ವಾಷಿಂಗ್ಟನ್(ಯುಎಸ್ಎ): ಭಯೋತ್ಪಾದನೆಯಿಂದಾಗಿ ಜಾಗತಿಕವಾಗಿ ಮೂಲೆಗುಂಪಾಗುತ್ತಿರುವ ಪಾಕಿಸ್ತಾನ ಇದೀಗ ಭಾರತದ ಜೊತೆಗೆ ಶಾಂತಿ ಮರುಸ್ಥಾಪಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಾಯ ಬೇಡುತ್ತಿದೆ. ಈ ನಿಟ್ಟಿನಲ್ಲಿ ಅದು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ.
ಇತ್ತೀಚೆಗೆ ಇಸ್ಲಾಮಾಬಾದ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, "ಭಾರತದೊಂದಿಗಿನ ಸಂಘರ್ಷ ತಗ್ಗಿಸುವಲ್ಲಿ ಅಮೆರಿಕದ ಪಾತ್ರವನ್ನು ಶ್ಲಾಘಿಸಿದ್ದಾರೆ. ಇದೇ ವೇಳೆ, ಅಮೆರಿಕವು ಎರಡು ಅಣ್ವಸ್ತ್ರ ಹೊಂದಿದ ನೆರೆಹೊರೆ ದೇಶಗಳ ನಡುವೆ ವಿಸ್ತೃತ ಮಾತುಕತೆಗೆ ಸಹಾಯ ಮಾಡಬೇಕು" ಎಂದು ಮನವಿ ಮಾಡಿದರು.
ಕದನ ವಿರಾಮಕ್ಕೆ ಟ್ರಂಪ್ ಕಾರಣ- ಪಾಕಿಸ್ತಾನ: ಭಾರತ-ಪಾಕಿಸ್ತಾನ ಮಧ್ಯೆ ಕದನ ವಿರಾಮ ನೆಲೆಸಲು ಟ್ರಂಪ್ ಮಧ್ಯಸ್ತಿಕೆ ಕಾರಣ ಎಂಬ ಪಾಕ್ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರ ಹೇಳಿಕೆಯನ್ನು ಶರೀಫ್ ಬೆಂಬಲಿಸಿದರು. "ಸುಮಾರು 10 ಸಂದರ್ಭಗಳಲ್ಲಿ ಭಾರತ-ಪಾಕಿಸ್ತಾನ ನಡುವಿನ ಕದನ ವಿರಾಮಕ್ಕೆ ತಾವೇ ಕಾರಣ ಎಂದು ಟ್ರಂಪ್ ಹೇಳಿದ್ದಾರೆ. ಇದು ನಿಜ ಕೂಡಾ. ಇದರ ಕ್ರೆಡಿಟ್ ಅವರಿಗೆ ಹೋಗಬೇಕು. ಅವರ ಪ್ರಯತ್ನದಿಂದಲೇ ಎರಡು ದೇಶಗಳ ನಡುವೆ ಕದನ ವಿರಾಮ ಏರ್ಪಡಲು ಸಾಧ್ಯವಾಯಿತು. ಹಾಗಾಗಿ, ಅಮೆರಿಕ ಭಾರತದೊಂದಿಗೆ ವಿಸ್ತೃತ ಮಾತುಕತೆಗೆ ವ್ಯವಸ್ಥೆ ಕಲ್ಪಿಸಿದರೆ ನಮಗೆ ಅನುಕೂಲವಾಗಲಿದೆ" ಎಂದು ಭುಟ್ಟೋ ಹೇಳಿದ್ದರು.
ಕದನ ವಿರಾಮದಲ್ಲಿ ಟ್ರಂಪ್ ಪಾತ್ರವಿಲ್ಲ- ಭಾರತ: ಕದನ ವಿರಾಮ ನೆಲೆಸಲು ಟ್ರಂಪ್ ಪಾತ್ರ ಕಾರಣ ಎಂಬುದನ್ನು ಭಾರತ ಈಗಾಗಲೇ ಸಾರ್ವಜನಿಕವಾಗಿಯೇ ತಳ್ಳಿ ಹಾಕಿದೆ. ಉಭಯ ದೇಶಗಳ ನಡುವಿನ ಮಾತುಕತೆಯಲ್ಲಿ ಯಾವುದೇ ಮೂರನೇ ದೇಶದ ಪಾತ್ರವನ್ನು ಸ್ಪಷ್ಟವಾಗಿ ತಿರಸ್ಕರಿಸಿದೆ.
