ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಮಹಿಳೆಯರು ಮತ್ತು ಯುವಪೀಳಿಗೆಯಲ್ಲಿ ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಧೂಮಪಾನ! ಮಹಿಳೆಯರು ಮತ್ತು ಯುವಪೀಳಿಗೆ ಧೂಮಪಾನದ ಗೀಳಿಗೆ ಬಿದ್ದು ಮಾರಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಇನ್ನು ಅತಿಯಾದ ಧೂಮಪಾನದಿಂದ ಹೊರಬರುವ ಹೊಗೆಯಿಂದಾಗಿ ಮಾಲಿನ್ಯ ಮಟ್ಟ ಹೆಚ್ಚಾಗುತ್ತಿದ್ದು, ಧೂಮಪಾನ ಮಾಡದೇ ಇರುವ ಮತ್ತು ಕಡಿಮೆ ಧೂಮಪಾನ ಮಾಡುತ್ತಿರುವ ವ್ಯಕ್ತಿಗಳಲ್ಲಿಯೂ ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ. ವಿಶ್ವ ಶ್ವಾಸಕೋಶ ದಿನದ ಹಿನ್ನೆಲೆಯಲ್ಲಿ ಈ ಆತಂಕಕಾರಿ ಅಂಶಗಳ ಹೊರಬಿದ್ದಿವೆ.
ಸಂಪ್ರದ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ನ ಮೆಡಿಕಲ್ ಅಂಕಾಲಾಜಿಸ್ಟ್ ಅಂಡ್ ಹೆಮಟಾಲಾಜಿಸ್ಟ್ ಡಾ.ರಾಧೇಶ್ಯಾಂ ನಾಯಕ್ ಅವರು ಕ್ಯಾನ್ಸರ್ ಕಾಯಿಲೆ ಬಗ್ಗೆ ಮಾಹಿತಿ ನೀಡಿದ್ದಾರೆ. 'ಶೇ.80 ಕ್ಕಿಂತಲೂ ಅಧಿಕ ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು ಧೂಮಪಾನ ಮತ್ತು ತಂಬಾಕಿನ ಇತರ ಮಾದರಿಯ ಬಳಕೆಯಿಂದ ಬರುತ್ತಿವೆ. ಧೂಮಪಾನದ ಅವಧಿ ಮತ್ತು ದಿನಕ್ಕೆ ಒಬ್ಬರು ಸೇದುವ ಸಿಗರೇಟುಗಳ ಸಂಖ್ಯೆಯೊಂದಿಗೆ ಅಪಾಯದ ಮಟ್ಟವೂ ಹೆಚ್ಚಾಗುತ್ತದೆ. ಚಿಕ್ಕ ವಯಸ್ಸಿನಲ್ಲೇ ಧೂಮಪಾನ ಮಾಡುವುದು ಅಪಾಯವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸುತ್ತದೆ. ಧೂಮಪಾನದ ಜೊತೆಗೆ ಕಲ್ಲುನಾರಿನಂತಹ ಕಾರ್ಸಿನೋಜೆನ್ಗಳಿಗೆ ಒಡ್ಡಿಕೊಳ್ಳುವುದರಿಂದ ಶ್ವಾಸಕೋಶದ ಕ್ಯಾನ್ಸರ್ ಗಂಭೀರ ಸ್ವರೂಪಕ್ಕೆ ತಿರುಗಿ ಅಪಾಯವನ್ನು ಹಲವಾರು ಪಟ್ಟು ಹೆಚ್ಚು ಮಾಡುತ್ತದೆ. ಪ್ಯಾಸಿವ್ ಸ್ಟೋಕಿಂಗ್ ಶ್ವಾಸಕೋಶದ ಕ್ಯಾನ್ಸರ್ಗೆ ಕಾರಣವಾಗುತ್ತದೆ. ಇದರ ಪ್ರಮಾಣ ಶೇ.5 ರಷ್ಟಿರುತ್ತದೆ. ಅಲ್ಲದೇ ವಾಹನ ದಟ್ಟಣೆ ಮತ್ತು ಮನೆಯ ಅಡುಗೆ ಕೋಣೆಯಲ್ಲಿ ಬಳಸುವ ಉರುವಲು ಅಥವಾ ಇಂಧನಗಳನ್ನು ಸುಡುವುದರಿಂದ ಉಂಟಾಗುವ ಮಾಲಿನ್ಯದಿಂದ ಧೂಮಪಾನ ಮಾಡದಿದ್ದವರಲ್ಲಿಯೂ ಶ್ವಾಸಕೋಶದ ಕ್ಯಾನ್ಸರ್ ಉಂಟಾಗುತ್ತದೆ' ಎಂದು ತಿಳಿಸಿದ್ದಾರೆ.
