ಜೇರುಸಲೇಂ (ಇಸ್ರೇಲ್) : ಕದನ ವಿರಾಮ ಉಲ್ಲಂಘಿಸಿ ಇಸ್ರೇಲ್ ಮಂಗಳವಾರ ನಸುಕಿನಲ್ಲಿ ಹಮಾಸ್ ಗುರಿಯಾಗಿಸಿ ಗಾಜಾ ಪಟ್ಟಿ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಕನಿಷ್ಠ 200 ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ಯಾಲೇಸ್ತೇನಿಯನ್ ಅಧಿಕಾರಿಗಳು ತಿಳಿಸಿದ್ದಾರೆ.
ವೈದ್ಯಕೀಯ ಅಧಿಕಾರಿಗಳ ಪ್ರಕಾರ, ದಾಳಿಯಲ್ಲಿ 66 ಜನರು ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಉತ್ತರ ಗಾಜಾ, ಧೀರ್ ಆಲ್ ಬಲಹಾ, ಖಾನ್ ಯೂನಿಸ್, ರಫಾ ಮತ್ತು ಗಾಜಾ ನಗರದ ಮೇಲೆ ದಾಳಿ ನಡೆಸಲಾಗಿದೆ.
ಈ ದಾಳಿಯಲ್ಲಿ ಕನಿಷ್ಠ 200 ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.
ದಾಳಿಯ ಕುರಿತು ಮಾತನಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಒತ್ತೆಯಾಳುಗಳ ಬಿಡುಗಡೆ ಸಂಬಂಧ ಹಮಾಸ್ ಪದೇ ಪದೇ ನಿರಾಕರಣೆ ಮಾಡುತ್ತಿದೆ. ಹಾಗೇ ಕದನ ವಿರಾಮ ವಿಸ್ತರಣೆ ಕುರಿತ ಮಾತುಕತೆಯಲ್ಲಿ ಉಂಟಾದ ಪ್ರಗತಿ ಕೊರತೆ ಹಿನ್ನೆಲೆ ದಾಳಿಗೆ ಆದೇಶ ನೀಡಲಾಯಿತು ಎಂದು ತಮ್ಮ ಸೇನೆಯ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಹಮಾಸ್ ಮೇಲೆ ದಾಳಿ ನಡೆಸುವ ಮೂಲಕ ಬೆದರಿಕೆ, ಒತ್ತಡ ಹಾಕುವ ತಂತ್ರವೋ ಅಥವಾ ಮತ್ತೆ ಯುದ್ಧ ಆರಂಭಿಸಲಿದೆಯಾ ಎಂಬ ಕುರಿತು ಇಸ್ರೇಲ್ ತಕ್ಷಣಕ್ಕೆ ಯಾವುದನ್ನು ಸ್ಪಷ್ಟಪಡಿಸಿಲ್ಲ. ಇಸ್ರೇಲ್ ಕದನ ವಿರಾಮ ಉಲ್ಲಂಘಿಸಿ ನಡೆಸಿರುವ ದಾಳಿಗೆ ಎಚ್ಚರಿಕೆ ನೀಡಿರುವ ಹಮಾಸ್, ಇದು ಒತ್ತೆಯಾಳುಗಳ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸಲಿದೆ ಎಂದಿದೆ.
ಇದು ಅಂತ್ಯವಿಲ್ಲದ ಕಾರ್ಯಾಚರಣೆ ಆಗಿದ್ದು, ಇದನ್ನು ವಿಸ್ತರಿಸುವ ನಿರೀಕ್ಷೆ ಇದೆ. ಇಸ್ರೇಲ್ ಹಮಾಸ್ ವಿರುದ್ಧ ಮಿಲಿಟರಿ ಶಕ್ತಿಯನ್ನು ಮತ್ತಷ್ಟು ಬಲಗೊಳಿಸಲಿದೆ ಎಂದು ನೆತನ್ಯಾಹು ಕಚೇರಿ ತಿಳಿಸಿದೆ.
