ಇಸ್ಲಾಮಾಬಾದ್(ಪಾಕಿಸ್ತಾನ): 26/11ರ ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವುರ್ ರಾಣಾ ಕೆನಡಾದ ಪ್ರಜೆ. ಆತ ನಮ್ಮ ದೇಶದ ವ್ಯಕ್ತಿಯಲ್ಲ ಎಂದು ಪಾಕಿಸ್ತಾನ ಉಗ್ರನಿಂದ ಅಂತರ ಕಾಯ್ದುಕೊಂಡಿದೆ.
ಅಮೆರಿಕವು ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಿದ್ದು, ಆತನನ್ನು ಇಲ್ಲಿಗೆ ಗುರುವಾರ ಸಂಜೆ ಕರೆತರಲಾಗಿದೆ. ಇದಕ್ಕೂ ಮೊದಲು ಹೇಳಿಕೆ ಬಿಡುಗಡೆ ಮಾಡಿರುವ ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರ ಶಫ್ಕತ್ ಅಲಿ ಖಾನ್, ರಾಣಾ ಪಾಕಿಸ್ತಾನದ ಪೌರತ್ವ ಹೊಂದಿದ ನಾಗರಿಕನಲ್ಲ, ಬದಲಿಗೆ ಆತ ಕೆನಡಾ ಪೌರತ್ವವಿದೆ. ಹೀಗಾಗಿ ಆತ ಕೆನಡಾ ವ್ಯಕ್ತಿಯೇ ಹೊರತು, ಪಾಕಿಸ್ತಾನದವನಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಪಾಕಿಸ್ತಾನದ ಪೌರತ್ವವಿಲ್ಲ: ಮುಂಬೈ ದಾಳಿ ಆರೋಪಿಯು, ಕೆನಡಾಕ್ಕೆ ತೆರಳಿದ ನಂತರ 2 ದಶಕಗಳಿಂದ ಪಾಕಿಸ್ತಾನದ ಪೌರತ್ವವನ್ನು ನವೀಕರಿಸಿಲ್ಲ. ಸದ್ಯ ಆತನು ಕೆನಡಾದ ಪೌರತ್ವ ಹೊಂದಿದ್ದಾನೆ. ಯಾವುದೇ ಪಾಕಿಸ್ತಾನಿ ಪ್ರಜೆಗೆ ದೇಶವು ಎರಡು ಪೌರತ್ವ ನೀಡುವುದಿಲ್ಲ. ಹೀಗಾಗಿ, ಆತ ಕೆನಡಾದ ನಾಗರಿಕ ಎಂಬುದು ಇಲ್ಲಿ ಸ್ಪಷ್ಟ ಎಂದು ಪ್ರತಿಪಾದಿಸಿದ್ದಾರೆ.
1961ರಲ್ಲಿ ಪಾಕಿಸ್ತಾನದಲ್ಲಿ ಜನಿಸಿದ್ದ ತಹವ್ವುರ್ ರಾಣಾ, 1990ರ ದಶಕದಲ್ಲಿ ಕೆನಡಾಕ್ಕೆ ವಲಸೆ ಹೋಗಿದ್ದ. ಅಲ್ಲಿ ಆತನಿಗೆ ಪೌರತ್ವ ನೀಡಲಾಯಿತು. ಇದಕ್ಕೂ ಮೊದಲು ಆತ ಪಾಕಿಸ್ತಾನದ ಸೇನಾ ವೈದ್ಯಕೀಯ ದಳದಲ್ಲಿ ಸೇವೆ ಸಲ್ಲಿಸಿದ್ದ.
ರಾಣಾ ಮೇಲಿನ ಆರೋಪವೇನು?: 26/11 ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ಪಾಕಿಸ್ತಾನ ಮೂಲದ ಅಮೆರಿಕನ್ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿಯೊಂದಿಗೆ ರಾಣಾ ಸಂಬಂಧ ಹೊಂದಿದ್ದ. ಮುಂಬೈ ದಾಳಿಗೂ ಮೊದಲು ಉಗ್ರ ಹೆಡ್ಲಿ ಭಾರತಕ್ಕೆ ಬರಲು ರಾಣಾ ನೆರವು ನೀಡಿದ್ದ. ಇಲ್ಲಿನ ತಾಜ್ ಹೋಟೆಲ್ ಸೇರಿದಂತೆ ದಾಳಿ ನಡೆದ ಎಲ್ಲ ಸ್ಥಳಗಳ ಸಮೀಕ್ಷೆಗೆ ಬೆಂಬಲವಾಗಿದ್ದ ಎಂಬ ಆರೋಪವಿದೆ.
2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ 6 ಅಮೆರಿಕನ್ನರು ಸೇರಿದಂತೆ ಒಟ್ಟು 166 ಜನರು ಸಾವನ್ನಪ್ಪಿದರು. ಇದರಲ್ಲಿ 10 ಪಾಕಿಸ್ತಾನಿ ಭಯೋತ್ಪಾದಕರು 60 ಗಂಟೆಗಳಿಗೂ ಹೆಚ್ಚು ಕಾಲ ವಿಧ್ವಂಸಕ ಕೃತ್ಯ ನಡೆಸಿದ್ದರು. ಮುಂಬೈನ ಪ್ರತಿಷ್ಠಿತ ತಾಜ್ ಹೋಟೆಲ್ ಮತ್ತು ಪ್ರಮುಖ ಸ್ಥಳಗಳಲ್ಲಿ ಸರಣಿ ದಾಳಿ ನಡೆಸಿದ್ದರು. ಅಮೆರಿಕದಲ್ಲಿ ಬಂಧಿಯಾಗಿದ್ದ ರಾಣಾನನ್ನು 26/11ರ ದಾಳಿಗೆ ಸಂಚು ರೂಪಿಸಿದ ಆರೋಪದ ಮೇಲೆ ಗಡಿಪಾರು ಮಾಡಿಸಿಕೊಂಡು ಭಾರತಕ್ಕೆ ಕರೆತರಲಾಗಿದೆ.
ಇದನ್ನೂ ಓದಿ: ಮುಂಬೈ ದಾಳಿಕೋರ ರಾಣಾಗೆ ಶಿಕ್ಷೆ ಖಂಡಿತ, ಮರಣದಂಡನೆಯೂ ಸಾಧ್ಯತೆ: ಮಾಜಿ ಗೃಹ ಕಾರ್ಯದರ್ಶಿ