Butterfly Pea Flower For Hair Care: ಭೂಮಿಯ ಮೇಲಿನ ಅನೇಕ ಔಷಧೀಯ ಗಿಡಗಳು, ಸಸ್ಯಗಳಿವೆ. ಇವುಗಳಿಂದ ದೊರೆಯುವ ಹಣ್ಣುಗಳು, ಹೂವುಗಳು ಮತ್ತು ತೊಗಟೆಯಲ್ಲಿ ಅನೇಕ ಔಷಧೀಯ ಗುಣಗಳಿವೆ. ಅಂತಹ ಒಂದು ಸಸ್ಯವೆಂದರೆ ಶಂಖಪುಷ್ಪ. ಜಮೀನುಗಳ ಬೇಲಿ ಹಾಗೂ ಪೊದೆಗಳ ಮೇಲೆ ಬೆಳೆಯುವ ಈ ನೇರಳೆ ಹಾಗೂ ಬಿಳಿ ಹೂವುಗಳ ಗುಣಗಳ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಶಂಖಪುಷ್ಪವು ದೇಹ, ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಸುಧಾರಿಸುವ ಅತ್ಯುತ್ತಮ ಔಷಧೀಯ ಸಸ್ಯವಾಗಿದೆ. ನೈಸರ್ಗಿಕ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿರುವ ಶಂಖಪುಷ್ಪವು ರಕ್ತ ಪರಿಚಲನೆ ಸುಧಾರಿಸಲು ಹಾಗೂ ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.
ರಾತ್ರಿ ಕುರುಡುತನದ ಸಮಸ್ಯೆ ಇರುವವರಿಗೆ ಈ ಹೂವುಗಳು ಅದ್ಭುತವಾಗಿವೆ. ಈ ಶಂಖಪುಷ್ಪದ ಎಲೆಗಳು, ಕಾಂಡಗಳು ಮತ್ತು ಬೇರುಗಳು ಅನೇಕ ಔಷಧೀಯ ಗುಣಗಳನ್ನು ಹೊಂದಿವೆ. ಕೂದಲು ಉದುರುವಿಕೆ ಮತ್ತು ತಲೆಹೊಟ್ಟು ಮುಂತಾದ ಸಮಸ್ಯೆಗಳನ್ನು ನಿವಾರಿಸುವಲ್ಲಿ ಹಾಗೂ ಕೂದಲಿನ ಬೆಳವಣಿಗೆ ಸುಧಾರಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಈ ಸಸ್ಯದ ಹೂವುಗಳಲ್ಲಿ ಆಂಥೋಸಯಾನಿನ್‌ಗಳು ಎಂಬ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ಕೂದಲನ್ನು ರಕ್ಷಿಸುವ ಗುಣಗಳನ್ನು ಹೊಂದಿದೆ. ಇವು ತಲೆಬುರುಡೆಯಲ್ಲಿ ರಕ್ತ ಪರಿಚಲನೆ ಹೆಚ್ಚಿಸಲು ಸಹಾಯ ಮಾಡುತ್ತವೆ. ಇದು ಕೂದಲು ಕಿರುಚೀಲಗಳನ್ನು ಉತ್ತೇಜಿಸುತ್ತದೆ ಹಾಗೂ ಕೂದಲಿನ ಬೆಳವಣಿಗೆ ಉತ್ತೇಜಿಸುತ್ತದೆ.
ಉತ್ಕರ್ಷಣ ನಿರೋಧಕಗಳ ಜೊತೆಗೆ ಈ ಹೂವು ಉರಿಯೂತದ ಗುಣಲಕ್ಷಣಗಳ ಅತ್ಯುತ್ತಮ ಮೂಲವಾಗಿದೆ. ಇದು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ ಹಾಗೂ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಕೂದಲು ಉದುರುವಿಕೆ ತಡೆಯುವಲ್ಲಿ ಇದು ಉತ್ತಮ ಆಯ್ಕೆಯಾಗಿದೆ. ಇದರ ನಿಯಮಿತ ಬಳಕೆಯಿಂದ ನೆತ್ತಿಯು ಅಗತ್ಯವಾದ ಪೋಷಕಾಂಶಗಳನ್ನು ಪಡೆಯುತ್ತದೆ. ಪರಿಣಾಮವಾಗಿ ಕೂದಲಿನ ಸ್ಥಿತಿ ಸುಧಾರಿಸುತ್ತದೆ. ಇದು ಕೂದಲನ್ನು ಹೊಳೆಯುವ ಹಾಗೂ ಮೃದುವಾಗಿಸಲು ಸಹಾಯ ಮಾಡುತ್ತದೆ. ಕೂದಲು ಬೂದು ಬಣ್ಣಕ್ಕೆ ತಿರುಗುವುದನ್ನು ತಡೆಯುತ್ತದೆ.
