Miyazaki Mango Heath benefits: ಮಾವು ಉಷ್ಣವಲಯದ ಹಣ್ಣು ರುಚಿಕರವಾದ ಸಿಹಿ ಹಾಗೂ ಬೇಸಿಗೆಯಲ್ಲಿ ಮಾತ್ರ ಹೆಚ್ಚಿನ ಪ್ರಮಾಣ ಲಭಿಸುತ್ತವೆ. ವಿವಿಧ ಹಣ್ಣುಗಳಲ್ಲಿ ಮಾವಿನ ಹಣ್ಣಿಗೆ ವಿಶಿಷ್ಟ ಸ್ಥಾನವಿದೆ. ಈ ಮಾವಿನ ಹಣ್ಣಿನ ಬೆಲೆ ವಿಶ್ವದಲ್ಲೇ ತುಂಬಾ ದುಬಾರಿಯಾಗಿದೆ. ಅದುವೇ, ಮಿಯಾಝಾಕಿ ಮಾವಿನ ಹಣ್ಣು. ಆಹಾರ ಪ್ರಿಯರು ಕೂಡ ಈ ಮಾವಿನ ರುಚಿಗಾಗಿ ಫುಲ್ ಫಿದಾ ಆಗಿದ್ದಾರೆ. ಇತ್ತೀಚೆಗೆ ನಾಂದೇಡ್‌ನಲ್ಲಿ ನಡೆದ ಕೃಷಿ ಮಹೋತ್ಸವದಲ್ಲಿ ವಿಶ್ವಪ್ರಸಿದ್ಧ ಮಿಯಾಝಾಕಿ ಮಾವನ್ನು ಬೆಳೆಸುವಲ್ಲಿ ಯಶಸ್ವಿಯಾದ ಭೋಸಿ ಗ್ರಾಮದ ರೈತ ಸುಮನ್‌ಬಾಯಿ ಗಾಯಕ್ವಾಡ್ ಅವರ ಯಶಸ್ಸನ್ನು ಕಂಡು ರೈತರು ಮತ್ತು ಕೃಷಿ ತಜ್ಞರು ಆಶ್ಚರ್ಯ ವ್ಯಕ್ತಪಡಿಸಿದರು.
ಮಿಯಾಝಾಕಿ ಮಾವಿನ ಕೃಷಿಯು ಭಾರತೀಯ ರೈತರ ಕುತೂಹಲಕ್ಕೆ ಕಾರಣವಾಗಿದೆ. ಭಾರತದಲ್ಲಿ ಮಾವು ಬೆಳೆಗೆ ಉತ್ತಮ ಹವಾಮಾನವಿದೆ. ಈ ಕೃಷಿಗೆ ಅಧಿಕ ಕಾರ್ಮಿಕರು ಲಭಿಸುವ ಜೊತೆಗೆ ತೋಟಗಾರಿಕೆಯ ಪರಿಣತಿ ನೀಡಿದರೆ, ಮಿಯಾಝಾಕಿ ಮಾವಿನ ಕೃಷಿ ದೊಡ್ಡ ಪ್ರಮಾಣದಲ್ಲಿ ಬೆಳೆಯಬಹುದು ಎಂದು ಕೃಷಿ ತಜ್ಞರು ತಿಳಿಸುತ್ತಾರೆ.

