ನವದೆಹಲಿ: ಪ್ರವಾಸಿ ಬಸ್ಸೊಂದು ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಐವರು ಕೇರಳಿಯರು ಸೇರಿ ಆರು ಮಂದಿ ಸಾವನ್ನಪ್ಪಿರುವ ದುರ್ಘಟನೆ ಈಶಾನ್ಯ ಕೀನ್ಯಾದ ನ್ಯಾಂಡರುವಾದಲ್ಲಿ ವರದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕತಾರ್‌ನಿಂದ ಬಂದಿದ್ದ 28 ಭಾರತೀಯರ ಗುಂಪು ಕೀನ್ಯಾಕ್ಕೆ ಭೇಟಿ ನೀಡುವಾಗ ಈ ಬಸ್ ಅನಾಹುತ ಸಂಭವಿಸಿದೆ. ಈ ಅಪಘಾತದಲ್ಲಿ ಐವರು ಭಾರತೀಯರು ಸಾವನ್ನಪ್ಪಿರುವ ವರದಿ ಲಭ್ಯವಾಗಿದೆ ಎಂದು ಕತಾರ್ನಲ್ಲಿನ ಭಾರತೀಯ ರಾಯಭಾರ ಕಚೇರಿ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದೆ.
A group of 28 Indians from Qatar were visiting Kenya, where their bus met with an unfortunate road accident yesterday. As per available information, 5 Indian nationals have lost their lives in the accident. Officials from HCI Nairobi are on the ground and extending all help (1/2)
— India in Qatar (@IndEmbDoha) June 10, 2025
ಈದ್ ರಜೆ ಹಿನ್ನೆಲೆ ಭಾರತೀಯರ ಪ್ರವಾಸಿ ಗುಂಪು ಕತಾರ್‌ನಿಂದ ಕೀನ್ಯಾಕ್ಕೆ ಪ್ರಯಾಣಿಸುತ್ತಿದ್ದಾಗ ನಕುರು ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಮೃತರಲ್ಲಿ ಓರ್ವರು ತಿರುವಲ್ಲಾ ಮೂಲದ ಗೀತಾ ಶೋಜಿ ಐಸಾಕ್ ಆಗಿದ್ದಾರೆ. ಸಾವನ್ನಪ್ಪಿದ ಕೇರಳಿಗರಲ್ಲಿ ಪಾಲಕ್ಕಾಡ್ ಮೂಲದ ರಿಯಾ (41) ಮತ್ತು ಅವರ 7 ವರ್ಷದ ಮಗಳು ಟೈರಾ, ತ್ರಿಶೂರ್ ಮೂಲದ ಜಸ್ನಾ ಮತ್ತು ಅವರ ಮಗಳು ರುಹಿ ಮೆಹ್ರಿನ್ ಸೇರಿದ್ದಾರೆ.
ಘಟನೆ ಕುರಿತು ವಿವರಣೆ ನೀಡಿದ ಪ್ರತ್ಯಕ್ಷದರ್ಶಿಗಳು, ವಾಹನದ ನಿಯಂತ್ರಣ ತಪ್ಪಿ ಹಲವು ಬಾರಿ ಉರುಳಿಬಿದ್ದಿದೆ. ಹೀಗಾಗಿ ಸಾವು ಸಂಭವಿಸಿದೆ. ಅಪಘಾತದಲ್ಲಿ ಒಟ್ಟು 27 ಜನರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಹೆಚ್ಚಿನ ವೈದ್ಯಕೀಯ ಆರೈಕೆಗಾಗಿ ನೈರೋಬಿಯ ಆಸ್ಪತ್ರೆಗೆ ಸಾಗಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: ಮಾಲ್ಡೀವ್ಸ್‌ನ ಜಾಗತಿಕ ಬ್ರ್ಯಾಂಡ್ ರಾಯಭಾರಿಯಾಗಿ ನಟಿ ಕತ್ರಿನಾ ಕೈಫ್ ನೇಮಕ
ಘಟನೆಗೆ ಪ್ರತಿಕ್ರಿಯಿಸಿದ ಕತಾರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು, ಸಂತ್ರಸ್ತರ ಕುಟುಂಬಗಳಿಗೆ ಸಹಾಯ ಮಾಡಲು ಮತ್ತು ಹೆಚ್ಚಿನ ತನಿಖೆಗಾಗಿ ಸಹಾಯವಾಣಿ ಸೇವೆಯನ್ನು ಪ್ರಾರಂಭಿಸಿದೆ. ಸಹಾಯ ಬಯಸುವವರು +974 55097295 ಗೆ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಅಧಿಕಾರಿಗಳು ಕೋರಿದ್ದಾರೆ.
ಕೀನ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು, ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡಲು ಸಿದ್ಧವಾಗಿದೆ ಎಂದು ತಿಳಿಸಿದೆ.
ಈ ಕುರಿತು ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿರುವ ರಾಯಭಾರ ಕಚೇರಿ, ನ್ಯಾಂಡರುವಾ ಕೌಂಟಿಯ ಓಲ್ ಜೊರೊರೊಕ್-ನಕುರು ರಸ್ತೆಯಲ್ಲಿ ಸಂಭವಿಸಿದ ಅಪಘಾತ ನೋವುಂಟು ಮಾಡಿದೆ. ಘಟನೆಯಲ್ಲಿ 5 ಭಾರತೀಯ ಪ್ರಜೆಗಳು ಪ್ರಾಣ ಕಳೆದುಕೊಂಡಿದ್ದಾರೆ. ಮೃತರ ಕುಟುಂಬಗಳಿಗೆ ನಮ್ಮ ಸಂತಾಪಗಳು. ಗಾಯಾಳುಗಳು ಶೀಘ್ರ ಚೇತರಿಕೆಗಾಗಿ ನಾವು ಪ್ರಾರ್ಥಿಸುತ್ತೇವೆ. ಹೈಕಮಿಷನ್‌ನ ಕಾನ್ಸುಲರ್ ತಂಡವು ಸ್ಥಳದಲ್ಲಿದ್ದು, ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡಲು ಆಗುವುದು ಎಂದು ತಿಳಿಸಿದೆ.
ಇದನ್ನೂ ಓದಿ: ಇತಿಹಾಸ ಕೆದಕಿದ ಬೆಂಗಳೂರು ಕಾಲ್ತುಳಿತ ಪ್ರಕರಣ; ದೇಶ- ವಿದೇಶಗಳಲ್ಲಿ ನಡೆದ ದೊಡ್ಡ ದುರಂತಗಳು ಯಾವವು ಗೊತ್ತಾ?