ವಾಷಿಂಗ್ಟನ್(ಯುಎಸ್‌ಎ): ಇರಾನ್ ಪರಮಾಣು ನೆಲೆಗಳ ಮೇಲೆ ದಾಳಿ ಮಾಡಿದ ಬಳಿಕ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಆಡಳಿತದಲ್ಲಿ ಭಾರಿ ಬದಲಾವಣೆಯ ಸುಳಿವು ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಟ್ರೂಥ್ನಲ್ಲಿ ಅವರು, "ಅಧಿಕಾರ ಬದಲಾವಣೆ ಎಂಬ ಪದವನ್ನು ರಾಜಕೀಯವಾಗಿ ಈ ಬಳಸುವುದು ಸರಿಯಲ್ಲ. ಆದರೆ, ಸದ್ಯದ ಇರಾನ್ ಆಡಳಿತ 'ಮತ್ತೊಮ್ಮೆ ಇರಾನ್ ಅನ್ನು ಅದ್ಬುತ' ಮಾಡಲು ಸಾಧ್ಯವಾಗದೇ ಹೋದರೆ, ಅವರು ಏಕೆ ಆಡಳಿತದಲ್ಲಿರಬೇಕು?" ಎಂದು ಬರೆದುಕೊಂಡಿದ್ದಾರೆ.
ಮತ್ತೊಂದು ಪ್ರತ್ಯೇಕ ಪೋಸ್ಟ್ನಲ್ಲಿ, ಇರಾನ್ನಲ್ಲಿನ ಪರಮಾಣು ತಾಣಗಳ ಮೇಲಿನ ಹಾನಿಯನ್ನು ಅದ್ಬುತ ಮಿಲಿಟರಿ ಕಾರ್ಯಾಚರಣೆ ಎಂದಿರುವ ಅವರು, ಇದು ನಿಖರ ಮತ್ತು ಕಠಿಣ ದಾಳಿ. ನಮ್ಮ ಸೇನೆಯ ಅದ್ಬುತ ಕೌಶಲ್ಯ ಪ್ರದರ್ಶನ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ದಿ ಗ್ರೇಟ್ ಬಿ-2 ವಿಮಾನಗಳು ಸುರಕ್ಷಿತವಾಗಿ ಮಿಸ್ಸೋರಿಯಲ್ಲಿ ಲ್ಯಾಂಡ್ ಆಗಿದ್ದು, ಅದ್ಭುತ ಕೆಲಸಕ್ಕೆ ಧನ್ಯವಾದಗಳು" ಎಂದು ಟ್ರಂಪ್ ತಿಳಿಸಿದ್ದಾರೆ.
ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ಸೇರಿದಂತೆ ಇರಾನ್‌ನ ಮೂರು ಪ್ರಮುಖ ಪರಮಾಣು ಸೌಲಭ್ಯಗಳನ್ನು ಗುರಿಯಾಗಿಸಿ 'ಮಿಡ್‌ನೈಟ್ ಹ್ಯಾಮರ್' ಆಪರೇಷನ್ ನಡೆಸಿದ ಮರುದಿನ ಟ್ರಂಪ್ ಇರಾನ್ ಆಡಳಿತ ಬದಲಾವಣೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಮೆರಿಕ ದಾಳಿಗೆ ವಿಶ್ವಸಂಸ್ಥೆ ಖಂಡನೆ: ಇರಾನ್‌ನ ಪರಮಾಣು ತಾಣಗಳ ಮೇಲೆ ಅಮೆರಿಕ ನಡೆಸಿದ ಬಾಂಬ್ ದಾಳಿಯನ್ನು ವಿಶ್ವಸಂಸ್ಥೆ ಖಂಡಿಸಿದೆ. ಈ ಕುರಿತು ಮಾತನಾಡಿರುವ ಪ್ರಧಾನ ಕಾರ್ಯದರ್ಶಿ ಗುಟೆರೆಸ್, ಅಮೆರಿಕದ ದಾಳಿ ಅಪಾಯಕಾರಿ ತಿರುವು ಪಡೆದಿದೆ. ಮಧ್ಯಪ್ರಾಚ್ಯದ ಮಿಲಿಟರಿ ಸಂಘರ್ಷವನ್ನು ಖಂಡಿಸುವುದಾಗಿ ತಿಳಿಸಿದ್ದಾರೆ. ಈ ಪ್ರದೇಶದ ಜನರು ಮತ್ತೊಂದು ವಿನಾಶವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಿರುವ ಅವರು, ಇರಾನ್ ಕೂಡ ಅಂತಾರಾಷ್ಟ್ರೀಯ ಪ್ರಸರಣ ನಿಷೇಧ ಒಪ್ಪಂದವನ್ನು ಸಂಪೂರ್ಣವಾಗಿ ಗೌರವಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಶಾಂತಿ ಅಥವಾ ದುರಂತ: ಪ್ರತೀಕಾರಕ್ಕೆ ಮುಂದಾದರೆ ಘನಘೋರ ದಾಳಿ- ಇರಾನ್‌ಗೆ ಟ್ರಂಪ್ ಎಚ್ಚರಿಕೆ
ಇದನ್ನೂ ಓದಿ: ಇರಾನ್ ಹರ್ಮುಜ್ ಜಲಸಂಧಿ ಮುಚ್ಚಿದರೆ ಜಾಗತಿಕ ಇಂಧನ ಪೂರೈಕೆಯ ಮೇಲೇನು ಪರಿಣಾಮ?