'ಪ್ರತಿ 1 ಲಕ್ಷ ಜನರಲ್ಲಿ ಶೇ.5.6 ಜನರಲ್ಲಿ ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿವೆ. ಒಟ್ಟಾರೆ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ.5.9 ರಷ್ಟು ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾದರೆ, ಕ್ಯಾನ್ಸರ್ ಸಂಬಂಧಿ ಮರಣ ಪ್ರಮಾಣ ಶೇ.8 ರಷ್ಟಿದೆ. ಶ್ವಾಸಕೋಶ ಕ್ಯಾನ್ಸರ್ ಜೀವನದ 4 ಮತ್ತು 5 ನೇ ದಶಕದ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಪೈಕಿ ಅತ್ಯಧಿಕ ಶ್ವಾಸಕೋಶ ಕ್ಯಾನ್ಸರ್ ಕಂಡುಬರುವುದು 55 ರಿಂದ 64 ವರ್ಷದ ಜನರಲ್ಲಿ. ಹೀಗೆ ಶ್ವಾಸಕೋಶ ಕ್ಯಾನ್ಸರ್ ಬಂದ ವ್ಯಕ್ತಿಗಳು 5 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷದವರೆಗೆ ಬದುಕಬಲ್ಲರು. ಕೇವಲ ಶೇ.10-15 ರಷ್ಟು ರೋಗಿಗಳು 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷ ಬದುಕಬಲ್ಲರು. ಆರಂಭಿಕ ಹಂತದಲ್ಲಿಯೇ ರೋಗ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಪಡೆದುಕೊಂಡಲ್ಲಿ ಮರಣ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಂಪ್ರದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಿವೆಂಟಿವ್ ಅಂಕಾಲಾಜಿಸ್ಟ್ ಡಾ.ವಿನೋದ್ ಕೆ.ರಮಣಿ ಮಾತನಾಡಿ, ಬಹುತೇಕ ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳನ್ನು 3 ಮತ್ತು 4 ನೇ ಹಂತ ತಲುಪಿದಾಗ ಪತ್ತೆ ಮಾಡಲಾಗುತ್ತದೆ. ಆ ವೇಳೆಯಲ್ಲಿ ಕ್ಯಾನ್ಸರ್ ರೋಗವು ಗಂಭೀರ ಸ್ವರೂಪಕ್ಕೆ ತಿರುಗಿರುತ್ತದೆ. ಇನ್ನು 1 ಮತ್ತು 2 ನೇ ಹಂತದಲ್ಲಿದ್ದಾಗ ರೋಗ ಪತ್ತೆ ಕೇವಲ ಶೇ.20-30 ರಷ್ಟಾಗಿದೆ ಎಂದಿದ್ದಾರೆ.
ಧೂಮಪಾನ ಮಾಡುವವರ ಪ್ರಮಾಣವು ದೀರ್ಘಕಾಲದ ಬ್ರಾಂಕೈಟಿಸ್ ಅನ್ನು ಹೊಂದಿರುತ್ತದೆ. ಇದನ್ನು ಕ್ಯಾನ್ಸರ್ನಿಂದ ಪ್ರತ್ಯೇಕಿಸಲು ಕಷ್ಟಸಾಧ್ಯವಾಗುತ್ತದೆ. ಇದರಿಂದಾಗಿ ವೈದ್ಯರನ್ನು ತಡವಾಗಿ ಭೇಟಿ ಮಾಡುತ್ತಾರೆ. ಶ್ವಾಸಕೋಶದ ಕ್ಯಾನ್ಸರ್ನ ಅನೇಕ ಪ್ರಕರಣಗಳನ್ನು ಆರಂಭದಲ್ಲಿ ಕ್ಷಯರೋಗವಿರಬಹುದು ಎಂದು ತಪ್ಪಾಗಿ ತಿಳಿದುಕೊಳ್ಳಲಾಗುತ್ತದೆ ಮತ್ತು ನಿಯಮಿತವಾಗಿ ಕ್ಯಾನ್ಸರ್ ರೋಗ ಪತ್ತೆ ತಪಾಸಣೆ ಅಥವಾ ಕ್ಯಾನ್ಸರ್ ತಪಾಸಣೆಗೆ ಒಳಗಾಗಲು ಭಾರತೀಯರು ಹಿಂದೇಟು ಹಾಕುತ್ತಾರೆ ಎಂದು ತಿಳಿಸಿದ್ದಾರೆ.