ದಾಳಿಗೆ ಮುನ್ನ ಶ್ವೇತ ಭವನ ಸಂಪರ್ಕ : ಇಸ್ರೇಲ್ ಗಾಜಾ ಮೇಲೆ ದಾಳಿಗೆ ಮುನ್ನ ಟ್ರಂಪ್ ಆಡಳಿತ ಮತ್ತು ಶ್ವೇತಭವನವನ್ನು ಸಂಪರ್ಕಿಸಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ತಿಳಿಸಿದ್ದಾರೆ.
ಕದನ ವಿರಾಮದ ಮುಂದಿನ ಹಂತದ ನಿಯಮಗಳ ಕುರಿತಾದ ಭಿನ್ನಾಭಿಪ್ರಾಯದಿಂದ ಕದನ ವಿರಾಮ ಮಾತುಕತೆ ವಿಫಲವಾದ ಹಿನ್ನೆಲೆ ಇಸ್ರೇಲ್ ದಾಳಿಗೆ ಮುಂದಾಗಿದೆ ಎಂದು ಸ್ಪಷ್ಟಪಡಿಸಿದೆ.
ಮೂರು ಹಂತದ ಕದನ ವಿರಾಮ ಒಪ್ಪಂದ : ಇಸ್ರೇಲ್ ಮತ್ತು ಹಮಾಸ್ ನಡುವೆ ಮೂರು ಹಂತದ ಕದನ ವಿರಾಮಕ್ಕೆ ಒಪ್ಪಿ ಯುದ್ಧ ಕೊನೆಗೊಳಿಸಲು ಒಪ್ಪಿದ್ದವು. ಮೊದಲ ಹಂತದಲ್ಲಿ 42 ದಿನದಲ್ಲಿ 33 ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದು ಹಾಗೂ ಗಾಜಾದಲ್ಲಿರುವ ಇಸ್ರೇಲ್ ಪಡೆಗಳನ್ನು ಹಿಂಪಡೆಯುವುದು ಸೇರಿತ್ತು. ಎರಡನೇ ಹಂತದಲ್ಲಿ ಒತ್ತೆಯಾಳುಗಳ ವಿನಿಮಯವಾಗಿ ಪ್ಯಾಲೆಸ್ತೇನಿಯ ಜೈಲಿನಲ್ಲಿರುವವರನ್ನು ಬಿಡುಗಡೆ ಮಾಡುವುದು. ಮೂರನೇ ಹಂತವು 42 ದಿನಗಳ ಬಳಿಕ ಯುದ್ಧ ಅಂತ್ಯಗೊಳಿಸುವ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಇಸ್ರೇಲ್ ಮೊದಲ ಹಂತದ ಕದನ ವಿರಾಮ ವಿಸ್ತರಣೆಗೆ ಒತ್ತಾಯಿಸಿದರೆ, ಹಮಾಸ್ ಮಾರ್ಚ್ 2 ರಂದು ಪ್ರಾರಂಭವಾಗಬೇಕಿದ್ದ ಎರಡನೇ ಹಂತಕ್ಕೆ ಮುಂದುವರಿಯಲು ಒತ್ತಾಯಿಸಿತು.
ಇದನ್ನೂ ಓದಿ: ಹಮಾಸ್ ಬೆಂಬಲಿಸಿದ ಆರೋಪದ ಮೇಲೆ ವೀಸಾ ರದ್ದು: ಅಮೆರಿಕದಿಂದ ಭಾರತೀಯ ವಿದ್ಯಾರ್ಥಿನಿ ಸ್ವಯಂ ಗಡಿಪಾರು
ಇದನ್ನೂ ಓದಿ: ಯೆಮೆನ್ನ ಹೌತಿ ನೆಲೆಗಳ ಮೇಲೆ ಯುಎಸ್ ದಾಳಿ; 21 ಸಾವು