ಏನಿದು ಮಿಯಾಝಾಕಿ ಮಾವು?: ಮೂಲತಃ ಜಪಾನ್‌ನ ಕ್ಯುಶು ಪ್ರಾಂತ್ಯದ ಮಿಯಾಝಾಕಿ ಪ್ರಾಂತ್ಯದಲ್ಲಿ ಬೆಳೆಸಲಾದ ಈ ಮಾವುಗಳು ಗಾಢ ಕೆಂಪು ಅಥವಾ ನೇರಳೆ ಬಣ್ಣವನ್ನು ಹೊಂದಿರುತ್ತವೆ. ಈ ಮಾವು, ಹಳದಿ - ಕಿತ್ತಳೆ ಬಣ್ಣವಿರುವ ಭಾರತೀಯ ಮಾವಿನಹಣ್ಣಿಗಿಂತಲೂ ವಿಭಿನ್ನವಾಗಿವೆ. ಈ ಹಣ್ಣನ್ನು ಜಪಾನ್‌ನಲ್ಲಿ ತೈಯೊ ನೋ ತಮಾಗೊ (ಸೂರ್ಯನ ಮೊಟ್ಟೆ) ಎಂದೂ ಕರೆಯುತ್ತಾರೆ. ಈ ಮಾವು ಬೆಳೆಯಲು ವಿಶೇಷ ಕಾಳಜಿ ವಹಿಸಲಾಗುತ್ತದೆ. ಬಲೆಗಳಲ್ಲಿ ಸುತ್ತಿ, ನಿರ್ದಿಷ್ಟ ಸೂರ್ಯನ ಬೆಳಕಿನಲ್ಲಿ ಬೆಳೆಸಲಾಗುತ್ತದೆ. ಕಟ್ಟುನಿಟ್ಟಾದ ಗುಣಮಟ್ಟದ ಮಾನದಂಡಗಳನ್ನು ಪೂರೈಸಿದಾಗ ಮಾತ್ರ ಕೈಯಿಂದ ಕೊಯ್ಲು ಮಾಡಲಾಗುತ್ತದೆ.
ಮಿಯಾಝಾಕಿ ಮಾವಿನ ಹಣ್ಣುಗಳು ಸಿಹಿಯಲ್ಲಿ ಸಾಟಿಯಿಲ್ಲ. ಶೇ.15 ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಸಕ್ಕರೆ ಅಂಶವನ್ನು ಹೊಂದಿರುತ್ತವೆ (ಅಲ್ಫೋನ್ಸೊ ಮಾವಿನ ಹಣ್ಣುಗಳಿಗೆ ಹೋಲಿಸಿದರೆ, ಇದು ಸುಮಾರು ಶೇ.12ರಿಂದ 14ರಷ್ಟು ಇರುತ್ತದೆ). ಇದು ಹೆಚ್ಚು ರಸಭರಿತವಾದ, ಬಾಯಲ್ಲಿ ಕರಗುವಂತೆ ಇರುತ್ತದೆ. ಜಪಾನ್‌ನ ಮಿಯಾಝಾಕಿ ಮಾವಿನ ಹಣ್ಣುಗಳಿಗೆ ವಿಶ್ವದ ವಿವಿಧೆಡೆ ಭಾರಿ ಬೇಡಿಕೆಯಿದೆ.
ಮಿಯಾಝಾಕಿ ಮಾವು ಏಕೆ ತುಂಬಾ ದುಬಾರಿ?: ಒಂದು ಮಿಯಾಝಾಕಿ ಮಾವಿನ ಹಣ್ಣು ಜಪಾನ್‌ನಲ್ಲಿ ಅದರ ಗುಣಮಟ್ಟ ಆಧರಿಸಿ ₹8,000 ರಿಂದ ₹2.5 ಲಕ್ಷದವರೆಗೆ ಮಾರಾಟವಾಗುತ್ತದೆ. ಈ ಮಾವಿನ ಹಣ್ಣುಗಳನ್ನು ಬೆಳೆಯುವಾಗ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಪ್ರತಿಯೊಂದು ಹಣ್ಣನ್ನು ಪ್ರತ್ಯೇಕವಾಗಿ ಸುತ್ತಿ, ಮೇಲ್ವಿಚಾರಣೆ ಮಾಡಿ ಮತ್ತು ಪರಿಪೂರ್ಣತೆ ಸಾಧಿಸಲು ಪೋಷಿಸಲಾಗುತ್ತದೆ. ಮಾವು ಮಾರಾಟಕ್ಕೆ ರೈತರು ಕೂಡ ಅಗತ್ಯ ಕ್ರಮಗಳನ್ನು ವಹಿಸುತ್ತಾರೆ. ಪ್ರಮುಖವಾಗಿ ದಕ್ಷಿಣ ಜಪಾನ್‌ನಲ್ಲಿ ಬೆಳೆಯಲಾಗುತ್ತದೆ. ಉತ್ತಮ ಮಾವಿನಹಣ್ಣುಗಳು ಮಾತ್ರ ಮಾರಾಟಕ್ಕೆ ಬರುತ್ತವೆ.
