ಖೈಬರ್ ಪಖ್ತುಂಖ್ವಾ (ಪಾಕಿಸ್ತಾನ) : 26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ವಿರುದ್ಧ ಭಾರತಕ್ಕೆ ವಿಶ್ವದಾದ್ಯಂತ ಬೆಂಬಲ ಸಿಗುತ್ತಿದ್ದು, ಇದು ಪಾಕಿಸ್ತಾನದ ಮೇಲೆ ಒತ್ತಡ ಹೆಚ್ಚಿಸುತ್ತಿದೆ. ಹೀಗಾಗಿ, ದಾಳಿಯ ಬಗ್ಗೆ 'ತಟಸ್ಥ ತನಿಖೆ' ನಡೆಸಲು ತಾನು ಸಿದ್ಧವಿರುವುದಾಗಿ ಪಾಕಿಸ್ತಾನ ಹೇಳಿದೆ.
ಶನಿವಾರ ಈ ಬಗ್ಗೆ ಮಾತನಾಡಿರುವ ಪ್ರಧಾನಿ ಶೆಹಬಾಜ್ ಷರೀಫ್ ಅವರು, "ದಾಳಿಯ ಕುರಿತು ತಟಸ್ಥ, ಪಾರದರ್ಶಕ ಮತ್ತು ವಿಶ್ವಾಸಾರ್ಹ ತನಿಖೆಗೆ ಸಿದ್ಧವಿರುವುದಾಗಿ ಹೇಳಿದ್ದಾರೆ. ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿರುವ ಕಾಕುಲ್‌ನಲ್ಲಿರುವ ಪಾಕಿಸ್ತಾನ ಮಿಲಿಟರಿ ಅಕಾಡೆಮಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಕಿಸ್ತಾನವು ಜವಾಬ್ದಾರಿಯುತ, ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿರುವ ವಿಶ್ವದ ಮುಂಚೂಣಿ ರಾಷ್ಟ್ರವಾಗಿದೆ. ಹಲವು ದಾಳಿಗಳಿಂದಾದ ನಷ್ಟವನ್ನೂ ಸಹಿಸಿಕೊಂಡಿದ್ದೇವೆ" ಎಂದು ಹೇಳಿದ್ದಾರೆ.
ಉಗ್ರ ದಾಳಿಗಳಲ್ಲಿ 90 ಸಾವಿರ ನಾಗರಿಕರನ್ನು ಕಳೆದುಕೊಂಡಿದ್ದೇವೆ. ಅಪಾರ ಆರ್ಥಿಕ ನಷ್ಟವನ್ನೂ ಅನುಭವಿಸಿದ್ದೇವೆ. ಹೀಗಾಗಿ, ಪಹಲ್ಗಾಮ್ ಉಗ್ರ ದಾಳಿಯಲ್ಲಿ ತಟಸ್ಥ ತನಿಖೆಯಲ್ಲಿ ಪಾಲ್ಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.
ಅಮೆರಿಕ, ಜರ್ಮನಿ, ಫ್ರಾನ್ಸ್, ಇಟಲಿ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಪಹಲ್ಗಾಮ್ ದಾಳಿಯನ್ನು ಕಟುವಾಗಿ ಟೀಕಿಸಿವೆ. ಘಟನೆಯ ಬಳಿಕ ಭಾರತವು, ಪಾಕಿಸ್ತಾನದ ವಿರುದ್ಧ ಕೆಲವು ಅತಿ ಕಠಿಣ ನಿಲುವುಗಳನ್ನು ತಳೆದಿದೆ. ಇದು ಪಾಕಿಸ್ತಾನವು ವಿಶ್ವಮಟ್ಟದಲ್ಲಿ ಆರೋಪಿ ಸ್ಥಾನದಲ್ಲಿ ನಿಲ್ಲುವಂತಾಗಿದೆ.