ಆರೋಗ್ಯಕರ ಕೂದಲು ಬೆಳವಣಿಗೆಗೆ ಶಂಖಪುಷ್ಪ ಬಳಸುವುದು ಹೇಗೆ?:
ಬೇಕಾಗಿರುವ ವಸ್ತುಗಳು:
- ಶಂಖ ಹೂವುಗಳು - 10
- ತೆಂಗಿನ ಎಣ್ಣೆ - 1 ಕಪ್
- ಮೆಂತ್ಯ - ಒಂದು ಟೀಸ್ಪೂನ್
- ರೋಸ್ಮರಿ ಎಣ್ಣೆ - 1 ಟೀಸ್ಪೂನ್
ತಯಾರಿಸುವ ವಿಧಾನ: ಒಂದು ಬಟ್ಟಲು ತೆಗೆದುಕೊಳ್ಳಿ. ಅದಕ್ಕೆ ರೋಸ್ಮರಿ ಎಣ್ಣೆಯನ್ನು ಹಾಕಬೇಕು. ಎಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಶಂಖಪುಷ್ಪದ ದಳಗಳನ್ನು ಸೇರಿಸಿ. ಮಧ್ಯಮ ಉರಿಯಲ್ಲಿ 10 ರಿಂದ 15 ನಿಮಿಷಗಳ ಕಾಲ ಕುದಿಸಿ. ಮೆಂತ್ಯ ಸೇರಿಸಿ ಇನ್ನೊಂದು 5 ನಿಮಿಷ ಕುದಿಸಿ. ಒಲೆ ಆಫ್ ಮಾಡಿದ ಬಳಿಕ ನೀವು ರೋಸ್ಮರಿ ಎಣ್ಣೆಯನ್ನು ಸೇರಿಸಬಹುದು. ಎಣ್ಣೆ ಸಂಪೂರ್ಣವಾಗಿ ತಣ್ಣಗಾದ ನಂತರ, ಅದನ್ನು ಗಾಳಿಯಾಡದ ಪಾತ್ರೆಯಲ್ಲಿ ತುಂಬಿಸಿ ಸಂಗ್ರಹಿಸಿ.
ಹೇಗೆ ಉಪಯೋಗಿಸಬೇಕು?: ಕೂದಲಿನಿಂದ ತಲೆಹೊಟ್ಟು ತೆಗೆದುಹಾಕಲು, ನೆತ್ತಿ ಮತ್ತು ಕೂದಲಿನ ಎಳೆಗಳಿಗೆ ಎಣ್ಣೆ ಹಚ್ಚಿ. ನಿಮ್ಮ ಬೆರಳ ತುದಿಯಿಂದ 5 ನಿಮಿಷಗಳ ಕಾಲ ನಿಮ್ಮ ನೆತ್ತಿಯನ್ನು ನಿಧಾನವಾಗಿ ಮಸಾಜ್ ಮಾಡಿ. ನೀವು ಅದನ್ನು ಒಂದು ಗಂಟೆ ಅಥವಾ ರಾತ್ರಿಯಿಡೀ ಹಾಗೆಯೇ ಬಿಟ್ಟು ಸೌಮ್ಯವಾದ ಶಾಂಪೂ ಬಳಸಿ ತೊಳೆಯಬಹುದು. ಇದನ್ನು ವಾರಕ್ಕೊಮ್ಮೆಯಾದರೂ ಮಾಡಿ.
ಹೇರ್ ಮಾಸ್ಕ್ ತಯಾರಿಸುವುದು ಹೇಗೆ?: ಎಣ್ಣೆ ಇಷ್ಟವಿಲ್ಲದವರು ಮೆಂತ್ಯ ಪುಡಿಯಿಂದ ಮಾಡಿದ ಹೇರ್ ಮಾಸ್ಕ್ ಬಳಸುವುದರಿಂದ ಕೂದಲಿನ ಬೇರುಗಳಿಂದ ಕೊಳೆ ನಿವಾರಣೆಯಾಗಿ ಕೂದಲಿನ ಬೆಳವಣಿಗೆ ಸುಧಾರಿಸುತ್ತದೆ.
ಬೇಕಾಗುವ ಸಾಮಗ್ರಿಗಳು?:
- ಶಂಖಪುಷ್ಪದ ಪುಡಿ - 2 ಟೀಸ್ಪೂನ್
- ಆಮ್ಲಾ ಪುಡಿ - 1 ಟೀಸ್ಪೂನ್
- ಮೊಸರು ಅಥವಾ ಅಲೋವೆರಾ ಜೆಲ್ - 1 ಟೀಸ್ಪೂನ್
- ನಿಂಬೆ ರಸ - 10 ಟೀಸ್ಪೂನ್
ಸಿದ್ಧಪಡಿಸುವ ವಿಧಾನ: ಇವೆಲ್ಲವುಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಮಿಶ್ರಣ ಮಾಡಿಕೊಳ್ಳಬೇಕಾಗುತ್ತದೆ. ನೆತ್ತಿಯಿಂದ ಕೂದಲಿನ ತುದಿಯವರೆಗೆ ಹಚ್ಚಿ, 30 ರಿಂದ 45 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ, ನಿಮ್ಮ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ. ಈ ಹೇರ್ ಮಾಸ್ಕ್ ನೆತ್ತಿಯನ್ನು ಸ್ವಚ್ಛಗೊಳಿಸುತ್ತದೆ. ಮತ್ತು ತಲೆಹೊಟ್ಟು ನಿವಾರಿಸುತ್ತದೆ. ಇದಲ್ಲದೆ, ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ ಮತ್ತು ಅವುಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ಗಳನ್ನು ವೀಕ್ಷಿಸಬಹುದು:
- https://pmc.ncbi.nlm.nih.gov/articles/PMC6546959/
- https://pubmed.ncbi.nlm.nih.gov/26120869/
- https://pubmed.ncbi.nlm.nih.gov/26651998/
- http://pmc.ncbi.nlm.nih.gov/articles/PMC4337202/
- https://pubmed.ncbi.nlm.nih.gov/31248102/
- https://pubmed.ncbi.nlm.nih.gov/26692250/
ಓದುಗರಿಗೆ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.