ಜಪಾನ್‌ನಲ್ಲಿ ಉತ್ತಮ ಗುಣಮಟ್ಟದ ಹಣ್ಣುಗಳನ್ನು ಉಡುಗೊರೆಯಾಗಿ ನೀಡುವುದು ಒಂದು ಸಂಪ್ರದಾಯವಾಗಿದೆ. ಮಿಯಾಝಾಕಿ ಮಾವು ಖರೀದಿಸುವುದು ಪ್ರತಿಷ್ಠೆಯ ಸಂಕೇತವಾಗಿದೆ. ಈ ಮಾವು ಹೆಚ್ಚಾಗಿ ಮದುವೆ ಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ಉಡುಗೊರೆ ನೀಡಲು ಖರೀದಿಸಲಾಗುತ್ತದೆ.
ಪ್ರತಿ ಮಿಯಾಝಾಕಿ ಮಾವು ಮಾರುಕಟ್ಟೆಗೆ ಬರುವ ಮೊದಲು ಹೆಚ್ಚು ಪರಿಶೀಲಿಸಲಾಗುತ್ತದೆ. ಒಂದು ಮಾವು ಕನಿಷ್ಠ 350 ಗ್ರಾಂ ತೂಕವಿರಬೇಕು, ಅಸಾಧಾರಣವಾಗಿ ನಯವಾದ ವಿನ್ಯಾಸ ಹೊಂದಿರಬೇಕು, ನಿಖರವಾದ ಸಕ್ಕರೆ ಅಂಶದ ಮಾನದಂಡಗಳನ್ನು ಪೂರೈಸಬೇಕು. ಇದರಲ್ಲಿ ಯಾವುದಾದರು ಒಂದು ಕಡಿಮೆಯಿದ್ದರೆ, ಅದನ್ನು ಮಾರಾಟಕ್ಕೆ ಬಳಕೆ ಮಾಡುವುದಿಲ್ಲ.
ಮಿಯಾಝಾಕಿ ಮಾವಿನಹಣ್ಣಿನ ಪ್ರಯೋಜನಗಳು:
- ಮಿಯಾಝಾಕಿ ಮಾವಿನಹಣ್ಣಿನಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಈ ಮಾವುಗಳು ಬೀಟಾ - ಕ್ಯಾರೋಟಿನ್ ಮತ್ತು ಫೋಲಿಕ್ ಆಮ್ಲವನ್ನು ಹೊಂದಿವೆ. ಇದು ಜೀವಕೋಶಗಳನ್ನು ಹಾನಿಯಿಂದ ರಕ್ಷಿಸಲು ಹಾಗೂ ಚರ್ಮದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
- ವಿಟಮಿನ್ ಸಿ ಮತ್ತು ವಿಟಮಿನ್ ಎ ಯಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಮಿಯಾಝಾಕಿ ಮಾವು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಈ ಹಣ್ಣಿನಲ್ಲಿ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಎಂಬ ಎರಡು ಸಂಯುಕ್ತಗಳಿವೆ. ಇವು ಉತ್ತಮ ದೃಷ್ಟಿಯನ್ನು ಉತ್ತೇಜಿಸುತ್ತವೆ ಹಾಗೂ ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತವೆ.
- ಹೆಚ್ಚಿನ ಮಾವಿನ ಹಣ್ಣುಗಳಂತೆ ಮಿಯಾಝಾಕಿ ಮಾವು ಆಹಾರದ ನಾರಿನಂಶದಿಂದ ಹೊಂದಿದೆ.
