ಇಸ್ಲಾಮಾಬಾದ್ (ಪಾಕಿಸ್ತಾನ): ಭಾರತದೊಂದಿಗೆ ಶಾಂತಿ ಮಾತುಕತೆಗೆ ಸಿದ್ಧರಿದ್ದೇವೆ ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ. ಪಂಜಾಬ್ ಪ್ರಾಂತ್ಯದ ಕಮ್ರಾ ವಾಯುನೆಲೆಗೆ ಭೇಟಿ ನೀಡಿದ್ದ ಅವರು ಅಧಿಕಾರಿಗಳು ಮತ್ತು ಸೈನಿಕರ ಜೊತೆ ಚರ್ಚೆ ನಡೆಸಿದರು. ಈ ವೇಳೆ ಭಾರತದೊಂದಿಗಿನ ಮಾತುಕತೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಪ್ರಧಾನಿ ಶೆಹಬಾಜ್ ಜೊತೆ ಉಪ ಪ್ರಧಾನಿ ಇಶಾಕ್ ದಾರ್, ರಕ್ಷಣಾ ಸಚಿವ ಖವಾಜಾ ಆಸಿಫ್, ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್, ವಾಯುಪಡೆ ಮುಖ್ಯಸ್ಥ ಜಹೀರ್ ಅಹ್ಮದ್ ಬಾಬರ್ ಸಿಧು ವಾಯುನೆಲೆಗೆ ಭೇಟಿ ನೀಡಿದ್ದರು.
ನಾಲ್ಕು ದಿನಗಳ ಕಾಲ ತೀವ್ರ ಗಡಿಯಾಚೆಗಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ಬಳಿಕ ಪರಸ್ಪರ ಸಂಘರ್ಷ ಕೊನೆಗೊಳಿಸಲು ಮೇ 10ರಂದು ಭಾರತ ಮತ್ತು ಪಾಕಿಸ್ತಾನಗಳು ಒಪ್ಪಿದ್ದವು. ಅದಾದ ನಂತರ ಎರಡನೇ ಬಾರಿಗೆ ವಾಯುನೆಲೆಯೊಂದಕ್ಕೆ ಪಾಕ್ ಪ್ರಧಾನಿ ಭೇಟಿ ಕೊಟ್ಟಿದ್ದಾರೆ. ಬುಧವಾರ, ಸಿಯಾಲ್‌ಕೋಟ್‌ನ ಪಸ್ರೂರ್ ಕಂಟೋನ್ಮೆಂಟ್‌ಗೆ ಪ್ರಧಾನಿ ಶೆಹಬಾಜ್ ಭೇಟಿ ನೀಡಿ, ಸೈನಿಕರೊಂದಿಗೆ ಮಾತುಕತೆ ನಡೆಸಿದ್ದರು.
ಜಮ್ಮು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನರ ಹತ್ಯೆ ಬಳಿಕ ಭಾರತೀಯ ಸಶಸ್ತ್ರ ಪಡೆಗಳು ಮೇ 7ರ ಮುಂಜಾನೆ ಆಪರೇಷನ್ ಸಿಂಧೂರ ನಡೆಸಿದ್ದವು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಅನೇಕ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿ ನಡೆಸಿದ ವೈಮಾನಿಕ ದಾಳಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಉಗ್ರರನ್ನು ಕೊಲ್ಲಲಾಗಿತ್ತು.
ಅದರ ನಂತರ ಪಾಕಿಸ್ತಾನವು ಎಲ್ಒಸಿ ಸೇರಿದಂತೆ ಗಡಿಯುದ್ದಕ್ಕೂ ರಾತ್ರಿ ವೇಳೆ ನಿರಂತರ ಡ್ರೋನ್ ಹಾಗೂ ಗುಂಡಿನ ದಾಳಿ ನಡೆಸಿತ್ತು. ಭಾರತೀಯ ಸೇನಾ ನೆಲೆಗಳ ಮೇಲೆಯೂ ದಾಳಿಗೆ ಯತ್ನಿಸಿತ್ತು. ಪ್ರತಿಯಾಗಿ ಭಾರತವೂ ದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು.
ಭಾರತೀಯ ಸಶಸ್ತ್ರ ಪಡೆಗಳು ರಫೀಕಿ, ಮುರಿದ್, ಚಕ್ಲಾಲಾ, ರಹೀಂ ಯಾರ್ ಖಾನ್, ಸುಕ್ಕೂರ್ ಮತ್ತು ಚುನಿಯನ್ ಸೇರಿದಂತೆ ಹಲವಾರು ಪಾಕಿಸ್ತಾನಿ ಮಿಲಿಟರಿ ನೆಲೆಗಳ ಮೇಲೆ ಪ್ರತಿದಾಳಿ ನಡೆಸಿದ್ದವು.
ಇದನ್ನೂ ಓದಿ : ಭಾರತದ ಮೇಲೆ ಮರು ದಾಳಿ ನಡೆಸಲು ಸೇನೆಗೆ ಪರಮಾಧಿಕಾರ ನೀಡಿದ ಪಾಕಿಸ್ತಾನ - PAK PM SHEHBAZ SHARIF