ಈ ಕುರಿತಾಗಿ ಸರ್ವಪಕ್ಷ ನಿಯೋಗವನ್ನು ಮುನ್ನಡೆಸುತ್ತಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಅಮೆರಿಕದಲ್ಲಿ ಮಾತನಾಡುತ್ತಾ, "ನಮ್ಮ ಶಿರದ ಮೇಲೆ ಬಂದೂಕು ಇಟ್ಟು ನಮ್ಮೊಂದಿಗೆ ಅವರು ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂಬುದನ್ನು ಅಮೆರಿಕ ಅರ್ಥಮಾಡಿಕೊಂಡಿದೆ ಎಂದು ನಾನು ಭಾವಿಸುತ್ತೇನೆ. ನಿಮ್ಮ ದೇಗುಲಗಳ ಮೇಲೆ ಗನ್‌ನಿಂದ ಗುರಿಯಿಟ್ಟವರೊಂದಿಗೆ ನೀವು ಮಾತುಕತೆ ನಡೆಸಲು ಸಾಧ್ಯವಿಲ್ಲ. ಇದೆಲ್ಲ ನಡೆಯದು" ಎಂದು ಇತ್ತೀಚೆಗೆ ಹೇಳಿದ್ದರು.
ಭಯೋತ್ಪಾದನೆಯಿಂದ ಭಾರತದಷ್ಟೇ ನಾವೂ ಕೂಡಾ ಸಂಕಷ್ಟಕ್ಕೊಳಗಾಗಿದ್ದೇವೆ ಎಂಬ ಪಾಕಿಸ್ತಾನದ ವರಸೆಯನ್ನೂ ಭಾರತೀಯ ನಿಯೋಗ ಕಟುವಾಗಿ ಟೀಕಿಸಿದೆ.
ಪಾಕಿಸ್ತಾನದ ನಿಯೋಗವು ನಾವೂ ಕೂಡಾ ಭಯೋತ್ಪಾದನೆಯಿಂದ ಭಾರತದಷ್ಟೇ ತೊಂದರೆಗೊಳಗಾಗಿದ್ದೇವೆ ಎಂದು ಹೇಳುತ್ತಾ ತಿರುಗಾಡುತ್ತಿದೆ. ಹಾಗಾದರೆ ಇದು ಯಾರ ತಪ್ಪು ಎಂದು ನಾವು ಕೇಳುತ್ತಿದ್ದೇವೆ. ನಿಮ್ಮ ನೆರೆಯವರಿಗೆ ಕಚ್ಚಲೆಂದು ನಿಮ್ಮ ಹಿತ್ತಲಿನಲ್ಲಿ ವಿಷದ ಹಾವುಗಳನ್ನು ಸಾಕಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಅವರು ಈಗ ತೆಹ್ರಿಕ್ ಇ ತಾಲಿಬಾನ್ ಪಾಕಿಸ್ತಾನ್‌ನಂಥ ಸಂಘಟನೆಗಳಿಂದ ದಾಳಿಗೊಳಗಾಗುತ್ತಿದ್ದಾರೆ. ಇಂಥ ಸಂಘಟನೆಗಳನ್ನು ಹುಟ್ಟು ಹಾಕಿದವರು ಯಾರು? ಇಂಥ ಪ್ರಶ್ನೆಗಳಿಗೆ ನಮಗೆ ಉತ್ತರ ಬೇಕು. ಪಾಕಿಸ್ತಾನ ತಮ್ಮ ಸಮಸ್ಯೆಗಳನ್ನು ಮೊದಲು ನೋಡಿಕೊಳ್ಳಬೇಕು, ಮತ್ತು ಆ ನಿಟ್ಟಿನಲ್ಲಿ ಗಂಭೀರ ಆತ್ಮಾವಲೋಕನ ಮಾಡಿಕೊಳ್ಳಬೇಕು" ಎಂದು ಹೇಳಿದ್ದರು.