- ಹೆಚ್ಚಿನ ಸಕ್ಕರೆ ಅಂಶ ಹೊಂದಿದ್ದು, ಈ ಮಾವು ತ್ವರಿತ ಶಕ್ತಿಯನ್ನು ಹೆಚ್ಚಿಸುತ್ತವೆ. ಅವುಗಳನ್ನು ವ್ಯಾಯಾಮದ ನಂತರ ಅಥವಾ ಮಧ್ಯಾಹ್ನದ ನಂತರ ಸೇವಿಸಿದರೆ ಉತ್ತಮ.
ಮಿಯಾಝಾಕಿ ಮಾವು ಬೆಳೆಸುವಲ್ಲಿರುವ ಸವಾಲುಗಳೇನು?:
- ಜಪಾನಿನ ರೈತರು ನಿಖರವಾದ ಪ್ರೋಟೋಕಾಲ್‌ಗಳನ್ನು ಅನುಸರಿಸುತ್ತಾರೆ. ಭಾರತದಲ್ಲಿ ಕೃಷಿಯನ್ನು ಹೆಚ್ಚಾಗಿ ದೊಡ್ಡ ಪ್ರಮಾಣದಲ್ಲಿ ಮಾಡಲಾಗುತ್ತದೆ. ಇದು ಕಷ್ಟಕರವಾಗಿರುತ್ತದೆ. ಇಲ್ಲಿ ಮಾರುಕಟ್ಟೆ ಬೇಡಿಕೆಯ ಪ್ರಶ್ನೆಯೂ ಇದೆ.
- ಭಾರತದಲ್ಲಿ ಉನ್ನತ ದರ್ಜೆಯ ಗ್ರಾಹಕರು ಈ ಮಾವನ್ನು ಖರೀದಿಸುತ್ತಾರೆಯೇ? ಮಿಯಾಝಾಕಿ ಮಾವು ಕೃಷಿ ರೈತರಿಗೆ ಲಾಭದಾಯಕವಾಗುತ್ತದೆಯೇ ಪ್ರಶ್ನೆ ಕಾಡುತ್ತದೆ?
- ಬಾಸ್ಮತಿ ಅಕ್ಕಿ, ಡಾರ್ಜಿಲಿಂಗ್ ಚಹಾ ಮತ್ತು ಅಲ್ಫೋನ್ಸೊ ಮಾವಿನ ಹಣ್ಣುಗಳಂತೆಯೇ, ನಮ್ಮ ರೈತರು ಈ ಅಡೆತಡೆಗಳನ್ನು ದಾಟಲು ನಿರ್ವಹಿಸಿದರೆ ಮಿಯಾಝಾಕಿ ಮಾವುಗಳು ಭಾರತದ ಕೃಷಿಯಲ್ಲಿ ಮತ್ತೊಂದು ಗರಿಯಾಗಬಹುದು.
- ಮುಂಬರುವ ದಿನಗಳಲ್ಲಿ ಸ್ಥಳೀಯ ಹಣ್ಣಿನ ಮಾರುಕಟ್ಟೆಗಳಿಗೆ ಈ ಮಾವು ತಲುಪುವ ಸಾಧ್ಯತೆ ಹೆಚ್ಚಿದೆ. ಇದು ನಿಜವಾದ ಟೋಕಿಯೊದ ಕೋಟ್ಯಾಧಿಪತಿಗಳು ಮಾತ್ರವಲ್ಲದೆ, ಭಾರತದಾದ್ಯಂತ ಮಾವಿನ ಪ್ರಿಯರು ಮಿಯಾಝಾಕಿ ಮಾವು ಸವಿಯಲು ಸಿದ್ಧರಾಗಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ನ್ನು ವೀಕ್ಷಿಸಿ:
https://pubmed.ncbi.nlm.nih.gov/28890657/