ಆಂಕೋರೇಜ್ (ಅಲಾಸ್ಕಾ) : ಸರಕು ಸಾಗಣೆಯ ಮತ್ತೊಂದು ಹಡಗು ಸಮುದ್ರದ ಪಾಲಾಗಿದೆ. ಸುಮಾರು 3 ಸಾವಿರ ಎಲೆಕ್ಟ್ರಿಕ್ ಮತ್ತು ಸಾಮಾನ್ಯ ಕಾರುಗಳನ್ನು ಹೊತ್ತೊಯ್ಯುತ್ತಿದ್ದ ಮಾರ್ನಿಂಗ್ ಮಿಡಾಸ್ ಎಂಬ ಹಡಗು ಉತ್ತರ ಪೆಸಿಫಿಕ್ ಮಹಾಸಾಗರದಲ್ಲಿ ಮುಳುಗಿದೆ.
ಲಂಡನ್ನ ಜೋಡಿಯಾಕ್ ಮ್ಯಾರಿಟೈಮ್ ಎಂಬ ಕಂಪನಿಗೆ ಸೇರಿದ ಈ ಹಡಗು, ಹೊಸ ಕಾರುಗಳನ್ನು ಅಲಾಸ್ಕಾದ ಅಡಕ್ ದ್ವೀಪದಿಂದ ಹೊತ್ತು ಮೆಕ್ಸಿಕೋದ ಬಂದರಿಗೆ ಸಾಗುತ್ತಿತ್ತು. ಭೂಪ್ರದೇಶದಿಂದ 300 ಮೈಲುಗಳು (490 ಕಿ.ಮೀ) ದೂರದಲ್ಲಿ ಸಾಗುತ್ತಿದ್ದಾಗ, ಜೂನ್ 3 ರಂದು ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
ತಕ್ಷಣವೇ ಈ ಬಗ್ಗೆ ಹಡಗಿನಲ್ಲಿದ್ದ ಸಿಬ್ಬಂದಿ ಕೋಸ್ಟ್ ಗಾರ್ಡ್ಗೆ ಮಾಹಿತಿ ರವಾನಿಸಿದ್ದರು. ಪ್ರತಿಕೂಲ ಹವಾಮಾನ ಮತ್ತು ನೀರು ಸೋರಿಕೆಯಾದ ಕಾರಣ ಸಿಬ್ಬಂದಿಗೆ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಕಳೆದೊಂದು ವಾರದಿಂದ ಬೆಂಕಿಯಲ್ಲಿ ಉರಿಯುತ್ತಲೇ ಹಡಗು ದಡದತ್ತ ಸಾಗಿ ಬಂದಿದೆ.
ರಕ್ಷಣೆಗೆ ಎರಡು ಹಡಗು ರವಾನೆ: ಲಂಡನ್ನ ಜೋಡಿಯಾಕ್ ಮ್ಯಾರಿಟೈಮ್ ಕಂಪನಿ ನೀಡಿದ ಮಾಹಿತಿಯ ಪ್ರಕಾರ, ಹಾನಿಗೀಡಾದ ಹಡಗಿನ ರಕ್ಷಣೆಗೆ ಎರಡು ಹಡಗನ್ನು ರವಾನಿಸಲಾಗಿದೆ. ಆದರೆ, ಕೆಟ್ಟ ಹವಾಮಾನದಿಂದಾಗಿ ರಕ್ಷಣೆ ಸಾಧ್ಯವಾಗಿಲ್ಲ. ಸುಮಾರು 16,404 ಅಡಿ (5,000 ಮೀಟರ್) ಆಳ ಪ್ರದೇಶದಲ್ಲಿ ಭೂಮಿಯಿಂದ 415 ಮೈಲುಗಳು (770 ಕಿಲೋಮೀಟರ್) ದೂರದಲ್ಲಿ ಹಡಗು ಮುಳುಗಿದೆ ಎಂದು ತಿಳಿಸಿದೆ.
ಹಡಗಿನಲ್ಲಿದ್ದ 22 ಸಿಬ್ಬಂದಿ ಲೈಫ್ಬೋಟ್ ಮೂಲಕ ಹಡಗಿನಿಂದ ಹೊರಬಿದ್ದಿದ್ದಾರೆ. ಇನ್ನೊಂದು ವ್ಯಾಪಾರಿ ಹಡಗು ಅವರನ್ನು ರಕ್ಷಣೆ ಮಾಡಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಕಂಪನಿ ಮಾಹಿತಿ ನೀಡಿದೆ.
