ನವದೆಹಲಿ: ಸಿಬ್ಬಂದಿ-ವಿನಿಮಯ ಕಾರ್ಯಾಚರಣೆಯ ಭಾಗವಾಗಿ ನಾಸಾ ನಾಲ್ವರು ಗಗನಯಾತ್ರಿಗಳನ್ನು ಸ್ಪೇಸ್ ಎಕ್ಸ್ ಕ್ಯಾಪ್ಸೂಲ್ ಮೂಲಕ ಭಾನುವಾರ ಮುಂಜಾನೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ತಲುಪಿಸಿದೆ. ಬಾಹ್ಯಾಕಾಶದಲ್ಲಿ ಪರಿಭ್ರಮಿಸುತ್ತಿರುವ ಐಎಸ್ಎಸ್ನಲ್ಲಿ ಕಳೆದ ಒಂಬತ್ತು ತಿಂಗಳುಗಳಿಂದ ಸಿಕ್ಕಿಬಿದ್ದಿರುವ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರನ್ನು ಭೂಮಿಗೆ ಮರಳಿ ಕರೆತರಲು ಈ ಕಾರ್ಯಾಚರಣೆ ಅನುವು ಮಾಡಿಕೊಡಲಿದೆ.
ಶುಕ್ರವಾರ ಸಂಜೆ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ಕ್ರೂ-10 ಗಗನಯಾತ್ರಿಗಳ ಸ್ಪೇಸ್ಎಕ್ಸ್ ಕ್ರೂ ಡ್ರ್ಯಾಗನ್ ಕ್ಯಾಪ್ಸೂಲ್ ಸುಮಾರು 29 ಗಂಟೆಗಳ ನಂತರ ಭಾನುವಾರ ಬೆಳಿಗ್ಗೆ 4.04ಕ್ಕೆ ಐಎಸ್ಎಸ್ಗೆ ಲಂಗರು ಹಾಕಿದೆ.
ಸದ್ಯ ಅನುಭವಿ ಗಗನಯಾತ್ರಿ ಹಾಗೂ ನಿವೃತ್ತ ನೌಕಾ ಪರೀಕ್ಷಾ ಪೈಲಟ್ಗಳಾದ ವಿಲ್ಮೋರ್ ಮತ್ತು ವಿಲಿಯಮ್ಸ್ ಸೇರಿದಂತೆ 7 ಜನ ಐಎಸ್ಎಸ್ನಲ್ಲಿದ್ದಾರೆ. ಈ ಹಿಂದೆ ಬೋಯಿಂಗ್ನ ಸ್ಟಾರ್ ಲೈನರ್ ಕ್ಯಾಪ್ಸೂಲ್ನಲ್ಲಿನ ಸಮಸ್ಯೆಗಳಿಂದಾಗಿ ವಿಲ್ಮೋರ್ ಮತ್ತು ಬುಚ್ ಅವರನ್ನು ಭೂಮಿಗೆ ಮರಳಿ ಕರೆ ತರಲು ಸಾಧ್ಯವಾಗಿರಲಿಲ್ಲ.
ಕ್ರೂ-10 ಮಿಷನ್ ವಿಲ್ಮೋರ್ ಮತ್ತು ವಿಲಿಯಮ್ಸ್ ಅವರನ್ನು ಮತ್ತೆ ಭೂಮಿಗೆ ಕರೆತರುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದೆ. ಅಮೆರಿಕದ ನಿಕ್ ಹೇಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೊವ್ ಅವರೊಂದಿಗೆ ಈ ಜೋಡಿ ಬುಧವಾರ ಬೆಳಿಗ್ಗೆ 8 ಗಂಟೆಗೆ ಐಎಸ್ಎಸ್ನಿಂದ ಭೂಮಿಯತ್ತ ಹೊರಡಲಿದೆ.
ಕ್ರೂ-10 ಸಿಬ್ಬಂದಿಯ ಪೈಕಿ ಅಮೆರಿಕದ ಅನ್ನೆ ಮೆಕ್ ಲೈನ್ ಮತ್ತು ನಿಕೋಲ್ ಅಯರ್ಸ್, ಜಪಾನ್ನ ಟಕುಯಾ ಒನಿಶಿ ಮತ್ತು ರಷ್ಯಾದ ಕಿರಿಲ್ ಪೆಸ್ಕೊವ್ ಮುಂದಿನ ಸುಮಾರು ಆರು ತಿಂಗಳ ಕಾಲ ಐಎಸ್ಎಸ್ನಲ್ಲಿಯೇ ಉಳಿಯಲಿದ್ದಾರೆ.
ವಿಲ್ಮೋರ್ ಮತ್ತು ವಿಲಿಯಮ್ಸ್ ಐಎಸ್ಎಸ್ನಲ್ಲಿ ಇತರ ಐದು ಗಗನಯಾತ್ರಿಗಳೊಂದಿಗೆ ವೈಜ್ಞಾನಿಕ ಸಂಶೋಧನೆ ಮಾಡುತ್ತಿದ್ದಾರೆ ಮತ್ತು ನಿಯಮಿತ ನಿರ್ವಹಣೆಯನ್ನು ನಡೆಸುತ್ತಿದ್ದಾರೆ. ಇದೇ ತಿಂಗಳಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಲಿಯಮ್ಸ್, ಆದಷ್ಟು ಬೇಗ ಮನೆಗೆ ಮರಳಲು ಹಾಗೂ ತನ್ನ ಎರಡು ನಾಯಿಗಳು ಮತ್ತು ಕುಟುಂಬಸ್ಥರನ್ನು ನೋಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದರು.
ಇದನ್ನೂ ಓದಿ: ಯೆಮೆನ್ನ ಹೌತಿ ನೆಲೆಗಳ ಮೇಲೆ ಯುಎಸ್ ದಾಳಿ; 21 ಸಾವು - US AIRSTRIKE IN YEMEN