ಉಗ್ರರಿಗೆ ಬೆಂಬಲ ಒಪ್ಪಿಕೊಂಡ ಸಚಿವ: ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ಶುಕ್ರವಾರವಷ್ಟೇ, ತಮ್ಮ ದೇಶವು ಭಯೋತ್ಪಾದಕ ಸಂಘಟನೆಗಳಿಗೆ ಹಣಕಾಸು ಮತ್ತು ಇನ್ನಿತರ ಬೆಂಬಲ ನೀಡುತ್ತಿದೆ ಎಂದು ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದರು.
ಈ ವಿಡಿಯೋ ವೈರಲ್ ಆಗಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, ಪಾಕಿಸ್ತಾನವು ದೀರ್ಘ ಕಾಲದಿಂದ ಉಗ್ರ ಸಂಘಟನೆಗಳಿಗೆ ಬೆಂಬಲ, ಹಣಕಾಸು ನೆರವು, ತರಬೇತಿ ನೀಡುತ್ತಿದೆ. ಮೂರು ದಶಕಗಳಿಂದ ಹಲವು ಐರೋಪ್ಯ ರಾಷ್ಟ್ರಗಳಿಗಾಗಿ ಈ ಕೊಳಕು ಕೆಲಸ ಮಾಡುತ್ತಿದ್ದೇವೆ. ಸೋವಿಯತ್ ಒಕ್ಕೂಟದ ವಿರುದ್ಧದ ಯುದ್ಧ ಮತ್ತು 9/11 ರ ನಂತರದ ಯುದ್ಧದಲ್ಲಿ ಪಾಲ್ಗೊಳ್ಳದೆ ಇದ್ದಲ್ಲಿ ಪಾಕಿಸ್ತಾನವು ದೋಷರಹಿತವಾಗಿರುತ್ತಿತ್ತು" ಎಂದು ಅಭಿಪ್ರಾಯಪಟ್ಟಿದ್ದಾರೆ.
ಪಹಲ್ಗಾಮ್ ದಾಳಿ: ಏಪ್ರಿಲ್ 22 ದಕ್ಷಿಣ ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿ 26 ಮಂದಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂಬ ಆರೋಪದ ಮೇಲೆ, ಭಾರತವು ಅಟ್ಟಾರಿ ಗಡಿ ಬಂದ್, ಪಾಕಿಸ್ತಾನಿ ಪ್ರಜೆಗಳಿಗೆ ಸಾರ್ಕ್ ವೀಸಾ ರದ್ದು, ಅವರ ದೇಶಕ್ಕೆ ಮರಳಲು 40 ಗಂಟೆಗಳ ಕಾಲಾವಕಾಶ, ಎರಡೂ ಕಡೆಯ ರಾಜತಾಂತ್ರಿಕ ಅಧಿಕಾರಿಗಳನ್ನು ವಾಪಸ್ ಕರೆಯಿಸಿಕೊಳ್ಳುವಿಕೆ, 1960 ರಲ್ಲಿ ಸಹಿ ಹಾಕಿದ್ದ ಸಿಂಧೂ ಜಲ ಒಪ್ಪಂದವನ್ನು ಸಹ ಸ್ಥಗಿತಗೊಳಿಸಿದೆ.
ಈ ದಾಳಿಗೆ ಕಾರಣರಾದ ಭಯೋತ್ಪಾದಕರು ಮತ್ತು ಅದನ್ನು ಮಾಡಲು ಸಂಚು ರೂಪಿಸಿದವರು ಕಲ್ಪನೆಗೂ ಮೀರಿದ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಭರವಸೆ ನೀಡಿದರು.
ಇದನ್ನೂ ಓದಿ: ಭಾರತ - ಪಾಕ್ ಉದ್ವಿಗ್ನತೆ: ಮಧ್ಯಸ್ಥಿಕೆಗೆ ಮುಂದಾದ ಇರಾನ್
ಭಾರತ - ಪಾಕಿಸ್ತಾನ ನಡುವಿನ ಉದ್ವಿಗ್ನತೆ ದೀರ್ಘ ಕಾಲದ್ದು, ತಮ್ಮಲ್ಲೇ ಪರಿಹರಿಸಿಕೊಳ್ತಾರೆ: ಅಮೆರಿಕ ಅಧ್ಯಕ್ಷ ಟ್ರಂಪ್