ಇಸ್ಲಾಮಾಬಾದ್ (ಪಾಕಿಸ್ತಾನ) : ಭಯೋತ್ಪಾದನೆ, ಮಾದಕ ಮತ್ತು ಮಾನವ ಕಳ್ಳಸಾಗಣೆ, ಅತ್ಯಾಚಾರ, ಕೊಲೆ, ದರೋಡೆಗೆ ಪಾಕಿಸ್ತಾನ ಕುಖ್ಯಾತಿ. ಆ ದೇಶದ ಸಾವಿರಾರು ಜನರು ವಿದೇಶಗಳ ಜೈಲಲ್ಲಿ ಕೊಳೆಯುತ್ತಿದ್ದಾರೆ. ವಿವಿಧ ಪ್ರಕರಣಗಳಲ್ಲಿ ಸಿಲುಕಿ ಶಿಕ್ಷೆ ಅನುಭವಿಸುತ್ತಿರುವ ತನ್ನ ದೇಶದ ನಾಗರಿಕರ ಸಂಖ್ಯೆ ಎಷ್ಟು ಎಂಬುದನ್ನು ಪಾಕಿಸ್ತಾನ ಸರ್ಕಾರವೇ ಸಂಸತ್ತಿಗೆ ಮಾಹಿತಿ ನೀಡಿದೆ.
ಅಲ್ಲಿನ ಮಾಧ್ಯಮಗಳ ವರದಿಯ ಪ್ರಕಾರ, ಮಾದಕವಸ್ತು ಕಳ್ಳಸಾಗಣೆ, ಅತ್ಯಾಚಾರ, ಕೊಲೆ ಮತ್ತು ದರೋಡೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ 23,456 ಪಾಕಿಸ್ತಾನಿ ಪ್ರಜೆಗಳು ವಿದೇಶಗಳ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಸೌದಿಯಲ್ಲೇ ಅರ್ಧಕ್ಕಿಂತ ಹೆಚ್ಚು ಜನ ಬಂಧಿ: ಈ ಪೈಕಿ ಅರ್ಧಕ್ಕಿಂತ ಹೆಚ್ಚು ಅಂದರೆ, 12,156 ಜನರು ಸೌದಿ ಅರೇಬಿಯಾ ಒಂದರಲ್ಲೇ ಬಂಧಿಯಾಗಿದ್ದಾರೆ ಎಂದು ಸಚಿವಾಲಯ ಸಂಸತ್ತಿಗೆ ಪ್ರಶ್ನೋತ್ತರ ಸಮಯದಲ್ಲಿ ಲಿಖಿತ ಉತ್ತರ ನೀಡಿದೆ.
ಉಳಿದಂತೆ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) 5,292 ಪಾಕಿಸ್ತಾನಿಗಳನ್ನು ಬಂಧಿಸಿದ್ದರೆ, 450 ಜನರನ್ನು ಬಹ್ರೇನ್‌ನಲ್ಲಿ ಬಂಧಿಸಲಾಗಿದೆ. ಇವರೆಲ್ಲರ ಮೇಲೆ ಮಾದಕವಸ್ತು ಕಳ್ಳಸಾಗಣೆ, ಮಾದಕವಸ್ತು ಬಳಕೆ ಮತ್ತು ವಂಚನೆ ಆರೋಪಗಳಿವೆ ಎಂದಿದೆ.
ಚೀನಾದಲ್ಲಿ 400, ಕತಾರ್ನಲ್ಲಿ 338, ಒಮಾನ್ನಲ್ಲಿ 309, ಮಲೇಷ್ಯಾದಲ್ಲಿ 255 ಜನರನ್ನು ಜೈಲು ಶಿಕ್ಷೆಗೆ ಗುರಿಪಡಿಸಲಾಗಿದೆ. ಇವರ ಮೇಲೆ ಮಾದಕವಸ್ತು ಕಳ್ಳಸಾಗಣೆ, ಅತ್ಯಾಚಾರ, ದರೋಡೆ, ಕೊಲೆ, ನಕಲಿ ಕರೆನ್ಸಿ ಬಳಕೆ, ಅಕ್ರಮ ವಲಸೆಯಂತಹ ಆರೋಪಗಳಿವೆ ಎಂದು ಸರ್ಕಾರ ತಿಳಿಸಿದೆ. ಬಂಧಿತರಿಗೆ ಕಾನ್ಸುಲರ್ಗಳ ಮೂಲಕ ಭೇಟಿ, ಅವರ ಪರಿಸ್ಥಿತಿಗಳ ಪರಿಶೀಲನೆ ಮತ್ತು ಕೈದಿಗಳ ಚಿಕಿತ್ಸೆಗೆ ಬೇಕಾದ ಸೌಲಭ್ಯವನ್ನು ಒದಗಿಸುತ್ತಿರುವುದಾಗಿ ಸಚಿವಾಲಯ ಹೇಳಿಕೊಂಡಿದೆ.
ಭಾರತದಲ್ಲಿ ಎಷ್ಟು ಪಾಕಿಗಳು ಬಂಧಿತರಾಗಿದ್ದಾರೆ? : ಭಾರತದ ಜೊತೆ ಸಂಘರ್ಷ ನಡೆಸುತ್ತಿರುವ ಪಾಕಿಸ್ತಾನವು ಇಲ್ಲಿ ತನ್ನ ಎಷ್ಟು ನಾಗರಿಕರು ಶಿಕ್ಷೆ ಅನುಭವಿಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಆದಾಗ್ಯೂ, ಭಾರತದ ವಿದೇಶಾಂಗ ಇಲಾಖೆಯ ಮಾಹಿತಿಯ ಪ್ರಕಾರ, 741 ಪಾಕಿಗಳು ವಿವಿಧ ಜೈಲುಗಳಲ್ಲಿ ಕಂಬಿ ಎಣಿಸುತ್ತಿರುವುದಾಗಿ ತಿಳಿದುಬಂದಿದೆ.
ಅಕ್ರಮ ಪ್ರವೇಶ, ಭಯೋತ್ಪಾದನೆ, ಅಕ್ರಮ ಮೀನುಗಾರಿಕೆ, ಮಾದಕವಸ್ತು ಸಾಗಣೆ ಸೇರಿದಂತೆ ವಿವಿಧ ಆರೋಪಗಳ ಮೇಲೆ ಪಾಕಿಸ್ತಾನದ ಪ್ರಜೆಗಳು ಭಾರತದ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಯಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದ ಭಾರತವು, ಸದ್ಯ ಕದನ ವಿರಾಮ ನೀಡಿದೆ. ರಾಜತಾಂತ್ರಿಕವಾಗಿ ಆ ದೇಶದ ವಿರುದ್ಧ ಸಮರ ಮುಂದುವರಿಸಿದೆ.
ಇದನ್ನೂ ಓದಿ; 'ನಾವು ಕಳೆದುಕೊಂಡ ವಿಮಾನಗಳೆಷ್ಟು'?- ಜೈಶಂಕರ್ಗೆ ರಾಹುಲ್ ಪ್ರಶ್ನೆ; ಇದು ಪಾಕಿಸ್ತಾನದ ಭಾಷೆಯಂತಿದೆ ಎಂದ ಬಿಜೆಪಿ