ಬೀಜಿಂಗ್(ಚೀನಾ): ಇನ್ನು ಮುಂದೆ ಬೋಯಿಂಗ್ ಕಂಪನಿಯ ವಿಮಾನಗಳನ್ನು ಖರೀದಿಸದಂತೆ ಚೀನಾ ತನ್ನ ದೇಶದ ವಿಮಾನಯಾನ ಕಂಪನಿಗಳಿಗೆ ಆದೇಶ ಮಾಡಿದೆ ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ.
ಅಮೆರಿಕದ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರವು ಚೀನಾದ ಸರಕುಗಳ ಮೇಲೆ ಶೇಕಡಾ 145ರಷ್ಟು ಸುಂಕವನ್ನು ವಿಧಿಸಿದ ನಂತರ ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾ ನಡುವೆ ಸುಂಕ ಸಮರ ಆರಂಭವಾಗಿದೆ. ಚೀನಾ ಕೂಡ ಅಮೆರಿಕದ ಸರಕುಗಳ ಮೇಲೆ ದೊಡ್ಡ ಪ್ರಮಾಣದ ಸುಂಕ ವಿಧಿಸಿದೆ.
ಅಮೆರಿಕದ ಯಾವುದೇ ಕಂಪನಿಗಳಿಂದ ವಿಮಾನಗಳಿಗೆ ಸಂಬಂಧಿಸಿದ ಉಪಕರಣಗಳು ಮತ್ತು ಬಿಡಿ ಭಾಗಗಳನ್ನು ಖರೀದಿಸದಂತೆಯೂ ಬೀಜಿಂಗ್ ತನ್ನ ವಿಮಾನಯಾನ ಕಂಪನಿಗಳಿಗೆ ಸೂಚಿಸಿದೆ ಎಂದು ಬ್ಲೂಮ್ ಬರ್ಗ್ ಹೇಳಿದೆ.
ಕಳೆದ 50 ವರ್ಷಗಳಿಂದ ಬೋಯಿಂಗ್ ವಿಮಾನಗಳು ಚೀನಾದ ನಾಗರಿಕ ವಿಮಾನಯಾನ ಪ್ರಯಾಣಿಕರ ಮತ್ತು ಸರಕು ಸಾಗಣೆ ವ್ಯವಸ್ಥೆಗಳಲ್ಲಿ ಪ್ರಮುಖ ಪಾತ್ರ ವಹಿಸಿವೆ.
ಬೋಯಿಂಗ್ ಚೀನಾದ ವಾಯುಯಾನ ಉತ್ಪಾದನಾ ಉದ್ಯಮದ ಅತಿದೊಡ್ಡ ಗ್ರಾಹಕನಾಗಿದೆ. 10,000 ಕ್ಕೂ ಹೆಚ್ಚು ಬೋಯಿಂಗ್ ವಿಮಾನಗಳು ಚೀನಾ ನಿರ್ಮಿತ ಬಿಡಿ ಭಾಗಗಳನ್ನು ಬಳಸುತ್ತವೆ. ಕಂಪನಿಯ ಪ್ರಕಾರ, ಚೀನಾದಲ್ಲಿ ಬೋಯಿಂಗ್ ಚಟುವಟಿಕೆಯು ಪೂರೈಕೆದಾರರು, ಜಂಟಿ ಉದ್ಯಮಗಳು, ಕಾರ್ಯಾಚರಣೆಗಳು, ತರಬೇತಿ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಹೂಡಿಕೆ ಸೇರಿದಂತೆ ಚೀನಾದ ಆರ್ಥಿಕತೆಗೆ ನೇರವಾಗಿ ವಾರ್ಷಿಕ 1.5 ಬಿಲಿಯನ್ ಡಾಲರ್ಗಿಂತ ಹೆಚ್ಚು ಆದಾಯ ನೀಡುತ್ತದೆ.
ಕಳೆದ ವಾರ, ಚೀನಾವು ಯುಎಸ್ನಿಂದ ಚೀನಾಕ್ಕೆ ಪ್ರವೇಶಿಸುವ ಸರಕುಗಳ ಮೇಲೆ ಶೇಕಡಾ 125ರಷ್ಟು ಪ್ರತೀಕಾರದ ಸುಂಕವನ್ನು ಘೋಷಿಸಿದೆ. ಏತನ್ಮಧ್ಯೆ, ಟ್ರಂಪ್ ಆಡಳಿತವು ಶನಿವಾರ ಫೋನ್ಗಳು, ಕಂಪ್ಯೂಟರ್ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್ ವಸ್ತುಗಳ ವಿಚಾರದಲ್ಲಿ ಚೀನಾ ಸೇರಿದಂತೆ ಇತರ ರಾಷ್ಟ್ರಗಳ ಮೇಲೆ ವಿಧಿಸಲಾದ ಪರಸ್ಪರ ಸುಂಕದಿಂದ ವಿನಾಯಿತಿ ನೀಡಿದೆ.
ಏತನ್ಮಧ್ಯೆ, ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಪ್ರಸ್ತುತ ವಿಯೆಟ್ನಾಂ, ಮಲೇಷ್ಯಾ ಮತ್ತು ಕಾಂಬೋಡಿಯಾ ಸೇರಿದಂತೆ ಆಗ್ನೇಯ ಏಷ್ಯಾದ ದೇಶಗಳಿಗೆ ಭೇಟಿ ನೀಡಿದ್ದಾರೆ. ಚೀನಾ ಮತ್ತು ವಿಯೆಟ್ನಾಂಗೆ ಏಕಪಕ್ಷೀಯವಾಗಿ ಬೆದರಿಕೆ ಹಾಕುವುದನ್ನು ವಿರೋಧಿಸುವಂತೆ ಮತ್ತು ಜಾಗತಿಕ ಮುಕ್ತ ವ್ಯಾಪಾರವನ್ನು ಎತ್ತಿಹಿಡಿಯುವಂತೆ ವಿಯೆಟ್ನಾಂನಲ್ಲಿ ಕ್ಸಿ ಕರೆ ನೀಡಿದರು.
ನಿನ್ನೆ ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಯುಎಸ್ಗೆ ಹೇಗೆ ನಷ್ಟ ಉಂಟು ಮಾಡಬಹುದು ಎಂಬುದರ ಬಗ್ಗೆಯೇ ಚೀನಾ ತನ್ನ ಗಮನವನ್ನು ಕೇಂದ್ರೀಕರಿಸಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ಜುಲೈ 3ರಿಂದ ಅಮರನಾಥ ಯಾತ್ರೆ; ದೇಶದ 533 ಬ್ಯಾಂಕ್ ಶಾಖೆಗಳಲ್ಲಿ ನೋಂದಣಿ ಆರಂಭ - AMARNATH YATRA