೈಗೊಂಡ ಕ್ರಮದ ವಿರುದ್ಧ ವಿದ್ಯಾರ್ಥಿ ಕೋರ್ಟ್ ಮೆಟ್ಟಿಲೇರಿದ್ದರು.
ವಿದ್ಯಾರ್ಥಿ ಗಡೀಪಾರು ಬೇಡ: 'ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಧೀಶರು ವಿದ್ಯಾರ್ಥಿಯ ಶೈಕ್ಷಣಿಕ ಅವಧಿಯು ಮುಗಿಯುತ್ತಿದೆ. ಉತ್ತಮ ದಾಖಲೆಗಳನ್ನೂ ಆತ ಹೊಂದಿದ್ದಾನೆ. ಗಲಾಟೆ ಪ್ರಕರಣದಲ್ಲಿ ವಿದ್ಯಾರ್ಥಿಯು ತಪ್ಪು ಮಾಡಿದ್ದಾನೆ ಎಂಬುದಕ್ಕೆ ಯಾವುದೇ ಆಧಾರಗಳಲ್ಲಿ. ಹೀಗಾಗಿ ಆತನನ್ನು ಕೂಡಲೇ ಗಡೀಪಾರು ಮಾಡಲು ಸಾಧ್ಯವಿಲ್ಲ' ಎಂದು ತಾತ್ಕಾಲಿಕ ತಡೆ ನೀಡಿದೆ.
ಸರ್ಕಾರದ ವಿದ್ಯಾರ್ಥಿ ಮತ್ತು ವಿನಿಮಯ ಸಂದರ್ಶಕ ಕಾರ್ಯಾಕ್ರಮದ (SEVIS) ದತ್ತಾಂಶದಲ್ಲಿ ಭಾರತೀಯ ವಿದ್ಯಾಥಿ ಅವರ ದಾಖಲೆಗಳನ್ನು ರದ್ದುಗೊಳಿಸಲಾಗಿತ್ತು. ಇದಕ್ಕೆ ತಡೆ ನೀಡಬೇಕು ಎಂದು ವಕೀಲ ಲೊಟ್ಫಿ ಕೋರ್ಟ್ಗೆ ಮನವಿ ಮಾಡಿದ್ದರು.
SEVIS ನಲ್ಲಿ F-1 ವೀಸಾ ದಾಖಲೆಯನ್ನು ರದ್ದುಗೊಳಿಸುವ ಮೊದಲು ವಿದ್ಯಾರ್ಥಿಗೆ ಯಾವುದೇ ಎಚ್ಚರಿಕೆ ನೀಡಿಲ್ಲ ಅಥವಾ ಸಮರ್ಥಿಸಿಕೊಳ್ಳಲು ಯಾವುದೇ ಅವಕಾಶವನ್ನೂ ನೀಡಿಲ್ಲ. ಹೀಗಾಗಿ, ಅಧಿಕಾರಿಗಳು ಕೂಡಲೇ ಯಾವುದೇ ಕ್ರಮ ಜರುಗಿಸದಂತೆ ಕೋರ್ಟ್ ಸೂಚನೆ ನೀಡಿದೆ.
ಏನಿದು F-1 ವೀಸಾ?: ಅಮೆರಿಕದ ಕಾಲೇಜು ಅಥವಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯಲು ಅಥವಾ ಇಂಗ್ಲಿಷ್ ಭಾಷಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಈ ಎಫ್-1 ವೀಸಾ ನೀಡಲಾಗುತ್ತದೆ.
ಇದನ್ನೂ ಓದಿ: ದುಬೈನಲ್ಲಿ ಪಾಕಿಸ್ತಾನಿ ಪ್ರಜೆಯಿಂದ ದಾಳಿ: ಇಬ್ಬರು ತೆಲಂಗಾಣ ಯುವಕರು ಸಾವು, ಒಬ್ಬನಿಗೆ ಗಾಯ