ಬೆಲ್ಜಿಯಂ: ಅಮೆರಿಕ ವಾಯುಸೇನೆ ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಜಗತ್ತಿನ ಪ್ರಮುಖ ದೇಶಗಳಿಗೆ ತೈಲ ಸರಬರಾಜಾಗುವ ಹರ್ಮುಜ್ ಜಲಸಂಧಿಯನ್ನು ಮುಚ್ಚುವ ಕುರಿತು ಇರಾನ್ ಗಂಭೀರವಾಗಿ ಯೋಚಿಸುತ್ತಿದೆ. ಟೆಹ್ರಾನ್ ಈ ನಿರ್ಧಾರ ತೆಗೆದುಕೊಂಡಿದ್ದೇ ಆದಲ್ಲಿ ಏಷ್ಯಾ, ಯುರೋಪ್ ವಲಯಕ್ಕೆ ದೊಡ್ಡ ಪ್ರಮಾಣದ ನಷ್ಟ ಉಂಟಾಗಲಿದೆ ಎಂದು ಯುರೋನ್ಯೂಸ್ ವರದಿ ಮಾಡಿದೆ.
ಸ್ಥಳೀಯ ಮಾಧ್ಯಮಗಳಿಗೆ ಸಂದರ್ಶನ ನೀಡಿದ ಇರಾನ್‌ನ ರೆವಲ್ಯೂಷನರಿ ಗಾರ್ಡ್ ಕಮಾಂಡರ್ ಸರ್ದರ್ ಇಸ್ಮೈಲ್ ಕೊವ್ಸರಿ, "ಹರ್ಮುಜ್ ಜಲಸಂಧಿಯನ್ನು ಮುಚ್ಚುವ ಕುರಿತು ಚಿಂತಿಸಲಾಗುತ್ತಿದೆ. ಶತ್ರುಗಳನ್ನು ಶಿಕ್ಷಿಸುವ ಪ್ರಶ್ನೆ ಬಂದಾಗ ನಮ್ಮ ಕೈಗಳು ಅಗಲವಾಗಿ ತೆರೆದುಕೊಳ್ಳುತ್ತವೆ" ಎಂದರು.
ಶಾಹೆದ್ ಮಾದರಿಗಳಂತಹ ಮಾನವರಹಿತ ಡ್ರೋನ್‌ಗಳನ್ನು ಜಲಸಂಧಿಯಲ್ಲಿ ಸಾಗುವ ನಿರ್ದಿಷ್ಟ ಹಡಗುಗಳು ಅಥವಾ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಲು ಇರಾನ್ ಬಳಸಬಹುದು ಎಂದು ವರದಿಯಾಗಿದೆ.
ಹರ್ಮುಜ್ ಜಲಸಂಧಿಯ ಮಹತ್ವ:
- ಜಾಗತಿಕ ತೈಲ ಸರಬರಾಜಿನ ಸರಿಸುಮಾರು ಶೇ 20ರಷ್ಟು ಭಾಗ ಇದೇ ಜಲಸಂಧಿಯ ಮೂಲಕ ಹಾದುಹೋಗುತ್ತದೆ.
- ಗಲ್ಫ್ ರಾಷ್ಟ್ರಗಳಾದ ಸೌದಿ ಅರೇಬಿಯಾ, ಕತಾರ್, ಯುಎಇಗಳಿಂದ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲವನ್ನು (ಎಲ್‌ಎನ್‌ಜಿ) ಯುರೋಪ್ ಆಮದು ಮಾಡಿಕೊಳ್ಳುತ್ತದೆ. ಈ ಆಮದು ಸಾಗಣೆಯ ಬಹುಪಾಲು ಈ ಜಲಸಂಧಿ ಮೂಲಕ ಸಾಗುತ್ತವೆ.
- ಇರಾನ್ ಜಲಸಂಧಿಯನ್ನು ನಿರ್ಬಂಧಿಸಿದರೆ ಜಾಗತಿಕ ತೈಲ ಬೆಲೆಗಳು ಹೆಚ್ಚಾಗುವ ಸಾಧ್ಯತೆ ಇದ್ದು, ಯುರೋಪ್ ಇಂಧನ ಕೊರತೆ ಎದುರಿಸಬೇಕಾಗುತ್ತದೆ.
- ಅದರಲ್ಲೂ ವಿಶೇಷವಾಗಿ ಮಧ್ಯಪ್ರಾಚ್ಯ ಇಂಧನವನ್ನು ಅವಲಂಬಿಸಿರುವ ದೇಶಗಳಲ್ಲಿ ಇಂಧನ ದುಬಾರಿಯಾಗಲಿದೆ.
ಇರಾನ್‌ನ ನಟಾಂಜ್, ಫೋರ್ಡೋ ಮತ್ತು ಇಸ್ಫಹಾನ್ ಎಂಬಲ್ಲಿನ ಭೂಗತ ಪರಮಾಣು ತಾಣಗಳ ಮೇಲೆ ಯಶಸ್ವಿಯಾಗಿ ದಾಳಿ ಮಾಡಲಾಗಿದೆ ಎಂದು ಭಾನುವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಇದನ್ನೂ ಓದಿ: ಶಾಂತಿ ಅಥವಾ ದುರಂತ: ಪ್ರತೀಕಾರಕ್ಕೆ ಮುಂದಾದರೆ ಘನಘೋರ ದಾಳಿ- ಇರಾನ್‌ಗೆ ಟ್ರಂಪ್ ಎಚ್ಚರಿಕೆ
ಈ ಜಲಸಂಧಿ ಮುಚ್ಚುವ ನಿರ್ಧಾರವನ್ನು ಇರಾನ್ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಗೆ ಬಿಟ್ಟಿದೆ. ಈ ಕುರಿತಾಗಿ ಇನ್ನೂ ಚರ್ಚೆ ನಡೆಸಲಾಗುತ್ತಿದೆ. ಸದ್ಯ ಜಲಸಂಧಿ ಮುಚ್ಚುವ ಕುರಿತು ಚಿಂತನೆ ನಡೆಯುತ್ತಿದ್ದು, ಅಂತಿಮ ನಿರ್ಧಾರವಾಗಿಲ್ಲ.
ಇದನ್ನೂ ಓದಿ: ದಾಳಿಗೀಡಾದ ಇರಾನ್ ಪರಮಾಣು ಘಟಕಗಳಲ್ಲಿ ವಿಕಿರಣ ಸೋರಿಕೆಯಾಗಿಲ್ಲ: IAEA