ಸಮುದ್ರ ಸೇರಿದ 3 ಸಾವಿರ ಕಾರುಗಳು: ಮೆಕ್ಸಿಕೊದ ಪೆಸಿಫಿಕ್ ಬಂದರಿಗೆ ಸೇರಿಸಲು ಉದ್ದೇಶಿಸಲಾಗಿದ್ದ 3 ಸಾವಿರ ಹೊಸ ಕಾರುಗಳು ಮುಳುಗಿರುವ ಸಾಧ್ಯತೆ ಇದೆ. ಮುಳುಗುವ ಮೊದಲು ಕಾರುಗಳನ್ನು ಹಡಗಿನಿಂದ ಹೊರ ತೆಗೆಯಲಾಗಿದೆಯೇ ಎಂಬ ಬಗ್ಗೆ ಕಂಪನಿ ತಕ್ಷಣಕ್ಕೆ ಸ್ಪಷ್ಟಪಡಿಸಿಲ್ಲ.
ಕಾರುಗಳ ಪೈಕಿ ಸುಮಾರು 70 ಎಲೆಕ್ಟ್ರಿಕ್ ಆಗಿದ್ದರೆ, 680 ಸಾಮಾನ್ಯ ವಾಹನಗಳಾಗಿದ್ದವು. ವಿದ್ಯುತ್ ಚಾಲಿತ ವಾಹನಗಳಿಂದ ತುಂಬಿದ ಡೆಕ್‌ನಿಂದ ಮೊದಲು ಬೆಂಕಿ ಹೊತ್ತಿಕೊಂಡು ದಟ್ಟ ಹೊಗೆ ಆವರಿಸಿತ್ತು ಎಂದು ಕೋಸ್ಟ್ ಗಾರ್ಡ್ ಮತ್ತು ಜೋಡಿಯಾಕ್ ಮ್ಯಾರಿಟೈಮ್ ಕಂಪನಿ ತಿಳಿಸಿದೆ.
ಹಿಂದಿನ ಘಟನೆ: ಇಂಥದ್ದೇ ಘಟನೆ 2023 ರಲ್ಲಿ ನಡೆದಿತ್ತು. ಜರ್ಮನಿಯಿಂದ ಸಿಂಗಾಪುರಕ್ಕೆ ಸುಮಾರು 500 ಎಲೆಕ್ಟ್ರಿಕ್ ಸೇರಿದಂತೆ 3,000 ವಾಹನಗಳನ್ನು ಸಾಗಿಸುತ್ತಿದ್ದ ಸರಕು ಸಾಗಣೆ ಹಡಗು ಬೆಂಕಿಗೆ ಆಹುತಿಯಾಗಿ ಉತ್ತರ ಪೆಸಿಫಿಕ್ ಸಮುದ್ರದಲ್ಲಿ ಮುಳುಗಿತ್ತು. ಒಂದು ವಾರ ನಡೆದ ಕಾರ್ಯಾಚರಣೆಯಲ್ಲಿ ಓರ್ವ ವ್ಯಕ್ತಿ ಸಾವಿಗೀಡಾಗಿದ್ದ. ಹಲವರು ಗಾಯಗೊಂಡಿದ್ದರು.
ಇದನ್ನೂ ಓದಿ: ಕೇರಳ ಕರಾವಳಿಯಲ್ಲಿ ಮತ್ತೊಂದು ಭಾರಿ ಅನಾಹುತ; ಅಪಾಯಕಾರಿ ವಸ್ತುಗಳಿರುವ ಬೃಹತ್ ಹಡಗಿನಲ್ಲಿ ಬೆಂಕಿ; 18 ಸಿಬ್ಬಂದಿ ರಕ್ಷಣೆ
ಕೇರಳದಲ್ಲಿ ಲೈಬೀರಿಯನ್ ಹಡಗು ಮುಳುಗಡೆ: ಎಲ್ಲಾ 24 ಸಿಬ್ಬಂದಿ ರಕ್ಷಿಸಿದ ಭಾರತೀಯ ನೌಕಾಪಡೆ