ಜೆರುಸಲೇಂ: ಇಸ್ರೇಲ್ನ ದೇಶೀಯ ಗುಪ್ತಚರ ಸಂಸ್ಥೆ ಶಿನ್ ಬೆಟ್ನ ಮುಖ್ಯಸ್ಥರನ್ನು ಸೋಮವಾರ ವಜಾಗೊಳಿಸಲಾಗಿದೆ. ಅಕ್ಟೋಬರ್ 7, 2023ರ ಘಟನೆಯ ನಂತರ ಅವರು ನನ್ನ ನಂಬಿಕೆಯನ್ನು ಉಳಿಸಿಕೊಂಡಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ ಕೆಲವೇ ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.
"ಐಎಸ್ಎ ನಿರ್ದೇಶಕ ರೋನೆನ್ ಬಾರ್ ಅವರ ಅಧಿಕಾರಾವಧಿಯನ್ನು ಕೊನೆಗೊಳಿಸುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪ್ರಸ್ತಾಪವನ್ನು ಸರ್ಕಾರ ಸರ್ವಾನುಮತದಿಂದ ಅನುಮೋದಿಸಿದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಹುದ್ದೆಗೆ ಹೊಸಬರನ್ನು ನೇಮಕ ಮಾಡಿದ ನಂತರ ಅಥವಾ ಏಪ್ರಿಲ್ 10 ರೊಳಗೆ ಅವರು ತಮ್ಮ ಹುದ್ದೆಯನ್ನು ತ್ಯಜಿಸಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
1993 ರಲ್ಲಿ ಏಜೆನ್ಸಿಗೆ ಸೇರಿದ ಬಾರ್ ಅವರನ್ನು ವಜಾಗೊಳಿಸಲು "ನಿರಂತರ ನಂಬಿಕೆಯ ಕೊರತೆ" ಕಾರಣ ಎಂದು ನೆತನ್ಯಾಹು ಭಾನುವಾರ ಹೇಳಿದ್ದರು. ಮುಂದಿನ ವರ್ಷ ಅಧಿಕಾರಾವಧಿ ಕೊನೆಗೊಳ್ಳಲಿದ್ದ ಬಾರ್ ಅವರನ್ನು ಹಿಂದಿನ ಇಸ್ರೇಲ್ ಸರ್ಕಾರವು ಅಕ್ಟೋಬರ್ 2021 ರಲ್ಲಿ ಶಿನ್ ಬೆಟ್ ಮುಖ್ಯಸ್ಥರನ್ನಾಗಿ ನೇಮಿಸಿತ್ತು.
ಗಾಜಾದಲ್ಲಿ ಯುದ್ಧ ಆರಂಭವಾಗಲು ಕಾರಣವಾದ ಅಕ್ಟೋಬರ್ನ ಹಮಾಸ್ ದಾಳಿಯ ಮೊದಲೇ ಬಾರ್ ಹಾಗೂ ನೆತನ್ಯಾಹು ಮಧ್ಯದ ಸಂಬಂಧ ಹದಗೆಟ್ಟಿತ್ತು. ವಿಶೇಷವಾಗಿ ದೇಶದಲ್ಲಿ ಜನರ ಮಧ್ಯೆ ಭಿನ್ನಾಭಿಪ್ರಾಯ ಹುಟ್ಟುಹಾಕಿದ ಉದ್ದೇಶಿತ ನ್ಯಾಯಾಂಗ ಸುಧಾರಣೆಗಳ ವಿಚಾರದಲ್ಲಿ ಇಬ್ಬರ ಸಂಬಂಧ ಹಳಸಿತ್ತು. ಹಮಾಸ್ ದಾಳಿಯ ಬಗ್ಗೆ ಮಾರ್ಚ್ 4 ರಂದು ಶಿನ್ ಬೆಟ್ ಆಂತರಿಕ ವರದಿಯನ್ನು ಬಿಡುಗಡೆ ಮಾಡಿದ ನಂತರ ಇಬ್ಬರ ಮಧ್ಯದ ಕಂದಕ ಮತ್ತಷ್ಟು ದೊಡ್ಡದಾಗಿತ್ತು.
ದಾಳಿಯನ್ನು ತಡೆಗಟ್ಟುವಲ್ಲಿ ಶಿನ್ ಬೆಟ್ ವಿಫಲವಾಗಿದೆ ಎಂದು ವರದಿ ಹೇಳಿದ್ದು, ಅದರ ಜೊತೆಗೆ ಶಿನ್ ಬೆಟ್ನ ಶಾಂತಿ ಆಧರಿತ ನೀತಿಯು ಹಮಾಸ್ಗೆ ದೊಡ್ಡ ಮಟ್ಟದಲ್ಲಿ ಮಿಲಿಟರಿಯನ್ನು ಸಂಘಟಿಸಲು ಅವಕಾಶ ಮಾಡಿಕೊಟ್ಟಿತು ಎಂದು ತಿಳಿಸಿದೆ. ದಾಳಿಯನ್ನು ತಡೆಗಟ್ಟುವಲ್ಲಿ ತನ್ನ ಏಜೆನ್ಸಿಯ ವೈಫಲ್ಯದ ಜವಾಬ್ದಾರಿಯನ್ನು ಹೊತ್ತು ತನ್ನ ಅವಧಿ ಮುಗಿಯುವ ಮೊದಲೇ ರಾಜೀನಾಮೆ ನೀಡುವುದಾಗಿ ಬಾರ್ ಈ ಹಿಂದೆಯೇ ಸುಳಿವು ನೀಡಿದ್ದರು.
ಬಾರ್ ಅವರನ್ನು ವಜಾ ಮಾಡಿದ್ದನ್ನು ಖಂಡಿಸಿರುವ ಪ್ರತಿಪಕ್ಷಗಳು, ನೆತನ್ಯಾಹು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿವೆ. ಜೆರುಸಲೇಂನಲ್ಲಿರುವ ನೆತನ್ಯಾಹು ಅವರ ಖಾಸಗಿ ನಿವಾಸದ ಹೊರಗೆ ಮತ್ತು ಸಚಿವರು ಸಭೆ ನಡೆಸುತ್ತಿದ್ದ ಇಸ್ರೇಲ್ ಸಂಸತ್ತಿನ ಹೊರಗೆ ಗುರುವಾರ ತಡರಾತ್ರಿ ಸಾವಿರಾರು ಜನ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ವಿಶ್ವದ ಅತ್ಯಂತ ಸುಖಿ ದೇಶ ಯಾವುದು? ಸಂತೋಷ ಸೂಚ್ಯಂಕದಲ್ಲಿ ಭಾರತಕ್ಕೆಷ್ಟು ಸ್ಥಾನ? - WORLD HAPPINESS REPORT 2025