ಮಾಲೆ(ಮಾಲ್ಡೀವ್ಸ್): ಇಸ್ರೇಲಿ ಪ್ರಜೆಗಳು ತನ್ನ ದೇಶಕ್ಕೆ ಪ್ರವೇಶಿಸದಂತೆ ಮಾಲ್ಡೀವ್ಸ್ ಸರ್ಕಾರ ಆದೇಶ ಹೊರಡಿಸಿದೆ. ಇಸ್ರೇಲಿ ಪಾಸ್ ಪೋರ್ಟ್ ಹೊಂದಿರುವ ವ್ಯಕ್ತಿಗಳು ಮಾಲ್ಡೀವ್ಸ್ ಗೆ ಪ್ರವೇಶಿಸುವುದನ್ನು ನಿಷೇಧಿಸುವ ವಲಸೆ ಕಾಯ್ದೆಯ ಮೂರನೇ ತಿದ್ದುಪಡಿಗೆ ಮಾಲ್ಡೀವ್ಸ್ ಸರ್ಕಾರ ಮಂಗಳವಾರ ಅನುಮೋದನೆ ನೀಡಿದೆ.
ಮಾಲ್ಡೀವ್ಸ್ ವಲಸೆ ಕಾಯ್ದೆಗೆ (ಕಾನೂನು ಸಂಖ್ಯೆ 01/2007) ಮೂರನೇ ತಿದ್ದುಪಡಿಯನ್ನು 2025 ರ ಏಪ್ರಿಲ್ 15 ರಂದು ನಡೆದ 20 ನೇ ಅಧಿವೇಶನದ ವರ್ಷದ ಮೊದಲ ಕಲಾಪದ ದಿನದಂದು ಪೀಪಲ್ಸ್ ಮಜ್ಲಿಸ್ ಅಂಗೀಕರಿಸಿದ ನಂತರ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅದನ್ನು ಅನುಮೋದಿಸಿದ್ದಾರೆ ಎಂದು ಮಾಲ್ಡೀವ್ಸ್ ಅಧ್ಯಕ್ಷರ ಕಚೇರಿಯ ಪ್ರಕಟಣೆ ತಿಳಿಸಿದೆ.
"ಈ ತಿದ್ದುಪಡಿಯ ಮೂಲಕ ವಲಸೆ ಕಾಯ್ದೆಗೆ ಹೊಸ ನಿಯಮವನ್ನು ಸೇರ್ಪಡೆ ಮಾಡಲಾಗಿದೆ. ಇಸ್ರೇಲಿ ಪಾಸ್ ಪೋರ್ಟ್ ಹೊಂದಿರುವ ವ್ಯಕ್ತಿಗಳು ಮಾಲ್ಡೀವ್ಸ್ ಭೂಪ್ರದೇಶಕ್ಕೆ ಪ್ರವೇಶಿಸುವುದನ್ನು ಈ ನಿಯಮವು ಸ್ಪಷ್ಟವಾಗಿ ನಿಷೇಧಿಸುತ್ತದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ಯಾಲೆಸ್ಟೈನ್ನಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ವಿರೋಧಿಸಿ ಹಾಗೂ ಪ್ಯಾಲೆಸ್ಟೈನ್ ಜನತೆಗೆ ಬೆಂಬಲ ವ್ಯಕ್ತಪಡಿಸುವ ಉದ್ದೇಶದಿಂದ ಮಾಲ್ಡೀವ್ಸ್ ಈ ಕ್ರಮ ಕೈಗೊಂಡಿದೆ.
ವಿಶ್ವಸಂಸ್ಥೆಯ ನಿರ್ಣಯಗಳು ಮತ್ತು ಅಂತರರಾಷ್ಟ್ರೀಯ ಕಾನೂನು ಮಾನದಂಡಗಳಿಗೆ ಅನುಗುಣವಾಗಿ, ಪೂರ್ವ ಜೆರುಸಲೇಂ ಅನ್ನು ರಾಜಧಾನಿಯಾಗಿಸಿ 1967 ರ ಪೂರ್ವದ ಗಡಿಗಳ ಆಧಾರದ ಮೇಲೆ ಸ್ವತಂತ್ರ ಮತ್ತು ಸಾರ್ವಭೌಮ ಪ್ಯಾಲೆಸ್ಟೈನ್ ದೇಶವನ್ನು ಸ್ಥಾಪಿಸಲು ಮಾಲ್ಡೀವ್ಸ್ನ ತಾತ್ವಿಕ ಬೆಂಬಲವನ್ನು ಅಧ್ಯಕ್ಷ ಮುಯಿಝು ನಿರಂತರವಾಗಿ ಪುನರುಚ್ಚರಿಸಿದ್ದಾರೆ.
ಮಾಲ್ಡೀವ್ಸ್ ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಗೆ ಉತ್ತರದಾಯಿತ್ವಕ್ಕಾಗಿ ವಾದಿಸುತ್ತಲೇ ಇದೆ ಮತ್ತು ಇಸ್ರೇಲ್ನ ಕ್ರಮಗಳನ್ನು ವಿವಿಧ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಖಂಡಿಸಿದೆ.
ಇದನ್ನೂ ಓದಿ : ಸುಂಕ ಸಮರ: ಅಮೆರಿಕ ನಿರ್ಮಿತ ಬೋಯಿಂಗ್ ವಿಮಾನಗಳ ಖರೀದಿ ನಿಲ್ಲಿಸಿದ ಚೀನಾ - USA CHINA TARIFF WAR