ನ್ಯೂಯಾರ್ಕ್: ನ್ಯೂಯಾರ್ಕ್ ನಗರವು ಅಧಿಕೃತವಾಗಿ ಏಪ್ರಿಲ್ 14 ಅನ್ನು "ಡಾ. ಭೀಮರಾವ್ ರಾಮ್ಜಿ ಅಂಬೇಡ್ಕರ್ ದಿನ" ಎಂದು ಘೋಷಣೆ ಮಾಡಿದೆ. ನ್ಯೂಯಾರ್ಕ್ ನಗರದ ಮೇಯರ್ ಎರಿಕ್ ಆಡಮ್ಸ್ ಅಧಿಕೃತ ಘೋಷನೆಗೆ ಸಹಿ ಹಾಕಿದರು. ಜಾಗತಿಕವಾಗಿ ಮಾನವ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯದ ಪ್ರವರ್ತಕ ಎಂದು ಪೂಜಿಸಲ್ಪಡುವ ಡಾ.ಬಿ.ಅಂಬೇಡ್ಕರ್ ಅವರ 134ನೇ ಜಯಂತಿಯಂದು ಈ ಮಹತ್ವದ ನಿರ್ಧಾರದ ಮೂಲಕ ಭಾರತ ಸಂವಿಧಾನ ಶಿಲ್ಪಿಗೆ ನ್ಯೂಯಾರ್ಕ್ ನಗರ ಗೌರವ ಸಲ್ಲಿಸಿದೆ.
ಅಂಬೇಡ್ಕರ್ಗೆ ವಿಶೇಷ ನಮನ ಸಲ್ಲಿಸಿದ ನ್ಯೂಯಾರ್ಕ್ ನಗರ: ಸಾಮಾಜಿಕವಾಗಿ, ಆರ್ಥಿಕವಾಗಿ ಅಂಚಿನಲ್ಲಿರುವ ಸಮುದಾಯಗಳಿಗೆ ಪ್ರಜಾಪ್ರಭುತ್ವ, ಘನತೆ ಮತ್ತು ಸಾಮಾಜಿಕ ನ್ಯಾಯ ದೊರಕುವಲ್ಲಿ ಜೀವನದ ಉದ್ದಕ್ಕೂ ಹೋರಾಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ವಿಶೇಷ ಗೌರವ ಸಂದಿದೆ. "ಡಾ.ಅಂಬೇಡ್ಕರ್ ಶೋಷಣೆಯ ವಿರುದ್ಧ, ವೈವಿಧ್ಯತೆ, ಸಮಾನತೆಗಾಗಿ ಹೋರಾಟದಲ್ಲೇ ಜೀವನ ಕಳೆದವರು" ಎಂದು ಮೇಯರ್ ಆಡಮ್ಸ್ ಘೋಷಣೆಯಲ್ಲಿ ತಿಳಿಸಿದ್ದಾರೆ.

ವಿಶ್ವದ ಶ್ರೇಷ್ಠ ಮನಸ್ಸುಗಳನ್ನು ಪೋಷಿಸಿದ ಕೀರ್ತಿ: ನ್ಯೂಯಾರ್ಕ್‌ನಲ್ಲಿ ನಡೆದ ಆಚರಣೆಯೊಂದರಲ್ಲಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮದಾಸ್ ಅಠಾವಳೆ ಮಾತನಾಡಿ, "ಕೊಲಂಬಿಯಾದಿಂದ ಭಾರತದ ಭವಿಷ್ಯವನ್ನು ಸೃಷ್ಟಿಸುವವರೆಗಿನ ಅವರ ಪ್ರಯಾಣವು ನ್ಯೂಯಾರ್ಕ್ ಅವರನ್ನು ವಿಶ್ವದ ಶ್ರೇಷ್ಠ ಮನಸ್ಸುಗಳನ್ನು ಹೇಗೆ ಪೋಷಿಸಿದೆ ಎಂಬುದನ್ನು ತೋರಿಸುತ್ತದೆ" ಎಂದು ಹೇಳಿದರು.
ಅಂಬೇಡ್ಕರ್ ಅವರನ್ನು ಮಹಾನ್ ನಾಯಕ ಎಂದು ಕರೆದ ಅವರು, ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಕಚೇರಿಯಲ್ಲಿ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾಗುವುದು ಎಂದು ತಿಳಿಸಿದರು.