ಸಂಪ್ರದ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ನ ರೇಡಿಯೇಷನ್ ಅಂಕಾಲಾಜಿಸ್ಟ್ ಡಾ.ವರುಣ್ ಕುಮಾರ್ ಮಾತನಾಡಿ, ಅನೇಕ ಶ್ವಾಸಕೋಶ ಕ್ಯಾನ್ಸರ್ ರೋಗಿಗಳು ಧೂಮಪಾನಿಗಳಾಗಿದ್ದಾರೆ. ಮದ್ಯಪಾನಿಗಳಾಗಿದ್ದಾರೆ. ಶ್ವಾಸಕೋಶ, ಯಕೃತ್ (ಲಿವರ್) ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಚಿಕಿತ್ಸೆಯ ವೆಚ್ಚ, ವಿಶೇಷವಾಗಿ ಪ್ರತಿರಕ್ಷಣಾ ಚಿಕಿತ್ಸೆ, ಉದ್ದೇಶಿತ ಚಿಕಿತ್ಸೆ ಮತ್ತು ಆ್ಯಂಟಿ-ಆ್ಯಂಜಿಯೋಜೆನಿಕ್ ಚಿಕಿತ್ಸೆಯಂತಹ ಹೊಸ ಚಿಕಿತ್ಸೆಗಳು ಅನೇಕ ರೋಗಿಗಳಿಗೆ ಸಮಸ್ಯೆಯಾಗಿ ಪರಿಣಮಿಸಬಹುದಾಗಿದೆ. ರೋಗಿಯು ರೋಗದ ಮುಂದುವರಿದ ಹಂತಗಳಲ್ಲಿ ಚಿಕಿತ್ಸೆಯನ್ನು ಪಡೆದರೆ ಪರಿಣಾಮಕಾರಿತ್ವದ ಪ್ರಮಾಣವು ಕಡಿಮೆಯಾಗುತ್ತದೆ ಎಂದು ತಿಳಿಸಿದ್ದಾರೆ.
'ಶ್ವಾಸಕೋಶ ಕ್ಯಾನ್ಸರ್ ಅನ್ನು ಪರಿಣಾಮಕಾರಿಯಾಗಿ ಎದುರಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ನಾಗರಿಕ ಸಮಾಜವು ಧೂಮಪಾನ ತ್ಯಜಿಸುವ ಜಾಗೃತಿ ಅಭಿಯಾನಗಳನ್ನು ಏರ್ಪಡಿಸುವ ಮೂಲಕ ಧೂಮಪಾನಿಗಳ ನಿಯಮಿತ ಆರೋಗ್ಯ ತಪಾಸಣೆಗೆ ಬೆಂಬಲವಾಗಿ ನಿಲ್ಲಬೇಕು. ಸಾಮಾನ್ಯ ಕ್ಯಾನ್ಸರ್ ರೋಗಿಯ ರೀತಿಯಲ್ಲಿಯೇ ಶ್ವಾಸಕೋಶ ಕ್ಯಾನ್ಸರ್ ರೋಗಿಗಳಿಗೂ ಚಿಕಿತ್ಸೆ ನೀಡುವಂತಹ ಮನೋಭಾವನೆಯನ್ನು ವೈದ್ಯರು ರೂಢಿಸಿಕೊಳ್ಳಬೇಕಾದ ಅಗತ್ಯವಿದೆ' ಎಂದು ಸಂಪ್ರದ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ನ ಕನ್ಸಲ್ಟಂಟ್ ರೇಡಿಯೇಷನ್ ಅಂಕಾಲಾಜಿಸ್ಟ್ ಡಾ.ಅಜಯ್ ಜಿವಿ ಸಲಹೆ ನೀಡಿದ್ದಾರೆ.