ನ್ಯೂಯಾರ್ಕ್ನ ಈ ಅಧಿಕೃತ ಘೋಷಣೆಯ ರೂವಾರಿ ಫೌಂಡೇಶನ್ ಫಾರ್ ಹ್ಯೂಮನ್ ಹಾರಿಜಾನ್ನ ಅಧ್ಯಕ್ಷ ದಿಲೀಪ್ ಮಾಸ್ಕೆ. ಇವರು 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲದೊಂದಿದೆ. ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಮೊದಲ ಅಂಬೇಡ್ಕರ್ ಜಯಂತಿ ಆಚರಣೆ ಮಾಡಿದ್ದರ ನೇತೃತ್ವವನ್ನೂ ವಹಿಸಿದ್ದರು.
ಭಾರತೀಯ ವಲಸಿಗರ ಪರವಾಗಿ ಕೃತಜ್ಞತೆ: "ಈ ಘೋಷಣೆ ಸಾಂಕೇತಿಕಕ್ಕಿಂತ ಹೆಚ್ಚಿನದಾಗಿದೆ. ಇದು ನ್ಯೂಯಾರ್ಕ್ ಅನ್ನು ಮಾನವ ಹಕ್ಕುಗಳು ಮತ್ತು ನ್ಯಾಯಕ್ಕಾಗಿ ಜಾಗತಿಕ ರಾಜಧಾನಿಯಾಗಿ ಇರಿಸುವ ನೈತಿಕ ಘೋಷಣೆಯಾಗಿದೆ. ಡಾ. ಅಂಬೇಡ್ಕರ್ ಅವರ ಸಂದೇಶಗಳು ವಿಶ್ವಾದ್ಯಂತ ಅಸಮಾನತೆಯ ವಿರುದ್ಧದ ಸಮಕಾಲೀನ ಹೋರಾಟಗಳೊಂದಿಗೆ ಪ್ರತಿಧ್ವನಿಸುತ್ತಿರುವುದರಿಂದ ಈ ಮನ್ನಣೆ ದೊರೆತಿದೆ" ಎಂದು ಮಾಸ್ಕೆ ಹೇಳಿದರು.
"ಅಂಬೇಡ್ಕರ್ ಅವರನ್ನು ಜಾಗತಿಕ ಐಕಾನ್ ಆಗಿ ಮಾಡಿದ್ದಕ್ಕಾಗಿ ನಾವು ಮೇಯರ್ ಆಡಮ್‌ಗೆ ನಿಜವಾಗಿಯೂ ಕೃತಜ್ಞತೆ ಸಲ್ಲಿಸುತ್ತೇವೆ" ಎಂದು ಅವರು ಇಡೀ ಭಾರತೀಯ ವಲಸಿಗರ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ವಿಶ್ವಸಂಸ್ಥೆಯಲ್ಲಿ ಡಾ. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಆಚರಿಸುವಲ್ಲಿ ಮಸ್ಕೆ ಪ್ರಮುಖ ಪಾತ್ರ ವಹಿಸಿದ್ದಾರೆ. ಫೌಂಡೇಶನ್ ಫಾರ್ ಹ್ಯೂಮನ್ ಹಾರಿಜಾನ್ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ 195 ದೇಶಗಳ ನಾಯಕರು ಮತ್ತು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ಅವರು ಅಮೆರಿಕದ ನ್ಯೂಯಾರ್ಕ್ನ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ವಿಷಯದಲ್ಲಿ 1927ರಲ್ಲಿ ಪಿಎಚ್ಡಿ ಪದವಿ ಪಡೆದರು. ಕಳೆದ ವರ್ಷ ನ್ಯೂಯಾರ್ಕ್ ಡಾ. ಅಂಬೇಡ್ಕರ್ ಅವರ ಗೌರವಾರ್ಥವಾಗಿ, ಮ್ಯಾನ್ಹ್ಯಾಟನ್ನ ಪೂರ್ವ 63ನೇ ಬೀದಿಗೆ, ಡಾ.ಬಿ.ಆರ್.ಅಂಬೇಡ್ಕರ್ ಮಾರ್ಗ ಎಂದು ನಾಮಕರಣ ಮಾಡಿತ್ತು.
ಇದನ್ನೂ ಓದಿ: ಬೆಂಗಳೂರಲ್ಲಿ ಆಂಧ್ರ ಮಾದರಿ ಮೀರಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲಾಗುವುದು: ಸಿಎಂ ಸಿದ್ದರಾಮಯ್ಯ